"ಗೀ ರೈಸ್, ಫ್ರೈಡ್ ರೈಸ್‌ಗಾಗಿ ಬಂದು ಜೈ ಅನ್ನೋರಲ್ಲ ಅಪ್ಪು ಫ್ಯಾನ್ಸ್"; ಟಾಂಗ್ ಕೊಡ್ಬೇಡಿ ಅಂತಾನೇ ಕೊಟ್ಟಿದ್ಯಾರಿಗೆ?
ಇಂದು (ಮಾರ್ಚ 17) ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ 50ನೇ ಹುಟ್ಟುಹಬ್ಬ. ಹೀಗಾಗಿ ಅಪ್ಪು ಪುಣ್ಯಭೂಮಿಯಲ್ಲಿ ಕುಟುಂಬಸ್ಥರಿಂದ ಪೂಜಾ ಕಾರ್ಯಗಳು ನಡೆದಿವೆ. ಪುನೀತ್ ಪುತ್ರಿಯರಿಬ್ಬರೂ ಕೇಕ್ ತಂದು ಸಂಭ್ರಮಿಸಿದ್ದಾರೆ. ದೂರ ಊರುಗಳಿಂದ ಅಭಿಮಾನಿಗಳು ಬಂದು ಅಪ್ಪು ಸಮಾಧಿ ಪೂಜೆ ಸಲ್ಲಿಸಿ ತೆರಳುತ್ತಿದ್ದಾರೆ. ಇಂತಹ ಹೀಗಾಗಿ ಇಂದು ಕಂಠೀರವ ಸ್ಟುಡಿಯೋದಲ್ಲಿ ಹಬ್ಬದ ವಾತಾವರಣವೇ ಸೃಷ್ಟಿಯಾಗಿತ್ತು.
ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಜೊತೆಗೆ ಇಂದು ಕನ್ನಡ ಚಿತ್ರರಂಗದ ತಾರೆಯರು ಕೂಡ ಆಗಮಿಸಿ ನಮಿಸಿದ್ದಾರೆ. ಅಪ್ಪು ಜೊತೆಗಿನ ಸವಿ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಕೂಡ ಒಬ್ಬರು. ಅಪ್ಪು ಪುಣ್ಯಭೂಮಿಗೆ ನಮನ ಸಲ್ಲಿಸಿದ ಬಳಿಕ ಪ್ರಥಮ್ ಪವರ್‌ಸ್ಟಾರ್ ಅಭಿಮಾನಿಗಳನ್ನು ಹಾಡಿ ಹೊಗಳಿದ್ದಾರೆ.

ಈ ವೇಳೆ ಪವರ್‌ಸ್ಟಾರ್ ಅಭಿಮಾನಿಗಳನ್ನು ಹೇಗೆ ಅನ್ನೋದು ಕಳೆದ ಶುಕ್ರವಾರ 'ಅಪ್ಪು' ರಿಲೀಸ್ ಆದಾಗಲೇ ಪ್ರೂವ್ ಮಾಡಿದ್ದಾರೆ. ಇವರು ಗೀ ರೈಸ್, ಫ್ರೈಡ್ ರೈಸ್‌ಗಾಗಿ ಬರುವ ಅಭಿಮಾನಿಗಳು ಅಲ್ಲ ಅಂತ ಡೈಲಾಗ್ ಬಿಟ್ಟಿದ್ದಾರೆ. ಪ್ರಥಮ್ ಕೊಟ್ಟಿರುವ ಈ ಹೇಳಿಕೆ ಈ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಷ್ಟಕ್ಕೂ ಪ್ರಥಮ್ ಈ ಮಾತನ್ನು ಯಾಕೆ ಹೇಳಿದ್ದು ಯಾಕೆ? ಅಪ್ಪು ಹಾಗೂ ಅವರ ಅಭಿಮಾನಿಗಳ ಬಗ್ಗೆ ಏನು ಹೇಳಿದ್ದಾರೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಮೊದಲು ಪುನೀತ್ ರಾಜ್‌ಕುಮಾರ್ 50ನೇ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನು ತಿಳಿಸಿದ್ದಾರೆ. ಅಪ್ಪು ಅಭಿಮಾನಿಗಳ ಸಂಭ್ರಮವನ್ನು ನೋಡಿ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.
"ಪುನೀತ್ ರಾಜ್‌ಕುಮಾರ್ ಎಂಬ ಯುಗ ಶುರುವಾಗಿ 50 ವರ್ಷ. ಎಲ್ಲಾ ಕಲಾಭಿಮಾನಿಗಳಿಗೆ, ಸಿನಿಮಾ ಅಭಿಮಾನಿಗಳಿಗೆ, ಪುನೀತ್ ಸರ್ ಅಭಿಮಾನಿಗಳಿಗೆ ಶುಭಾಶಯಗಳು. ಇವತ್ತು ಜನರ ಸಂಭ್ರಮ ನೋಡುವುದಕ್ಕೆ ಖುಷಿಯಿದೆ. ಇದೊಂದೇ ಅಲ್ಲ ಪ್ರತಿ ಪುಣ್ಯ ಸ್ಮರಣೆಗೂ ಬರುತ್ತೇನೆ. ಅಶ್ವಿನಿ ಮೇಡಂ ಬರ್ತ್‌ಡೇ ದಿನ ಅಪ್ಪು ರಿ ರಿಲೀಸ್ ಆಯ್ತು. ಆ ದಿನ ನನಗೆ ಶೂಟಿಂಗ್ ಇದ್ದಿದ್ದರಿಂದ ನೋಡುವುದಕ್ಕೆ ಆಗಲಿಲ್ಲ. ಕಟು ಸತ್ಯ ಏನು ಅಂದರೆ, ನನಗೆ ಅವರನ್ನು ನೋಡುವುದಕ್ಕೂ ಆಗುತ್ತಿರಲಿಲ್ಲ. ನಾನು ತರಲೆ ಮಾಡೋದನ್ನು ನೋಡಿರುತ್ತೀರ. ನಾನು ಕಾಲು ಎಳೆಯುವ ವಿಡಿಯೋ ನೋಡಿರುತ್ತೀರ. ಆದರೆ, ಅಪ್ಪು ಸರ್ ಇಲ್ಲ ಅಂತ ಮನಸ್ಸಿಗೆ ಅನಿಸಿದ್ದಾಗ, ತುಂಬಾನೇ ಕಷ್ಟ ಆಗುತ್ತೆ. ಕಣ್ಣಲ್ಲಿ ತುಂಬಾನೇ ನೀರು ಬಂದು ಬಿಡುತ್ತೆ. ಆ ಕಾರಣಕ್ಕೆ ನನಗೆ ಸಿನಿಮಾ ನೋಡುವುದಕ್ಕೆ ಆಗಲಿಲ್ಲ." ಎಂದು ಪ್ರಥಮ್ ಹೇಳಿದ್ದಾರೆ.
ಇದೇ ವೇಳೆ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರೊಂದಿಗೆ ಕಳೆದ ಸವಿನೆನಪುಗಳನ್ನು ಮೆಲುಕು ಹಾಕಿದ್ದಾರೆ. ಅವರ ಕಳುಹಿಸಿದ ಆಡಿಯೋಗಳು ನನ್ನ ಜೊತೆಯಲ್ಲಿಯೇ ಇರುತ್ತವೆ ಎಂದಿದ್ದಾರೆ. "ಆ ವ್ಯಕ್ತಿಯಲ್ಲಿ ಒಳ್ಳೆಯ ಆಶಯಗಳಿತ್ತು. ಹೇಗೆ ಬದುಕಬೇಕು ಅಂತ ತೋರಿಸಿಕೊಟ್ಟವರು. ಅವರು ನನ್ನ ಸಿನಿಮಾಗಳಿಗೆ ಶುಭ ಕೋರಿದರು. ಅದನ್ನು ಪಬ್ಲಿಕ್‌ನಲ್ಲಿ ಇಟ್ಟೆ. ಅವರು ವಾಟ್ಸಾಪ್‌ನಲ್ಲಿ ಕಳಿಸಿರುವ ಆಡಿಯೋ ನಾನು ಬದುಕಿರುವ ತನಕ ಕಿವಿಯಲ್ಲಿ ಇರುತ್ತೆ. ನಾನು ಸತ್ತಾಗ ಅದು ಕೂಡ ನನ್ನ ಜೊತೆಯಲ್ಲಿಯೇ ಹೋಗುತ್ತೆ. ಬಹಳ ಒಳ್ಳೊಳ್ಳೆಯ ಸ್ಮರಣೆಗಳನ್ನು ನನ್ನ ಜೊತೆಯಲ್ಲಿ ಇದೆ. 47 ವರ್ಷದ ಬದುಕಲ್ಲಿ ತುಂಬಾ ದೊಡ್ಡ ಸಾಧನೆ ಮಾಡಿದ್ದಾರೆ. ಯಾವಾಗಲೂ ಅವರು ಒಂದು ಪ್ರೇರಣೆ." ಎಂದಿದ್ದಾರೆ.
ಇನ್ನು ಅಪ್ಪು ಅಭಿಮಾನಿಗಳೇ ಅಸಲಿ. ಅವರು ಆಮಿಷಗಳಿಗೆ ಬರುವವರಲ್ಲ ಎಂದು ಹೇಳಿದ್ದಾರೆ. ಈ ಹೇಳಿಕೆ ಈಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. "ಇವರು ಯಾರೂ ಗೀ ರೈಸ್, ಫ್ರೈಡ್ ರೈಸ್‌ಗಾಗಿ ಬಂದು ಜೈ ಅಂತ ಕೂಗುವವರಲ್ಲ. ಹೃದಯದಿಂದ ಬರುವವರು. 100 ರೂಪಾಯಿ ಕೊಟ್ಟ ಕೂಡಲೇ ಥಿಯೇಟರ್‌ಗೆ ಬಂದು ಕೂಗುವವರು ಅಲ್ಲ. ಶುಕ್ರವಾರ ರಿಲೀಸ್ ದಿನ ಇವರು ಯಾರು ಅಂತ ಇಡೀ ಪ್ರಪಂಚಕ್ಕೆ ತೋರಿಸಿದ್ದಾರೆ. ಅಪ್ಪು ಅಭಿಮಾನಿಗಳಲ್ಲೂ ಒಂದು ಮಾನವಿ. ಏನಂದ್ರೆ ಯಾರಿಗೂ ಟಾಂಗ್ ಕೊಟ್ಟು ಮಾತಾಡಬೇಡಿ." ಎಂದು ಪ್ರಥಮ್ ಹೇಳಿದ್ದಾರೆ.

ಅಪ್ಪು ಸಮಾಧಿ ಮುಂದೆ ಅವರ ಅಭಿಮಾನಿಗಳಲ್ಲೊಂದು ಮನವಿಯನ್ನು ಮಾಡಿಕೊಂಡಿದ್ದಾರೆ. "ಅಭಿಮಾನಿಗಳಲ್ಲಿ ಒಂದು ಮನವಿ. ಅಪ್ಪು ಸರ್ ಫೋಟೊ ನೋಡಿದಾಗ ಲೈಕ್ ಮಾಡೋದು, ಅಶ್ವಿನಿ ಪುನೀತ್ ರಾಜ್‌ಕುಮಾರ್ ಫೋಟೊ ನೋಡಿದ ಕೂಡ ಲೈಕ್ ಮಾಡೋದು ಇದೇ ಅಭಿಮಾನ ಆಗೋದು ಬೇಡ. ಈಗಲೂ ಅಶ್ವಿನಿ ಮೇಡಂ ಒಳ್ಳೊಳ್ಳೆ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಆ ಸಿನಿಮಾಗಳ ಮೇಲೂ ಅಭಿಮಾನ ಇರಲಿ. ಮೊನ್ನೆ ಶುಕ್ರವಾರ ಶೂಟ್ ಇತ್ತು ಅಪ್ಪು ಸಿನಿಮಾ ನೋಡುವುದಕ್ಕೆ ಆಗಲಿಲ್ಲ. ಈಗ ಇಲ್ಲಿಂದಲೇ ಸಿನಿಮಾ ನೋಡುವುದಕ್ಕೆ ಹೋಗುತ್ತಿದ್ದೇನೆ." ಎಂದು ಹೇಳಿದ್ದಾರೆ.
ಬಿಗ್ ಬಾಸ್ ಗೆದ್ದ ಬಳಿಕ ಪುನೀತ್ ರಾಜ್‌ಕುಮಾರ್‌ಗೆ ಉಂಗುರ ಗಿಫ್ಟ್ ಕೊಡುವುದಕ್ಕೆ ಹೋಗಿದ್ದರು. ಆ ವೇಳೆ ಅವರೊಂದಿಗೆ ನಡೆದ ಘಟನೆಗಳನ್ನು ಪ್ರಥಮ್ ವಿವರಿಸಿದ್ದಾರೆ. "ನಾನು ಬಿಗ್ ಬಾಸ್ ಗೆದ್ದ ತಕ್ಷಣ, ಅದೇ ದಿನ ಅವರ ಬರ್ತ್‌ಡೇಗೆ ಒಂದು ಉಂಗುರ ಹಾಕಿದ್ದೆ. ಅವತ್ತು ಇನ್‌ಸ್ಟಾಗ್ರಾಂನಲ್ಲಿ ಆ ಫೋಟೊ ಹಾಕಿದಾಗ ಒಂದು ಘಟನೆ ನಡೀತು. ಈ ಉಂಗುರವನ್ನು ನೀನು ಮಾಡಿಸಿದ್ಯಾ ಅಂದರು. ಬಹಳ ಸ್ಪೆಷಲ್ ಆಗಿ ಮಾಡಿಸಿದ್ದೇನೆ. ಸ್ಮರಣೆಯಲ್ಲಿ ಉಳಿದುಕೊಳ್ಳಲಿ ಅಂತ ಮಾಡಿಸಿದ್ದೇನೆ ಅಂದೆ. ಅದಕ್ಕೆ ಅವರು ಈಗ ಎಲ್ಲಿ ಉಳಿಯುತ್ತೋ ಅದು ಇಷ್ಟೊಂದು ಜನರ ಮಧ್ಯೆ. ಎಲ್ಲಾದರೂ ಕಳೆದು ಹೋದರೆ, ಬಿಡು ಸಿಕ್ಕಿದೋರು ಚೆನ್ನಾಗಿರಲಿ ಅಂದರು. ನನಗೆ ಸ್ವಲ್ಪ ಬೇಜಾರಾಯ್ತು. ಯೇ.. ತಮಾಷೆಗೆ ಅಂದೆ. ಇಟ್ಟುಕೊಳ್ಳುತ್ತೇನೆ. ನಮ್ಮ ಬಿಗ್ ಬಾಸ್ ಕೊಟ್ಟಿರೋದು ಅಂದರು. ಇವತ್ತಿಗೂ ಆ ನೆನಪು ನನ್ನ ಸ್ಮರಣೆಯಲ್ಲಿ ಇದೆ." ಎಂದು ಆ ಸವಿ ನೆನಪನ್ನು ಹಂಚಿಕೊಂಡಿದ್ದಾರೆ.
ಕೊನೆಯಲ್ಲಿ ಪುನೀತ್ ರಾಜ್‌ಕುಮಾರ್ ಅವರ ಆಶಯಗಳನ್ನು ಈಡೇರಿಸೋಣ. ದೊಡ್ಮೆನೆಯ ಬೆಂಬಲಕ್ಕೆ ನಿಲ್ಲೋಣ ಎಂದಿದ್ದಾರೆ. "ಅವರ ಆಶಯಗಳನ್ನು ಈಡೇರಿಸೋಣ, ಒಳ್ಳೊಳ್ಳೆ ಕನಸುಗಳನ್ನು ಈಡೇರಿಸಿದ್ದಾರೆ. ಯಾವಾಗಲೂ ಅಷ್ಟೇ ರಾಘಣ್ಣ ಅವರಿಗೆ, ಅಶ್ವಿನಿ ಮೇಡಂ ಅವರಿಗೆ, ಶಿವಣ್ಣ ಅವರಿಗೆ ಹಾಗೂ ಆ ಕುಟುಂಬಕ್ಕೆ ಬೆಂಗಾವಲಾಗಿ ನಿಲ್ಲುವ ಮೂಲಕ ಕನ್ನಡ ಸಿನಿಮಾಗಳನ್ನು ಬೆಂಬಲಿಸೋಣ. ಯಾರು ಏನೇ ಮಾತಾಡಿದರೂ ತಲೆ ಕೆಡಿಸಿಕೊಳ್ಳಬೇಡಿ. ಮೊನ್ನೆ ರಿ ರಿಲೀಸ್‌ನಲ್ಲಿ ಉತ್ತರ ಕೊಟ್ಟಾಗಿದೆ. ಅದು ನಿಮ್ಮ ಪ್ರೀತಿ ಅಷ್ಟೇ ಸಾಕು." ಎಂದು ಪ್ರಥಮ್ ಹೇಳಿದ್ದಾರೆ.
ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಯಾರ ಮಾತಿಗೂ ತಲೆ ಕೆಡಿಸಿಕೊಳ್ಳಬೇಡಿ ಎನ್ನುತ್ತಲೇ ಯಾರು ಟಾಂಗ್ ಕೊಟ್ಟಿದ್ದಾರೆ ಅಂತ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಇತ್ತೀಚೆಗೆ ಪ್ರಥಮ್ ಹಾಗೂ ದರ್ಶನ್ ಅಭಿಮಾನಿಗಳ ನಡುವೆ ಕಿತ್ತಾಟ ನಡೆದಿತ್ತು. ದರ್ಶನ್ ಅಭಿಮಾನಿಗಳ ವಿರುದ್ಧ ಪ್ರಥಮ್ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದರು. ಇನ್ನೂ ದರ್ಶನ್ ಫ್ಯಾನ್ಸ್ ಬಿಗ್ ಬಾಸ್ ಪ್ರಥಮ್ ವಿರುದ್ಧ ಕಿರಿಕಾರುತ್ತಲೇ ಇದ್ದಾರೆ. ಇನ್ನೊಂದು ಕಡೆ ದರ್ಶನ್ ಫ್ಯಾನ್ಸ್ ಹಾಗೂ ಅಪ್ಪು ಫ್ಯಾನ್ಸ್ ಮಧ್ಯೆನೂ ಸಂಬಂಧ ಅಷ್ಟಾಗಿ ಚೆನ್ನಾಗಿಲ್ಲ. ಹೀಗಾಗಿ ಪ್ರಥಮ್ ಗೀ ರೈಸ್, ಫ್ರೈಡ್ ರೈಸ್‌ಗೆ ಬರೋ ಫ್ಯಾನ್ಸ್ ಅಂತ ಯಾರಿಗೆ ಹೇಳಿದ್ದು? ಅನ್ನೋ ಪ್ರಶ್ನೆ ಸೋಶಿಯಲ್ ಮೀಡಿಯಾಗಳಲ್ಲಿ ಜೋರಾಗಿ ಚರ್ಚೆಯಾಗುತ್ತಿದೆ. ಈ ಹೇಳಿಕೆಯಿಂದ ಇನ್ನೊಂದು ವಿವಾದ ಸೃಷ್ಟಿಯಾಗದೆ ಇದ್ದರೆ ಸಾಕು.


Click it and Unblock the Notifications











