ಕಿಚ್ಚನ ಬಗ್ಗೆ ರಕ್ಷಕ್ ಹೇಳಿಕೆ; ಕಮೆಂಟ್, ಟ್ರೋಲ್‌ಗೆ ಸುಸ್ತಾಗಿ ಕಣ್ಣೀರಿಟ್ಟ ಬುಲೆಟ್ ಪುತ್ರ!
ಕನ್ನಡ ಚಿತ್ರರಂಗದ ಹಾಸ್ಯ ನಟ ದಿವಂಗತ ಬುಲೆಟ್ ಪ್ರಕಾಶ್ ಪುತ್ರ ಇತ್ತೀಚೆಗೆ ಬಿಗ್ ಬಾಸ್ ರಿಯಾಲಿಟಿ ಶೋಗೆ ಹೋಗಿ ಬಂದಿದ್ದರು. ತಮ್ಮ ಮಾತುಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಲ್ಲಿರೋ ರಕ್ಷಕ್ ಯೂಟ್ಯೂಬ್ ಚಾನೆಲ್ ಒಂದರಲ್ಲಿ ಕಣ್ಣೀರು ಹಾಕಿದ್ದಾರೆ.
ಕೆಲವು ದಿನಗಳ ಹಿಂದೆಷ್ಟೇ ಬಿಗ್ ಬಾಸ್ ಮನೆಯೊಳಗೆ ಹೋಗಿ ಬಂದಿದ್ದರು. ಆ ಬಳಿಕ ನೀಡಿದ ಸಂದರ್ಶನವೊಂದರಲ್ಲಿ ಕಿಚ್ಚ ಸುದೀಪ್ ಬಗ್ಗೆ ಮಾತಾಡಿದ್ದರು. "ಸುದೀಪಣ್ಣ ಬಂದ್ಕೂಡ್ಲೇ ಹೇಗಾಗ್ಬಿಡ್ತಾರೆ ಅಂದ್ರೆ, ಅಲ್ಲಿ ದೇವರು ನಿಂತಿದ್ದಾರೆ. ನಾವೆಲ್ಲ ಭಕ್ತಾಧಿಗಳು ಅವರು ಹೇಳ್ತಾರೋ, ಹೆಂಗೆ ವರ ಕೊಡ್ತಾರೋ ಹಂಗೆ ಕೇಳಬೇಕು ಅಂದ್ಕೊಂಡು ವರ್ತಿಸುತ್ತಾರೆ." ಎಂದು ಸ್ಪರ್ಧಿಗಳ ವರ್ತನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು.

ಇಷ್ಟೇ ಅಲ್ಲದೆ ಬಿಗ್ ಬಾಸ್‌ನಲ್ಲಿ ಸ್ಪರ್ಧಿಗಳು ಡ್ರಾಮ ಮಾಡುತ್ತಾರೆ. ಕಿಚ್ಚ ಸುದೀಪ್ ಬಂದ ಕೂಡಲೇ ಅವರ ನಿರ್ಧಾರಗಳನ್ನು ಬದಲಿಸುತ್ತಾರೆ ಎಂದಿದ್ದರು. "
"ನನಗೆ ದೊಡ್ಡ ಡ್ರಾಮ ಅನಿಸಿದ್ದು ಅಂದ್ರೆ, ಕಳಪೆ ಉತ್ತಮ ಅನ್ನೋದು ಕೊಡುತ್ತೇವೆ. ನನಗೆ ಇಷ್ಟ ಬಂದಂಗೆ ಕೊಟ್ಟಿದ್ದೇನೆ ಅನ್ನೋ ಲೆವೆಲ್‌ನಲ್ಲೇ ಇರುತ್ತಾರೆ. ಸುದೀಪಣ್ಣ ಬಂದ ಕೂಡಲೇ ಹೆಂಗೆ ಆಗ್ಬಿಡ್ತಾರೆ ಅಂದ್ರೆ, ಅವರು ಹೆಂಗೆ ಹೇಳ್ತಾರೆ ಹಂಗೆ ಕೇಳ್ಬೇಕು. ಅವರು ದೇವರು, ನಾವು ಭಕ್ತಾಧಿಗಳು ಅಂತ ಅಂದ್ಕೊಳ್ತಾರೆ." ಎಂದು ಸ್ಪರ್ಧಿಗಳು ನಿರ್ಧಾರ ಬದಲಿಸುವ ಬಗ್ಗೆ ಮಾತಾಡಿದ್ದರು.
ಈ ಸಂದರ್ಶನದ ತುಣುಕುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಕಿಚ್ಚ ಸುದೀಪ್ ಬಗ್ಗೆ ರಕ್ಷಕ್ ಕೊಟ್ಟ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದನ್ನು ಅರಿತುಕೊಂಡಿದ್ದ ರಕ್ಷಕ್ ಬುಲೆಟ್, ದಿಢೀರನೇ ವಿಡಿಯೋ ಮಾಡಿ ಕಿಚ್ಚ ಸುದೀಪ್ ಹಾಗೂ ಅವರ ಅಭಿಮಾನಿಗಳಿಗೆ ಕ್ಷಮೆಯನ್ನೂ ಹೇಳಿದ್ದರು.
"ಈ ವಿಡಿಯೋ ಮಾಡುತ್ತಿರೋ ಕಾರಣ ಏನು ಅಂತ ಅಂದ್ರೆ, ಎರಡು ದಿನಗಳಿಂದ ಒಂದು ವಿಡಿಯೋ ಹರಿದಾಡುತ್ತಿದೆ. ಸುದೀಪ್ ಅಣ್ಣನ ಬಗ್ಗೆ ನೆಗೆಟಿವ್ ಆಗಿ ಹೇಳಿದೆ ಅಂತ. ನಾನು ಹೇಳಿದ್ದು ಆ ಅರ್ಥದಲ್ಲಿ ಅಲ್ಲ. ಇಡೀ ಸಂದರ್ಶನವನ್ನು ನೋಡಿದ್ದಾಗ ಗೊತ್ತಾತ್ತೆ. ನಾನು ಏನು ಹೇಳಿದ್ದೆ ಅಂತ. ಇದರಿಂದ ನಿಜಕ್ಕೂ ಬೇಜಾರಾಗಿದ್ರೆ ಸಾರಿ.. ಸುದೀಪ್ ಅಣ್ಣ ಹಾಗೂ ಸುದೀಪ್ ಅಣ್ಣ ಫ್ಯಾನ್ಸ್‌ಗೆ. ಸುದೀಪ್ ಅಣ್ಣನ ಮೇಲೆ ತುಂಬಾನೇ ಗೌರವಿದೆ." ಎಂದು ಹೇಳಿ ಒಂದು ವಿಡಿಯೋ ಬಿಟ್ಟಿದ್ದರು.

ಇದಾದ ಬಳಿಕ ಸ್ಪೀಡ್ ನ್ಯೂಸ್ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಕಣ್ಣೀರು ಹಾಕಿದ್ದಾರೆ. ಇಡೀ ಸಂದರ್ಶನವನ್ನು ನೋಡಿದರೆ, ನಾನು ಹೇಳಿದ್ದೇನೆ ಅನ್ನೋದು ಅರ್ಥ ಆಗುತ್ತೆ. ಆದರೆ, ತುಣುಕುಗಳನ್ನು ನೋಡಿ ಕಮೆಂಟ್, ಟ್ರೋಲ್ ಮಾಡುತ್ತಿದ್ದಾರೆ ಎಂದು ಕಣ್ಣೀರು ಹಾಕಿದ್ದಾರೆ.
"ನಾನು ತುಂಬಾ ಕಷ್ಟ ಪಟ್ಕೊಂಡು ಬಂದಿದ್ದೀನಿ. ನಾನು ಯಾರಿಗೂ ಕೆಟ್ಟದು ಮಾಡಬೇಕು ಅಂತೇನು ಬಂದಿಲ್ಲ. ನನಗೆ ಯಾಕೆ ಹೀಗೆ ಮಾಡುತ್ತಾರೆ ಅಂತ ಗೊತ್ತಿಲ್ಲ. ಫುಲ್ ಸಂದರ್ಶನ ನೋಡಿದ್ರೆ ಗೊತ್ತಾಗುತ್ತೆ. ಕಮೆಂಟ್ಸ್ ಮಾಡಿ ತೊಂದರೆ ಇಲ್ಲ. ಟ್ರೋಲ್ ಮಾಡ್ತೀರಾ ಮಾಡಿ. ಆದರೆ, ನನಗೂ ಅಂತ ಒಂದು ಫ್ಯಾಮಿಲಿ ಇದೆ. ನನ್ನ ಲೈಫ್‌ನಲ್ಲೇ ಇಷ್ಟೊಂದು ಬೇಜಾರು ಆಗಿರಲಿಲ್ಲ" ಎಂದು ಕಣ್ಣೀರು ಹಾಕಿದ್ದಾರೆ.
ನೇರವಾಗಿ ತಮಗನಿಸಿದ್ದನ್ನು ಹೇಳುವ ರಕ್ಷಕ್ ಬುಲೆಟ್ ಆಗಾಗ ಪೇಚಿಗೆ ಸಿಕ್ಕಿಕೊಳ್ಳುತ್ತಲೇ ಇರುತ್ತಾರೆ. ಈಗ ಮತ್ತೊಮ್ಮೆ ಸುದೀಪ್ ಬಗ್ಗೆ ಮಾತಾಡಿ ಕಿಚ್ಚನ ಅಭಿಮಾನಿಗಳ ಬಗ್ಗೆ ಕೆಂಗಣ್ಣಿಗೂ ಗುರಿಯಾಗಿದ್ದಾರೆ.


Click it and Unblock the Notifications











