ದರ್ಶನ್ ವಿರುದ್ಧ ಕೆಂಗೇರಿ ಪೊಲೀಸರಿಂದ NCR;ಪ್ರಾಣ ಬೆದರಿಕೆ ಆರೋಪದ ಮೇಲೆ ದೂರು!
ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗಿದೆ. ಈಗಾಗಲೇ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪದಲ್ಲಿ ಎರಡನೇ ಆರೋಪಿಯಾಗಿ ಜೈಲು ಸೇರಿದ್ದಾರೆ. ಜಾಮೀನು ಪಡೆದು ಜೈಲಿನಿಂದ ಹೊರಬರಲು ಪರದಾಡುತ್ತಿದ್ದ ದರ್ಶನ್‌ಗೆ ನಿರಾಸೆಯಾಗಿದೆ. ಸೆಷನ್ಸ್ ಕೋರ್ಟ್ ದರ್ಶನ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.
ಜಾಮೀನು ಸಿಗದ ಬೇಸರದ ಹಿನ್ನೆಲೆಯಲ್ಲೇ ದರ್ಶನ್‌ಗೆ ಬೆನ್ನು ನೋವು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ದರ್ಶನ್ ಅವರನ್ನು ಹೆಚ್ಚು ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರ ಸಲಹೆ ಮೇರೆಗೆ ಬಿಡ್ ಹಾಗೂ ದಿಂಬನ್ನು ನೀಡಲಾಗುತ್ತಿದೆ. ಬಳ್ಳಾರಿ ಜೈಲ್‌ನಿಂದ ಹೇಗಾದರೂ ಮಾಡಿ ಹೊರ ಬರಬೇಕು ಅಂತ ಪರದಾಡುತ್ತಿರುವ ದರ್ಶನ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಹಳೆ ಕೇಸ್‌ಗೆ ಪೊಲೀಸರು ಎನ್‌ಸಿಆರ್ ಮಾಡಿದ್ದಾರೆ.

ದರ್ಶನ್ ವಿರುದ್ಧ ಈ ಹಿಂದೆ ನಿರ್ಮಾಪಕ ಭರತ್ ಎಂಬುವವರು ದೂರನ್ನು ದಾಖಲಿಸಿದ್ದರು. ಅದರಲ್ಲಿ ದರ್ಶನ್ ಹಾಗೂ ಅವರ ಮ್ಯಾನೇಜರ್ ವಿರುದ್ಧ ಪ್ರಾಣ ಬೆದರಿಕೆ ಆರೋಪವನ್ನು ಮಾಡಲಾಗಿತ್ತು. ಕೆಲವು ತಿಂಗಳ ಹಿಂದಷ್ಟೇ 'ಭಗವಾನ್ ಶ್ರೀಕೃಷ್ಣ ಪರಮಾತ್ಮ' ಸಿನಿಮಾದ ನಿರ್ಮಾಪಕ ಭರತ್ ತಮಗೆ ದರ್ಶನ್ ಹಾಗೂ ಮ್ಯಾನೇಜರ್ ಪ್ರಾಣ ಬೆದರಿಕೆ ಹಾಕಿದ್ದಾಗಿ ದೂರನ್ನು ದಾಖಲಿಸಿದ್ದರು. ಆ ದೂರಿನ ಅನ್ವಯ ಬೆಂಗಳೂರಿನ ಕೆಂಗೇರಿ ಪೊಲೀಸರು ಎನ್‌ಸಿಆರ್ ದಾಖಲಿಸಿದ್ದಾರೆ ಎನ್ನಲಾಗಿದೆ.
2022ರಲ್ಲಿ ನಿರ್ಮಾಪಕ ಭರತ್ 'ಭಗವಾನ್ ಶ್ರೀ ಕೃಷ್ಣ ಪರಮಾತ್ಮ' ಎಂಬ ಸಿನಿಮಾವನ್ನು ಆರಂಭ ಮಾಡಿದ್ದರು. ಈ ಸಿನಿಮಾಗೆ ದರ್ಶನ್ ಜೊತೆ ಗುರುತಿಸಿಕೊಂಡಿದ್ದ ಧ್ರುವನ್ ಹೀರೋ ಆಗಿ ಆಯ್ಕೆ ಆಗಿದ್ದರು. ಆದರೆ, ಸಿನಿಮಾ ಹಣಕಾಸಿನ ಸಮಸ್ಯೆಯಿಂದ ಅರ್ಧಕ್ಕೆ ನಿಲ್ಲಿಸಲಾಗಿತ್ತು. ಸಿನಿಮಾ ಮತ್ತೆ ಟೇಕಾಫ್ ಆಗದ ಬೆನ್ನಲ್ಲೇ ದರ್ಶನ್ ಹಾಗೂ ಅವರ ಮ್ಯಾನೇಜರ್ ನಾಗರಾಜ್ ಅವರಿಂದ ಧ್ರುವನ್ ಫೋನ್ ಮಾಡಿಸಿ ಬೆದರಿಕೆ ಹಾಕಿದ್ದಾರೆಂದು ಭರತ್ ಆರೋಪಿಸಿದ್ದರು.

ಈ ಹಿಂದೇನೆ ದರ್ಶನ್ ಅವಾಜ್ ಹಾಕಿರುವ ಆಡಿಯೋವನ್ನು ಭರತ್ ರಿವೀಲ್ ಮಾಡಿದ್ದರು. ಆ ವೇಳೆ ದರ್ಶನ್, ಮ್ಯಾನೇಜರ್ ನಾಗರಾಜ್ ಹಾಗೂ ಧ್ರುವನ್ ವಿರುದ್ಧ ದೂರನ್ನು ದಾಖಲಿಸಿದ್ದರು. ಆ ವೇಳೆ ಪೊಲೀಸರು ದೂರನ್ನಷ್ಟೇ ದಾಖಲಿಸಿಕೊಂಡು ಸುಮ್ಮನಾಗಿದ್ದರು ಎನ್ನಲಾಗಿದೆ. ಆದ್ರೀಗ ನಿನ್ನೆ (ಅಕ್ಟೋಬರ್ 17) ಕೆಂಗೇರಿ ಪೊಲೀಸರು ಎನ್‌ಸಿಆರ್ ದಾಖಲಿಸಿದ್ದಾರೆ ಎನ್ನಲಾಗಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿ ಆಗಿರುವ ದರ್ಶನ್ ಈಗಾಗಲೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬೆನ್ನಲ್ಲೇ ಮತ್ತೊಂದು ಸಂಕಷ್ಟ ಎದುರಾದಂತೆ ಆಗಿದೆ. ನಿರ್ಮಾಪಕರಿಗೆ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ದರ್ಶನ್‌ಗೆ ಯಾವ ರೀತಿಯ ಸಂಕಷ್ಟ ಎದುರಾಗಬಹುದು? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಬಹುದು. ಆದರೆ, ಜಾಮೀನಿಗಾಗಿ ಹೈಕೋರ್ಟ್ ಮೆಟ್ಟಿಲೇರಿರುವ ದರ್ಶನ್‌ಗೆ ಅಲ್ಲಿ ಪ್ರಾಣ ಬೆದರಿಕೆ ಪ್ರಕರಣ ಸಮಸ್ಯೆ ಆಗುತ್ತಾ? ಅನ್ನೋ ಅನುಮಾನ ಶುರುವಾಗಿದೆ.
ಮೂಲಗಳ ಪ್ರಕಾರ, ಈ ಹಿಂದೆ ನಿರ್ಮಾಪಕ ಭರತ್ ನೀಡಿದ್ದ ದೂರಿನ ಬಳಿಕ ಪೊಲೀಸರು ಸೈಲೆಂಟ್ ಆಗಿದ್ದರು. ಆದ್ರೀಗ ಭರತ್ ಮತ್ತೆ ದರ್ಶನ್ ಹಾಗೂ ನಾಗರಾಜ್ ವಿರುದ್ಧ ದೂರು ದಾಖಲಿಸಿದ್ದರು ಎನ್ನಲಾಗಿದೆ. ಹೀಗಾಗ ಪೊಲೀಸರು ದರ್ಶನ್ ಹಾಗೂ ಮ್ಯಾನೇಜರ್ ವಿರುದ್ಧ ಎನ್‌ಸಿಆರ್ ದಾಖಲಿಸಿದ್ದಾರೆ ಎನ್ನಲಾಗಿದೆ. ಸದ್ಯ ಜೈಲಿನಲ್ಲಿರುವ ದರ್ಶನ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಗೆ ವಿಚಾರಣೆಗೆ ಹಾಜರಾಗುತ್ತಾರೋ ಗೊತ್ತಿಲ್ಲ.


Click it and Unblock the Notifications










