ಕನ್ನಡ ಎಂಟ್ರಿ ಕೊಟ್ಟೇ ಬಿಟ್ರಾ 'ಕೂಲಿ' ನಟ ಸೌಬಿನ್ ಶಾಹಿರ್? ಯಾವುದು ಆ ಸಿನಿಮಾ ಗೊತ್ತೇ?
ಸ್ಯಾಂಡಲ್‌ವುಡ್‌ನಲ್ಲಿ ಹೊಸ ಪ್ರಯೋಗಗಳು ನಡೆಯುತ್ತಿವೆ. ಅದರಲ್ಲೂ ಕನ್ನಡಕ್ಕಷ್ಟೇ ಸೀಮಿತವಾಗಿರದೇ ಪರ ಭಾಷೆಯಲ್ಲೂ ಬಿಡುಗಡೆ ಮಾಡುವುದಕ್ಕೆ ಪ್ಲಾನ್ ಮಾಡಿಕೊಳ್ಳುತ್ತಿದೆ. ಸಿನಿಮಾ ನಿರ್ಮಾಣ ಶುರು ಮಾಡಿದ ಆರಂಭದಲ್ಲಿಯೇ ಎರಡು ಮೂರು ಭಾಷೆಗಳನ್ನು ಗಮನದಲ್ಲಿ ಇಟ್ಟುಕೊಂಡು ಆರಂಭ ಮಾಡುವ ವಾತಾವರಣ ಸೃಷ್ಟಿಯಾಗಿದೆ. ಹೀಗಾಗಿ ಸಿನಿಮಾದ ಬಜೆಟ್ ಕೂಡ ಹೆಚ್ಚಾಗಿದೆ. ಪರಭಾಷೆಯಿಂದ ಸ್ಟಾರ್ ನಟರನ್ನು ಕರೆದುಕೊಂಡು ಬರಲಾಗುತ್ತಿದೆ.
ಈ ಹಂತದಲ್ಲಿ ಕನ್ನಡ ಚಿತ್ರರಂಗಕ್ಕೆ ಪರಭಾಷೆಯಿಂದ ಜನಪ್ರಿಯ ನಟರನ್ನು ಕರೆದುಕೊಂಡು ಬರುತ್ತಿದ್ದಾರೆ. ಈಗ ಮಲಯಾಳಂ ನಟ ಸೌಬಿನ್ ಶಾಹಿರ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಎಂಬ ಸುದ್ದಿ ಸ್ಯಾಂಡಲ್‌ವುಡ್‌ನ ಗಲ್ಲಿ ಗಲ್ಲಿಗಳಲ್ಲಿ ಹರಿದಾಡುತ್ತಿದೆ. ಇತ್ತೀಚೆಗೆ ಸೂಪರ್‌ಸ್ಟಾರ್ ರಜನಿಕಾಂತ್ ನಟಿಸಿದ 'ಕೂಲಿ' ಸಿನಿಮಾದಲ್ಲಿ ವಿಲನ್ ಆಗಿ ಮಿಂಚಿದ್ದರು. ಇವರ ಪಾತ್ರಕ್ಕೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು.

ಸೌಬಿನ್ ಶಾಹಿರ್ ಮಲಯಾಳಂ ಚಿತ್ರರಂಗದಲ್ಲಿ ನಟನಾಗಿ, ನಿರ್ದೇಶಕನಾಗಿ, ಸಹ-ನಿರ್ದೇಶಕನಾಗಿ, ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದಾರೆ. 42 ವರ್ಷದ ಈ ಜನಪ್ರಿಯ ನಟನನ್ನು ಈಗ ನಿರ್ಮಾಣ ಸಂಸ್ಥೆಯೊಂದು ಕನ್ನಡ ಚಿತ್ರರಂಗಕ್ಕೆ ಕರೆದುಕೊಂಡು ಬರುತ್ತಿದೆ ಅನ್ನೋ ಮಾತು ಕೇಳಿಬರುತ್ತಿದೆ. ಅಷ್ಟಕ್ಕೂ ಸೌಬಿನ್ ಶಾಹಿರ್ ಯಾವ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ? 'ಕೂಲಿ' ನಟನನ್ನು ಕರೆದುಕೊಂಡು ಬರುತ್ತಿರುವ ನಿರ್ಮಾಪಕ ಯಾರು? ತಿಳಿಯುವುದಕ್ಕೆ ಮುಂದೆ ಓದಿ.
ಮಲಯಾಳಂ ನಟ ಸೌಬಿನ್ ಶಾಹಿರ್ ಮಲಯಾಳಂ ಚಿತ್ರರಂಗ ಜನಪ್ರಿಯ ನಟ. 2013ರಲ್ಲಿ ತೆರೆಕಂಡಿದ್ದ 'ಅನ್ನಯುಂ ರಸೂಲಂ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಆದರೆ, 2015ರಲ್ಲಿ ತೆರೆಕಂಡ ಮಲಯಾಳಂ ಸೂಪರ್ ಹಿಟ್ ಸಿನಿಮಾ 'ಪ್ರೇಮಂ' ಮೂಲಕ ಜನಪ್ರಿಯತೆ ಗಿಟ್ಟಿಸಿಕೊಂಡರು. ಆದರೆ, 2019ರಲ್ಲಿ ತೆರೆಕಂಡ 'ಕುಂಬಳಂಗಿ ನೈಟ್ಸ್' ಹಾಗೂ ಮಲಯಾಳಂ ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆದ 'ಮಂಜುಮ್ಮೆಲ್ ಬಾಯ್ಸ್' ನಲ್ಲೂ ನಟಿಸಿ ಮೆಚ್ಚುಗೆ ಗಳಿಸಿದ್ದಾರೆ.
ಕಳೆದ ವರ್ಷ ತೆರೆಕಂಡಿದ್ದ 'ಕೂಲಿ' ಸಿನಿಮಾದಲ್ಲಿ ಖಳನಾಯಕನಾಗಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಈ ನಟನೀಗ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಎಂಬ ಸುದ್ದಿ ಓಡಾಡುತ್ತಿದೆ. ಅಷ್ಟಕ್ಕೂ ಆ ಸಿನಿಮಾ ಯಾವುದು ಅಂದರೆ, 'ಹಲ್ಕಾ ಡಾನ್'. ಪ್ರಮೋದ್ ಪಂಜು ಹಾಗೂ ಅಮೃತಾ ಅಯ್ಯಂಗಾರ್ ನಟಿಸುತ್ತಿರುವ ಈ ಸಿನಿಮಾದಲ್ಲಿ ಸೌಬಿನ್ ಶಾಹಿರ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆಂಬ ಸುದ್ದಿ ಗಾಂಧಿನಗರದ ಗಲ್ಲಿ ಗಲ್ಲಿಗಳಲ್ಲಿ ಹರಿದಾಡುತ್ತಿದೆ.

ಕನ್ನಡದ ಜನಪ್ರಿಯ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಕಳೆದ ವರ್ಷ ಹೊಸ ಸಿನಿಮಾವನ್ನು ಅನೌನ್ಸ್ ಮಾಡಿದ್ದರು. ಸಿನಿಮಾದ ಟೈಟಲ್ ಸಿನಿಪ್ರಿಯರ ಗಮನವನ್ನು ಸೆಳೆದಿತ್ತು. ಅದುವೇ 'ಹಲ್ಕಾ ಡಾನ್'. ಈ ಸಿನಿಮಾವನ್ನು ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಬಿಡುಗಡೆ ಮಾಡುವುದಕ್ಕೆ ಆರಂಭದಲ್ಲಿ ಘೋಷಣೆ ಮಾಡಲಾಗಿತ್ತು. ಈಗ ಸ್ಯಾಂಡಲ್‌ವುಡ್‌ನ ಗಲ್ಲಿಯಲ್ಲಿ ಸೌಬಿನ್ ಶಾಹಿರ್ ಎಂಟ್ರಿಕೊಡುತ್ತಿರುವ ಸುದ್ದಿ ಓಡಾಡುತ್ತಿದೆ. ಆದರೆ, ಯಾವ ಪಾತ್ರ? ಯಾವತ್ತಿನಿಂದ ಶೂಟಿಂಗ್ ಅನ್ನೋದು ಮಾಹಿತಿಯಿಲ್ಲ.
ಬಲ್ಲ ಮೂಲಗಳ ಪ್ರಕಾರ, ಸೌಬಿನ್ ಶಾಹಿರ್ 'ಹಲ್ಕಾ ಡಾನ್' ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸೋದು ಕನ್ಫರ್ಮ್ ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಆಗಲಿ, ಸಿನಿಮಾ ತಂಡ ಆಗಲಿ ಈ ಬಗ್ಗೆ ಅಧಿಕೃತವಾಗಿ ಮಾಹಿತಿಯನ್ನು ಹಂಚಿಕೊಂಡಿಲ್ಲ. ಚಲಾ ಆಕ್ಷನ್ ಕಟ್ ಹೇಳುತ್ತಿರುವ ಈ ಸಿನಿಮಾದಲ್ಲಿ ಪ್ರಮೋದ್, ಅಮೃತಾ ಅಯ್ಯಂಗಾರ್ ಜೊತೆಗೆ ಸಾಯಿ ಕುಮಾರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವಿ.ಹರಿಕೃಷ್ಣ ಸಂಗೀತ ನೀಡುತ್ತಿದ್ದು, ಸತ್ಯ ಹೆಗೆಡೆ ಕ್ಯಾಮರಾ ವರ್ಕ್ ಇದೆ.


Click it and Unblock the Notifications















