ಬಿಗ್ ಬಾಸ್ ಓಟಿಟಯ ಮೊದಲ ಸ್ಪರ್ಧಿ ನಂಬರ್ ಗುರೂಜಿ ಆರ್ಯವರ್ಧನ್!
ದಕ್ಷಿಣ ಭಾರತದ ಮೊದಲ ಬಿಗ್ ಬಾಸ್ ಓಟಿಟಿ ಸೀಸನ್ ಆರಂಭ ಆಗುವುದಕ್ಕೆ ಕೆಲವೇ ಕ್ಷಣಗಳು ಬಾಕಿ ಉಳಿದಿವೆ ಅಷ್ಟೇ. ಆಗಲೇ ಬಿಗ್ ಬಾಸ್ ಓಟಿಟಿಯ ಚಟುವಟಿಗಳು ಆರಂಭ ಆಗಿದೆ. ಈಗಾಗಲೇ ಬಿಗ್ ಬಾಸ್ ಓಟಟಿ ಮನೆ ಸೇರಲಿರುವ ಸ್ಪರ್ಧಿಗಳ ಫೋಮೊವನ್ನು ರಿಲೀಸ್ ಮಾಡಲಾಗಿದೆ.
Recommended Video
ಆಗಸ್ಟ್ 6ರಂದು ಸಂಜೆ 7 ಗಂಟೆಯ ಬಳಿಕ ಬಿಗ್ ಬಾಸ್ ಮನೆ ಸೇರಲಿರುವ ಸ್ಪರ್ಧಿಗಳು ಯಾರು ಅನ್ನೋ ಕುತೂಹಲಕ್ಕೆ ತೆರೆಬೀಳಲಿದೆ. ಈಗಾಗಲೇ ಎರಡು ಹೆಸರುಗಳನ್ನು ರಿವೀಲ್ ಮಾಡಲಾಗಿದೆ. ಅದರಲ್ಲಿ ಒಬ್ಬರು ಆರ್ಯವರ್ಧನ್ ಗುರೂಜಿ. ಈ ವಿಷಯವನ್ನು ವೂಟ್ ಓಟಿಟಿ ವೇದಿಕೆಯಲ್ಲಿ ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.
ಆರ್ಯವರ್ಧನ್ ಗುರೂಜಿ ನಂಬರ್ ಮೂಲಕ ಭವಿಷ್ಯ ಹೇಳುವುದರಲ್ಲಿ ಫೇಮಸ್. ಆದರೆ ಇತ್ತೀಚೆಗೆ ಹಲವು ವಿವಾದಕ್ಕೆ ಸಿಕ್ಕಿಕೊಂಡಿದ್ದಾರೆ. ಅಲ್ಲದೆ ಗುರೂಜಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು. ಈಗ ಇದೇ ಗುರೂಜಿ ಬಿಗ್ ಬಾಸ್ ಒಟಿಟಿ ಸೀಸನ್ ಮನೆಯನ್ನು ಪ್ರವೇಶ ಮಾಡಿದ್ದಾರೆ. ಕರ್ನಾಟಕದ ವಿವಾದಾತ್ಮಕ ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಬಿಗ್ ಬಾಸ್ ಮನೆಯಲ್ಲಿ ಏನೆಲ್ಲಾ ಹೇಗೆ ಆಟ ಆಡುತ್ತಾರೆ ಎನ್ನುವ ಕುತೂಹಲವಿದೆ.

ಗುರೂಜಿ ಹಿನ್ನೆಲೆ ಏನು?
ಆರ್ಯವರ್ಧನ್ ಗುರೂಜಿ ಕಳೆದ ಕಲವು ವರ್ಷಗಳಿಂದ ಸುದ್ದಿ ಹಾಗೂ ಮನೋರಂಜನಾ ವಾಹಿನಿಯಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುತ್ತಿದ್ದ ಫೇಸ್. ತೊಂದರೆಯಲ್ಲಿದ್ದ ಜನರಿಗೆ ಆರ್ಯವರ್ಧನ್ ಜೋತಿಷ್ಯ ಶಾಸ್ತ್ರದಿಂದ ಪರಿಹಾರವನ್ನು ಸೂಚಿಸುತ್ತಿದ್ದರು. ಆದರೆ, ಕೆಲವು ವರ್ಷಗಳಿಂದ ವಿವಾದಗಳಿಗೆ ಸಿಕ್ಕಿಕೊಂಡಿದ್ದ ಗುರೂಜಿ ವಾಹಿನಿಯಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಐಪಿಎಲ್ ಪಂದ್ಯ ಗೆಲ್ಲುವ ವಿಚಾರದಲ್ಲಿ ಭವಿಷ್ಯ ನುಡಿದು ಪೇಚಿಗೆ ಸಿಕ್ಕಿಕೊಂಡಿದ್ದರು. ಮಹಿಳೆಯೊಬ್ಬರು ಇವರ ವಿರುದ್ಧ ದೂರನ್ನೂ ನೀಡಿದ್ದರು.

ಮಹಿಳೆಯಿಂದ ಅತ್ಯಾಚಾರ ಆರೋಪ
ಆರು ವರ್ಷಗಳ ಹಿಂದೆ ಆರ್ಯವರ್ಧನ್ ಗುರೂಜಿ ವಿರುದ್ಧ ಆಂಧ್ರದ ಮಹಿಳೆಯೊಬ್ಬರು ಅತ್ಯಾಚಾರದ ದೂರನ್ನು ದಾಖಲಿಸಿದ್ದರು. ಮಹಿಳೆ ನೀಡಿದ ದೂರಿನ ಪ್ರಕಾರ, ಅತ್ಯಾಚಾರ ಯತ್ನ, ವಂಚನೆ, ಪ್ರಾಣ ಬೆದರಿಕೆ ನಿಂದನೆ ಮಾಡಿದ ಆರೋಪದ ಮೇಲೆ ಗುರೂಜಿ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಸಂಖ್ಯಾ ಜ್ಯೋತಿಷ್ಯ ತರಗತಿ ನಡೆಸುವುದಾಗಿ ಆರ್ಯವರ್ಧನ್ ಮಾಧ್ಯಮಗಳಲ್ಲಿ ನೀಡಿದ ಜಾಹೀರಾತು ನಂಬಿದ್ದ 40 ವರ್ಷದ ಮಹಿಳೆಯು ತರಗತಿಗೆ ಬಂದಿದ್ದರು. 5 ದಿನಗಳ ತರಬೇತಿಗೆ 24 ಸಾವಿರ ನಿಗದಿ ಮಾಡಿದ್ದು,ಹೆಚ್ಚುವರಿ ತರಗತಿ ನಡೆಸಲು 1.5 ಲಕ್ಷ ಪಡೆದುಕೊಂಡಿದ್ದರು. ಆದರೆ, ಪ್ರಯೋಜನ ಆಗದೇ ಇದಿದ್ದರಿಂದ ಹಣ ಕೇಳಲು ಹೋದಾಗ ಅತ್ಯಾಚಾರಕ್ಕೆ ಯತ್ನಿಸಿದ್ದರು ಎಂದು ಮಹಿಳೆ ದೂರು ನೀಡಿದ್ದರು.

ಗುರೂಜಿ ಟ್ರೋಲ್
ಆರ್ಯವರ್ಧನ್ ಗುರೂಜಿ ಸಂಖ್ಯಾಶಾಸ್ತ್ರದ ಮೂಲಕ ಭವಿಷ್ಯ ನುಡಿಯುತ್ತಿದ್ದರು. ಐಪಿಎಲ್ ಪಂದ್ಯದ ವೇಳೆ ಸುದ್ದಿ ವಾಹಿನಿಯೊಂದರಲ್ಲಿ ಐಪಿಎಲ್ ಪಂದ್ಯದ ಬಗ್ಗೆ ಭವಿಷ್ಯ ನುಡಿದಿದ್ದರು. ಯಾವ ತಂಡ ಗೆಲ್ಲುತ್ತೆ. ಯಾರು ಎಷ್ಟು ರನ್ ಬಾರಿಸುತ್ತಾರೆ? ಯಾರು ಎಷ್ಟು ವಿಕೆಟ್ ತೆಗೆಯುತ್ತಾರೆ ಎಂದು ಭವಿಷ್ಯ ನುಡಿದಿದ್ದರು. ಆ ಎಲ್ಲಾ ಲೆಕ್ಕಾಚಾರವೂ ತಲೆ ಕೆಳಗಾಗಿತ್ತು. ಆಗ ಸೋಶಿಯಲ್ ಮೀಡಿಯಾದಲ್ಲಿ ಆರ್ಯವರ್ಧನ್ ಟ್ರೋಲ್ ಆಗಿದ್ದರು.

ನಿರೀಕ್ಷೆ ಏನು?
ಆರ್ಯವರ್ಧನ್ ಮಾತಿನ ಶೈಲಿಯಿಂದ ಬಿಗ್‌ಬಾಸ್ ಮನೆಯಲ್ಲಿ ವಿವಾದಕ್ಕೀಡಾಗಬಹುದು. ಮನೆಯೊಳಗೆ ಅವರ ವರ್ತನೆಯಿಂದ ಟ್ರೋಲ್‌ಗೆ ಒಳಗಾಗಬಹುದು. ಅಲ್ಲದೆ, ಆರ್ಯವರ್ಧನ್ ಮಾತಿನ ಶೈಲಿಯಿಂದ ಉಳಿದ ಸ್ಪರ್ಧಿಗಳ ಕಣ್ಣು ಕೆಂಪಾಗುವ ಸಾಧ್ಯತೆಯಿದೆ. ಒಟ್ನಲ್ಲಿ ಆರ್ಯವರ್ಧನ್ ಇರೋದ್ರಿಂದ ಬಿಗ್ ಬಾಸ್ ನೆಡೆಸುವವರಿಗೂ ಕಂಟೆಂಟ್ ಸಿಗೋದು ಪಕ್ಕಾ. ಹಾಗೇ ಬಿಗ್ ಬಾಸ್ ಪ್ರಿಯರಿಗೆ ಮನರಂಜನೆ ಸಿಗೋದೂ ಸತ್ಯ.


Click it and Unblock the Notifications











