ಬಿಡುಗಡೆಗೆ ಮುನ್ನವೇ 'ರಾಬರ್ಟ್' ಅಬ್ಬರ: ಹೊಸ ಇತಿಹಾಸ ಸೃಷ್ಟಿ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ರಾಬರ್ಟ್' ಚಿತ್ರ ಬಿಡುಗಡೆಗೂ ಮುನ್ನ ದಾಖಲೆ ನಿರ್ಮಿಸಿದೆ ಎನ್ನಲಾಗಿದೆ. ಬಿಡುಗಡೆಗೂ ಮುನ್ನವೇ 'ರಾಬರ್ಟ್' ಭಾರಿ ಮೊತ್ತಕ್ಕೆ ಮಾರಾಟವಾಗಿದ್ದು, ಚಿತ್ರರಂಗದಲ್ಲಿಯೇ ಇತಿಹಾಸ ನಿರ್ಮಿಸಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ನೀಡಿಲ್ಲ.
ಬಹುನಿರೀಕ್ಷೆಯ 'ರಾಬರ್ಟ್' ಏಪ್ರಿಲ್ 9 ಎಂದು ಬಿಡುಗಡೆಯಾಗಲು ಸಿದ್ಧವಾಗಿದೆ. 'ಡಿ ಬಾಸ್' ನಟನೆಯ ಚಿತ್ರದ ಮೊದಲ ಹಾಡು 'ಬಾ ಬಾ ಬಾ ನಾ ರೆಡಿ' ಈಗಾಗಲೇ ಧೂಳೆಬ್ಬಿಸಿದೆ. ಬಿಡುಗಡೆಯಾದ ಮೂರೇ ದಿನದಲ್ಲಿ 16 ಲಕ್ಷಕ್ಕು ಹೆಚ್ಚು ವ್ಯೂವ್ಸ್‌ಗಳನ್ನು ಪಡೆದುಕೊಂಡಿದೆ.
ಅರ್ಜುನ್ ಜನ್ಯ ಸಂಗೀತ ನಿರ್ದೇಶನದಲ್ಲಿ ನಾಗೇಂದ್ರ ಪ್ರಸಾದ್ ಬರೆದಿರುವ ಹಾಡು ದರ್ಶನ್ ಅಭಿಮಾನಿಗಳಿಗೆ ಹೊಸ ಕಿಕ್ ನೀಡಿದೆ. ದರ್ಶನ್ ಫ್ಯಾನ್ ಪುಟಗಳಲ್ಲಿ 'ರಾಬರ್ಟ್' ಹಾಡಿನ ಗುಣಗಾನವೇ ತುಂಬಿದೆ. ಕಾತರದಿಂದ ಕಾಯುತ್ತಿರುವ 'ರಾಬರ್ಟ್' ಚಿತ್ರ ಅಭಿಮಾನಿಗಳಿಗೆ ಮುಂದಿನ ತಿಂಗಳು ಹಬ್ಬದ ವಾತಾವರಣ ನಿರ್ಮಿಸುವುದರಲ್ಲಿ ಅನುಮಾನವಿಲ್ಲ. ಈ ನಡುವೆ 'ರಾಬರ್ಟ್' ಈಗಲೇ ಗೆಲುವಿನ ಹಾದಿ ತುಳಿದಿದೆ.

ಎಲ್ಲ ದಾಖಲೆಗಳು ಉಡೀಸ್
ದೊಡ್ಡ ನಟರ ಸಿನಿಮಾಗಳು ಬಿಡುಗಡೆಗೂ ಮುನ್ನವೇ ಭರ್ಜರಿ ವ್ಯಾಪಾರ ನಡೆಸುವುದು ಹೊಸದಲ್ಲ. ಆದರೆ ರಾಬರ್ಟ್ ಈ ಹಿಂದಿನ ಎಲ್ಲ ದಾಖಲೆಗಳನ್ನೂ ಮುರಿದು, ಕನ್ನಡದಲ್ಲಿಯೇ ಹೊಸ ದಾಖಲೆ ನಿರ್ಮಿಸಿದೆ ಎನ್ನಲಾಗಿದೆ.

67 ಕೋಟಿ ರೂ ಗಳಿಕೆ?
ಚಿತ್ರಮಂದಿರದ ಹಕ್ಕು 35 ಕೋಟಿ, ಡಿಜಿಟಲ್, ಆಡಿಯೋ ಹಕ್ಕು ಸೇರಿದಂತೆ ಇನ್ನಿತರೆ ಹಕ್ಕುಗಳ ಮಾರಾಟದಿಂದ 32 ಕೋಟಿ ರೂ. ಮೊತ್ತವನ್ನು ರಾಬರ್ಟ್ ಈಗಾಗಲೇ ಬಾಚಿಕೊಂಡಿದೆ. ಒಟ್ಟು 67 ಕೋಟಿ ರೂ.ಗೆ. ರಾಬರ್ಟ್ ಮಾರಾಟವಾಗಿದೆ ಎಂದು ಹೇಳಲಾಗಿದೆ.

ದಾಖಲೆ ನಿರ್ಮಾಣ
ಆಡಿಯೋ ಕಂಪೆನಿಯೊಂದು ಐದು ಕೋಟಿ ರೂ.ಗೆ ಹಾಡುಗಳ ಹಕ್ಕು ಖರೀದಿಸಲು ಮುಂದಾಗಿದೆ ಎನ್ನಲಾಗಿದೆ. ಈ ಮೂಲಕ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಬಿಡುಗಡೆಗೂ ಮುನ್ನ 50 ಕೋಟಿ ರೂ. ವ್ಯವಹಾರ ನಡೆಸಿದ ಮೊದಲ ಚಿತ್ರ ಎಂಬ ಖ್ಯಾತಿಗೆ 'ರಾಬರ್ಟ್' ಪಾತ್ರವಾಗಿದೆ.

ತೆಲುಗಿನಲ್ಲಿಯೂ ರಾಬರ್ಟ್ ಹವಾ
'ರಾಬರ್ಟ್' ಚಿತ್ರವನ್ನು ಕನ್ನಡದ ಜತೆಗೆ ತೆಲುಗಿನಲ್ಲಿಯೂ ಏಕಕಾಲದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ. ಇದರ ಡಬ್ಬಿಂಗ್ ರೈಟ್ಸ್ ಕೂಡ ಭರ್ಜರಿ ವ್ಯವಹಾರ ಕುದುರಿಸುತ್ತಿದ್ದು, ಬಿಡುಗಡೆಯಾದ ಬಳಿಕ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆ ಮಾಡುವ ನಿರೀಕ್ಷೆ ಹುಟ್ಟುಹಾಕಿದೆ.


Click it and Unblock the Notifications











