"25ನೇ ಸಿನಿಮಾ ಭೂಪತಿ ಮ್ಯಾಟನಿ ಶೋಗೆ ಬಿದ್ದು ಹೋಯ್ತು": ಸೋಲು ಎಂದವ್ರಿಗೆ ದರ್ಶನ್ 'ಕ್ರಾಂತಿ'
ದರ್ಶನ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ 'ಕ್ರಾಂತಿ' ಮಾಡಿತೇ? ಸಿನಿಮಾ ತಂಡನೇ ಅಧಿಕೃತ ಮಾಹಿತಿ ನೀಡಿದರೂ, ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಒಪ್ಪಿಕೊಳ್ಳುತ್ತಿಲ್ಲ. ಈ ಕಾರಣಕ್ಕೆ ದರ್ಶನ್ ಅಂತಹವರಿಗೆ ಸಕ್ಸಸ್ ಸಂಭ್ರಮದಲ್ಲಿ ಟಾಂಗ್ ಕೊಟ್ಟಿದ್ದಾರೆ.
ಈಗಾಗಲೇ ಚಿತ್ರತಂಡ 'ಕ್ರಾಂತಿ' ಸಿನಿಮಾ 109 ಕೋಟಿ ರೂ. ಬ್ಯುಸಿನೆಸ್ ಮಾಡಿದೆ ಎಂದು ಅಧಿಕೃತ ಮಾಹಿತಿ ನೀಡಿದೆ. ಸಕ್ಸಸ್ ಮೀಟ್‌ನಲ್ಲಿ 109 ಸಂಖ್ಯೆಯ ಕೇಕ್ ಕಟ್ ಮಾಡಿರುವುದೇ ಸಾಕ್ಷಿ. ಹೀಗಾಗಿ ದರ್ಶನ್ ಸೇರಿದಂತೆ ಇಡೀ ತಂಡ ಈ ಸಂಭ್ರಮದಲ್ಲಿ ಮುಳುಗಿ ಎದ್ದಿದೆ.
ಇದೇ ವೇಳೆ ದರ್ಶನ್ ಸಿನಿಮಾ ಗೆದ್ದಿಲ್ಲ ಎಂದವರಿಗೆ ತಿರುಗೇಟು ನೀಡಿದ್ದಾರೆ. ತಮ್ಮದೇ 25ನೇ ಸಿನಿಮಾ ಸೋಲಿನ ಉದಾಹರಣೆ ನೀಡಿ, 'ಕ್ರಾಂತಿ' ಸಕ್ಸಸ್ ರುಚಿ ತೋರಿಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ಸಕ್ಸಸ್ ಮೀಟ್‌ನಲ್ಲಿ 'ಕ್ರಾಂತಿ' ಗೆಲುವಿನ ಬಗ್ಗೆ ಏನು ಹೇಳಿದ್ದಾರೆ? ಅನ್ನೋದರ ಝಲಕ್ ಇಲ್ಲಿದೆ.

ಕುದುರೆ ಕುಂಟುತ್ತಿದ್ರೆ, ಕಾಲು ಸರಿ ಮಾಡಬಹುದು
'ಕ್ರಾಂತಿ' ಸಕ್ಸಸ್ ಮೀಟ್‌ನಲ್ಲಿ ಸಿನಿಮಾ ಗೆಲ್ಲುತ್ತೋ, ಸೋಲುತ್ತೋ ಅನ್ನೋದನ್ನು ಬಿಡುಗಡೆಯಾದ ಮೊದಲ ಶೋನಲ್ಲೇ ಹೇಳಬಹುದು ಅಂತ ದರ್ಶನ್ ಉದಾಹರಣೆ ಕೊಟ್ಟು ವಿವರಿಸಿದ್ದಾರೆ. "ಒಂದು ಹಿಟ್ ಒಂದು ಫ್ಲಾಪ್ ಮಾರ್ನಿಂಗ್ ಶೋನಲ್ಲಿ ಗೊತ್ತಾಗುತ್ತೆ. ಅದು ಕುದುರೆ ಓಡುತ್ತೋ.. ಓಡಲ್ವೋ? ಅಪ್ಪಿ ತಪ್ಪಿ ಸ್ವಲ್ಪ ಕುಂಟುತ್ತಿದ್ದರೂ ಓಕೆ. ಆ ಕಾಲನ್ನು ಸರಿ ಮಾಡಬಹುದು ಅಂದ್ಕೊಳ್ಳಬಹುದು. ಅಪ್ಪಿ ತಪ್ಪಿ ಸತ್ತು ಹೋದರೆ ಸಮಯ ವ್ಯರ್ಥ ಅಷ್ಟೇ. ಇವತ್ತೂ ಕೂಡ ಇಲ್ಲಿ ಕೂರುತ್ತಿರಲಿಲ್ಲ ನಾವು." ಎಂದಿದ್ದಾರೆ.

'ಭೂಪತಿ,ಮ್ಯಾಟನಿ ಶೋಗೆ ಬಿದ್ದು ಹೋಯ್ತು'
" ನನ್ನದು 25ನೇ ಸಿನಿಮಾ ಭೂಪತಿ. ಫಸ್ಟ್ ಶೋ ಟಕ್ ಅಂತ ಎದ್ದೇಳಿತು. ಮಾರ್ನಿಂಗ್ ಶೋ ಇರಲಿ. ಮ್ಯಾಟನಿ ಶೋಗೆ ಬಿದ್ದು ಹೋಯ್ತು. ಅವತ್ತೇನು ಮಾಡ್ಲಿಲ್ವಲ್ಲ. ಸೋಲು ಸೋಲೇ ಒಪ್ಪಿಕೊಳ್ಳೋಣ. ಸಕ್ಸಸ್ ಆದಾಗ ತೋರಿಸೋಣ. ಸಕ್ಸಸ್ ಆದಾಗಲೇ ನಾವು ಬಂದು ಇಲ್ಲಿ ಕೂತುಕೊಳ್ಳೋದು." ಎಂದು ತಮ್ಮದೇ ಸಿನಿಮಾವನ್ನು ಉದಾಹರಣೆ ಕೊಟ್ಟು 'ಕ್ರಾಂತಿ' ಸಕ್ಸಸ್ ಬಗ್ಗೆ ವಿವರಿಸಿದ್ದಾರೆ.

ಎಲ್ಲಾ ಫ್ಯಾಮಿಲಿಗಳಿಗೂ ಥ್ಯಾಂಕ್ಸ್
"ಈ ಖರ್ಚು ಯಾಕಮ್ಮ. ರೂಮ್ ರೆಂಟು. ಇಷ್ಟು ಜನ ಆರ್ಟಿಸ್ಟು. ಸುಮ್ಸುಮ್ನೆ ಹೊಗಳಿಕೊಳ್ಳೋಕೆ ನಮಗೇನು ನಾಯಿ ಕಚ್ಚಿದೆಯಾ? ಜನರು ರಿವ್ಯೂ ಕೊಟ್ಟಿದ್ದನ್ನು ಬಂದು ನಾವು ನೋಡುತ್ತಿದ್ದೇವೆ. ಇವತ್ತು ಎಷ್ಟು ಫ್ಯಾಮಿಲಿಗಳು ನೋಡುತ್ತಿವೆ. ಬಹಳ ದಿನಗಳ ಬಳಿಕ ಒಂದಿಷ್ಟು ಕುಟುಂಬಗಳು ಬಂದು ಸಿನಿಮಾ ನೋಡಿ ಒಳ್ಳೆ ವಿಮರ್ಶೆ ಕೊಡುತ್ತಿವೆ. ಆ ಎಲ್ಲಾ ಫ್ಯಾಮಿಲಿಗಳಿಗೂ ಥ್ಯಾಂಕ್ಸ್ ಅಂತ ಹೇಳುತ್ತೇವೆ." ಎಂದು ಪ್ರೇಕ್ಷಕರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಕೇಕ್ ಕತ್ತರಿಸಿ ಸಂಭ್ರಮ
ಸಿನಿಮಾ ಗೆದ್ದಾಗ ಇಡೀ ಚಿತ್ರತಂಡವನ್ನು ಕರೆಸಿ ಸಂಭ್ರಮಿಸುವ ಪದ್ಧತಿ ಮೊದಲಿನಿಂದಲೂ ದರ್ಶನ್ ಮಾಡಿಕೊಂಡು ಬಂದಿದ್ದಾರೆ. 'ಕ್ರಾಂತಿ' ಸಿನಿಮಾಗೂ ಕೂಡ ಅದೇ ಪರಿಪಾಠ ಮುಂದುವರೆದಿದೆ. ಈ ಸಂಭ್ರಮದಲ್ಲಿ ದರ್ಶನ್ ತಮ್ಮ ಇಡೀ ತಂಡದೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿ ಖುಷಿ ಪಟ್ಟಿದ್ದಾರೆ. ಕಲಾವಿದರು, ತಂತ್ರಜ್ಞರು ಸೇರಿದಂತೆ ಇಡೀ ತಂಡ ಭಾಗವಹಿಸಿತ್ತು.


Click it and Unblock the Notifications











