ನಮ್ಮ ಬೆಳವಣಿಗೆ ನೋಡಿ ಉರ್ಕೊಳ್ಳೊರ ಕಣ್ ಕಿತ್ಕೊಂಡ್ ಬಿಡಿ 'ಕಾಟೇರಮ್ಮ'; ದರ್ಶನ್ ಫ್ಯಾನ್ಸ್ ಕಿಡಿ
'ಕಾಟೇರ' ಸಿನಿಮಾ ಸೂಪರ್ ಸಕ್ಸಸ್ ಕಂಡ ಬೆನ್ನಲ್ಲಿ ದರ್ಶನ್ ತಡರಾತ್ರಿವರೆಗೂ ಪಾರ್ಟಿ ಮಾಡಿದ್ದರು ಎಂಬ ಆರೋಪ ಎದುರಿಸುತ್ತಿದ್ದಾರೆ. ದರ್ಶನ್ ಜೊತೆ ಧನಂಜಯ್, ಅಭಿಷೇಕ್ ಅಂಬರೀಶ್, ಚಿಕ್ಕಣ್ಣ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಚಿತ್ರರಂಗದ ಸೆಲೆಬ್ರೆಟಿಗಳಿಗೆ ನೋಟಿಸ್ ನೀಡಲಾಗಿತ್ತು.
ಈ ಸಂಬಂಧ ವಿಚಾರಣೆಗೆ ನಟ ದರ್ಶನ್ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಗೆ ಭೇಟಿ ಕೊಟ್ಟಿದ್ದಾರೆ. ಬೆಂಗಳೂರಿನ ಪಬ್‌ನಲ್ಲಿ ಮಧ್ಯರಾತ್ರಿಯವರೆಗೂ ಅವಧಿ ಮೀರಿ ಪಾರ್ಟಿ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ದರ್ಶನ್ 'ಕಾಟೇರ' ಸಿನಿಮಾದ ಪ್ರಚಾರದಲ್ಲಿ ದುಬೈ ಪ್ರವಾಸದಲ್ಲಿ ಇದ್ದಿದ್ದರಿಂದ ಇಂದು (ಜನವರಿ 12) ಪೊಲೀಸರ ವಿಚಾರಣೆಯಲ್ಲಿ ಭಾಗಿಯಾಗಿದ್ದಾರೆ.

ದರ್ಶನ್ ಪೊಲೀಸ್ ಠಾಣೆಗೆ ಆಗಮಿಸುತ್ತಿರುವ ವಿಷಯ ತಿಳಿದು ಅಪಾರ ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ಜಮಾಯಿಸಿದ್ದರು. ದರ್ಶನ್ ಠಾಣೆಗೆ ಎಂಟ್ರಿ ಕೊಡುತ್ತಿದ್ದಂತೆ ಫ್ಯಾನ್ಸ್ ಜೈಕಾರ ಹಾಕಿದ್ದಾರೆ. ಇದೇ ವೇಳೆ ತಮ್ಮ ನೆಚ್ಚಿನ ನಟನ ವಿರುದ್ಧ ಪಿತೂರಿ ಮಾಡುತ್ತಿದ್ದಾರೆ. "ನಮ್ ಬಾಸ್‌ನ ಸುಮ್ಸುಮ್ನೆ ಕೆಣಕಿಕೊಂಡು ಬಂದಿದ್ದಾರೆ. ಹೀಗೆ ಕೆಣಕಿಕೊಂಡು ಬರೋದನ್ನು ನಿಲ್ಲಿಸಿ. ಏನಿಲ್ಲ ಅಂದ್ರೂ 2 ಸಾವಿರ ಮಂದಿ ಬಂದಿದ್ದೀವಿ. ಮುಂದೆ ಲಕ್ಷಾಂತರ ಜನ ಬಗ್ಗೆ ಪ್ರತಿಭಟನೆ ಮಾಡಬೇಕಾಗುತ್ತೆ" ಅಂತ ದರ್ಶನ್ ಫ್ಯಾನ್ಸ್ ವಾರ್ನಿಂಗ್ ಕೊಟ್ಟಿದ್ದಾರೆ.
"ಕಣ್ ಕಿತ್ಕೊಂಡ್ ಬಿಡಿ 'ಕಾಟೇರಮ್ಮ"
ಹಾಗೇ ಸೋಶಿಯಲ್ ಮೀಡಿಯಾದಲ್ಲೂ ದರ್ಶನ್ ಫ್ಯಾನ್ಸ್ ಆಕ್ರೋಶ ಹೊರ ಹಾಕಿದ್ದಾರೆ. "ನಮ್ ತಾಳ್ಮೆ ಪರೀಕ್ಷೆ ಮಾಡಿದ್ರೆ, ಏನ್ ಆಗುತ್ತೆ ಅಂತ ಇನ್ಮೇಲೆ ಉತ್ತರ ಕೊಡ್ತೀವಿ. ಹಿಂದೆ ನಿಂತ್ಕೊಂಡು ಆಟ ಆಡೋರು ಊರ್ ಬಿಡ್ರೊ, ಈಗ್ಲೇ ನಿಮ್ಗಳ Time ಹತ್ರ ಬಂದಿದೆ. ಸುಬ್ರಹ್ಮಣ್ಯ ಪೋಲಿಸ್ ಠಾಣೆಗೆ ಬಾಸ್ ಅಭಿಮಾನಿಗಳು ಮುತ್ತಿಗೆ ಹಾಕಿದ್ದಾರೆ." ಎಂದು ಒಬ್ಬ ಅಭಿಮಾನಿ ಖಾರವಾಗಿ ಕಮೆಂಟ್ ಮಾಡಿದ್ದಾರೆ.

ಅದೇ ಮತ್ತೊಬ್ಬರ ಅಭಿಮಾನಿ "ದೇವರೇ ನಮ್ಮ ಬೆಳವಣಿಗೆ ನೋಡಿ ಉರ್ಕೊಳ್ಳೊರಿಗೆ ಕಣ್ ಕಿತ್ಕೊಂಡ್ ಬಿಡಿ ಅಮ್ಮ ಕಾಟೇರಮ್ಮ. ಎಷ್ಟೇ ಕಷ್ಟ ಬಂದರೂ ಬಾಸ್ ನಿಮ್ಮ ಹಿಂದೆ ನಾವಿದ್ದೇವೆ. ಇದೆಲ್ಲ ನಮ್ಮ ಬೆಳವಣಿಗೆ ನೋಡಿ ಹೊಟ್ಟೆ ಉರಿ. ಅದಕ್ಕೆ ಹೀಗೆಲ್ಲ ಮಾಡಿರಬಹುದು ಅಂತ ಅನಿಸಿಕೆ." ಅಂತ ಇನ್ನೊಬ್ಬ ಅಭಿಮಾನಿ ಆಕ್ರೋಶ ಹೊರಹಾಕಿದ್ದಾರೆ.
ರಾಕ್‌ಲೈನ್ ವೆಂಕಟೇಶ್ ಆಕ್ರೋಶ
ದರ್ಶನ್, ಧನಂಜಯ್, ನೀನಾಸಂ ಸತೀಶ್, ಅಭಿಷೇಕ್ ಅಂಬರೀಶ್, ಚಿಕ್ಕಣ್ಣ ಜೊತೆ ಸುಬ್ರಮಣ್ಯನಗರ ಪೊಲೀಸ್ ಠಾಣೆಗೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಆಗಮಿಸಿದ್ದರು. ಪೊಲೀಸರ ವಿಚಾರಣೆಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ದರ್ಶನ್ ಅವರನ್ನು ಬೇಕಂತಲೇ ಟಾರ್ಗೆಟ್ ಮಾಡಲಾಗುತ್ತಿದೆ. ಈ ವಿಷಯವನ್ನು ಉದ್ದೇಶ ಪೂರ್ವಕವಾಗಿ ದೊಡ್ಡದು ಮಾಡಲಾಗುತ್ತಿದೆ ಎಂದು ರಾಕ್‌ಲೈನ್ ಆಕ್ರೋಶ ಹೊರಹಾಕಿದ್ದಾರೆ.
"ನಾವು ತಡರಾತ್ರಿ ಪಾರ್ಟಿ ಮಾಡಿಲ್ಲ. ಎಷ್ಟೋ ಬಾರ್‌ಗಳು ತಡರಾತ್ರಿವರೆಗೂ ಓಪನ್ ಇರುತ್ತವೆ. ಆದರೆ, ಈವರೆಗೂ ಯಾವುದೇ ಗ್ರಾಹಕನಿಗೆ ಹೀಗೆ ನೋಟಿಸ್ ಕೊಟ್ಟಿಲ್ಲ. ಸಾಮಾನ್ಯರಿಗೂ ಒಂದೇ ಕಾನೂನು ಸೆಲೆಬ್ರಿಟಿಗಳಿಗೂ ಒಂದೇ ಕಾನೂನು" ಎಂದು ರಾಕ್ ಲೈನ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.


Click it and Unblock the Notifications











