CCL 2025; ಒಂದ್ವೇಳೆ ಕಿಚ್ಚ ಸುದೀಪ್ ಬೌಲಿಂಗ್ ಮಾಡಿದರೆ? ವಿಕೆಟ್ ಕೀಪಿಂಗ್ ಮಾಡೋದ್ಯಾರು?
ಸಿಸಿಎಲ್ ಪಂದ್ಯಾವಳಿಗಳು ಇನ್ನೇನು ಆರಂಭ ಆಗಲಿದೆ. ಇದೇ ವೀಕೆಂಡ್‌ನಿಂದ ಬೆಂಗಳೂರಿನಿಂದಲೇ ಸಿಸಿಎಲ್ 2025 ಪಂದ್ಯಗಳು ಶುರುವಾಗುತ್ತವೆ. ಅದಕ್ಕಾಗಿ ಕರ್ನಾಟಕ ಬುಲ್ಡೋಜರ್ಸ್ ತಂಡ ಬಿರುಸಿನ ಅಭ್ಯಾಸದಲ್ಲಿ ತೊಡಗಿದೆ. ನಾಲ್ಕೈದು ದಿನಗಳಿಂದ ಹೈದರಾಬಾದ್‌ನಲ್ಲಿ ಕಿಚ್ಚ ಸುದೀಪ್ ಹಾಗೂ ಅವರ ತಂಡ ಕಠಿಣ ಅಭ್ಯಾಸಗಳಲ್ಲಿ ತೊಡಗಿದೆ. ಇದೇ ವೇಳೆ ಒಂದು ಇಂಟ್ರೆಸ್ಟಿಂಗ್ ವಿಡಿಯೋ ಕೂಡ ಹರಿದಾಡುತ್ತಿದೆ.
ಕಿಚ್ಚ ಸುದೀಪ್ ಸಿಸಿಎಲ್ ಟೂರ್ನಿಯಲ್ಲಿ ಕರ್ನಾಟಕ ಬುಲ್ಡೋಜರ್‌ಗಳ ಪರ ಬ್ಯಾಟಿಂಗ್ ಮಾಡಿದ್ದನ್ನು ನೋಡಿದ್ದೇವೆ. ವಿಕೆಟ್ ಕೀಪಿಂಗ್ ಮಾಡಿದ್ದನ್ನು ನೋಡಿದ್ದೇವೆ. ಬೌಲಿಂಗ್ ಮಾಡಿದ್ದು ತೀರಾ ವಿರಳ. ಫಾರ್ ಎ ಚೇಂಜ್ ಕಿಚ್ಚ ಸುದೀಪ್ ಈ ಬಾರಿ ಸಿಸಿಎಲ್ ಪಂದ್ಯಾವಳಿಯಲ್ಲಿ ಬೌಲಿಂಗ್ ಮಾಡಿದರೆ ಹೇಗಿರುತ್ತೆ? ಹೌದು ಕಿಚ್ಚ ಸುದೀಪ್ ಹೈದರಾಬಾದ್‌ನಲ್ಲಿ ಬ್ಯಾಟಿಂಗ್, ಕೀಪಿಂಗ್ ಅಷ್ಟೇ ಅಲ್ಲ ಬೌಲಿಂಗ್ ಪ್ರಾಕ್ಟೀಸ್ ಕೂಡ ಮಾಡಿದ್ದಾರೆ.

ಕಿಚ್ಚ ಸುದೀಪ್ ಬೌಲಿಂಗ್ ಪ್ರಾಕ್ಟೀಸ್ ಮಾಡಿದ್ದು ಈಗ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಈಗ ಕರ್ನಾಟಕ ಬುಲ್ಡೋಜರ್ಸ್ ತಂಡದ ನಾಯಕತ್ವವನ್ನು ಕಿಚ್ಚ ಸುದೀಪ್ ವಹಿಸಿಕೊಂಡಿರುವುದರಿಂದ ತಂತ್ರಗಾರಿಕೆ ಏನು ಮಾಡಿರಬಹುದು? ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಅದರಲ್ಲೂ ಕಿಚ್ಚ ಸುದೀಪ್ ಒಂದ್ವೇಳೆ ಬೌಲಿಂಗ್ ಮಾಡಿದರೆ, ಅವರ ಜಾಗದಲ್ಲಿ ವಿಕೆಟ್ ಕೀಪಿಂಗ್ ಮಾಡೋದು ಯಾರು? ಅನ್ನೋ ಪ್ರಶ್ನೆನೂ ಹುಟ್ಟಿಕೊಂಡಿದೆ.
ಅಷ್ಟಕ್ಕೂ ಈ ಗೊಂದಲ ಯಾಕೆ ಅಂದರೆ, ಕರ್ನಾಟಕ ಬುಲ್ಡೋಜರ್ಸ್ ಟೀಮ್ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಇಂತಹದ್ದೊಂದು ಹಿಂಟ್ ಅನ್ನು ಕೊಟ್ಟಿದೆ. ಅಷ್ಟೇ ಅಲ್ಲದೇ ಕಿಚ್ಚ ಸುದೀಪ್ ಬೌಲಿಂಗ್ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದೆ. ಈ ವಿಡಿಯೋ ನೋಡಿದ ಮೇಲೆ ಸುದೀಪ್ ಮೊದಲ ಪಂದ್ಯದಲ್ಲಿ ಬೌಲಿಂಗ್ ಮಾಡುವ ಎಲ್ಲಾ ಸಾಧ್ಯತೆಗಳು ಕೂಡ ಇವೆ. ಒಂದೆರಡು ಓವರ್ ಬೌಲಿಂಗ್ ಮಾಡಿದರೂ ಅಚ್ಚರಿ ಪಡಬೇಕಾಗಿ ಇಲ್ಲ. ಈ ವಿಡಿಯೋ ಪೋಸ್ಟ್ ಮಾಡಿ ಕರ್ನಾಟಕ ಬುಲ್ಡೋಜರ್ ತಂಡವೇ ಒಂದು ಹಿಂಟ್ ಅನ್ನು ಕೊಟ್ಟಿದೆ.
ಫೆಬ್ರವರಿ 8ರಿಂದ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಸಿಸಿಎಲ್ ಪಂದ್ಯಾವಳಿಗಳು ಆರಂಭ ಆಗುತ್ತಿವೆ. ಬೆಂಗಳೂರಿನಲ್ಲಿ ಎರಡು ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯ ಚೆನ್ನೈ ರೈನೋಸ್ ಹಾಗೂ ಬೆಂಗಾಲ್ ಟೈಗರ್ ಮಧ್ಯೆ ಆರಂಭ ನಡೆಯಲಿದೆ. ಇನ್ನು ಎರಡನೆಯದ್ದು ಹೈವೋಲ್ಟೇಜ್ ಪಂದ್ಯ. ಕರ್ನಾಟಕ ಬುಲ್ಡೋಜರ್ಸ್ ಹಾಗೂ ತೆಲುಗು ವಾರಿಯರ್ಸ್ ಮಧ್ಯೆ ನಡೆಯಲಿದೆ. ಈ ಹಿಂದಿನಿಂದಲೂ ಇಬ್ಬರ ನಡುವೆ ಟಫ್ ಮ್ಯಾಚ್‌ಗಳು ನಡೆದಿವೆ. ಈ ಬಾರಿ ಕೂಡ ಪ್ರೇಕ್ಷಕರು ಅದನ್ನೇ ನಿರೀಕ್ಷೆ ಮಾಡುತ್ತಿದ್ದಾರೆ.
ಕಳೆದ ಬಾರಿಗಿಂತ ಈ ಬಾರಿ ಸಿಸಿಎಲ್ ಪಂದ್ಯಗಳು ಹೆಚ್ಚು ರೋಚಕವಾಗಿರುತ್ತವೆ ಎಂದು ನಿರೀಕ್ಷೆ ಮಾಡಲಾಗಿದೆ. ಎಲ್ಲಾ ತಂಡಗಳಲ್ಲೂ ಯುವ ಆಟಗಾರರ ಸೇರ್ಪಡೆಯಾಗಿದೆ. ಪ್ರತಿಯೊಂದು ತಂಡವೂ ಗಂಭೀರವಾಗಿ ಪ್ರಾಕ್ಟೀಸ್ ಮಾಡುತ್ತಿದೆ. ಅದರಲ್ಲೂ ಕರ್ನಾಟಕ ಬುಲ್ಡೋಜರ್ಸ್ ತಂಡ ಕಳೆದ 15 ದಿನಗಳಿಂದ ನಿರಂತರ ಪ್ರಾಕ್ಟೀಸ್ ಮಾಡುತ್ತಿದೆ. ಹೀಗಾಗಿ ಈ ಬಾರಿ ಸಿನಿಮಾ ಹಾಗೂ ಕ್ರಿಕೆಟ್ ಪ್ರೇಮಿಗಳಿಗೆ ಭರ್ಜರಿ ಮನರಂಜನೆ ಸಿಗುವುದಂತೂ ಗ್ಯಾರಂಟಿ.
ಕಿಚ್ಚ ಸುದೀಪ್ 'ಮ್ಯಾಕ್ಸ್' ಸಿನಿಮಾ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದು, ಇನ್ನೊಂದು ಪ್ರಾಜೆಕ್ಟ್‌ಗೆ ಕೈ ಹಾಕುವುದಕ್ಕಿಂತ ಮುನ್ನ ಸಿಸಿಎಲ್ 2025 ಅನ್ನು ಮುಗಿಸಿ ಆನಂತರ ಹೊಸ ಪ್ರಾಜೆಕ್ಟ್‌ಗೆ ಕೈ ಹಾಕಲಿದ್ದಾರೆ. ಕಿಚ್ಚ ಮುಂದಿನ ಸಿನಿಮಾ ನಿರ್ದೇಶಿಸುತ್ತಿರುವ ಅನುಪ್ ಭಂಡಾರಿ ಕೂಡ ಸಿಸಿಎಲ್ ಆಡುತ್ತಿದ್ದು, 'ಬಿಲ್ಲ ರಂಗ ಭಾಷಾ' ಸಿಸಿಎಲ್ ಮುಗಿದ ಬಳಿಕ ಸೆಟ್ಟೇರುವ ಸಾಧ್ಯತೆಯಿದೆ. ಸದ್ಯ ಕಿಚ್ಚ ಸುದೀಪ್ ಕೂಡ ಕ್ರಿಕೆಟ್ ಆಡುವ ಮೂಡ್‌ನಲ್ಲಿ ಇದ್ದಾರೆ. ತನ್ನೆಲ್ಲ ಕಮಿಟ್‌ಮೆಂಟ್ ಮುಗಿಸಿದ ಮತ್ತೊಂದು ಸಿನಿಮಾಗೆ ಕೈ ಹಾಕಲಿದ್ದಾರೆ. ಏನೇ ಇದ್ದರೂ ಮೊದಲ ಪಂದ್ಯ ಇದೇ ಫೆಬ್ರವರಿ 8ರಂದು ಆರಂಭ ಆಗುತ್ತಿದ್ದು, ಫ್ಯಾನ್ಸ್ ಪಂದ್ಯವನ್ನು ಕಣ್ತುಂಬಿಕೊಳ್ಳುವುದಕ್ಕೆ ಕಾಯುತ್ತಿದ್ದಾರೆ.


Click it and Unblock the Notifications











