ಬಿಗ್ ಬಾಸ್ ದಿವ್ಯಾ ಸುರೇಶ್ ಹಿಟ್ & ರನ್ ; ಯುವತಿಯ ಮಂಡಿ ಚಿಪ್ಪು ಮುರಿತ-ತ್ರಿಪುರ ಸುಂದರಿ ಪರಾರಿ?
ವಾಹನ ಚಾಲನೆ ಸೂಕ್ಷ್ಮ ಜವಾಬ್ದಾರಿ. ಈ ಸಮಯದಲ್ಲಿ ಮೈಯೆಲ್ಲಾ ಕಣ್ಣಾಗಿರಬೇಕು. ಚೂರು ಯಾಮಾರಿದರೂ ಕೂಡ ಅಪಾಯ ಕಟ್ಟಿಟ್ಟ ಬುತ್ತಿ. ನೀವು ಅಥವಾ ನಿಮ್ಮ ಎದುರು ಇರುವವರಲ್ಲಿ ಯಾರೇ ತಪ್ಪು ಮಾಡಿದರೂ ಕೂಡ ಸಂಕಷ್ಟ ತಪ್ಪಿದ್ದಲ್ಲ. ಆದರೂ ಕೂಡ ಕೆಲವರು ಅಜಾಗರೂಕತೆಯಿಂದ ವಾಹನ ಚಲಾಯಿಸುತ್ತಾರೆ. ತಮ್ಮ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುವುದರ ಜೊತೆಯಲ್ಲಿ ಬೇರೆಯವರ ಪ್ರಾಣಕ್ಕೂ ಕುತ್ತು ತರುತ್ತಾರೆ.
ಉದಾಹರಣೆಗೆ ದಿವ್ಯಾ ಸುರೇಶ್. ಹೌದು, ದಿವ್ಯಾ ಸುರೇಶ್.. ಕನ್ನಡ ಕಿರುತೆರೆಯ ತ್ರಿಪುರ ಸುಂದರಿ. ರೌಡಿ ಬೇಬಿ.. ಹಿರಣ್ಯ.. ಚಿತ್ರಗಳಲ್ಲಿ ಕೂಡ ಅಭಿನಯಿಸಿರುವ ದಿವ್ಯಾ ಸುರೇಶ್ ಬಿಗ್ ಬಾಸ್ ಕನ್ನಡದ 8ನೇ ಸೀಸನ್‌ನ ಸ್ಫರ್ಧಿ ಕೂಡ ಹೌದು. ಇಂಥಾ ದಿವ್ಯಾ ಸುರೇಶ್ ಅವರ ವಿರುದ್ಧ ಸದ್ಯ ಹಿಟ್ & ರನ್ ಪ್ರಕರಣ ದಾಖಲಾಗಿದೆ.

ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಕಿರಣ್ ಎಂಬುವರು ನೀಡಿದ ದೂರಿನ ಪ್ರಕಾರ, ಅಕ್ಟೋಬರ್ 4ರ ರಾತ್ರಿ ಕಿರಣ್ ತಮ್ಮ ಸಂಬಂಧಿ ಅನುಷಾಗೆ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆ ತಮ್ಮ ಮತ್ತೊಬ್ಬ ಸಂಬಂಧಿ ಅನಿತಾ ಅವರ ಜೊತೆ ನಡುರಾತ್ರಿ 1-45ರ ಆಸು ಪಾಸು ಆಸ್ಪತ್ರೆಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ಸಮಯದಲ್ಲಿ ಬ್ಯಾಟರಾಯನಪುರದ ಎಂ.ಎಂ.ರಸ್ತೆ ಬಳಿ ನಾಯಿಗಳು ಬೊಗಳಿದ ಹಿನ್ನೆಲೆ ಕಿರಣ್ ತಮ್ಮ ಬೈಕನ್ನು ಬಲ ಬದಿಗೆ ತೆಗೆದುಕೊಂಡಿದ್ದರು. ಈ ಸಮಯದಲ್ಲಿ ವೇಗವಾಗಿ ಕಾರನ್ನು ಚಲಾಯಿಸಿಕೊಂಡು ದಿವ್ಯಾ ಬಂದಿದ್ದಾರೆ. ಕಿರಣ್ ಬೈಕ್‌ಗೆ ಗುದ್ದಿ ಪರಾರಿಯಾಗಿದ್ದಾರೆ.
ಕಾರು ಗುದ್ದಿದ ರಭಸಕ್ಕೆ ಬೈಕ್‌ನಲ್ಲಿದ್ದ ಮೂವರು ಕೆಳಗೆ ಬಿದ್ದಿದ್ದು, ಅನುಷಾ ಮತ್ತು ಕಿರಣ್‌ಗೆ ಸಣ್ಣ ಪ್ರಮಾಣದಲ್ಲಿ ಗಾಯಗಳಾಗಿವೆ. ಮತ್ತೊಂದು ಅನಿತಾ ಅವರ ಕಾಲಿನ ಮಂಡಿಚಿಪ್ಪು ಮುರಿದಿದ್ದು, ಮಾನವೀಯತೆ ತೋರದ ದಿವ್ಯಾ ಸುರೇಶ್ ಕೂಗಿದರೂ ಕೂಡ ಕಾರು ನಿಲ್ಲಿಸದೇ ಹಾಗೇ ಹೋಗಿದ್ದಾರೆ.
ಹಾಗೂ ಹೀಗೂ ಅನಿತಾ ಅವರನ್ನು ಆ ನಂತರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಈ ಹಿನ್ನೆಲೆ ಶಸ್ತ್ರ ಚಿಕಿತ್ಸೆಗೆ ಸುಮಾರು ಎರಡು ಲಕ್ಷ ರೂಪಾಯಿ ಖರ್ಚು ಆಗಿದೆ ಎಂದು ಮಾಧ್ಯಮದವರಿಗೆ ಮಾಹಿತಿಯನ್ನು ನೀಡಿರುವ ಕಿರಣ್, ಅಕ್ಟೋಬರ್ 7ರಂದೇ ಬ್ಯಾಟರಾಯನಪುರದ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
ಕಿರಣ್ ನೀಡಿದ್ದ ದೂರನ್ನು ದಾಖಲಿಸಿಕೊಂಡಿದ್ದ ಪೊಲೀಸರು, ಸಿಸಿಟಿವಿ ಮೂಲಕ ಕಾರು ನಂಬರ್ ಟ್ರೇಸ್ ಮಾಡಿದ್ದಾಗ ಈ ಅಪಘಾತ ಸಂಭವಿಸಿದ್ದು ದಿವ್ಯಾ ಸುರೇಶ್ ಅವರಿಂದ ಎನ್ನುವ ವಿಚಾರ ಗೊತ್ತಾಗಿದೆ. ಆ ನಂತರ ದಿವ್ಯಾ ಸುರೇಶ್ ಕಾರು ಪತ್ತೆ ಮಾಡಿ ಪೊಲೀಸರು ಕಾರ್ ಸೀಜ್ ಮಾಡಿದ್ದರೂ ಖೂಡ ಆ ನಂತರ ಅದ್ಹೇಗೋ ದಿವ್ಯಾ ಸುರೇಶ್ ತಮ್ಮ ಕಾರನ್ನು ಬಿಡಿಸಿಕೊಂಡು ಹೋಗಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆಯನ್ನು ನೀಡಿರುವ ದೂರುದಾರ ಕಿರಣ್, ಅಪಘಾತ ನಡೆದು ಇಷ್ಟು ದಿನವಾದರು ಕೂಡ ದಿವ್ಯಾ ಸುರೇಶ್ ಅವರು ಏನಾಗಿದೆ.. ಹೇಗಿದ್ದಾರೆ..? ಎಂದು ವಿಚಾರಿಸಿಲ್ಲ ಎಂದು ಹೇಳಿದ್ದಾರೆ. ಮೈಸೂರಿಂದ ಇಲ್ಲಿ ಬಂದು ನಾವು ಜೀವನ ಮಾಡುತ್ತಿದ್ದೇವೆ, ಅನಿತಾ ಟೈಲರಿಂಗ್ ಕೆಲಸ ಮಾಡುತ್ತಿದ್ದು ಈಗ ಕಾಲಿನ ಮಂಡಿ ಚಿಪ್ಪು ಒಡೆದು ಹೋಗಿದೆ. ಈ ಹಿನ್ನೆಲೆ ಒಂದು ವರ್ಷ ಅನಿತಾ ಓಡಾಡುವಂತೆ ಇಲ್ಲ ಎಂದು ವೈದ್ಯರು ಹೇಳಿದ್ದಾರೆ ಎಂದು ಹೇಳಿದ್ದಾರೆ. ಶಸ್ತ್ರ ಚಿಕಿತ್ಸೆಗೆ ಈಗಾಗಲೇ ಎರಡು ಲಕ್ಷ ರೂಪಾಯಿ ಖರ್ಚು ಆಗಿದೆ. ದಯವಿಟ್ಟು ನಮಗೆ ಪರಿಹಾರ ಕೊಡಿಸಿ ಎಂದು ಮನವಿಯನ್ನು ಕೂಡ ಕಿರಣ್ ಮಾಡಿಕೊಂಡಿದ್ಧಾರೆ.


Click it and Unblock the Notifications











