"ಬಾದ್‌ಷಾ ಅಂದರೆ, ಕರ್ನಾಟಕದ ಬುರ್ಜ್ ಖಲೀಫಾ ಇದ್ದಂತೆ": ಚಕ್ರವರ್ತಿ ಚಂದ್ರಚೂಡ್!
ಸ್ಯಾಂಡಲ್‌ವುಡ್‌ನಲ್ಲಿ ಕಿಚ್ಚ ಸುದೀಪ್ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ವರ್ಷಕ್ಕೆ ಎರಡು ಸಿನಿಮಾ ಕೊಡಬೇಕು ಎನ್ನುವ ಒತ್ತಡವಿದ್ದರೂ, ಒಂದು ಸಿನಿಮಾವನ್ನಾದರೂ ಕೊಡಲೇಬೇಕು ಅಂತ ಶತ ಪ್ರಯತ್ನ ಮಾಡುತ್ತಿದ್ದಾರೆ. ಈ ವರ್ಷದ ಕೊನೆಯಲ್ಲಿ ತಮ್ಮ ಅಭಿಮಾನಿಗಳಿಗೆ ಸಿನಿಪ್ರಿಯರಿಗೆ ತನ್ನದೊಂದು ಸಿನಿಮಾ ಕೊಡಬೇಕು ಎಂಬ ನಿಟ್ಟಿನಲ್ಲಿ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಈ ವರ್ಷದ ಕೊನೆಯಲ್ಲಿ ಒಂದು ಸಿನಿಮಾವನ್ನು ನಿರೀಕ್ಷೆ ಮಾಡಬಹುದು.
ಈ ಮಧ್ಯೆ ಕಿಚ್ಚ ಮತ್ತೆ ಬಿಗ್‌ಬಾಸ್ ರಿಯಾಲಿಟಿ ಶೋ ನಿರೂಪಣೆ ಮಾಡುವುದಕ್ಕೆ ಒಪ್ಪಿಕೊಂಡಿದ್ದಾರೆ. ಕಲರ್ಸ್ ಕನ್ನಡ ಜೊತೆಗಿನ ಕೆಲವು ಭಿನ್ನಾಭಿಪ್ರಾಯ ಇದ್ದಿದ್ದರಿಂದ ಬಿಗ್ ಬಾಸ್‌ನಿಂದ ದೂರು ಉಳಿಯುವ ನಿರ್ಧಾರಕ್ಕೆ ಬಂದಿದ್ದರು. ಕಲರ್ಸ್ ಕನ್ನಡದ ಹಾಗೂ ಬಿಗ್ ಬಾಸ್ ತಂಡ ಕಿಚ್ಚನ ಷರತ್ತುಗಳನ್ನು ಒಪ್ಪಿಕೊಂಡ ಬಳಿಕ ಮತ್ತೆ ಬಿಗ್ ಬಾಸ್ ಅಖಾಡಕ್ಕೆ ಇಳಿದಿದ್ದಾರೆ. ಹೀಗಾಗಿ ಬಿಗ್ ಬಾಸ್‌ನ ಇನ್ನೂ ನಾಲ್ಕು ಸೀಸನ್ ಅನ್ನು ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡುತ್ತಾರೆ.

ಬಿಗ್ ಬಾಸ್ ಮಧ್ಯೆನೇ ಕಿಚ್ಚ ಸುದೀಪ್ ಮೂರು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಬ್ಯಾಕ್ ಟು ಬ್ಯಾಕ್ ಶೂಟಿಂಗ್ ಮಾಡುತ್ತಿದ್ದಾರೆ. ಕಿಚ್ಚನ ಆತ್ಮೀಯವಾಗಿರುವ ಚಕ್ರವರ್ತಿ ಚಂದ್ರಚೂಡ್ ಕೆಲವು ವಿಷಯಗಳನ್ನು ಫಿಲ್ಮಿಬೀಟ್ ಕನ್ನಡಕ್ಕೆ ರಿವೀಲ್ ಮಾಡಿದ್ದಾರೆ. ಕಿಚ್ಚ ಸುದೀಪ್ ಜೊತೆ ಕೆಲಸ ಮಾಡುತ್ತಿರೋ ಆ ಏಳು ತಂಡಗಳ್ಯಾವುವು? ಬಿಗ್ ಬಾಸ್ ನಿರೂಪಣೆ ಮಾಡುವುದಕ್ಕೆ ವಿಧಿಸಿದ್ದ ಷರತ್ತುಗಳೇನು? ಕಿಚ್ಚ ಒಪ್ಪಿಕೊಂಡಿರುವ ಮೂರು ಸಿನಿಮಾಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅದರ ಝಲಕ್ ಇಲ್ಲಿದೆ.
ಫ್ಯಾನ್ಸ್ ಪ್ರೀತಿಯಿಂದ ಬೈತಾರೆ
"ಕಿಚ್ಚ ಸುದೀಪ್ ಇಲ್ಲದ ಬಿಗ್ ಬಾಸ್ ಹೇಗೆ ಅಂದರೆ, ಶ್ರೀಕೃಷ್ಣ ಇಲ್ಲದೆ ಮಹಾಭಾರತವನ್ನು ಓದುವುದಕ್ಕೆ ಆಗುವುದಿಲ್ಲ. ಅದೊಂತರ ಆಧುನಿಕ ಗೀತೆ. ಅವರು ಇರಬೇಕು ಅಂತ ಜನರು ಹೇಳುತ್ತಾರೆ. ಎಲ್ಲರೂ ಕೇಳುತ್ತಿದ್ದರು. ಬಿಗ್ ಬಾಸ್‌ಗೆ ಮತ್ತೆ ಬಂದ್ರಿ ಅಂತ. ನನಗೆ ವೈಯಕ್ತಿಕವಾಗಿ ನೂರಾರು ಜನರು ಉತ್ತರ ಬರೆದಿದ್ದಾರೆ. ನೂರಾರು ಜನರು ಸೋಶಿಯಲ್ ಮೀಡಿಯಾದಲ್ಲಿ ಮೆಸೇಜ್ ಮಾಡಿದ್ದಾರೆ. ಪತ್ರಗಳನ್ನು ಬರೆದಿದ್ದಾರೆ. ಆ ಪತ್ರಗಳಲ್ಲಿ ಅಷ್ಟು ಪ್ರೀತಿ ಇರುತ್ತಿತ್ತು. ದಾದಾ ದೇಶ ವಿದೇಶದಲ್ಲಿ ಅಭಿಮಾನಿ ವರ್ಗವಿದೆ. ಅಷ್ಟೊಂದು ಲೆಟರ್ ಬಂದಾಗ, ನನ್ನ ಫ್ಯಾಮಿಲಿ ಟ್ರೀಗೆಲ್ಲ ಬೈದಿದ್ದಾರೆ. ನಿನ್ನಿಂದಲೇ ಬಿಗ್ ಬಾಸ್ ಮಾಡುತ್ತಿಲ್ಲ ಎಂದಿದ್ದಾರೆ. ಸ್ಟೇಟ್ ಅವಾರ್ಡ್ ತೆಗೆದುಕೊಂಡಿಲ್ಲ ಅಂತ ಅವರ ಫ್ಯಾನ್ಸ್ ಪ್ರೀತಿಯಿಂದ ಬೈತಾರೆ." ಎಂದು ಚಕ್ರವರ್ತಿ ಚಂದ್ರಚೂಡ್ ಹೇಳಿದ್ದಾರೆ.
ಕಿಚ್ಚ ಹಾಕಿದ್ದ ಷರತ್ತುಗಳೇನು?
"ಅಲ್ಲಿ ಕನ್ನಡತನದ ಸಮಸ್ಯೆಯಿತ್ತು. ಮನೆ ಕನ್ನಡಮಯವಾಗಿರಬೇಕು ಅನ್ನೋದು ಇತ್ತು. ಸ್ಟೇಜ್ ಹೀಗೆ ಇರಬೇಕು ಅನ್ನೋದು ಇತ್ತು. ಕಂಟೆಸ್ಟೆಂಟ್‌ಗಳ ಬಗ್ಗೆ ಇತ್ತು. ಯಾಕಂದ್ರೆ, ಇವರು ಎಲ್ಲೇ ಹೋದರೂ ಕನ್ನಡ ಬಿಡುವುದಿಲ್ಲ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಂತ ಯಾಕೆ ಕರೆಯುತ್ತಾರೆ ಅಂದರೆ, ಬೇರೆ ಬೇರೆ ಭಾಷೆಗಳಿಗೆ ಹೋಗಿ ವಾಪಾಸ್ ಕನ್ನಡಕ್ಕೆ ಬಂದವರು. ಎಷ್ಟೋ ನಮ್ಮ ಕನ್ನಡದ ನಿರ್ದೇಶಕರು ತೆಲುಗಿಗೋ, ಮಹಾರಾಷ್ಟ್ರಕ್ಕೋ ಹೋದವರು ವಾಪಸ್ ಬರುವುದಿಲ್ಲ. ವಿಶ್ವದ ಮಾರುಕಟ್ಟೆಯನ್ನು ಬಿಟ್ಟು ಕನ್ನಡಕ್ಕೆ ಬರಬೇಕು ಅಂತ ಬಂದು, ಈಗ ಶುರುವಾಗುತ್ತಿರುವ ಎಲ್ಲಾ ಸಿನಿಮಾಗಳು ಕನ್ನಡದ ನೆಟಿವಿಟಿಯಲ್ಲಿಯೇ ಆಗಬೇಕು ಅಂತ ಚಾಲೆಂಜ್ ಮಾಡಿದವರು" ಎನ್ನುತ್ತಾರೆ.
ಈ ವರ್ಷ ಕೊನೆಗೊಂದು ಸಿನಿಮಾ
"ಈಗ ಎರಡು ಸಿನಿಮಾ ನಡೆಯುತ್ತಿದೆ. ಇನ್ನೊಂದು ಸಿನಿಮಾ ಶುರುವಾಗುತ್ತೆ. ಮೂರು ಸಿನಿಮಾಗಳು ನಡೆಯುತ್ತಿವೆ. ಈ ವರ್ಷದ ಕೊನೆಗೆ ಒಂದು ಸಿನಿಮಾ ಬರಲೇಬೇಕು ಅಂತ ಹಠ ಹಿಡಿದು ಕೆಲಸ ಮಾಡುತ್ತಿದ್ದಾರೆ. ಡೇ ಅಂಡ್ ನೈಟ್ ಕೆಲಸ ನಡೆಯುತ್ತಿದೆ. ಯಾಕಂದ್ರೆ, ಪ್ರತಿದಿನ ನಾನು ಅವರು ನೋಡುತ್ತಲೇ ಇರುತ್ತೇನೆ. ಅದರ ಮಧ್ಯೆ ಬಿಗ್ ಬಾಸ್ ಮಾಡುವುದು ಇದೆಯಲ್ಲ ಅದು ಕಷ್ಟ. ಯಾಕಂದ್ರೆ, ಜಗತ್ತಿನ ಯಾವುದೇ ಮೂಲೆಯಲ್ಲಿ ಇದ್ದರೂ ಪ್ರತಿ ಶುಕ್ರವಾರ ಬರಬೇಕು. ನಾನು ಒಂದು ಶೋ ನಡೆಸಿಕೊಡಬೇಕು ಅಂತಲ್ಲ. ಅದರ ಒಂದು ಇಂಚಿಂಚೂ ನೋಡುತ್ತಾರೆ." ಎಂದು ಚಕ್ರವರ್ತಿ ಚಂದ್ರಚೂಡ್ ಹೇಳಿದ್ದಾರೆ.
ಕಿಚ್ಚನ ಜೊತೆ 7 ತಂಡವಿದೆ
"ಒಂದು ಮಟ್ಟಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವುದು ಶೂನ್ಯ. ಅವರಿಗೀಗ ಒಂದು ಕಾನೂನು ತಂಡವಿದೆ. ಪಿಆರ್ ಟೀಮ್ ಇದೆ. ಬ್ರ್ಯಾಂಡಿಂಗ್ ಟೀಮ್ ಇದೆ. ಎಕನಾಮಿಕ್ ಟೀಮ್ ಇದೆ. ಚಾರ್ಟೆಡ್ ಅಕೌಂಟೆಂಟ್ ಟೀಮ್ ಇದೆ. ಸಿನಿಮಾಗಳ ಸ್ಕ್ರಿಪ್ಟ್ ನೋಡುವುದಕ್ಕೊಂಡು ಟೀಮ್ ಇದೆ. ಒಟ್ಟು ಏಳೆಂಟು ತಂಡಗಳು ಅವರು ಏನು ಮಾಡಬೇಕು ಅಂತ ನೋಡಿಕೊಳ್ಳುತ್ತವೆ. ಕಿಚ್ಚ ಸುದೀಪ್ ಅವರು ಕರ್ನಾಟಕದ ಒಂದು ಬ್ರ್ಯಾಂಡ್. ಬಾದ್‌ಷಾ ಅಂದರೆ, ಕರ್ನಾಟಕದ ಬುರ್ಜ್ ಖಲೀಫಾ ಇದ್ದಂತೆ. ನಾವಾಗೇ ಏನಾದರೂ ತೋರಿಸಿದರೆ ಸೋಶಿಯಲ್ ಮೀಡಿಯಾ ನೋಡುತ್ತಾರೆ. ಅದು ಬಿಟ್ಟರೆ, ಅವರು ಗಮನಿಸುವುದೇ ಇಲ್ಲ." ಎಂದಿದ್ದಾರೆ.


Click it and Unblock the Notifications











