ದಾವಣಗೆರೆಯ ಹೊಟೇಲ್‌ನಲ್ಲಿ ಬೆಣ್ಣೆ ದೋಸೆ ಹಾಕಿದ ನಟಿ ಶ್ರೀಲೀಲಾ: 'ಬೈ ಟು ಲವ್' ಕರಾಮತ್ತು
'ಬಜಾರ್' ಸಿನಿಮಾದ ಹೀರೋ ಧನ್ವೀರ್ ಹಾಗೂ 'ಭರ್ಜರಿ' ಚಿತ್ರ ಶ್ರೀಲೀಲಾ ಸದ್ಯಕ್ಕೆ 'ಬೈಟ್ ಟು ಲವ್' ಅಂತಿದ್ಧಾರೆ. ಇವರ ಜೊತೆ ಅಲೆಮಾರಿ ನಿರ್ದೇಶಿಸಿದ್ದ ಹರಿ ಸಂತು, ನಿರ್ಮಾಪಕ ಸುಪ್ರಿತ್ ಸೇರಿಕೊಂಡಿದ್ದಾರೆ. ಫೆಬ್ರವರಿ 24ಕ್ಕೆ ಬಿಡುಗಡೆಯಾಗಬೇಕಿದ್ದ ಸಿನಿಮಾ ಅಂದುಕೊಂಡಿದ್ದಕ್ಕಿಂತ ಒಂದು ವಾರ ಮುಂಚೆನೇ ಥಿಯೇಟರ್‌ಗೆ ಲಗ್ಗೆ ಇಡುತ್ತಿದೆ. ಹೀಗಾಗಿ ಇಡೀ ಚಿತ್ರತಂಡ ದಾವಣಗೆರೆ ಕಡೆ ಪಯಣ ಬೆಳೆಸಿದೆ. ಪ್ರಚಾರಕ್ಕೆ ದಾವಣೆಗೆರೆ ಹೋದ ಧನ್ವೀರ್ ಹಾಗೂ ಶ್ರೀ ಲೀಲಾ ಇಬ್ಬರೂ ಬೆಣ್ಣೆ ದೋಸೆ ಹಾಕಿ ಖುಷಿ ಪಟ್ಟಿದ್ದಾರೆ.
ದಾವಣಗೆರೆ ಅಂದ್ಕೂಡಲೇ ಮೊದಲು ನೆನಪಿಗೆ ಬರುವುದು ಬೆಣ್ಣೆ ದೋಸೆ. ಇಲ್ಲಿ ಮಾಡುವ ಬೆಣ್ಣೆ ದೋಸೆ ಬೇರೆಲ್ಲೂ ಸಿಗುವುದಿಲ್ಲ. ಇಲ್ಲಿನ ಬೆಣ್ಣೆ ದೋಸೆ ಈಗ ಕರ್ನಾಟಕದಾದ್ಯಂತ ಹಬ್ಬಿದೆ. ಉತ್ತರದಿಂದ ದಕ್ಷಿಣದವರೆಗೂ ದಾವಣಗೆರೆ ಬೆಣ್ಣೆ ದೋಸೆ ಅಂದರೆ ಎಲ್ಲರಿಗೂ ಗೊತ್ತಿದೆ. ಇನ್ನು ನಟಿ ಶ್ರೀ ಲೀಲಾ ಹಾಗೂ ಧನ್ವೀರ್ ಇಬ್ಬರಿಗೂ ಬೆಣ್ಣೆ ದೋಸೆಯ ಅಸಲಿ ರುಚಿ ಸಿಕ್ಕಿದೆ. ಇನ್ನೊಂದ್ಕಡೆ ಅದೇ ಬೆಣ್ಣೆ ದೋಸೆ ಮಾಡಿ ಸಂಭ್ರಮಿಸಿದ್ದಾರೆ.

ದಾವಣಗೆರೆಯಲ್ಲಿ ಬೆಣ್ಣೆ ದೋಸೆ ಹಾಕಿದ ಶ್ರೀಲೀಲಾ
'ಬೈ ಟು ಲವ್' ತಂಡ ದಾವಣಗೆರೆ ಕಡೆ ಪಯಣ ಬೆಳೆಸಿದ್ದಕ್ಕೊಂದು ಕಾರಣವಿದೆ. ಈ ಸಿನಿಮಾದಲ್ಲಿ ಧನ್ವೀರ್ ದಾವಣಗೆರೆ ಹುಡುಗ. ಶ್ರೀಲೀಲಾ ಮಲೆನಾಡ ಹುಡುಗಿ ಅದಕ್ಕೆ ದಾವಣೆಗೆರೆಯಿಂದಲೇ ಪ್ರಚಾರ ಆರಂಭಿಸಿದ್ದಾರೆ. ಹೀಗಾಗಿ ಬೆಳ್ಳಬೆಳಗ್ಗೆನೇ ದಾವಣಗೆರೆ ಬೆಣ್ಣೆ ದೋಸೆ ಹೋಟೆಲ್‌ಗೆ ಹೋಗಿ ಬೆಣ್ಣೆ ದೋಸೆ ಸವಿದಿದ್ದಾರೆ. ಬಳಿಕ ಅದೇ ಹೋಟೆಲ್‌ನಲ್ಲಿ ನಾವೂ ಒಂದು ಸುತ್ತು ಬೆಣ್ಣೆ ದೋಸೆ ಹಾಕುತ್ತೇವೆ ಅಂತ ಇಬ್ಬರೂ ಬೆಣ್ಣೆ ದೋಸೆ ಹಾಕಿ ಸಂಭ್ರಮಿಸಿದ್ದಾರೆ.

ಬಾಲು, ಲೀಲು ಪ್ರಚಾರ ಶುರು
'ಬೈಟ್ ಟು ಲವ್' ಒಂದು ಪಕ್ಕಾ ಲವ್ ಸ್ಟೋರಿ. ಇಲ್ಲಿ ಧನ್ವೀರ್ ದಾವಣಗೆರೆ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಶ್ರೀಲೀಲಾ ಮಲೆನಾಡ ಹುಡುಗಿಯಾಗಿ ಅಭಿನಯಿಸಿದ್ದಾರೆ. ಇವರಿಬ್ಬರ ನಡುವಿನ ಲವ್ ಸ್ಟೋರಿಯೇ 'ಬೈಟು ಲವ್'. ಸಿನಿಮಾ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಇದೆ ಅನ್ನುವಾಗಲೇ ಧನ್ವೀರ್ ಹಾಗೂ ಶ್ರೀಲೀಲಾ ಇಬ್ಬರೂ ಕರ್ನಾಟಕ ಸುತ್ತಲು ತೀರ್ಮಾನಿಸಿದ್ದಾರೆ. ಸಿನಿಮಾ ಬಗ್ಗೆ ಪ್ರಚಾರ ಮಾಡಲು ನಿರ್ಧರಿಸಿದ್ದಾರೆ. ತುಮಕೂರು, ಚಿತ್ರದುರ್ಗ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ಭಾಗಗಳಲ್ಲಿ ಸಿನಿಮಾ ಪ್ರಚಾರ ಮಾಡಲು ಆರಂಭಿಸಿದ್ದಾರೆ.

ಬಾಲು, ಲೀಲು ಆಟ..ತುಂಟಾಟ!
'ಬೈ ಟು ಲವ್' ಗೆ ಅಜನೀಶ್ ಬಿ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ಹೀಗಾಗಿ ಸಿನಿಮಾದ ಹಾಡುಗಳು ಯುವಕರಿಗೆ ಇಷ್ಟ ಆಗುವಂತಿವೆ. ಕೆಲವು ದಿನಗಳ ಹಿಂದಷ್ಟೇ ನೀನೇ ನೀನೇ ಎಂಬ ಮೆಲೋಡಿ ಟ್ರ್ಯಾಕ್ ರಿಲೀಸ್ ಆಗಿದ್ದು, ಲೀಲು ಮತ್ತು ಬಾಲು ಮುದ್ದಾದ ಮಗುವಿನೊಟ್ಟಿಗೆ ಆಟ.. ಪಾಠ.. ತುಂಟಾಟವನ್ನು ಸುಂದರವಾಗಿ ಸೆರೆ ಹಿಡಿಯಲಾಗಿದೆ. ನಿರ್ದೇಶಕ ಹರಿ ಸಂತು ಈ ಹಾಡಿನಲ್ಲಿ ಮಗುವಿನ ಜೊತೆ ಶ್ರೀಲೀಲಾ ಹಾಗೂ ಧನ್ವೀರ್ ತೋರಿಸಿ, ಪ್ರೇಕ್ಷಕರ ತಲೆಗೆ ಹುಳ ಬಿಟ್ಟಿದ್ದಾರೆ. ವಿ ನಾಗೇಂದ್ರ ಪ್ರಸಾದ್ ನೀನೇ ನೀನೆ ಹಾಡಿಗೆ ಸಾಹಿತ್ಯ ರಚಿಸಿದ್ದಾರೆ.

ಫೆ.18ಕ್ಕೆ 'ಬೈ ಟು ಲವ್' ರಿಲೀಸ್
ಧನ್ವೀರ್ ಹಾಗೂ ಶ್ರೀಲೀಲಾ ಜೋಡಿಯ 'ಬೈ ಟು ಲವ್' ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇವೆ. ಈ ಹಿಂದೆ ಫೆಬ್ರವರಿ 24ಕ್ಕೆ ಸಿನಿಮಾ ರಿಲೀಸ್ ಮಾಡುವುದಕ್ಕೆ ಚಿತ್ರತಂಡ ಸಜ್ಜಾಗಿತ್ತು. ಆದ್ರೀಗ ಒಂದು ವಾರ ಮುನ್ನ ಫೆಬ್ರವರಿ 18ರಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಈಗಾಗಲೇ ಚಿತ್ರತಂಡ ಅದ್ಧೂರಿ ಪ್ರಚಾರ ಆರಂಭ ಮಾಡಿದೆ. 'ಬಜಾರ್' ಸಿನಿಮಾದಲ್ಲಿ ಮಾಸ್ ಲುಕ್‌ನಲ್ಲಿ ಮಿಂಚಿದ್ದ ಧನ್ವೀರ್, ಈಗ ಲವರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.


Click it and Unblock the Notifications











