Darshan-Sudeep: ದ್ವೇಷ ಮರೆತು ಒಂದಾದ್ರಾ ದರ್ಶನ್-ಸುದೀಪ್? ಸುಮಲತಾ ಬರ್ತ್‌ಡೇ ಪಾರ್ಟಿಯಲ್ಲಿ ಕಿಚ್ಚ-ದಚ್ಚು!
ಸ್ಯಾಂಡಲ್‌ವುಡ್ ಬೆಸ್ಟ್ ಫ್ರೆಂಡ್ಸ್ ಯಾರು ಅಂತ ಹೇಳಿದ್ರೆ, ಕಿಚ್ಚ ಸುದೀಪ್ ಹಾಗೂ ದರ್ಶನ್ ಹೆಸರು ಹೇಳುತ್ತಿದ್ದರು. ಆದರೆ, ಇದ್ದಕ್ಕಿದ್ದ ಹಾಗೇ ದರ್ಶನ್ "ಇನ್ಮುಂದೆ ನಾನು ಮತ್ತು ಸುದೀಪ್ ಸ್ನೇಹಿತರಲ್ಲ" ಎಂದು ಟ್ವೀಟ್ ಮಾಡಿದ್ದರು. ಅಲ್ಲಿಂದ ಇಬ್ಬರ ನಡುವಿನ ಕಂದರ ಬೆಳೆಯುತ್ತಲೇ ಹೋಯ್ತು.
ದರ್ಶನ್ ಹಾಗೂ ಸುದೀಪ್ ಒಬ್ಬರಿಗೊಬ್ಬರು ಆಗದಷ್ಟು ದೂರ ಹೋಗಿದ್ದರು. ಇತ್ತ ದರ್ಶನ್ ಹಾಗೂ ಕಿಚ್ಚ ಸುದೀಪ್ ಅಭಿಮಾನಿಗಳು ಇಬ್ಬರೂ ಒಂದಾಗಲಿ ಅಂತ ಬಯಸಿದ್ದರು. ಸೋಶಿಯಲ್ ಮೀಡಿಯಾಗಳಲ್ಲಿ ಅದೆಷ್ಟೋ ಬಾರಿ ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದರು. ಆಗಲೂ ದರ್ಶನ್ ಹಾಗೂ ಸುದೀಪ್ ಮತ್ತೆ ಒಂದಾಗುವ ಬಗ್ಗೆ ಮಾತಾಡಿರಲಿಲ್ಲ.

ಈಗ ಮಂಡ್ಯ ಸಂಸದೆ ಹಾಗೂ ನಟಿ ಸುಮಲತಾ ಬರ್ತ್‌ಡೇ ಪಾರ್ಟಿಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಇಬ್ಬರೂ ಮುಖಾ ಮುಖಿಯಾಗಿದ್ದಾರೆ. ಬೇರೆಯಾದಲ್ಲಿಂದ ಈ ಸ್ನೇಹಿತರು ಒಟ್ಟಿಗೆ ಒಂದೇ ವೇದಿಕೆ ಹಂಚಿಕೊಂಡಿರಲೇ ಇಲ್ಲ.
ಸುಮಲತಾ ಬರ್ತ್‌ಡೇಯಲ್ಲಿ ಮಹಾ ಸಂಗಮ
ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಆಗಸ್ಟ್ 27ರಂದು 60ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಆತ್ಮೀಯರಿಗೆ ಹಾಗೂ ಗಣ್ಯರಿಗೆ ಖಾಸಗಿ ಐಶಾರಾಮಿ ಹೋಟೆಲ್‌ನಲ್ಲಿ ಪಾರ್ಟಿಯನ್ನು ಆಯೋಜನೆ ಮಾಡಲಾಗಿದೆ. ಈ ಪಾರ್ಟಿಗೆ ಕಿಚ್ಚ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಬ್ಬರಿಗೂ ಆಹ್ವಾನ ನೀಡಲಾಗಿದೆ. ಈ ಪಾರ್ಟಿಯಲ್ಲಿ ಇಬ್ಬರೂ ಮುಖ ಮುಖಿಯಾಗಿದ್ದಾರೆ.
ಸಮಲತಾ ಮಧ್ಯಸ್ಥಿಕೆಯಲ್ಲಿ ಸಂಧಾನ?
ಕಿಚ್ಚ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಬ್ಬರನ್ನೂ ಮತ್ತೆ ಒಂದು ಮಾಡಬೇಕು ಅಂತ ಸ್ಯಾಂಡಲ್‌ವುಡ್‌ನ ಅದೆಷ್ಟೋ ಮಂದಿ ಪ್ರಯತ್ನ ಪಟ್ಟಿದ್ದರು. ಆದರೆ, ಇವರಿಬ್ಬರನ್ನು ಒಟ್ಟಿಗೆ ಸೇರಿಸಲು ಸಾಧ್ಯವಾಗಿರಲಿಲ್ಲ. ಈಗ ಸುಮಲತಾ ಹಾಗೂ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಇಬ್ಬರ ಪ್ರಯತ್ನದಿಂದ ಖಾಸಗಿ ಹೋಟೆಲ್‌ನಲ್ಲಿ ದರ್ಶನ್ ಹಾಗೂ ಸುದೀಪ್ ಇಬ್ಬರ ಮನವೊಲಿಸಲಾಗಿದೆ. ಹೀಗಾಗಿ ಇಬ್ಬರೂ ಪಾರ್ಟಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
"ನಾನು ಸುದೀಪ್ ಗೆಳೆಯರಲ್ಲ" ಎಂದಿದ್ದ ದರ್ಶನ್
2017ರಲ್ಲಿ ಅಂದರೆ, ಆರು ವರ್ಷಗಳ ಹಿಂದೆ ದರ್ಶನ್ ಟ್ವೀಟ್ ಮಾಡಿದ್ದರು. ಅದರಲ್ಲಿ " ಇನ್ಮುಂದೆ ನಾನು ಹಾಗೂ ಕಿಚ್ಚ ಸುದೀಪ್ ಸ್ನೇಹಿತರಲ್ಲ. ನಾವಿಬ್ಬರೂ ಒಂದೇ ಚಿತ್ರರಂಗದಲ್ಲಿ ಕೆಲಸ ಮಾಡುವ ಸಹ ಕಲಾವಿದರು ಅಷ್ಟೇ. ಬೇರೆ ಊಹಾ ಪೋಹಗಳು ಬೇಡ" ಎಂದು ದರ್ಶನ್ ಟ್ವೀಟ್ ಮಾಡಿದ್ದರು. ಅಲ್ಲಿಂದ ಇಲ್ಲಿವರೆಗೂ ದರ್ಶನ್ ಹಾಗೂ ಸುದೀಪ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದೇ ಇಲ್ಲ. ಈಗ ಇಬ್ಬರೂ ಮತ್ತೆ ಒಂದಾಗಬಹುದು ಎಂದು ಖುಷಿಯಲ್ಲಿ ಇಬ್ಬರ ಅಭಿಮಾನಿಗಳೂ ಇದ್ದಾರೆ.
ಎಲ್ಲರಲ್ಲೂ ಕುತೂಹಲ
ಕಿಚ್ಚ ಸುದೀಪ್ ಹಾಗೂ ದರ್ಶನ್ ಇಬ್ಬರೂ ಒಂದೇ ಕಾರ್ಯಕ್ರಮಕ್ಕೆ ಬಂದಿದ್ದು ಆಗಿದೆ. ಇನ್ನು ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡರೆ ಅಲ್ಲಿಂದ ಕುಚಿಕುಗಳ ದರ್ಬಾರು ಶುರುವಾದಂತೆ. ಮೂಲಗಳ ಪ್ರಕಾರ, ದರ್ಶನ್ ಹಾಗೂ ಸುದೀಪ್ ಮುನಿಸು ಮರೆತು ಒಂದಾಗುವ ಎಲ್ಲಾ ಸಾಧ್ಯತೆಗಳೂ ಇವೆ. ಏನಕ್ಕೂ ಸುಮಲತಾ ಬರ್ತ್‌ಡೇ ಪಾರ್ಟಿ ಮುಗಿಯುವುದರೊಳಗೆ ಸ್ಪಷ್ಟತೆ ಸಿಗಬಹುದು.


Click it and Unblock the Notifications











