ಅಭಿಮಾನಿಗಳಿಗಾಗಿ ವಿಷ್ಣು ಸ್ಮಾರಕ; ಸಿಎಂ ಭೇಟಿಯಾದ ಭಾರತಿ ವಿಷ್ಣುವರ್ಧನ್
ಇದೇ ಸೆಪ್ಟೆಂಬರ್ 18ರಂದು ಡಾ.ವಿಷ್ಣುವರ್ಧನ್ ಅವರ 75ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು ಅದ್ಧೂರಿಯಾಗಿ ಆಚರಣೆ ಮಾಡುವುದಕ್ಕೆ ನಿರ್ಧರಿಸಿದ್ದಾರೆ. ವಿಷ್ಣುದಾದಾಗೆ ಗೌರವ ಸೂಚಿಸುವ ಸಲುವಾಗಿ ದೊಡ್ಡ ಇವೆಂಟ್ ಅನ್ನೂ ಪ್ಲ್ಯಾನ್ ಮಾಡಲಾಗಿದೆ. ಈ ಬೆನ್ನಲ್ಲೇ ಇತ್ತೀಚೆಗೆ ಅಭಿಮಾನ್ ಸ್ಡುಡಿಯೋದಲ್ಲಿರುವ ಸಾಹಸ ಸಿಂಹನ ಸ್ಮಾರಕವನ್ನು ನೆಲಸಮ ಮಾಡಲಾಗಿತ್ತು. ಇದು ಅಭಿಮಾನಿಗಳ ಕಣ್ಣನ್ನು ಕೆಂಪಗಾಗಿಸಿತ್ತು.
ಡಾ.ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆ ನಡೆದ ಸ್ಥಳದಲ್ಲಿಯೇ ಸ್ಮಾರಕ ಆಗಬೇಕು ಅಂತ ಬಹಳ ದಿನಗಳಿಂದ ಅಭಿಮಾನಿಗಳು ಪಟ್ಟು ಹಿಡಿದು ಕೂತಿದ್ದಾರೆ. ಈ ಸಂಬಂಧ ವಿಷ್ಣುದಾದನ ಅಭಿಮಾನಿಗಳು ಹಾಗೂ ಹಿರಿಯ ನಟ ದಿವಂಗತ ಬಾಲಕೃಷ್ಣ ಅವರ ಕುಟುಂಬಕ್ಕೂ ಜಟಾಪಟಿ ನಡೆಯುತ್ತಲೇ ಇತ್ತು. ಈ ಪ್ರಕರಣ ಕೋರ್ಟ್ ಮೆಟ್ಟೇರಿದ್ದೂ ಇದೆ. ಇತ್ತೀಚೆಗೆ ಕೋರ್ಟ್ ಅನುಮತಿಯ ಮೇರೆಗೆ ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿದ್ದ ವಿಷ್ಣುದಾದನ ಸ್ಮಾರಕವನ್ನು ಉರುಳಿಸಲಾಗಿತ್ತು.

ಈ ಬೆಳವಣಿಗೆ ಹಿನ್ನೆಲೆಯಲ್ಲಿಯೇ ಅಭಿಮಾನ್ ಸ್ಟುಡಿಯೋವನ್ನು ಅರಣ್ಯ ಇಲಾಖೆಗೆ ಸೇರಿದ್ದು, ಮುಟ್ಟುಗೋಲು ಹಾಕಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಪತ್ರವನ್ನು ಬರೆಯಲಾಗಿತ್ತು. ಈ ಬೆನ್ನಲ್ಲೇ ಭಾರತಿ ವಿಷ್ಣುವರ್ಧನ್ ಹಾಗೂ ಅಳಿಯ ಅನಿರುದ್ಧ್ ಇಬ್ಬರೂ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಅಭಿಮಾನಿಗಳಿಗಾಗಿ ಅಭಿಮಾನ್ ಸ್ಟುಡಿಯೋದಲ್ಲಿ ಸ್ಮಾರಕ ನಿರ್ಮಾಣ ಮಾಡಿ ಗೌರವ ಸೂಚಿಸುವುದಕ್ಕೆ 10 ಗುಂಟೆ ಜಾಗವನ್ನು ನೀಡಬೇಕಾಗಿ ಮನವಿ ಮಾಡಿದ್ದಾರೆ.
ಡಾ. ವಿಷ್ಣುವರ್ಧನ್ 75ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿಯೇ ಭಾರತಿ ವಿಷ್ಣುವರ್ಧನ್ ಸಿಎಂ ಭೇಟಿ ಮಾಡಿದ್ದು ಕುತೂಹಲ ಮೂಡಿಸಿದೆ. ಅಭಿಮಾನ್ ಸ್ಟುಡಿಯೋದಲ್ಲಿ ಸ್ಮಾರಕ ಉರುಳಿಸಿದ ಬಳಿಕ ಅಭಿಮಾನಿಗಳ ಬೆಂಬಲಕ್ಕೆ ಭಾರತಿ ವಿಷ್ಣುವರ್ಧನ್ ಹಾಗೂ ಅನಿರುದ್ಧ್ ನಿಂತಿದ್ದಾರೆ. ಈಗ ಸಾಹಸ ಸಿಂಹ ಅಭಿಮಾನಿಗಳಲ್ಲಿ ಕಣ್ಣಲ್ಲಿ ಆಶಾಭಾವನೆ ಮೂಡಿದೆ. ಸಿ.ಎಂ ಸಿದ್ಧರಾಮಯ್ಯಗೆ ನೀಡಿದ ಪತ್ರದಲ್ಲಿ ಈ ಅಂಶಗಳು ಇವೆ.

ಮಾನ್ಯರೆ,
ಪ್ರಮುಖವಾಗಿ ಮೈಸೂರು ನಗರದಲ್ಲಿ ಡಾ. ವಿಷ್ಣುವರ್ಧನ್ ಅವರ ಸ್ಮಾರಕವನ್ನು ನಿರ್ಮಿಸಿ ಕನ್ನಡದ ಹೃದಯದಲ್ಲಿ ವಿಷ್ಣುವರ್ಧನ್ ಅವರ ನೆನಪನ್ನು ಶಾಶ್ವತವಾಗಿ ಉಳಿಸಿರುವ ಕರ್ನಾಟಕ ಸರ್ಕಾರಕ್ಕೆ, ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇವೆ. ಇದು ಲಕ್ಷಾಂತರ ಅಭಿಮಾನಿಗಳ ಹೆಮ್ಮೆಯ ವಿಷಯವಾಗಿದೆ.
ಆದರೆ, ಬೆಂಗಳೂರು ನಗರದಲ್ಲಿಯೂ ಸ್ಮಾರಕದ ಅಗತ್ಯವಿದೆ ಎಂಬ ಅಭಿಮಾನಿಗಳ ದೀರ್ಘಕಾಲದ ಬೇಡಿಕೆಯನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇವೆ. ಡಾ.ವಿಷ್ಣುವರ್ಧನ್ ಅವರು ಬದುಕನ್ನು ರೂಪಿಸಿಕೊಂಡಿದ್ದೇ ಬೆಂಗಳೂರಿನಲ್ಲಿ. ಈ ಸ್ಥಳವು ಅಭಿಮಾನಿಗಳಿಗೆ ಅತ್ಯಂತ ಭಾವನಾತ್ಮಕ ನೆನಪಿನ ಸ್ಥಳವೂ ಆಗಿದೆ. ಏಕೆಂದರೆ, ಇಲ್ಲಿಯೇ ಡಾ.ವಿಷ್ಣವರ್ಧನ್ ಅವರ ಅಗ್ನಿಸ್ಪರ್ಶ (ಅಂತ್ಯಕ್ರಿಯೆ) ನೇರವೇರಿದ್ದು. ಲಕ್ಷಾಂತರ ಅಭಿಮಾನಿಗಳು ಆಗಮಿಸಿ ತಮ್ಮ ಪ್ರೀತಿಯ ಕಲಾವಿದನಿಗೆ ಕಂಬನಿ ಮಿಡಿದಿದ್ದರು.
ಅಭಿಮಾನ್ ಸ್ಟುಡಿಯೋ ಅರಣ್ಯ ಇಲಾಖೆಗೆ ಸೇರಿದ ಜಾಗ ಎಂದು ಸರ್ಕಾರ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ನಾವು ಮನವಿ ಮಾಡಿಕೊಳ್ಳುವುದು ಏನೆಂದರೆ, ಅಭಿಮಾನ್ ಸ್ಟುಡಿಯೋ ವ್ಯಾಪ್ತಿಯಲ್ಲಿ ಕನಿಷ್ಠ 10 ಗುಂಟೆ ಜಾಗವನ್ನು ಮೀಸಲಿಟ್ಟು- ಡಾ.ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕೆ ಸರ್ಕಾರದಿಂದ ಅನುಮತಿ ನೀಡಬೇಕೆಂದು ಕೋರುತ್ತೇವೆ. ಇದರಿಂದ ಅಭಿಮಾನಿಗಳ ಭಾವನೆಗಳಿಗೆ ನ್ಯಾಯವನ್ನು ದೊರಕಿಸುವ ಜತೆಗೆ- ಒಂದು ಶಾಶ್ವತ ಸಾಂಸ್ಕೃತಿಕ ಸ್ಮಾರಕವಾಗಿ ಉಳಿದು ಮುಂದಿನ ಪೀಳಿಗೆಗೆ ಪ್ರೇರಣೆ ನೀಡುತ್ತದೆ." ಎಂದು ಸಿ.ಎಂ. ಸಿದ್ಧರಾಮಯ್ಯಗೆ ಸಲ್ಲಿಸಿದ ಪತ್ರದಲ್ಲಿ ಭಾರತಿ ವಿಷ್ಣುವರ್ಧನ್ ತಿಳಿಸಿದ್ದಾರೆ.


Click it and Unblock the Notifications











