"ಮೊಘಲರ ನಡುಗಿಸಿದ ನಾಗಸಾಧುಗಳನ್ನು ತೋರಿಸಿ ಅಂದ್ರೆ ಸರ ಮಾರೋಳನ್ನು ತೋರಿಸ್ತವ್ರೆ"; ಪ್ರಥಮ್
ಮಹಾಕುಂಭ ಮೇಳ ಇಡೀ ವಿಶ್ವದ ಗಮನವನ್ನು ಹತ್ತು ಹಲವು ಕಾರಣಗಳಿಗೆ ಗಮನ ಸೆಳೆಯುತ್ತಿದೆ. ಈ ಕುಂಭ ಮೇಳಕ್ಕೆ ಜಗತ್ತಿನ ಮೂಲೆ ಮೂಲೆಯಿಂದ ಜನರು ಬರುತ್ತಿದ್ದಾರೆ. ಸಾಧನೆ ಮಾಡಿದ ನಾಗ ಸಾಧುಗಳು, ಸಾಧು ಸಂತರನ್ನು ಒಂದೆಡೆ ಸೇರುವ ಈ ಮಹಾ ಕುಂಭ ಮೇಳವನ್ನು ಸಾಮಾನ್ಯರು ಕೂಡ ಕಣ್ತುಂಬಿ ಕೊಳ್ಳುತ್ತಿದ್ದಾರೆ. ಪ್ರತಿ ದಿನ ಲಕ್ಷಾಂತರ ಮಂದಿ ಉತ್ತರ ಪ್ರದೇಶ ಪ್ರಯಾಗ್ ರಾಜ್‌ಗೆ ಆಗಮಿಸುತ್ತಿದ್ದಾರೆ.
ಇದೇ ಮಹಾ ಕುಂಭ ಮೇಳದಲ್ಲಿ ನಾಗ ಸಾಧುಗಳು, ಸಾಧು ಸಂತರು, ಅವರ ವೇಷ, ಆಚಾರಗಳು, ಪೂಜೆ ಪುನಸ್ಕಾರಗಳನ್ನು ಹೆಚ್ಚಾಗಿ ಪ್ರಸಾರ ಆಗಬೇಕಿತ್ತು. ಆದರೆ, ಕುಂಭ ಮೇಳದಲ್ಲಿ ಮಾಲೆ ಮಾರುವವಳನ್ನು, ಐಐಟಿ ಬಾಬಾ ಅಂತಹವರನ್ನು ಮಾಧ್ಯಮಗಳು ಹೆಚ್ಚಾಗಿ ತೋರಿಸುತ್ತಿವೆ ಎಂದು ಕೆಲವರು ಆರೋಪ ಮಾಡುತ್ತಿದ್ದಾರೆ. ಅಂತಹವರಲ್ಲಿ ಒಳ್ಳೆಯ ಹುಡುಗ ಪ್ರಥಮ್ ಕೂಡ ಒಬ್ಬರು.

ಮಹಾ ಕುಂಭ ಮೇಳದಲ್ಲಿ ಮಾಲೆಯನ್ನು ಮಾರುತ್ತಾ ಕೂತಿದ್ದ ಆಕರ್ಷಕ ಕಣ್ಣುಗಳ ಹುಡುಗಿ ಮೊನಾಲಿಸಾ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಳು. ಆಕೆಯ ಬಗ್ಗೆ ಮಾಧ್ಯಮಗಳು ಹೆಚ್ಚು ಪ್ರಸಾರ ಮಾಡಿದ್ದವು. ಇದು ಒಳ್ಳೆ ಹುಡುಗ ಪ್ರಥಮ್ ನಿದ್ದೆ ಕೆಡಿಸಿದೆ. ರಾತ್ರೋ ರಾತ್ರಿ ಕುಂಭ ಮೇಳದಲ್ಲಿ ಸಂಚಲನ ಸೃಷ್ಟಿಸಿದ ಮೊನಾಲಿಸಾ ಬಿಟ್ಟು ನಾಗಸಾಧುಗಳ ಬಗ್ಗೆ ತೋರಿಸಿ ಅಂತ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ಮಹಾ ಕುಂಭ ಮೇಳದಲ್ಲಿ ಮೊನಾಲಿಸಾ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಳು. ಆಕೆಯ ಹೋದ ಕಡೆಯಲ್ಲೆಲ್ಲ ಕ್ಯಾಮರಾ ಕೂಡ ಅಲೆದಾಡಿತ್ತು. ಈಕೆಯ ಕಣ್ಣುಗಳನ್ನೇ ಹುಡುಕಾಡಿಕೊಂಡು ಹೊರಟಿದ್ದವು. ಆರಂಭದಲ್ಲಿ ಮೊನಾಲಿಸಾ ಫೋಟೊಗಳು, ವಿಡಿಯೋಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಲೈಕ್ಸ್ ಹಾಗೂ ಕಾಮೆಂಟ್‌ಗಳು ಬರಲು ಆರಂಭ ಆಗಿತ್ತು. ಕೆಲವರು ಈಕೆಯ ಕಣ್ಣುಗಳಿಗೆ, ಸಹಜ ಸೌಂದರ್ಯಕ್ಕೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದರು.
ರಾತ್ರೋ ರಾತ್ರಿ ಜನಪ್ರಿಯತೆ ಸಿಗುತ್ತಿದ್ದಂತೆ ರುದ್ರಾಕ್ಷಿ ಮಾಲೆ ಮಾರುವುದಕ್ಕೆ ಬಂದಿದ್ದ ಮೊನಾಲಿಸಾಗೆ ವ್ಯಾಪಾರ ಮಾಡುವುದಕ್ಕೆ ಆಗುತ್ತಿಲ್ಲ. ಈಕೆ ಹೋದಲ್ಲೆಲ್ಲ ಕ್ಯಾಮರಾಗಳು ಹಾವಳಿ ಇಡುತ್ತಿವೆ. ಸಿನಿಮಾ ಮಂದಿ ಈಕೆಯನ್ನು ಹುಡುಕಿಕೊಂಡು ಹೊರಟಿದ್ದಾರೆ. ಇತ್ತೀಚೆಗೆ ಈಕೆಗೆ ಮೇಕಪ್ ಮಾಡುತ್ತಿರುವ ವಿಡಿಯೋಗಳು, ವಿಭಿನ್ನ ಅವತಾರದಲ್ಲಿರುವ ಫೋಟೊಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಓಡಾಡಿದ್ದವು.
ಮೊನಾಲಿಸಾಳ ವಿಷಯಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಂತೆ ಒಳ್ಳೆ ಹುಡುಗ ಪ್ರಥಮ್ ಅಖಾಡಕ್ಕೆ ಇಳಿದಿದ್ದಾರೆ. ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡು ಕಣ್ಣು ಕೆಂಪಗೆ ಮಾಡಿಕೊಂಡಿದ್ದಾರೆ. ಸಾಧು ಸಂತರು, ನಾಗ ಸಾಧುಗಳನ್ನು ತೋರಿಸುವ ಬದಲು ಮೊನಾಲಿಸಾ ಹಿಂದೆ ಬಿದ್ದಿದ್ದಾರೆಂದು ಆಕ್ರೋಶ ಹೊರ ಹಾಕಿದ್ದಾರೆ.
ಬಿಗ್‌ಬಾಸ್ ಖ್ಯಾತಿಯ ಪ್ರಥಮ್ ತಮ್ಮ ಇನ್‌ಸ್ಟಾ ಖಾತೆಯಲ್ಲಿ ಹೀಗಂತ ಬರೆದುಕೊಂಡಿದ್ದಾರೆ. "ಕೋಟಿ ಜನ ಸೇರೋ ಕುಂಭಮೇಳದ ಬಗ್ಗೆ ತೋರಿಸಿ ಅಂದ್ರೆ, ಅದ್ಯಾರೋ ಮೊನಾಲಿಸಾ ಹಿಂದೆ ಬಿದ್ದು, ಅವ್ಳು ಕ್ಯಾಮರಾ ಕಿತ್ತು ಬಿಸಾಕೋವರೆಗೂ ಅವ್ಳನ್ನ ಬಿಡಲಿಲ್ಲ ನಮ್ ಜನ. ಮೊಘಲರ ನಡುಗಿಸಿದ ನಾಗ ಸಾಧುಗಳನ್ನು ತೋರಿಸಿ ಅಂದ್ರೆ, ಸರ ಮಾರೋಳನ್ನು ಮಾಡೆಲ್ ಅಂತ ತೋರಿಸ್ತಾವ್ರೆ ಈ ಮೀಡಿಯಾ. ಇನ್ನು ಈ ದೇಶ ಉದ್ಧಾರ ಆಗು ಅಂದ್ರೆ ಹೆಂಗಪ್ಪಾ?" ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಹಾಗೇ "ಸಾಧು ಸಂತರನ್ನ ತೋರಿಸಿ ಅಂದ್ರೆ ಸರ ಮಾರೋಳನ್ನ ಸೂಪರ್ ಮಾಡಲ್ ಅಂತ 24 ಗಂಟೆ ತೋರಿಸ್ತಾ ಇದರಲ್ಲಾ, ನಮ್ ದೇಶ ಹೆಂಗಪ್ಪ ಉದ್ಧಾರ ಆಗುತ್ತೆ?" ಅಂತ ಪ್ರಶ್ನೆ ಮಾಡಿದ್ದಾರೆ.


Click it and Unblock the Notifications











