Dhruva Sarja: "ರಾಜಕೀಯ ಮಾಡಲು ಕಲಾವಿದರನ್ನು ಬಳಸಿಕೊಳ್ಳಬೇಡಿ": ಧ್ರುವ ಸರ್ಜಾ ವಾರ್ನಿಂಗ್!
ಕಾವೇರಿ ಹೋರಾಟ ತಣ್ಣಗಾಗುವಂತೆ ಕಾಣುತ್ತಿಲ್ಲ. ತಮಿಳುನಾಡಿಗೆ ಮತ್ತೆ ನೀರು ಹರಿಸುವಂತೆ ನೀಡಿದ ಆದೇಶದಿಂದ ರಾಜ್ಯದ ರೈತರು ಹಾಗೂ ಹೋರಾಟಗಾರರು ಮತ್ತಷ್ಟು ಕೆರಳಿದ್ದಾರೆ. ಕರ್ನಾಟಕ ಬಂದ್ ಸೇರಿದಂತೆ ಪ್ರತಿಭಟನೆಗಳನ್ನು ಮಾಡುತ್ತಿದ್ದರೂ ಕರ್ನಾಟಕ ವಿರುದ್ಧದ ತೀರ್ಪುಗಳೇ ಬರುತ್ತಿವೆ.
ಇಂದು (ಸೆಪ್ಟೆಂಬರ್ 29) ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್ ಕರೆಯನ್ನು ನೀಡಿದ್ದವು. ಈ ಬಂದ್‌ಗೆ ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ ಕೂಡ ಬೆಂಬಲ ಸೂಚಿಸಿತ್ತು. ಈ ವೇಳೆ ಕನ್ನಡ ಚಿತ್ರರಂಗದ ಪ್ರಮುಖ ನಟ, ನಟಿಯರು ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ್ದರು. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೂಡ ಭಾಗವಹಿಸಿದ್ದರು.

ಕನ್ನಡ ಚಿತ್ರರಂಗದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ್ದ ಧ್ರುವ ಸರ್ಜಾ ರಾಜಕೀಯ ಮಾಡಲು ಕನ್ನಡ ಚಿತ್ರರಂಗವನ್ನು ಒಡೆಯಬೇಡಿ ಎಂದು ಗುಡುಗಿದ್ದರು. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಷ್ಟಕ್ಕೂ ಧ್ರುವ ಸರ್ಜಾ ಹೇಳಿದ್ದೇನು? ತಿಳಿಯಲು ಮುಂದೆ ಓದಿ.
ಕಾವೇರಿ ಹೋರಾಟದಲ್ಲಿ ಕನ್ನಡ ಚಿತ್ರರಂಗದ ಕಲಾವಿದರು ಬೆಂಬಲ ನೀಡುತ್ತಿಲ್ಲವೆಂದು ಹಲವು ಕನ್ನಡ ಪರ ಸಂಘಟನೆಗಳು ಆರೋಪ ಮಾಡಿದ್ದವು. ಇದೇ ವಿಚಾರವಾಗಿ ಪ್ರತಿಭಟನಾ ಸಭೆಯಲ್ಲಿ ಧ್ರುವ ಸರ್ಜಾ ಆಕ್ರೋಶ ಹೊರ ಹಾಕಿದ್ದಾರೆ ಎನ್ನಲಾಗಿದೆ.
"ರಾಜಕೀಯ ಮಾಡುವುದಕ್ಕೆ ರಾಜಕಾರಣಿಗಳು ಇದ್ದಾರೆ. ರಾಜಕೀಯ ಮಾಡುವುದಕ್ಕೆ ದಯವಿಟ್ಟು ಕಲಾವಿದರನ್ನು ಬಳಸಿಕೊಳ್ಳಬೇಡಿ. ಕನ್ನಡ ಚಿತ್ರರಂಗ ಶುದ್ಧವಾಗಿದೆ. ನಿಮ್ಮ ಕೆಟ್ಟ ಸಂಚಿನಿಂದ ಒಡೆದು ಹಾಕಬೇಡಿ. ನಾವು ಯಾವತ್ತೂ ಮುಂದೆನೂ ಅಷ್ಟೇ.. ಹಿಂದೆನೂ ಅಷ್ಟೇ.. ರೈತರ ಪರನೇ ಇರುತ್ತೇವೆ. ಒಬ್ಬ ರೈತನ ಮಗನಾಗಿ, ಕನ್ನಡಿಗನಾಗಿ ಈ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ತಮಿಳುನಾಡು, ಕರ್ನಾಟಕ ಎರಡೂ ರಾಜ್ಯದಲ್ಲೂ ಒಳ್ಳೆ ಮಳೆ, ಒಳ್ಳೆ ಬೆಳೆ ಆಗಲಿ. ರೈತರಿಗೆ ಒಳ್ಳೆಯದಾಗಲಿ" ಎಂದು ಧ್ರುವ ಸರ್ಜಾ ಹೇಳಿದ್ದಾರೆ.
ಶಿವಣ್ಣ ಕೂಡ ಇದೇ ಮಾತನ್ನು ಹೇಳಿದ್ದರು. ಕಾವೇರಿ ವಿವಾದ ಬಂದಾಗಲೆಲ್ಲ ಕಲಾವಿದರನ್ನು ದೂಷಿಸುವ ಕೆಲಸ ಆಗುತ್ತೆ. ಕಲಾವಿದರು ಬಂದು ಏನು ಮಾಡಬೇಕು ಅಂತ ಹೇಳಿ. ನಾವು ಬಂದರೆ ನಿಮ್ಮ ಸಮಸ್ಯೆ ಬಗೆಹರಿಯುತ್ತಾ? ರಾಜಕೀಯ ಮುಖಂಡ ಬಳಿ ಹೋಗಿ ಪಟ್ಟು ಹಿಡಿಯಬೇಕು ಎಂದು ಹೇಳಿದ್ದರು. ಕಲಾವಿದರು ಯಾವಾಗಲೂ ರೈತರ ಪರವಾಗಿಯೇ ಇದ್ದಾರೆ. ನಾಡು, ನೆಲ, ಜಲ ಅಂತ ಬಂದಾಗ ಯಾವಾಗಲೂ ಜೊತೆಯಲ್ಲಿಯೇ ಇದ್ದಾರೆ ಎಂದು ಹೇಳಿದ್ದರು.
ಇಂದಿನ(ಸೆಪ್ಟೆಂಬರ್ 29) ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಕಲಾವಿದರು ಶಿವರಾಜ್ ಕುಮಾರ್, ದರ್ಶನ್, ಉಪೇಂದ್ರ, ದುನಿಯಾ ವಿಜಯ್, ಧ್ರುವ ಸರ್ಜಾ, ಶ್ರೀಮುರಳಿ, ವಿಜಯ್ ರಾಘವೇಂದ್ರ, ಉಮಾಶ್ರೀ, ಭಾವನಾ, ಅನುಶ್ರೀ, ಶ್ರೀನಗರ ಕಿಟ್ಟಿ ಇನ್ನೂ ಹಲವಾರು ನಟ-ನಟಿಯರು ಭಾಗಿಯಾಗಿದ್ದರು. ಅಲ್ಲದೆ ಕಾವೇರಿ ಹೋರಾಟದ ಪರವಾಗಿ ಇರುವುದಾಗಿ ಭರವಸೆ ನೀಡಿದರು.


Click it and Unblock the Notifications











