"ನಿಮ್ಮ ಅಕ್ಕತಂಗಿಯರಿಗೆ ಆ ಪದ ಬಳಸಿ ನೋಡಿ.. ಅನು ನನ್ನ ತಂಗಿ ತೊಂದರೆ ಕೊಡ್ಬೇಡಿ"; ವಿನಯ್ ಗೌಡ ವಾರ್ನಿಂಗ್
ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿಯಾಗಿದ್ದ ವಿನಯ್ ಗೌಡ ಸಖತ್ ಸುದ್ದಿಯಲ್ಲಿದ್ದರು. ಬಿಗ್ ಬಾಸ್ ಮನೆಯೊಳಗೆ ತನ್ನ ಖಡಕ್ ವ್ಯಕ್ತಿತ್ವದಿಂದ ಆನೆ ಅಂತಲೇ ಕರೆಸಿಕೊಳ್ಳುತ್ತಿದ್ದ ವಿನಯ್ ಹೊರಬಂದಾಗ ಲೆಕ್ಕವಿಲ್ಲದಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದರು. ತನಗೆ ಅನಿಸಿದ್ದನ್ನು ನೇರವಾಗಿ ಕಡ್ಡಿ ಮುರಿದಂತೆ ಹೇಳುವ ವಿನಯ್ ಈಗ ಅಕ್ಕ ಅನು ಬೆಂಬಲಕ್ಕೆ ನಿಂತಿದ್ದಾರೆ.
ಅಕ್ಕ ಅನು ಯಾರು ಅಂತ ಒಂದಿಷ್ಟು ಮಂದಿಗೆ ಗೊತ್ತಿಲ್ಲದೆ ಇರಬಹುದು. ತಮ್ಮದೇ ಸ್ವಂತ ಖರ್ಚಿನಲ್ಲಿ ಸರ್ಕಾರಿ ಶಾಲೆಗಳನ್ನು ಬೆಳೆಸುವುದಕ್ಕೆ ಕೆಲಸ ಮಾಡುತ್ತಿದ್ದಾರೆ. ಆದರೆ, ಕಳೆದ ಕೆಲವು ದಿನಗಳಿಂದ ಅವರ ಆರೋಗ್ಯ ಸರಿಯಿಲ್ಲದ ಕಾರಣ ಸಮಾಜಮುಖಿ ಕೆಲಸಗಳಿಂದ ಹಿಂದೆ ಸರಿದಿದ್ದರು. ತನ್ನ ಆರೋಗ್ಯದ ಬಗ್ಗೆ ಈ ಹಿಂದೆ ವಿಡಿಯೋ ಮಾಡಿ ಮಾಹಿತಿಯನ್ನು ಹಂಚಿಕೊಂಡಿದ್ದರು.

ಈಗ ಮತ್ತೊಮ್ಮೆ ತನ್ನ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ವಿಡಿಯೋ ಮಾಡಿ ಕಣ್ಣೀರು ಹಾಕಿದ್ದರು. ನಕಲಿ ಖಾತೆಗಳ ಮೂಲಕ ಕೆಟ್ಟದಾಗಿ ಕಮೆಂಟ್ ಮಾಡುತ್ತಿದ್ದಾರೆ. ಹೆಣ್ಣು ಮತ್ತು ಗಂಡು ಮಕ್ಕಳ ಕುರಿತು ಕೆಟ್ಟದಾಗಿ ಟ್ರೋಲ್ ಮಾಡುತ್ತಿದ್ದಾರೆ. ಇನ್ನೊಬ್ಬರ ಬಗ್ಗೆ ಗೊತ್ತಿಲ್ಲದೆ ಇದ್ದರೂ ಕೆಟ್ಟದಾಗಿ ಕಮೆಂಟ್ ಮಾಡುತ್ತಾರೆ. ಅಂತಹ ಮನಸ್ಥಿತಿ ನಾಶವಾಗಬೇಕು ಅಂತ ಹೇಳಿ ಕಣ್ಣೀರು ಇಟ್ಟಿದ್ದರು.
"ಅಕ್ಕ ಅನು ವಿಡಿಯೋ ನೋಡಿ ಬೇಜಾರಾಯ್ತು"
ಈ ವಿಡಿಯೋ ನೋಡುತ್ತಿದ್ದಂತೆ ಬಿಗ್‌ಬಾಸ್ ಕನ್ನಡ ಸೀಸನ್ 10 ಮೂರನೇ ರನ್ನರ್‌ಅಪ್ ವಿನಯ್ ಗೌಡ ವಿಡಿಯೋ ಮಾಡಿ ಟ್ರೋಲ್ ಮಾಡುವವರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಅಕ್ಕ ಅನು ಬೆಂಬಲಕ್ಕೆ ನಿಂತು ತೊಂದರೆ ಕೊಡಬೇಡಿ. ನೆಗೆಟಿವ್ ಕಮೆಂಟ್ ಮಾಡಿದವರ ಅಡ್ರೆಸ್ ಹುಡುಕುವುದೇನು ಕಷ್ಟ ಆಗಲ್ಲ ಅಂತ ಎಚ್ಚರಿಕೆಯನ್ನು ನೀಡಿದ್ದಾರೆ. "ನೋಡಿ ಅಕ್ಕ ಅನು ಅನ್ನುವರ ವಿಡಿಯೋ ನೋಡಿ ಬೇಜಾರಾಯ್ತು. ಆರೋಗ್ಯ ಸರಿ ಇಲ್ಲದೆ ಇದ್ದರೂ ಸರ್ಕಾರಿ ಶಾಲೆಗೆ ಬಣ್ಣ ಬಳಿಯೋದು, ಸ್ವಚ್ಚಗೊಳಿಸುವುದನ್ನು ಮಾಡುತ್ತಿದ್ದಾರೆ. ಅಂತಹವರಿಗೆ ಕಮೆಂಟ್ ಮಾಡೋದು, ಅಸಭ್ಯ ಪದಗಳನ್ನು ಬಳಸುವುದು, ನಿಮಗೆ ಇದರಿಂದ ಏನು ಸಿಗುತ್ತೆ? ಎಂದು ಕೇಳಿದ್ದಾರೆ.
"ನಿಮಗೆ ಮನುಷ್ಯತ್ವ ಅನ್ನೋದು ಇದ್ದರೆ.."
ಅಕ್ಕ ಅನು ವಿರುದ್ಧ ನೆಗೆಟಿವ್ ಕಮೆಂಟ್ ಮಾಡುವವರ ವಿರುದ್ಧ ವಿನಯ್ ಗೌಡ ಗರಂ ಆಗಿ ವಿಡಿಯೋ ಮಾಡಿದ್ದಾರೆ. "ನಾನು ಮಾತಾಡುತ್ತಿರೋ ಫೇಕ್ ಅಕೌಂಟ್ ಇಟ್ಕೊಂಡು ಫೇಕ್ ಕಮೆಂಟ್ ಮಾಡುತ್ತಿರೋರಿಗೆ. ಈ ಕೆಲಸ ನಿಮಗೆ ನಿಜಕ್ಕೂ ಇಷ್ಟ ಆಗುತ್ತಿದ್ದರೆ, ನಿಮಗೆ ಮನಸ್ಸು, ಮನುಷ್ಯತ್ವ ಅನ್ನೋದು ಇದ್ದರೆ, ಒಮ್ಮೆ ಕನ್ನಡಿಯಲ್ಲಿ ನೋಡಿಕೊಂಡು, ನಿಮ್ಮ ಅಕ್ಕ ತಂಗಿಯಂದಿರಿಗೆ , ನಿಮ್ಮ ಫ್ಯಾಮಿಲಿಗೆ, ನಿಮ್ಮ ತಾಯಿಗೆ ಅದೇ ಪದಗಳನ್ನು ಬಳಸಿ ನೋಡಿ. ಏನು ಪ್ರತಿಕ್ರಿಯೆ ಬರುತ್ತೆ ಅಂತ ಗೊತ್ತಾಗುತ್ತೆ. ತಪ್ಪು ಅನಿಸುವುದಿಲ್ಲ." ಎಂದು ವಿನಯ್ ಗೌಡ ಕಿಡಿಕಾರಿದ್ದಾರೆ.
"ಅಕ್ಕ ಅಮ್ಮ ಹೇಳಕ್ಕೆ ಬರಲ್ಲ ಅಂತಲ್ಲ"
"ಮುಂದೆ ಏನಾಗ್ಬಹುದು? ಸೈಬರ್ ಕ್ರೈಂಗೆ ದೂರು ಕೊಡಬಹುದು. ಯಾರೆಲ್ಲ ಕೆಟ್ಟದಾಗಿ , ನೆಗೆಟಿವ್ ಆಗಿ ಕಮೆಂಟ್‌ಗಳನ್ನು ಮಾಡಿದ್ದೀರಾ ಅವರ ಅಡ್ರೆಸ್‌ಗಳು ಸಿಗುತ್ತವೆ. ಸಿಗಲ್ಲ ಅಂತಿಲ್ಲ. ತುಂಬಾನೇ ಈಸಿಯಾಗಿ ಸಿಗುತ್ತೆ. ಸಿಕ್ಕಿದಾಗ ಗೊತ್ತಲ್ಲ ಏನಾಗುತ್ತೆ ಅಂತ. ಅಲ್ಲಿವರೆಗೂ ಹೋಗುವುದು ಬೇಡ. ಈಗ ಅಮ್ಮ ಅಕ್ಕ ಅನ್ನೋದಕ್ಕೆ ಬರಲ್ಲ ಅಂತಲ್ಲ. ಅದನ್ನು ಅನ್ನಬಾರದು ಅಂತ. ಅದೊಂದು ಗೌರವ. ಅಲ್ಲಿವರೆಗೂ ಇಟ್ಟುಕೊಳ್ಳಬೇಡಿ" ಎಂದು ವಿನಯ್ ಗೌಡ ಎಚ್ಚರಿಕೆ ಕೊಟ್ಟಿದ್ದಾರೆ.
"ಅನು ನನ್ನ ತಂಗಿ"
"ಅನು ನನ್ನ ತಂಗಿ. ಅವರಿಗೆ ಏನೇ ಆದರೂ, ಅದು ನನ್ನ ಮೇಲಿಂದ ಹೋಗಬೇಕು. ಅವರು ನನಗೆ ತುಂಬಾನೇ ಸಪೋರ್ಟ್ ಮಾಡಿದ್ದಾಳೆ. ನಾನು ಅನುನಾ ಮನಸಾರೆ ತಂಗಿ ಅಂತ ಒಪ್ಪಿಕೊಂಡಿದ್ದೇನೆ. ದಯವಿಟ್ಟು ಅವಳಿಗೆ ತೊಂದರೆ ಕೊಡಬೇಡಿ. ಮನವಿ ಮಾಡಿಕೊಳ್ಳುತ್ತಿದ್ದೇನೆ. ಅವಳಿಗೆ ತೊಂದರೆ ಕೊಡಬೇಡಿ." ಎಂದು ಬಿಗ್‌ಬಾಸ್ ಖ್ಯಾತಿಯ ವಿನಯ್ ಗೌಡ ವಾರ್ನಿಂಗ್ ಕೊಟ್ಟಿದ್ದಾರೆ.


Click it and Unblock the Notifications











