93 ದಿನಗಳ ಬಳಿಕ ಜೈಲಿನಿಂದ ಲಾಯರ್ ಜಗದೀಶ್ ರಿಲೀಸ್; "ನಾನು ಶರಣಾಗುವುದಿಲ್ಲ" ಎಂದು ಗುಡುಗಿದ ವಕೀಲ್ ಸಾಬ್
ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತೇನೆಂದು ಲಾಯರ್ ಜಗದೀಶ್ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡಿ ಸದ್ದು ಮಾಡುತ್ತಿದ್ದರು. ಇದೇ ಜನಪ್ರಿಯತೆಯಿಂದಲೇ ಬಿಗ್ ಬಾಸ್ ಮನೆಗೂ ಎಂಟ್ರಿ ಕೊಟ್ಟಿದ್ದರು. ಇದ್ದ ಕೆಲವೇ ದಿನಗಳಲ್ಲಿ ಲಾಯರ್ ಜಗದೀಶ್ ಕಿರುತೆರೆ ವೀಕ್ಷಕರ ಗಮನ ಸೆಳೆದಿದ್ದರು. ಆದರೆ, ಅಲ್ಲೂ ಕಿರಿಕ್ ಮಾಡಿಕೊಂಡು ಹೆಚ್ಚು ದಿನ ಇರಲಾರದೇ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದರು.
ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಸ್ಪರ್ಧಿಯಾಗಿದ್ದ ಲಾಯರ್ ಜಗದೀಶ್ ಹೊರಬಂದ್ಮೇಲೆ ಮತ್ತಷ್ಟು ಆಕ್ಟೀವ್ ಆಗಿದ್ದರು. ರಾಜಕಾರಣಿಗಳು, ಸಿನಿಮಾ ತಾರೆಯರು ಹಾಗೂ ಪೊಲೀಸ್ ಅಧಿಕಾರಿಗಳ ವಿರುದ್ಧ ವಿಡಿಯೋ ಮಾಡಿ ಆರೋಪಗಳನ್ನು ಸುರಿಮಳೆಯನ್ನೇ ಸುರಿಸುತ್ತಿದ್ದರು. ಆದರೆ, ಗಲಾಟೆ ಪ್ರಕರಣವೊಂದರಲ್ಲಿ ಲಾಯರ್ ಜಗದೀಶ್ ಅವರನ್ನು ಪೊಲೀಸರು ಬಂಧಿಸಿದ್ದರು. ಈಗ ಮೂರು ತಿಂಗಳ ಬಳಿಕ ಜಾಮೀನು ಪಡೆದು ಹೊರ ಬಂದಿದ್ದಾರೆ.

ಗಲಾಟೆ ಪ್ರಕರಣದಲ್ಲಿ ಜೈಲು ಸೇರಿದ್ದ ಲಾಯರ್ ಜಗದೀಶ್‌ಗೆ ಜಾಮೀನು ಸಿಗುವುದು ಕಷ್ಟವಾಗಿತ್ತು. ಹೀಗಾಗಿ ಮೂರು ತಿಂಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಾಲ ಕಳೆಯಬೇಕಾಯ್ತು. ಕೊನೆಗೂ ಶತಪ್ರಯತ್ನದ ಬಳಿಕ 93 ದಿನಗಳಾದ್ಮೇಲೆ ಜಾಮೀನು ಪಡೆದು ಹೊರಬಂದಿದ್ದಾರೆ. ಹೊರ ಬರುತ್ತಿದ್ದಂತೆ ಮತ್ತೊಂದು ವಿಡಿಯೋ ಮಾಡಿ, "ನ್ಯಾಯಕ್ಕಾಗಿ ನನ್ನ ಹೋರಾಟ ಇನ್ನೂ ಜೀವಂತವಿದೆ, ನಾನು ಶರಣಾಗುವುದಿಲ್ಲ" ಎಂದು ಹೇಳಿಕೊಂಡಿದ್ದಾರೆ.
ಗಲಾಟೆ ಪ್ರಕರಣದಲ್ಲಿ ಜನವರಿ ತಿಂಗಳಲ್ಲಿ ಜೈಲು ಸೇರಿದ್ದ ಲಾಯರ್ ಜಗದೀಶ್ ಜಾಮೀನಿನ ಮೇಲೆ ಹೊರ ಬರುತ್ತಿದ್ದಂತೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ವಕೀಲ್ ಸಾಬ್‌ಗೆ ಬೇಲ್ ಸಿಕ್ಕಿದೆ. ಈ ಅವರು ಫ್ರೀಯಾಗಿದ್ದಾರೆ ಎಂದು ಪೋಸ್ಟ್ ಹಾಕಿದ್ದಾರೆ. ಜೊತೆ ತಮ್ಮ ಅಭಿಮಾನಿಗಳಿಗಾಗಿ ಕೆಲವು ಮಾಹಿತಿಯನ್ನು ಹಂಚಿಕೊಂಡಿದ್ದಲ್ಲದೆ, ಜೈಲು ಸೇರಿದ್ದು ಯಾರ ಕೈವಾಡದಿಂದ ಎಂದು ಹೇಳಿಕೊಂಡಿದ್ದಾರೆ.
"ನಮಸ್ತೆ ಕರ್ನಾಟಕ, ನಾನು ಕೆ.ಎನ್. ಜಗದೀಶ್ ಕುಮಾರ್, ಹಲವು ವರ್ಷಗಳಿಂದ ಭ್ರಷ್ಟಾಚಾರದ ವಿರುದ್ಧ ಧೀರ ಹೋರಾಟ ನಡೆಸುತ್ತಿರುವ ಹೋರಾಟಗಾರ, PSI ಹಗರಣವನ್ನು ಬಯಲು ಮಾಡಿದ್ದು, ADGP ಅಮೃತಪಾಲ್ ಅವರನ್ನು ಜೈಲಿಗೆ ಕಳಿಸಿದ್ದು ನಮ್ಮ ಟೀಂ, ದೊಡ್ಡ ರಾಜಕಾರಣಿಗಳ ಸ್ಕ್ಯಾಂಡಲ್ ಅನ್ನು ಬಹಿರಂಗಪಡಿಸಿದ್ದು, ರವಿ ಚೆನ್ನಣ್ಣನವರ ಭ್ರಷ್ಟಾಚಾರವನ್ನು ಬಹಿರಂಗಪಡಿಸಿದ್ದು , ಟ್ರಾಫಿಕ್ ಟೋವಿಂಗ್ ಸಿಸ್ಟಂ ಅನ್ನು ನಿಲ್ಲಿಸಿದ್ದು, ಕೊಡಿಗೆಹಳ್ಳಿ ಸುತ್ತಮುತ್ತ ಡ್ರಗ್ಸ್ ವಿರುದ್ಧ ಹೋರಾಟ ನಡೆಸಿದ್ದು ಇವೆಲ್ಲವೂ ನನ್ನ ಹೋರಾಟದ ಭಾಗ." ಎಂದು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿದ್ದನ್ನು ಹೇಳಿಕೊಂಡಿದ್ದಾರೆ.
ಹಾಗೆಯೇ "ಈ ಧೈರ್ಯದ ಹೋರಾಟವನ್ನು ಸಹಿಸದ ಭ್ರಷ್ಟ ರಾಜಕೀಯ ಮತ್ತು ಪೊಲೀಸ್ ವ್ಯವಸ್ಥೆ, ನನ್ನ ಮತ್ತು ನನ್ನ ಮಗನ ವಿರುದ್ಧ ಸಂಚು ರೂಪಿಸಿ, ಜನವರಿ 01, 2025 ರಂದು ಸ್ಥಳಿಯ ಪುಂಡರಿಂದ ನನಗೆ ಮಾರಣಾಂತಿಕ ಹಲ್ಲೆ ನಡೆಸಿ, ಅಕ್ರಮವಾಗಿ ಜೈಲಿಗೆ ಕಳುಹಿಸಲಾಗಿತ್ತು. ಇವತ್ತಿಗೆ 93 ದಿನಗಳ ನಂತರ ನನಗೆ ನ್ಯಾಯ ಸಿಕ್ಕಿದೆ. ಜಾಮೀನು ಲಭಿಸಿದೆ. ನ್ಯಾಯಕ್ಕಾಗಿ ನನ್ನ ಹೋರಾಟ ಇನ್ನೂ ಜೀವಂತವಿದೆ. ನಾನು ಶರಣಾಗುವುದಿಲ್ಲ. ಜೈ ಕರ್ನಾಟಕ" ಎಂದು ಪೋಸ್ಟ್ ಮಾಡಿ ಗುಡುಗಿದ್ದಾರೆ.
ಲಾಯರ್ ಜಗದೀಶ್ ಬಂಧನ ಆಗಿದ್ದೇಕೆ?
ಲಾಯರ್ ಜಗದೀಶ್ ಹಾಗೂ ಸ್ಥಳೀಯರ ಮಧ್ಯೆ ಅಣ್ಣಮ್ಮ ದೇವಿ ಉತ್ಸವಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಕೂಡಿಗೇಹಳ್ಳಿ ಸಮೀಪ ಗಲಾಟೆ ನಡೆದಿತ್ತು. ಇಬ್ಬರ ಮಧ್ಯೆ ಮಾತಿನ ಚಕಮಕಿ ಹಾಗೂ ತಳ್ಳಾಟ ಆಗಿತ್ತು. ಈ ವೇಳೆ ಜಗದೀಶ್ ಕಾನೂನು ಬಾಹಿರವಾಗಿ ಗುಂಡು ಹಾರಿಸಿದ್ದರೆಂದು ಜಗದೀಶ್ ಮೇಲೆ ಆರೋಪ ಮಾಡಲಾಗಿತ್ತು. ಜಗದೀಶ್ ಬಳಿ ಇದ್ದ ಗನ್ ಅನ್ನು ಕೇಳ ಉತ್ತರ ಪ್ರದೇಶದಲ್ಲಿ ಬಳಸುವುದಕ್ಕೆ ಮಾತ್ರ ಅವಕಾಶವಿದೆ ಎಂಬ ಆರೋಪದ ಮೇಲೆ ಅರೆಸ್ಟ್ ಮಾಡಲಾಗಿತ್ತು. ಈ ಬಗ್ಗೆ ಸ್ಥಳೀಯರು ದೂರು ನೀಡಿದ ಬೆನ್ನಲ್ಲೇ ಜಗದೀಶ್ ಜೊತೆಗೆ ಅವರ ಗನ್ ಮ್ಯಾನ್ ಅನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಒಪ್ಪಿಸಿದ್ದರು.


Click it and Unblock the Notifications











