ಹೈಕೋರ್ಟ್ ಮೆಟ್ಟಿಲೇರಿದ ದರ್ಶನ್: 300 ಪುಟಗಳಲ್ಲಿ ಕೊಟ್ಟಿರೋ ಕಾರಣವೇನು? ಈ ಬಾರಿ ಬೇಗ ಸಿಗುತ್ತಾ ಜಾಮೀನು?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಜಾಮೀನು ಅರ್ಜಿ ಸದ್ಯಕ್ಕೀಗ ಹಾಟ್ ಟಾಪಿಕ್ ಆಗಿದೆ. ಬೆಂಗಳೂರಿನ 57ನೇ ಸಿಸಿಎಚ್ ಕೋರ್ಟ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಬಳಿಕ ದರ್ಶನ್ ಮುಂದಿನ ನಡೆಯೇನು ಅನ್ನೋದನ್ನು ಅವರ ಅಭಿಮಾನಿಗಳು ಕುತೂಹಲದಿಂದ ನೋಡುತ್ತಿದ್ದರು. ನಿರೀಕ್ಷೆಯಂತೆ ದರ್ಶನ್ ಹೈ ಕೋರ್ಟ್ ಮೊರೆ ಹೋಗಿದ್ದಾರೆ.
ದರ್ಶನ್‌ಗೆ ಜಾಮೀನು ಕೋರಿ ಅವರ ಪರ ವಕೀಲ ಎಸ್ ಸುನಿಲ್ ಕುಮಾರ್ ಹೈ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ನಿನ್ನೆ (ಅಕ್ಟೋಬರ್ 15) ದರ್ಶನ್ ಪರ ವಕೀಲ ಹೈಕೋರ್ಟ್‌ನ ಫೈಲಿಂಗ್ ವಿಭಾಗಕ್ಕೆ ಜಾಮೀನು ಕೋರಿ ಸುಮಾರು 300 ಪುಟಗಳ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಜಾಮೀನು ಅರ್ಜಿಗೆ ನ್ಯಾಯಾಲಯದಲ್ಲಿ ಎಫ್‌ಆರ್ ನಂಬರ್ ನೀಡಲಾಗಿದ್ದು, ಪರಿಶೀಲನೆ ಬಳಿಕ ಕ್ರಿಮಿನಲ್ ಅರ್ಜಿ ಸಂಖ್ಯೆ ದೊರಕಲಿದೆ ಎನ್ನಲಾಗುತ್ತಿದೆ.

ಹೈಕೋರ್ಟ್ ನ್ಯಾಯಾಪೀಠದ ಮುಂದೆ ದರ್ಶನ್ ಜಾಮೀನು ಅರ್ಜಿ ಬೇಗನೇ ಬರುವಂತೆ ದರ್ಶನ್ ಪರ ವಕೀಲರು ಮೆಮೋ ಸಲ್ಲಿಸಿವ ಸಾಧ್ಯತೆಯಿದೆ. ದರ್ಶನ್ ಆರೋಗ್ಯ ಸಮಸ್ಯೆಯನ್ನೇ ಮುಂದಿಟ್ಟುಕೊಂಡು ಜಾಮೀನಿಗಾಗಿ ವಾದ ಮಂಡಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಸದ್ಯ ಅರ್ಜಿಯಲ್ಲಿ ದರ್ಶನ್‌ಗೆ ಬೆನ್ನು ನೋವು ಇದ್ದು, ಅವರಿಗೆ ತಕ್ಷಣವೇ ಚಿಕಿತ್ಸೆ ನೀಡಬೇಕಿದೆ. ಈ ಕಾರಣಕ್ಕೆ ಆದಷ್ಟು ಬೇಗನೇ ಜಾಮೀನು ಮಂಜೂರು ಮಾಡುವಂತೆ ಜಾಮೀನು ಅರ್ಜಿಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ.
ಹೈಕೋರ್ಟ್‌ನಲ್ಲಿ ಸಲ್ಲಿಸಿದ ಜಾಮೀನು ಅರ್ಜಿಯಲ್ಲಿ ದರ್ಶನ್ ವಿರುದ್ಧ ಪೊಲೀಸರೇ ಸಾಕ್ಷಿಗಳನ್ನು ಸೃಷ್ಟಿಸಿದ್ದಾರೆ. ತನಿಖೆಯಲ್ಲಿ ಲೋಪ ದೋಷಗಳು ಇವೆ. ರೇಣುಕಾಸ್ವಾಮಿಯ ಪೋಸ್ಟ್ ಮಾರ್ಟಮ್ ತಡವಾಗಿ ಮಾಡಲಾಗಿದೆ. ಆರೋಪಿಗಳ ಹೇಳಿಕೆಯನ್ನು ಪಡೆಯುವಲ್ಲಿಯೂ ತಡ ಮಾಡಲಾಗಿದೆ. ಈಗಾಗಲೇ ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, ದರ್ಶನ್ ಅವರಿಗೆ ಜಾಮೀನು ಮಂಜೂರಿ ಮಾಡಬೇಕೆಂದು ಅರ್ಜಿಯಲ್ಲಿ ಹೇಳಲಾಗಿದೆ ಎನ್ನಲಾಗಿದೆ.

ದರ್ಶನ್ ಜಾಮೀನು ಅರ್ಜಿ ವಿಚಾರಣೆ ಸೆಷನ್ಸ್ ನ್ಯಾಯಾಲಯದಲ್ಲಿ ಸುಧೀರ್ಘವಾಗಿ ನಡೆದಿತ್ತು. ದರ್ಶನ್ ಪರ ವಕೀಲರಾದ ಸಿ ವಿ ನಾಗೇಶ್ ಹಾಗೂ ಎಸ್‌ಪಿಪಿ ಪ್ರಸನ್ನ ಕುಮಾರ್ ವಾದ ಹಾಗೂ ಪ್ರತಿವಾದವನ್ನು ಮಂಡಿಸಿದ್ದರು. ಈ ವೇಳೆ ದರ್ಶನ್‌ಗೆ ಯಾಕೆ ಜಾಮೀನು ನೀಡಬೇಕೆಂದು ಹಿರಿಯ ವಕೀಲರಾದ ಸಿ ವಿ ನಾಗೇಶ್ ಪ್ರಬಲ ವಾದ ಮಂಡಿಸಿದ್ದರೆ, ಅತ್ತ ಯಾಕೆ ಕೊಡಬಾರದೆಂದು ಎಸ್‌ಪಿಪಿ ಪ್ರಸನ್ನ ಕುಮಾರ್ ಕೂಡ ಅಷ್ಟೇ ಪ್ರಬಲವಾಗಿ ಪ್ರತಿವಾದ ಮಾಡಿದ್ದರು. ಇಬ್ಬರ ಹಿರಿಯ ವಕೀಲರ ವಾದ-ಪ್ರತಿವಾದವನ್ನು ಆಲಿಸಿದ ಬಳಿಕ 57ನೇ ಸಿಸಿಎಚ್ ಕೋರ್ಟ್ ಜಾಮೀನು ನೀಡಲು ನಿರಾಕರಿಸಿತ್ತು.
ಸೆಷನ್ಸ್ ಕೋರ್ಟ್‌ನಲ್ಲಿ ಜಾಮೀನು ಸಿಗದ ಹಿನ್ನೆಲೆಯಲ್ಲಿ ದರ್ಶನ್ ಪರ ವಕೀಲರು ಈಗ ಹೈ ಕೋರ್ಟ್ ಮೊರೆ ಹೋಗಿದ್ದಾರೆ. ಇಲ್ಲಿ ನಿರೀಕ್ಷೆ ಮಾಡಿದಷ್ಟು ಬೇಗ ಜಾಮೀನು ಸಿಗುವುದು ಅನುಮಾನ ಎನ್ನಲಾಗುತ್ತಿದೆ. ದರ್ಶನ್ ಜಾಮೀನು ಅರ್ಜಿ ವಿಚಾರಣೆಗೆ ಬರುವುದಕ್ಕೆ ಇನ್ನೂ ಒಂದು ವಾರ ಬೇಕಾಗಬಹುದು. ಮುಂಬರುವ ಸೋಮವಾರ ದರ್ಶನ್ ಅರ್ಜಿ ವಿಚಾರಣೆ ಬರಬಹುದು ಎಂಬ ನಿರೀಕ್ಷೆಯಿದೆ. ಅಲ್ಲಿಂದ ಮತ್ತೆ ವಾದ-ಪ್ರತಿವಾದ ಎರಡೂ ನಡೆದ ಬಳಿಕ ಹೈಕೋರ್ಟ್‌ನ ನ್ಯಾಯಾಧೀಶರು ಜಾಮೀನು ನೀಡುವ ಬಗ್ಗೆ ಆಲೋಚನೆ ಮಾಡುತ್ತಾರೆ.
ಸದ್ಯ ಈ ಎಲ್ಲಾ ಪ್ರಕ್ರಿಯೆಗಳಿಗೆ ಇನ್ನೂ ಎರಡು ಮೂರು ವಾರ ತೆಗೆದುಕೊಳ್ಳಬಹುದು ಎಂದು ಕಾನೂನು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಅದೇ ಒಂದು ವೇಳೆ ದರ್ಶನ್ ಆರೋಗ್ಯದ ಹಿನ್ನೆಲೆಯಲ್ಲಿ ಜಾಮೀನು ಮನವಿ ಮಾಡಲು ಮುಂದಾದರೆ, ನ್ಯಾಯಾಧೀಶರು ಹೇಗೆ ಪರಿಗಣಿಸುತ್ತಾರೆ ಅನ್ನೋದನ್ನು ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ. ಸದ್ಯಕ್ಕಂತೂ ದರ್ಶನ್‌ಗೆ ದೀಪಾವಳಿ ಹಬ್ಬಕ್ಕೂ ಮುನ್ನ ಜಾಮೀನು ಸಿಗುವುದು ಅನುಮಾನ ಎಂದೇ ಹೇಳಲಾಗಿದೆ.


Click it and Unblock the Notifications











