"ಬಾಲಿವುಡ್ ಮೇಡಂ ಟುಸ್ಸಾಡ್ಸ್ ಮ್ಯೂಸಿಯಂನ ಮೇಣದ ಪ್ರತಿಮೆಗಳಂತೆ ಪ್ಲಾಸ್ಟಿಕ್"-ಪ್ರಕಾಶ್ ರಾಜ್
ಬಾಲಿವುಡ್ ಬಗ್ಗೆ ಇತ್ತೀಚೆಗೆ ದಿಗ್ಗಜರು ಮಾಡುತ್ತಿರುವ ಟೀಕೆಗಳು ಹೊಸ ಚರ್ಚೆಯನ್ನು ಹುಟ್ಟಾಕಿದೆ. ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್.ರೆಹಮಾನ್ ಇತ್ತೀಚೆಗೆ "ನಾನು ಮುಸ್ಲಿಂ ಎಂಬ ಕಾರಣಕ್ಕೆ ನನಗೆ ಆಫರ್‌ಗಳು ಬರುತ್ತಿಲ್ಲ" ಎಂದು ಬಾಲಿವುಡ್ ಮಂದಿಯನ್ನು ದೂರಿದ್ದರು. ಇದು ದೇಶಾದ್ಯಂತ ಪರ-ವಿರೋಧ ಚರ್ಚೆಗಳು ಆಗುತ್ತಿವೆ. ಈ ಬೆನ್ನಲ್ಲೇ ದಕ್ಷಿಣ ಭಾರತದ ಮತ್ತೊಬ್ಬ ಹಿರಿಯ ನಟ ಪ್ರಕಾಶ್ ರಾಜ್ ಕೂಡ ಹಿಂದಿ ಚಿತ್ರರಂಗವನ್ನು ಕಟುವಾಗಿ ಟೀಕಿಸಿದ್ದಾರೆ.
ಇತ್ತೀಚೆಗೆ ನಡೆದ ಕೇರಳ ಸಾಹಿತ್ಯ ಮಹೋತ್ಸವದಲ್ಲಿ ಪ್ರಕಾಶ್ ರಾಜ್ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಪ್ರಕಾಶ್ ರಾಜ್ ಬಾಲಿವುಡ್ ಸಿನಿಮಾಗಳನ್ನು ಟೀಕೆ ಮಾಡಿದ್ದಾರೆ. ಈಗ ಅದು ಸಿಕ್ಕಾಪಟ್ಟೆ ಚರ್ಚೆಯನ್ನು ಹುಟ್ಟಾಕಿದೆ. ಬಾಲಿವುಡ್ ಅಂದರೆ ಕೇವಲ ಹಣ, ಕಥೆಗಳೇ ಇಲ್ಲದೆ ಸಿನಿಮಾಗಳನ್ನು ಮಾಡುವ ಉದ್ಯಮವಾಗಿದೆ. ತಮಿಳು ಹಾಗೂ ಮಲಯಾಳಂ ಚಿತ್ರರಂಗದಿಂದಲೇ ಉತ್ತಮವಾದ ಸಿನಿಮಾಗಳು ಬರುತ್ತಿವೆಯೆಂದು ಪ್ರಕಾಶ್ ರಾಜ್ ಟೀಕೆ ಮಾಡಿದ್ದಾರೆ.

ಕೇರಳ ಸಾಹಿತ್ಯ ಮಹೋತ್ಸವದ 9ನೇ ಆವೃತ್ತಿಯಲ್ಲಿ ಪ್ರಕಾಶ್ ರಾಜ್ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ಅವರು ಬಾಲಿವುಡ್ ಅನ್ನು ಟೀಕಿಸಿದ್ದಕ್ಕೆ ಹೊಸ ಚರ್ಚೆಗಳು ಆರಂಭ ಆಗಿವೆ. ಎ.ಆರ್. ರೆಹಮಾನ್ ಮಾಡಿದ ಟೀಕೆಗಳೊಂದಿಗೆ ಪ್ರಕಾಶ್ ರಾಜ್ ಹೇಳಿದ್ದನ್ನೂ ಲಿಂಕ್ ಮಾಡಲಾಗಿದೆ. ಅಷ್ಟಕ್ಕೂ ಪ್ರಕಾಶ್ ರಾಜ್ ಬಾಲಿವುಡ್ ಬಗ್ಗೆ ಏನು ಹೇಳಿದ್ದಾರೆ? ಅವರು ಮಾಡಿದ ಟೀಕೆಗಳೇನು? ತಿಳಿಯುವುದಕ್ಕೆ ಮುಂದೆ ಓದಿ.
ಪ್ರಕಾಶ್ ರಾಜ್ ಅವರದ್ದು ನೇರವಾಗಿ ಮಾತಾಡುವ ವ್ಯಕ್ತಿತ್ವ. ತನಗೆ ಏನು ಹೇಳಬೇಕು ಅಂತ ಅನಿಸುತ್ತೋ ಅದನ್ನು ನೇರವಾಗಿ ಹೇಳುತ್ತಾರೆ. ಕೇರಳ ಸಾಹಿತ್ಯ ಮಹೋತ್ಸವದಲ್ಲಿ ಪ್ರಕಾಶ್ ರಾಜ್ ಬಾಲಿವುಡ್ ಅನ್ನು ಹೀಗೆ ಟೀಕಿಸಿದ್ದಾರೆ. " ಇಂದು ಮಲಯಾಳಂ ಹಾಗೂ ತಮಿಳು ಚಿತ್ರರಂಗಗಳು ಅತ್ಯಂತ ಬಲಿಷ್ಠ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿವೆ. ಅದೇ ಇನ್ನೊಂದು ಕಡೆ ಹಿಂದಿ ಚಿತ್ರರಂಗ ತನ್ನ ಬೇರುಗಳನ್ನೇ ಕಳೆದುಕೊಂಡಿದೆ. ಅಲ್ಲಿ ಎಲ್ಲವೂ ಸುಂದರವಾಗಿ ಹೊಳೆಯುವಂತೆ ಕಾಣುತ್ತದೆ. ಇದೊಂತರ ಮೇಡಂ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿರುವ ಮೇಣದ ಪ್ರತಿಮೆಗಳಂತೆ ಕಂಪ್ಲೀಟ್ ಆಗಿ ಪ್ಲಾಸ್ಟಿಕ್‌ನಂತೆ ಕಾಣುತ್ತೆ" ಎಂದು ಬೇಸರ ಹೊರ ಹಾಕಿದ್ದಾರೆ.
"ಹಿಂದಿ ಸಿನಿಮಾ ಗ್ರಾಮೀಣ ಭಾಗದ ಪ್ರೇಕ್ಷಕರಿಂದ ದೂರ ಸರಿಯುತ್ತಿದೆ. ಮಲ್ಟಿಪ್ಲೆಕ್ಸ್‌ಗಳು ಬಂದ ನಂತರ ಎಲ್ಲಾವೂ ಬದಲಾಗಿದೆ. ಕೇವಲ ಮಲ್ಟಿಪ್ಲೆಕ್ಸ್‌ಗಳಿಗಾಗಿ ಮಾತ್ರ ಎನ್ನುವಂತೆ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದಾರೆ. ಈ ಬದಲಾವಣೆಯು ನಿರ್ಮಾಪಕರನ್ನು 'ಪೇಜ್ 3' ಸಂಸ್ಕೃತಿಯ ಕಡೆಗೆ ವಾಲುವಂತೆ ಮಾಡಿದೆ. ಇಷ್ಟೇ ಅಲ್ಲದೆ ಬೇರೆ ಭಾಷೆ, ನೆಲ, ಸಂಸ್ಕೃತಿ ಇರದ ಸಿನಿಮಾಗಳನ್ನು ಕಣ್ಮರೆಯಾಗುತ್ತಿದೆ" ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಹಾಗೇ ಪ್ರತಿ ಹೆಜ್ಜೆ ಹೆಜ್ಜೆಗೂ ಬಾಲಿವುಡ್ ಸಿನಿಮಾ ರೂಟ್ ಅನ್ನು ಬಿಟ್ಟುಕೊಟ್ಟಿದೆ ಎಂದಿದ್ದಾರೆ. "ಬಾಲಿವುಡ್ ರಾಜಸ್ಥಾನ ಮತ್ತು ಬಿಹಾರದಂತಹ ಗ್ರಾಮೀಣ ಭಾಗಗಳಿಗೂ ತಲುಪಬೇಕಿತ್ತು.ಅಂತಹ ಪ್ರದೇಶಗಳ ಜನರೊಂದಿಗೆ ಸಂಪರ್ಕ ಕಳೆದುಕೊಂಡಿದೆ" ಎಂದು ಪ್ರಕಾಶ್ ರಾಜ್ ವಿಷಾದ ವ್ಯಕ್ತಪಡಿಸಿದ್ದಾರೆ. ಅಂದ್ಹಾಗೆ, 'ಸಿಂಘಂ', 'ದಬಂಗ್ 2', 'ವಾಂಟೆಡ್'ನಂತಹ ಬಾಲಿವುಡ್ ಸಿನಿಮಾಗಳಲ್ಲಿ ಪ್ರಕಾಶ್ ರಾಜ್ ನಟಿಸಿರೋದು ವಿಶೇಷ.
ತಮಿಳು, ತೆಲುಗು, ಕನ್ನಡ, ಮಲೆಯಾಳಂ ಮತ್ತು ಹಿಂದಿ ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಲ್ಲಿ ಪ್ರಕಾಶ್ ರಾಜ್ ನಟಿಸಿದ್ದಾರೆ, ತಮಿಳು ಮತ್ತು ಮಲಯಾಳಂ ಸಿನಿಮಾಗಳು ಹಿಂದಿ ಚಿತ್ರರಂಗಕ್ಕಿಂತ ಉತ್ತಮವಾಗಿವೆ ಎಂದು ದೃಢವಾಗಿ ನಂಬುತ್ತಾರೆ. ಅವರ ಈ ವಿಮರ್ಶಾತ್ಮಕ ಹೇಳಿಕೆಗಳು ಬಾಲಿವುಡ್‌ನ ಪ್ರಸ್ತುತ ಸ್ಥಿತಿ ಮತ್ತು ಭವಿಷ್ಯದ ಬಗ್ಗೆ ಗಂಭೀರ ಚರ್ಚೆಗಳನ್ನು ಹುಟ್ಟುಹಾಕಿವೆ. ಪ್ರಕಾಶ್ ರಾಜ್ ಅವರ ಈ ಟೀಕೆಗಳು ಮತ್ತೆ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿವೆ. ಮುಖ್ಯವಾಹಿನಿ ಬಾಲಿವುಡ್ ತನ್ನ ಮೂಲಭೂತ ಸಿದ್ಧಾಂತಗಳಿಂದ ಬಹಳವಾಗಿ ದೂರ ಸರಿಯುತ್ತಿದೆ ಎಂದು ಅವರು ಪ್ರತಿಪಾದಿಸಿದರು.


Click it and Unblock the Notifications











