ಹಳ್ಳಿಯಲ್ಲಿ ಕೃಷಿ ಮಾಡುತ್ತಾ ಸ್ಫೂರ್ತಿ ನೀಡುತ್ತಿದ್ದಾರೆ ಬಿಗ್ ಬಾಸ್ ವಿಜೇತ ಶಶಿಕುಮಾರ್
ಬಿಗ್ ಬಾಸ್‌ಗೆ ಕಾಲಿಟ್ಟಾಗ ತಾವು ಆಧುನಿಕ ಕೃಷಿಕ ಎಂದೇ ಗುರುತಿಸಿಕೊಳ್ಳುತ್ತಿದ್ದ ಬಿಗ್ ಬಾಸ್ 6ರ ವಿನ್ನರ್ ಶಶಿಕುಮಾರ್ ಎಲ್ಲಿದ್ದಾರೆ? ಈಗೇನು ಮಾಡುತ್ತಿದ್ದಾರೆ? ಬಿಗ್ ಬಾಸ್‌ನಲ್ಲಿ ಗುರುತಿಸಿಕೊಂಡ ಅನೇಕ ಸ್ಪರ್ಧಿಗಳು ಬೇರೆ ಬೇರೆ ಕಾರಣಗಳಿಂದ ಸುದ್ದಿಯಲ್ಲಿರುತ್ತಾರೆ. ಆದರೆ ಶಶಿಕುಮಾರ್ ತಮ್ಮೂರಿನಲ್ಲಿ ತಣ್ಣನೆ ಕೃಷಿ ಮಾಡಿಕೊಂಡಿದ್ದಾರೆ. ಮಾವು, ಟೊಮೆಟೊ ಬೆಳೆಗಳನ್ನು ಬೆಳೆಯುವುದರಲ್ಲಿ ಮಗ್ನರಾಗಿದ್ದಾರೆ.
'ಮೆಹಬೂಬ' ಎಂಬ ಚಿತ್ರಕ್ಕೆ ನಾಯಕರಾಗಿ ಆಯ್ಕೆಯಾಗಿದ್ದ ಶಶಿಕುಮಾರ್, ಶೂಟಿಂಗ್‌ನಲ್ಲಿ ಭಾಗವಹಿಸಬೇಕಿತ್ತು. ಆದರೆ ಲಾಕ್‌ಡೌನ್ ಕಾರಣದಿಂದ ಚಿತ್ರೀಕರಣ ಸದ್ಯಕ್ಕೆ ನಡೆಯುವಂತಿಲ್ಲ. ಹೀಗಾಗಿ ತಮ್ಮ ಅಜ್ಜಿಯ ಊರು ಶ್ರೀನಿವಾಸಪುರ ತಾಲ್ಲೂಕಿನ ಉಪ್ರಹಳ್ಳಿ ಗ್ರಾಮದಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹೊಲದ ಕೆಲಸಗಳ ಜತೆಗೆ, ಸಿನಿಮಾ ನಟರಾಗಿಯೂ ನೆಲೆಯೂರಬೇಕಿರುವುದರಿಂದ ಬೆಳಿಗ್ಗೆ ವರ್ಕೌಟ್ ಮಾಡುವುದರನ್ನು ಮರೆಯುತ್ತಿಲ್ಲ. ಮುಂದೆ ಓದಿ...

ಕೃಷಿ ನಿಲ್ಲಬಾರದು
ಕೃಷಿ ಚಟುವಟಿಕೆಯಲ್ಲಿ ತೊಡಗುವುದನ್ನು ಕೊರೊನಾ ವೈರಸ್ ವಿರುದ್ಧದ ಹೋರಾಟ ಎಂದೇ ಶಶಿಕುಮಾರ್ ಪರಿಗಣಿಸಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ಕೃಷಿ ಉತ್ಪಾದನೆ ನಿಂತುಹೋಗಬಾರದು. ಹೀಗಾದರೆ ಮುಂಬರುವ ದಿನಗಳಲ್ಲಿ ಭಾರಿ ಸಮಸ್ಯೆ ಎದುರಾಗಲಿದೆ. ಹೀಗಾಗಿ ಯಾರೂ ಕೃಷಿ ಕಾರ್ಯ ನಿಲ್ಲಿಸಬೇಡಿ ಎಂದು ಅವರು ಮನವಿ ಮಾಡಿದ್ದಾರೆ.

ದಿನಗೂಲಿ ಕಾರ್ಮಿಕರಿಗೆ ಸಂಕಷ್ಟ
ಈ ಸಂದರ್ಭದಲ್ಲಿ ಒಂದಷ್ಟು ಹಣ ಉಳಿತಾಯ ಮಾಡಿಕೊಂಡಿರುವವರು ಅದನ್ನೇ ಖರ್ಚು ಮಾಡುತ್ತಾ ಹೋಗುತ್ತಾರೆ. ಆದರೆ ಆ ದಿನದ ದುಡಿಮೆ ಆ ದಿನಕ್ಕೇ ಬಳಸಿಕೊಳ್ಳುವ ದಿನಗೂಲಿಯವರು ಹೇಗೆ ನಿಭಾಯಿಸುತ್ತಾರೆ. ಇಂದಿನ ದಿನಕ್ಕೆ ಮಾತ್ರ ಅವರಿಗೆ ಉಣ್ಣಲು ಇರುತ್ತದೆ. ನಾಳೆಗೆ ಏನು ಮಾಡುತ್ತಾರೆ? ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಕುಟುಂಬಗಳಿಗೆ ಕೃಷಿ ಕೆಲಸ
ಕೋಲಾರದ ಶ್ರೀನಿವಾಸಪುರದಲ್ಲಿ 70-75 ಕುಟುಂಬಗಳಿರುವ ಊರಿನಲ್ಲಿ ಜನರನ್ನು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸುವ ಮೂಲಕ ತಮ್ಮ ಗುರಿಯನ್ನು ಮುಂದುವರಿಸುತ್ತಿದ್ದಾರೆ. 'ಇಷ್ಟು ಜನರನ್ನು ಸೇರಿಸಿಕೊಂಡು 10-12 ಎಕರೆಯಲ್ಲಿ ತರಕಾರಿ ಬೆಳೆಯುತ್ತಿದ್ದೇವೆ. ಸದ್ಯಕ್ಕೆ ಟೊಮೆಟೋ ಹಾಕುತ್ತಿದ್ದೇವೆ' ಎಂದು ಶಶಿ ತಿಳಿಸಿದ್ದಾರೆ.

ಕೃಷಿ ಇಲ್ಲದಿದ್ದರೆ ಮುಂದೇನು?
'ಲಾಕ್ ಡೌನ್ ಇದ್ದರೂ ತರಕಾರಿಗಳು ಸಿಗುತ್ತಿವೆ. ಇಂದು ಬೀಜ ಹಾಕಿದ ಕೂಡಲೇ ನಾಳೆಗೆ ಕಟಾವಿಗೆ ಸಿಗುವುದಿಲ್ಲ. ಮೂರು ತಿಂಗಳ ಹಿಂದೆ ಬಿತ್ತಿದ ಬೆಳೆಯಿಂದ ಇಂದು ತರಕಾರಿ ಬಳಸುತ್ತಿದ್ದೇವೆ. ಆದರೆ ಇಂದು ಅವುಗಳಿಗೆ ಮಾರುಕಟ್ಟೆ ದರ ಸಿಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಜನರು ಕೃಷಿ ಬಗ್ಗೆ ಗಮನ ಹರಿಸುತ್ತಿಲ್ಲ. ನರ್ಸರಿಯಲ್ಲಿ 10 ಲಕ್ಷ ಸೀಡ್ಲಿಂಗ್ಸ್ ಸೇಲ್ ಮಾಡುವಲ್ಲಿ 10 ಸಾವಿರ ಮಾತ್ರ ಸೇಲ್ ಆಗಿದೆ. ಯಾರೂ ಕೃಷಿ ಮಾಡದೆ ಇದ್ದರೆ ಮುಂದಿನ ಮೂರು ನಾಲ್ಕು ತಿಂಗಳಿಗೆ ಏನು ಸೇವಿಸುತ್ತೀರಿ?' ಎಂದು ಪ್ರಶ್ನಿಸಿದ್ದಾರೆ.
ಮುನ್ನೆಚ್ಚರಿಕೆ ಕ್ರಮ ವಹಿಸಿ
ಯಾರು ಕೃಷಿ ಮಾಡುತ್ತಿದ್ದೀರೋ ದಯವಿಟ್ಟು ಮುಂದುವರಿಸಿ. ಕೊರೊನಾ ಅಪಾಯಕಾರಿ. ಹಾಗೆಂದು ಕೃಷಿಯನ್ನು ನಿಲ್ಲಿಸಬೇಡಿ. ಎಲ್ಲ ಮುನ್ನೆಚ್ಚರಿಕೆ ಕ್ರಮದೊಂದಿಗೆ ಕೃಷಿ ಮಾಡಿ ಎಂದು ಕೇಳುತ್ತೇನೆ. ನಾವು ಒಂದಷ್ಟು ಮುನ್ನೆಚ್ಚರಿಕೆ ಇಟ್ಟುಕೊಂಡು ಕಾರ್ಮಿಕರಿಗೆ ಸ್ಯಾನಟೈಸರ್ ಕೊಟ್ಟು ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಅಭಿಮಾನಿಗೆ ಸಲಹೆ ನೀಡಿದ ಶಶಿ
ಟೊಮೆಟೊಗೆ ಬೆಲೆ ಇಲ್ಲ. ಬೆಳೆದ ಬೆಳೆಯನ್ನು ಕೇಳುವವರು ಇಲ್ಲ ಎಂಬ ಅಭಿಮಾನಿಯೊಬ್ಬರ ಅಳಲಿಗೆ ಪ್ರತಿಕ್ರಿಯೆ ನೀಡಿರುವ ಶಶಿಕುಮಾರ್, ಅದಕ್ಕೆ ಮೌಲ್ಯ ವರ್ಧನೆ ಮಾಡುವುದೊಂದೇ ಆಯ್ಕೆ. ಕೆಚಪ್, ಸಾಸ್ ಅಥವಾ ಒಣಗಿಸುವುದನ್ನು ಪ್ರಯತ್ನಿಸಿ ಎಂದು ಸಲಹೆ ನೀಡಿದ್ದಾರೆ. ಶಶಿಕುಮಾರ್ ಅವರ ವಿಡಿಯೋಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಸ್ಫೂರ್ತಿದಾಯಕ ಸಲಹೆ ನೀಡುತ್ತಿದ್ದೀರಿ ಎಂದು ಹೊಗಳಿದ್ದಾರೆ.


Click it and Unblock the Notifications











