'ಬಿಲ್ಲ ರಂಗ ಬಾಷಾ'ಗಿಂತಲೂ ಮುನ್ನ ರಿಲೀಸ್ ಆಗುತ್ತೆ 'ಮ್ಯಾಕ್ಸ್ 2'? ಏನಿದು ಕಿಚ್ಚನ ಲೆಕ್ಕಾಚಾರ?
ಸ್ಯಾಂಡಲ್‌ವುಡ್ ಬಾದ್‌ಷಾ ಕಿಚ್ಚ ಸುದೀಪ್ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಕಳೆದ ವರ್ಷದ ಕೊನೆಯಲ್ಲಿ 'ಮ್ಯಾಕ್ಸ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೂಪರ್ ಹಿಟ್ ಆಗಿತ್ತು. ಕನ್ನಡದಲ್ಲಿ ಸಿನಿಮಾಗಳೇ ಓಡುತ್ತಿಲ್ಲ ಎನ್ನುವಾಗ ವೇಳೆ ಸೂಪರ್ ಹಿಟ್ ಸಿನಿಮಾ ಸಿಕ್ಕಿತ್ತು. ಇದು ಕಿಚ್ಚನಿಗೂ ತುಂಬಾನೇ ಅಗತ್ಯವಾಗಿ ಬೇಕಿದ್ದ ಗೆಲುವಾಗಿತ್ತು. ನಿರೀಕ್ಷೆ ಮಾಡಿದಂತೆ 'ಮ್ಯಾಕ್ಸ್' ಮೂಲಕ ಗೆದ್ದು ಬೀಗಿದ್ದರು.
'ಮ್ಯಾಕ್ಸ್' ಗೆದ್ದ ಬೆನ್ನಲ್ಲೇ ಮುಂದಿನ ಯಾವುದು ಎನ್ನುವ ಪ್ರಶ್ನೆಗೆ ಉತ್ತರನೂ ರೆಡಿಯಿತ್ತು. ಅದುವೇ 'ಬಿಲ್ಲ ರಂಗ ಬಾಷಾ'. ಅನುಪ್ ಭಂಡಾರಿ ಹಾಗೂ ಕಿಚ್ಚ ಸುದೀಪ್ ಕಾಂಬಿನೇಷನ್‌ನಲ್ಲಿ ಬಂದಿದ್ದ 'ವಿಕ್ರಾಂತ್ ರೋಣ' ಬಳಿಕ ಮತ್ತೆ ಒಂದಾಗುತ್ತಿದ್ದಾರೆ. ಈ ಬಾರಿಗೆ ಸ್ಯಾಂಡಲ್‌ವುಡ್‌ನಲ್ಲಿ ಟ್ರೆಂಡ್ ಸೆಟ್ ಮಾಡುವುದಕ್ಕೆ ಈ ಜೋಡಿ ತುದಿಗಾಲಲ್ಲಿ ನಿಂತಿದೆ. 'ಮ್ಯಾಕ್ಸ್' ಗೆದ್ದಿದ್ದ ಖುಷಿಯಲ್ಲೇ ಶೂಟಿಂಗ್ ಶುರುವಾಗಬೇಕಿದ್ದ ಸಿನಿಮಾ ಕೊಂಚ ತಡವಾಗಿತ್ತು. ಆದರೂ, ಯಶಸ್ವಿಯಾಗಿ ಮೊದಲ ಹಂತದ ಚಿತ್ರೀಕರಣ ಮುಗಿಸಿದೆ.

ಇದೇ ಬೆನ್ನಲ್ಲೇ ಕಿಚ್ಚ ಸುದೀಪ್ ಕ್ಯಾಂಪ್‌ನಿಂದ ಹೊಸ ಸುದ್ದಿಯೊಂದು ಕೇಳಿ ಬಂದಿದೆ. 'ಬಿಲ್ಲ ರಂಗ ಬಾಷಾ' ಸಿನಿಮಾ ಥಿಯೇಟರ್‌ಗೆ ಬರೋಕೆ ಸಾಕಷ್ಟು ಸಮಯ ಬೇಕು. ಬೇರೊಂದು ಲೋಕದ ಕಥೆಯಾಗಿದ್ದರಿಂದ ಸೆಟ್ ವರ್ಕ್‌ಗೆ ಹೆಚ್ಚು ಸಮಯ ಹಿಡಿಯುತ್ತಿದೆ ಎಂದು ಹೇಳಲಾಗುತ್ತಿದೆ. ಈ ಗ್ಯಾಪ್‌ನಲ್ಲಿ 'ಮ್ಯಾಕ್ಸ್ 2' ಬಗ್ಗೆನೂ ಸೆಟ್ಟೇರುತ್ತೆ ಎಂದು ಹೇಳಲಾಗುತ್ತಿದೆ. ಅಸಲಿಗೆ 'ಬಿಲ್ಲ ರಂಗ ಬಾಷಾ'ನಾ? ಇಲ್ಲ 'ಮ್ಯಾಕ್ಸ್ 2'ನಾ? ತಿಳಿಯುವುದಕ್ಕೆ ಮುಂದೆ ಓದಿ.
'ವಿಕ್ರಾಂತ್ ರೋಣ' ಬಳಿಕ ಕಿಚ್ಚ ಸುದೀಪ್ ಮತ್ತೊಂದು ಸಿನಿಮಾ 'ಮ್ಯಾಕ್ಸ್' ರಿಲೀಸ್ ಆಗುವುದಕ್ಕೆ ಹೆಚ್ಚು ಕಡಿಮೆ ಎರಡೂವರೆ ವರ್ಷ ಹಿಡಿದಿತ್ತು. ಅಷ್ಟು ವರ್ಷ ಕಾದಿದ್ದಕ್ಕೂ ಸುದೀಪ್ ಗೆಲುವಿ ರುಚಿಯನ್ನು ನೋಡಿದ್ದರು. ಆದರೆ, ಮತ್ತೊಂದು ಸಿನಿಮಾ ರಿಲೀಸ್‌ಗೆ ಇಷ್ಟು ದೊಡ್ಡ ಗ್ಯಾಪ್ ಕೊಡುವುದಕ್ಕೆ ಸುದೀಪ್ ರೆಡಿಯಿಲ್ಲ ಎನಿಸುತ್ತಿದೆ. ಅದಕ್ಕೆ ಅನುಪ್ ಭಂಡಾರಿಯ 'ಬಿಲ್ಲ ರಂಗ ಬಾಷಾ' ಜೊತೆ ಜೊತೆಗೆ 'ಮ್ಯಾಕ್ಸ್ 2' ಸಿನಿಮಾ ಕೂಡ ಸೆಟ್ಟೇರುತ್ತೆ ಎಂಬ ಸುಳಿವು ಸಿಕ್ಕಿದೆ.

ಕಿಚ್ಚ ಸುದೀಪ್ ಆಪ್ತರಾಗಿರುವ ಚಕ್ರವರ್ತಿ ಚಂದ್ರಚೂಡ ಫಿಲ್ಮಿ ಫಸ್ಟ್ ಜೊತೆ ಮಾತಾಡುವಾಗ ಇಂತಹದ್ದೊಂದು ಸುಳಿವನ್ನು ಬಿಟ್ಟು ಕೊಟ್ಟಿದ್ದಾರೆ. "ಬಿಆರ್‌ಬಿ ತುಂಬಾ ಚೆನ್ನಾಗಿ ನಡೆಯುತ್ತಿದೆ. ಒಂದು ಶೆಡ್ಯೂಲ್ ಆಗಿದೆ. ಎರಡನೇ ಶೆಡ್ಯೂಲ್‌ಗೆ ಸೆಟ್ ವರ್ಕ್ ನಡೆಯುತ್ತಿದೆ. ತುಂಬಾನೇ ದೊಡ್ಡ ಸಿನಿಮಾ ಆಗಿದ್ದರಿಂದ ಸಿಕ್ಕಾಪಟ್ಟೆ ಪ್ರಿಪರೇಷನ್ ಬೇಕಾಗಿದೆ. ಸದ್ಯದಲ್ಲಿಯೇ 'ಮ್ಯಾಕ್ಸ್ 2' ಶುರುವಾಗುತ್ತೆ." ಎಂದು ಚಕ್ರವರ್ತಿ ಚಂದ್ರಚೂಡ್ ಹೇಳುವ ಮೂಲಕ ಕಿಚ್ಚ ಸುದೀಪ್ ಅಭಿಮಾನಿಗಳಲ್ಲಿ ಕುತೂಹಲವನ್ನು ಕೆರಳಿಸಿದ್ದಾರೆ.
ಇದೇ ವೇಳೆ 'ಬಿಲ್ಲ ರಂಗ ಬಾಷಾ' ಯಾಕೆ ತಡವಾಗುತ್ತಿದೆ? ಕಿಚ್ಚ ಸುದೀಪ್ ಹೇಗೆ ಕಾಣಿಸುತ್ತಾರೆ? ಎನ್ನುವ ಬಗ್ಗೆ ಚಿಕ್ಕದೊಂದು ಸುಳಿವನ್ನೂ ನೀಡಿದ್ದಾರೆ. "ಒಂದು ಹೊಸ ಲೋಕದ ಕಥೆ ಹೇಳುತ್ತಿರುವುದರಿಂದ ಸೆಟ್ ವರ್ಕ್ ನಡೆಯಬೇಕು. ಪಾತ್ರಗಳು ಬರಬೇಕು. ಒಂದು ರೋಚಕತೆ ಸೃಷ್ಟಿಯಾಗಬೇಕು. ಅದಕ್ಕೆ ಸಾಕಷ್ಟು ಸಮಯ ಹಿಡಿಯುತ್ತೆ ಅಂತ ಅನಿಸುತ್ತೆ. ಈ ಸಲ ದಾದ ಅದ್ಬುತವಾಗಿ ಕಾಣಿಸುತ್ತಾರೆ. ಗೆಟಪ್ ಎಲ್ಲ ತೋರಿಸಿದರು. ಗೆಟಪ್ ನೋಡಿ ಹೋಗಿ ಅಪ್ಪಿಕೊಂಡೆ" ಎಂದು ಚಕ್ರವರ್ತಿ ಚಂದ್ರಚೂಡ್ ಹೇಳಿದ್ದಾರೆ.
ಕಿಚ್ಚ ಸುದೀಪ್ ಸದ್ಯ ಎರಡೂ ಸಿನಿಮಾಗಳ ಕಡೆ ಗಮನ ಹರಿಸುತ್ತಿದ್ದಾರೆ. ಒಟ್ಟೊಟ್ಟಿಗೆ ಎರಡೂ ಸಿನಿಮಾಗಳ ಶೂಟಿಂಗ್‌ನಲ್ಲಿ ಭಾಗಿಯಾಗುವ ಸಾಧ್ಯತೆಯಿದೆ. ಚಕ್ರವರ್ತಿ ಚಂದ್ರಚೂಡ ಮಾತುಗಳನ್ನು ಕೇಳಿದರೆ, 'ಬಿಲ್ಲ ರಂಗ ಬಾಷಾ' ಸಿನಿಮಾಗಿಂತ ಮೊದಲು 'ಮ್ಯಾಕ್ಸ್ 2' ಸಿನಿಮಾನೇ ಬರಬಹುದು ಅನ್ನೋ ಗುಮಾನಿಗೂ ಹುಟ್ಟಿಕೊಂಡಿದೆ.


Click it and Unblock the Notifications











