Thug Life: ಕರ್ನಾಟಕದಲ್ಲಿ 'ಥಗ್ ಲೈಫ್' ಸಿನಿಮಾ ರಿಲೀಸ್ ಡೇಟ್ ಫಿಕ್ಸ್!
ಕರ್ನಾಟಕದಲ್ಲಿ ಕಮಲ್ ಹಾಸನ್ ನಟನೆಯ 'ಥಗ್ ಲೈಫ್' ಸಿನಿಮಾ ಬಿಡುಗಡೆ ಗೊಂದಲ ಮುಂದುವರೆದಿದೆ. ಈಗಾಗಲೇ ಸುಪ್ರೀಂ ಕೋರ್ಟ್ ಸಿನಿಮಾ ಬಿಡುಗಡೆಗೆ ಅನುಮತಿ ನೀಡಿದೆ. ಆದರೆ ವಿತರಕರು ಮಾತ್ರ ಹಿಂದೇಟು ಹಾಕುತ್ತಿದ್ದಾರೆ. ಮುಂದೇನು? ಎನ್ನುವ ಪ್ರಶ್ನೆ ಮೂಡಿದೆ.
ಜೂನ್ 5ರಂದು ಕರ್ನಾಟಕ ಹೊರತುಪಡಿಸಿ ಬೇರೆ ಕಡೆಗಳಲ್ಲಿ 'ಥಗ್ ಲೈಫ್' ಸಿನಿಮಾ ತೆರೆಗಪ್ಪಳಿಸಿತ್ತು. ಆದರೆ ನೀರಸ ಪ್ರತಿಕ್ರಿಯೆ ಸಿಕ್ಕಿತ್ತು. ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದೆ. ಶೀಘ್ರದಲ್ಲೇ ಓಟಿಟಿಗೆ ಬರುವ ಮಾತುಗಳು ಕೇಳಿಬರ್ತಿದೆ. ಕರ್ನಾಟಕದಲ್ಲಿ ಈಗ ಸಿನಿಮಾ ಬಿಡುಗಡೆ ಮಾಡಿದರೆ ಲಾಭಕ್ಕಿಂತ ನಷ್ಟವೇ ಜಾಸ್ತಿ ಎಂದು ಕೆಲವರು ಊಹಿಸುತ್ತಿದ್ದಾರೆ.

ರಾಜ್ಯದಲ್ಲಿ 'ಥಗ್ ಲೈಫ್' ಸಿನಿಮಾ ಬಿಡುಗಡೆಗೆ ಅನುವು ಮಾಡಿಕೊಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಚಿತ್ರಮಂದಿರಗಳಿಗೆ ರಾಜ್ಯ ಸರ್ಕಾರ ಭದ್ರತೆ ಒದಗಿಸಬೇಕು ಎಂದು ಸೂಚಿಸಿದೆ. ತಮ್ಮ ವಿವಾದಾತ್ಮಕ ಹೇಳಿಕೆಗೆ ಕಮಲ್ ಹಾಸನ್ ಕ್ಷಮೆ ಕೇಳಬೇಕು, ಆ ಬಳಿಕವೇ ಸಿನಿಮಾ ಬಿಡುಗಡೆಯ ಬಗ್ಗೆ ಚರ್ಚೆ ಎಂದು ಹೈಕೋರ್ಟ್ ಹೇಳಿತ್ತು. ಆದರೆ ಸುಪ್ರೀಂ ಕೋರ್ಟ್ ಇದಕ್ಕೆ ತಿರುಗೇಟು ನೀಡಿತ್ತು. ಹೈಕೋರ್ಟ್‌ಗೆ ಛೀಮಾರಿ ಹಾಕಿತ್ತು. ಈ ವಿಚಾರ ಸಂಬಂಧ ಪ್ರತಿಕ್ರಿಯೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತ್ತು.
'ಥಗ್ ಲೈಫ್' ಸಿನಿಮಾ ಬಿಡುಗಡೆ ಸಂಬಂಧ ಇದೀಗ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಪ್ರತಿಕ್ರಿಯಿಸಿದೆ. ರಾಜ್ಯದಲ್ಲಿ ಸಿನಿಮಾ ಮೇಲೆ ನಿಷೇಧ ಹೇರಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದ್ದು ಸಿನಿಮಾ ಬಿಡುಗಡೆಯಾದರೆ ಸೂಕ್ತ ಭದ್ರತೆ ಒದಗಿಸುವುದಾಗಿ ಅಫಿಡವಿಟ್ ಸಲ್ಲಿಸಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ 'ಥಗ್ ಲೈಫ್' ಬಿಡುಗಡೆಗೆ ಆಕ್ಷೇಪ ವ್ಯಕ್ತಪಡಿಸುವುದಿಲ್ಲ ಎಂದು ಅಫಿಡವಿಟ್‌ನಲ್ಲಿ ತಿಳಿಸಿದೆ.
ಜೂನ್ 27ರಂದು 'ಥಗ್ ಲೈಫ್' ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಆಗುತ್ತದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಕರ್ನಾಟಕದಲ್ಲಿ ವಿತರಣೆ ಹಕ್ಕು ಪಡೆದುಕೊಂಡಿದ್ದ ವಿತರಕ ವೆಂಕಟೇಶ್ ಸಿನಿಮಾ ಬಿಡುಗಡೆಗೆ ಸಿದ್ಧರಿಲ್ಲ. ಹಾಗಾಗಿ ಯಾರು ಸಿನಿಮಾವನ್ನು ರಾಜ್ಯದಲ್ಲಿ ಬಿಡುಗಡೆ ಮಾಡುತ್ತಾರೆ? ಎನ್ನುವುದನ್ನು ಕಾದು ನೋಡಬೇಕಿದೆ.
ಚೆನ್ನೈನಲ್ಲಿ ನಡೆದ 'ಥಗ್ ಲೈಫ್' ಸಿನಿಮಾ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಕನ್ನಡ ನಟ ಶಿವರಾಜ್‌ಕುಮಾರ್ ಭಾಗವಹಿಸಿದ್ದರು. ಡಾ. ರಾಜ್‌ಕುಮಾರ್ ಕುಟುಂಬದ ಜೊತೆಗಿನ ಒಡನಾಟದ ಬಗ್ಗೆ ಮಾತನಾಡುತ್ತ ಕಮಲ್ ಹಾಸನ್ "ತಮಿಳಿನಿಂದ ಕನ್ನಡ ಹುಟ್ಟಿದ್ದು" ಎನ್ನುವ ಹೇಳಿಕೆ ನೀಡಿದ್ದರು. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಕಮಲ್ ಹೇಳಿಕೆಗ ಯಾವುದೇ ಆಧಾರ ಇಲ್ಲ, ಅವ್ರು ಕ್ಷಮೆ ಕೇಳಬೇಕು ಎಂದು ಕನ್ನಡಪರ ಸಂಘಟನೆಗಳು ಆಗ್ರಹಿಸಿವೆ.
ಕಮಲ್ ಹಾಸನ್ ಮಾತ್ರ "ತಾನು ಪ್ರೀತಿಯಿಂದ ಹೇಳಿದ ಮಾತು ಅದು. ನಾನು ತಪ್ಪು ಮಾಡಿಲ್ಲ. ಹಾಗಾಗಿ ಅದಕ್ಕೆ ನಾನು ಕ್ಷಮೆ ಕೇಳುವುದಿಲ್ಲ" ಎಂದು ಹೇಳುತ್ತಾ ಬರ್ತಿದ್ದಾರೆ. ಕನ್ನಡಪರ ಸಂಘಟನೆಗಳು ಮಾತ್ರ ಕಮಲ್ ಕ್ಷಮೆ ಕೇಳದ ಹೊರತು ಕರ್ನಾಟಕದಲ್ಲಿ 'ಥಗ್ ಲೈಫ್' ಸಿನಿಮಾ ಬಿಡುಗಡೆಗೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದರು. ಹಾಗಾಗಿ ಚಿತ್ರತಂಡ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಮಣಿರತ್ನಂ ನಿರ್ದೇಶನದ 'ಥಗ್ ಲೈಫ್' ಚಿತ್ರದಲ್ಲಿ ಸಿಂಬು, ತ್ರಿಷಾ ಸೇರಿದಂತೆ ದೊಡ್ಡ ತಾರಾಗಣವಿದೆ. ಸ್ವತಃ ಕಮಲ್ ಹಾಗೂ ಮಣಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಎ. ಆರ್ ರಹಮಾನ್ ಸಂಗೀತ ಚಿತ್ರಕ್ಕಿದೆ. ಭಾರೀ ನಿರೀಕ್ಷೆ ಹುಟ್ಟಾಕ್ಕಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡ್ತಿಲ್ಲ.


Click it and Unblock the Notifications











