ದರ್ಶನ್ - ಪವಿತ್ರಾ ಗೌಡ ಇಬ್ಬರಿಗೂ ಒಂದೇ ದಿನ ಜಾಮೀನು? ಏನಿದು ಲೆಕ್ಕಚಾರ?
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ 17 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಸದ್ಯ ಪೊಲೀಸರು ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಪವಿತ್ರಾ ಗೌಡ ಎ 1 ಆಗಿದ್ದರೆ, ದರ್ಶನ್ ಎ 2 ಆಗಿ ಮಾಡಲಾಗಿದೆ. ಪವಿತ್ರಾ ಗೌಡ ಜಾಮೀನು ಅರ್ಜಿ ಸಲ್ಲಿಸಿದ ಹಲವು ದಿನಗಳ ಬಳಿಕ ದರ್ಶನ್ ಬೇಲ್ ಅಪ್ಲಿಕೇಷನ್ ಹಾಕಿದ್ದರು. ಸದ್ಯ ದರ್ಶನ್‌ಗೆ ಬೇಲ್ ಸಿಗುತ್ತೋ ಇಲ್ಲವೋ ಅನ್ನೋ ಕುತೂಹಲವಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ಮೂವರಿಗೆ ನ್ಯಾಯಾಲಯ ಜಾಮೀನನ್ನು ಮಂಜೂರು ಮಾಡಿದೆ. ಇಂದು (ಸೆಪ್ಟೆಂಬರ್ 25) ಮತ್ತೆ ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ ಮಾಡಲಾಗಿತ್ತು. ನ್ಯಾಯಾಲಯ ಮತ್ತೆ ಎ 1 ಆರೋಪಿಯ ಜಾಮೀನು ಅರ್ಜಿಯನ್ನು 27ಕ್ಕೆ ಮುಂದೂಡಿದೆ.

ಇದೆ ಸೆಪ್ಟೆಂಬರ್ 27ರಂದು ದರ್ಶನ್ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ಕೂಡ ನಡೆಯಲಿದೆ. ಈ ಕಾರಣಕ್ಕೆ ಒಂದೇ ದಿನ ಪವಿತ್ರಾ ಗೌಡ ಹಾಗೂ ದರ್ಶನ್ ಇಬ್ಬರಿಗೂ ಜಾಮೀನು ಸಿಗಬಹುದೆಂಬ ಲೆಕ್ಕಾಚಾರ ಹಾಕಲಾಗುತ್ತಿದೆ. ಇತ್ತ ದರ್ಶನ್ ಕೂಡ ಇಂದು (ಸೆಪ್ಟೆಂಬರ್ 25) ಖುಷಿಯಾಗಿದ್ದರು. ಇಷ್ಟು ದಿನಗಳ ಬಳಿಕ ಅವರ ನಗು ಮುಖ ಮಾಧ್ಯಮಗಳ ಕ್ಯಾಮರಾದಲ್ಲಿ ಸೆರೆಯಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ ಇಂದು (ಸೆಪ್ಟೆಂಬರ್ 25) ನಿಗದಿಯಾಗಿತ್ತು. ಇಂದೇ ಪವಿತ್ರಾ ಗೌಡ ಜಾಮೀನಿನ ಭವಿಷ್ಯ ನಿರ್ಧಾರ ಆಗಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಪವಿತ್ರಾ ಗೌಡ ಜಾಮೀನಿಗೆ ಆಕ್ಷೇಪಣೆ ಸಲ್ಲಿಸಲು ಎಸ್‌ಪಿಪಿ ಕಾಲಾವಕಾಶ ಕೇಳಿದ್ದರಿಂದ ಬೆಂಗಳೂರಿನ 57ನೇ ಸಿಟಿ ಸಿವಿಲ್ ಕೋರ್ಟ್ ಇನ್ನೂ ಎರಡು ದಿನಕ್ಕೆ ಅಂದರೆ ಸೆಪ್ಟೆಂಬರ್ 27ಕ್ಕೆ ಮುಂದೂಡಿ ಆದೇಶ ಹೊರಡಿಸಲಾಗಿದೆ.

ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ ಮುಂದೂಡುತ್ತಿದ್ದಂತೆ ದರ್ಶನ್ ಪಾಳೆಯದಲ್ಲಿ ಹೊಸ ಲೆಕ್ಕಾಚಾರ ಶುರುವಾಗಿದೆ. ದರ್ಶನ್ ಹಾಗೂ ಪವಿತ್ರಾ ಗೌಡ ಇಬ್ಬರಿಗೂ ಒಂದೇ ದಿನ ಜಾಮೀನು ಸಿಗಬಹುದು ಎಂದು ಲೆಕ್ಕ ಹಾಕುತ್ತಿದ್ದಾರೆ. ಇತ್ತ ದರ್ಶನ್ ಪರ ವಕೀಲರು ಕೂಡ ಜಾಮೀನು ಸಿಗುವ ಬಗ್ಗೆ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಈ ಬೆನ್ನಲ್ಲೇ ಒಂದೇ ದಿನ ದರ್ಶನ್ ಹಾಗೂ ಪವಿತ್ರಾ ಗೌಡ ಒಟ್ಟಿಗೆ ಜೈಲಿನಿಂದ ಹೊರಬರಬಹುದೆಂಬ ನಿರೀಕ್ಷೆಯಲ್ಲಿದ್ದಾರೆ.
ಇತ್ತ ಇನ್ನೊಂದು ವಿಷಯ ದರ್ಶನ್ ಆಪ್ತರ ಆತಂಕಕ್ಕೆ ಕಾರಣವಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 30 ರಿಂದ 50 ಲಕ್ಷ ರೂಪಾಯಿ ಬಳಕೆಯಾಗಿದೆ ಎನ್ನಲಾಗಿದೆ. ಹೀಗಾಗಿ ಈ ಹಣ ಎಲ್ಲಿಂದ ಬಂತು ಅಂತ ಐಟಿ ಅಧಿಕಾರಿಗಳು ದರ್ಶನ್‌ರನ್ನು ಬಳ್ಳಾರಿ ಜೈಲಿನಲ್ಲಿ ವಿಚಾರಣೆ ಮಾಡಲಿದ್ದಾರೆ ಎನ್ನಲಾಗಿದೆ. ಐಟಿ ಮ್ಯಾಟರ್ ದರ್ಶನ್‌ಗೆ ಕಂಟಕ ಆಗಬಹುದಾ? ಎಂಬ ಪ್ರಶ್ನೆ ಕೂಡ ಎದ್ದಿದೆ.
ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 15ನೇ ಆರೋಪಿಯಾಗಿರುವ ಕಾರ್ತಿಕ್, 17ನೇ ಆರೋಪಿಯಾಗಿರುವ ನಿಖಿಲ್‌ಗೆ 57ನೇ ಸಿಸಿಎಚ್ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಸೆಪ್ಟೆಂಬರ್ 23ರಂದೇ ಆರೋಪಿ ನಂ 16 ಕೇಶವಮೂರ್ತಿಗೂ ಹೈಕೋರ್ಟ್ ಜಾಮೀನನ್ನು ನೀಡಿದೆ. ಸದ್ಯಕ್ಕೀಗ ಸೆಪ್ಟೆಂಬರ್ 27ರಂದು ದರ್ಶನ್ ಹಾಗೂ ಪವಿತ್ರಾ ಗೌಡ ಜಾಮೀನು ಸಿಗುತ್ತಾ? ಅನ್ನೋ ಕುತೂಹಲ ಮನೆ ಮಾಡಿದೆ.


Click it and Unblock the Notifications











