BBK 11: ಲಾಯರ್ ಜಗದೀಶ್ ಕಾನೂನು ಡಿಗ್ರಿ ಕ್ಯಾನ್ಸಲ್? ಪ್ರಶಾಂತ್ ಸಂಬರ್ಗಿ ಪೋಸ್ಟ್‌ನಲ್ಲಿ ಏನಿದೆ?
ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ಹವಾ ಹುಟ್ಟಾಕಿರುವ ಸ್ಪರ್ಧಿ ಲಾಯರ್ ಜಗದೀಶ್. ಬಿಗ್‌ಬಾಸ್ ಮನೆಯೊಳಗಿರುವ ಎಲ್ಲಾ ಸ್ಪರ್ಧಿಗಳ ವಿರೋಧವನ್ನು ಕಟ್ಟಿಕೊಂಡು ಮನೆಯಿಂದ ಹೊರಬರುವುದಕ್ಕೆ ರೆಡಿಯಾಗಿದ್ದಾರೆ. ಅದಲ್ಲದೆ ಲಾಯರ್ ಜಗದೀಶ್ ಬಿಗ್ ಬಾಸ್‌ಗೆ ಎಚ್ಚರಿಕೆ ಕೊಟ್ಟಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಈ ಮಧ್ಯೆ ಲಾಯರ್ ಜಗದೀಶ್ ಬಗ್ಗೆ ಮಾಜಿ ಬಿಗ್ ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರ್ಗಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬಾಂಬ್ ಸಿಡಿಸಿದ್ದಾರೆ. ಸಾಮಾಜಿಕ ಹೋರಾಟಗಾರ ಹಾಗೂ ಮಾಜಿ ಸ್ಪರ್ಧಿ ಲಾಯರ್ ಜಗದೀಶ್ ಬಗ್ಗೆ ದಾಖಲೆಯೊಂದನ್ನು ಬಿಡುಗಡೆ ಮಾಡಿದ್ದು ಅವರ ಕಾನೂನು ಪದವಿ ಕ್ಯಾನ್ಸಲ್ ಆಗಿದೆ ಎಂದು ಪೋಸ್ಟ್ ಮಾಡಿದ್ದಾರೆ.

ಬಿಗ್‌ಬಾಸ್ ಮನೆಯೊಳಗೆ ನಾನೇ ಸಿಂಹ ಎಂದು ಹೇಳಿಕೊಂಡು ಅಬ್ಬರಿಸುತ್ತಿರುವ ಜಗದೀಶ್ ಅವರಿಗೆ ಇದು ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ದೆಹಲಿ ಬಾರ್ ಕೌನ್ಸಿಲ್ ಜಗದೀಶ್‌ಗೆ ನೀಡಿರುವ ಅಡ್ವೋಕೇಟ್ ಬಾರ್ ಕೌನ್ಸಿಲ್ ನೀಡುವ ಲೈಸೆನ್ಸ್ ಅನ್ನು ರದ್ದು ಪಡಿಸಿದೆ. ಅಷ್ಟಕ್ಕೂ ಪ್ರಶಾಂತ್ ಸಂಬರ್ಗಿ ರಿವೀಲ್ ಮಾಡಿರುವ ಪೋಸ್ಟ್‌ನಲ್ಲಿ ಏನಿದೆ?
ಲಾಯರ್ ಜಗದೀಶ್ ಉರ್ಫ್ ವಕೀಲ್ ಸಾಬ್ ಅಂತಲೇ ಕರ್ನಾಟಕದಲ್ಲಿ ಫೇಮಸ್ ಆಗಿದ್ದು ಜಗದೀಶ್. ಒಂದಷ್ಟು ದಿನ ಸೈಲೆಂಟ್ ಆಗಿದ್ದ ಲಾಯರ್ ಜಗದೀಶ್ ಹೊರ ಬಂದು ರಾಜಕೀಯ ಮುಖಂಡರ ವಿರುದ್ಧ ಕಿಡಿಕಾರಿದ್ದರು. ತಮ್ಮ ಬಂಡವಾಳವನ್ನು ಹೊರಹಾಕುತ್ತೇನೆ ಎಂದು ಅಬ್ಬರಿಸಿದ್ದರು. ದರ್ಶನ್ ಪರ ಬ್ಯಾಟ್ ಬೀಸಿದ್ದರು. ಮುನಿರತ್ನ ವಿರುದ್ಧ ತಿರುಗಿಬಿದ್ದಿದ್ದರು. ಈ ಬೆನ್ನಲ್ಲೇ ಬಿಗ್‌ಬಾಸ್ ಮನೆಗೂ ಎಂಟ್ರಿ ಕೊಟ್ಟು ಹಾವಳಿ ಎಬ್ಬಿಸಿದ್ದಾರೆ.
ಸದ್ಯ ವಿವಾದದಿಂದಲೇ ಸದ್ದು ಮಾಡಿದ್ದ ಲಾಯರ್ ಜಗದೀಶ್ ವಿರುದ್ಧ ಪ್ರಶಾಂತ್ ಸಂಬರ್ಗಿ ತಿರುಗಿಬಿದ್ದಿದ್ದಾರೆ. ತನ್ನ ಫೇಮಸ್ ಬುಕ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, "ಬಿಗ್ ಬಾಸ್ ಜಗದೀಶನ ಲಾ ಡಿಗ್ರಿ ಕ್ಯಾನ್ಸಲ್" ಆಗಿದೆ ಎಂದು ಬರೆದುಕೊಂಡಿದ್ದಾರೆ. ಇದರೊಂದಿಗೆ ದಾಖಲೆಯೊಂದನ್ನು ಹಂಚಿಕೊಂಡಿದ್ದಾರೆ.
ಅಷ್ಟಕ್ಕೂ ಪ್ರಶಾಂತ್ ಸಂಬರ್ಗಿ ಪೋಸ್ಟ್‌ನಲ್ಲಿ ಏನಿದೆ ಅಂತ ನೋಡುವುದಾದರೆ, "Bigg Boss ಜಗದೀಶನ ಲಾ ಡಿಗ್ರಿ ಕ್ಯಾನ್ಸಲ್ ಆಗಿದೆ. ಆತನ 2nd PUC ಮಾರ್ಕ್ಸ್ ಕಾರ್ಡ್ ನಕಲಿ ಆಗಿರುವುದರಿಂದ, ನಂತರದ ಡಿಗ್ರಿಗಳು (ಕಾನೂನು ಡಿಗ್ರಿ ಸೇರಿ) ಮಾನ್ಯವಲ್ಲದಿದ್ದುದರಿಂದ ಆತನ ಸನ್ನದ್ದು ವಾಪಾಸ್ ಕೊಡುವಂತೆ ಬಾರ್ ಕೌನ್ಸಿಲ್ ಆದೇಶ ನೀಡಿದೆ." ಎಂದು ಪ್ರಶಾಂತ್ ಸಂಬರ್ಗಿ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಈ ಪೋಸ್ಟ್ ಆಧಾರದ ಮೇಲೆ ಹೇಳುವುದಾದರೆ, ಲಾಯರ್ ಜಗದೀಶ್ ನಕಲಿ ಪಿಯುಸಿ ಅಂಕ ಪಟ್ಟಿಯನ್ನು ಸೃಷ್ಟಿಸಿದ್ದಾರೆ. ಅದರ ಮೂಲಕ ಪದವಿ ಹಾಗೂ ಕಾನೂನು ಪದವಿಯನ್ನು ಪಡೆದಿದ್ದಾರೆ. ಈ ಅಂಕ ಪಟ್ಟಿಗಳನ್ನು ಕೊಟ್ಟು ದೆಹಲಿ ಬಾರ್ ಕೌನ್ಸಿಲ್‌ನಲ್ಲಿ ಕಾನೂನು ಪದವಿ ಆಧಾರದ ಮೇಲೆ ವಕೀಲಿಕೆ ಸನ್ನದ್ಧು ಪಡೆದಿದ್ದಾರೆಂದು ಹೇಳಲಾಗಿದೆ. ಇದು ನಕಲಿ ಅಂಕ ಪಟ್ಟಿ ಕೊಟ್ಟಿದ್ದು, ಅವರ ಕೌನ್ಸಿಲ್ ಲೈಸೆನ್ಸ್ ರದ್ದತಿ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಅದನ್ನೇ ಆಧಾರವಾಗಿಟ್ಟುಕೊಂಡು 2024ರ ಏಪ್ರಿಲ್‌ನಲ್ಲಿ ನಡೆದ ಬಾರ್ ಕೌನ್ಸಿಲ್ ಸಭೆಯಲ್ಲಿ ಕೆ.ಎನ್. ಜಗದೀಶ್ ಕುಮಾರ್ ನೀಡಿದ್ದ ಪಿಯುಸಿ ಅಂಕಪಟ್ಟಿ ಎಂದು ಹೇಳಲಾಗಿದೆ. ಅಲ್ಲದೆ ಪದವಿ ಹಾಗೂ ಎಲ್‌ಎಲ್‌ಬಿ ಕೂಡ ಅಮಾನ್ಯ ಎಂದು ವಕೀಲಿಕೆ ಪರವಾನಗಿಯನ್ನು ರದ್ದುಗೊಳಿಸಲಾಗಿದೆ ಎಂದು ಹೇಳಲಾಗಿದೆ. ಬಿಗ್‌ಬಾಸ್ ಮನೆಗೆ ಹೋದ ಬಳಿಕ ಜಗದೀಶ್ ನಕಲಿ ಅಂಕಪಟ್ಟಿ ಪ್ರಕರಣ ಹೊರಬಿದ್ದಿದೆ.


Click it and Unblock the Notifications











