"A ಶೂಟಿಂಗ್ ಮಾಡ್ತಿದ್ದಿದ್ದು ನೋಡಿ ನಿರ್ಮಾಪಕರಿಗೆ ಈ ಸಿನಿಮಾ ಪ್ಲಾಪ್ ಆಗುತ್ತೆ ಅಂತ ಹೇಳಿಲ್ಲ ಅಷ್ಟೇ"; ಚಾಂದಿನಿ
ಉಪೇಂದ್ರ ನಿರ್ದೇಶಿಸಿದ ಸಿನಿಮಾಗಳಿಗೆ ಅವರದ್ದೇ ಆದ ಫ್ಯಾನ್ ಫಾಲೋವಿಂಗ್ ಇದೆ. ಉಪ್ಪಿ ಆಕ್ಷನ್ ಕಟ್ ಹೇಳುತ್ತಿದ್ದಾರೆ ಅಂದ್ರೆ, ಆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುವ ರೇಂಜ್ ಬೇರೆನೇ ಇರುತ್ತೆ. ಇನ್ನು ಉಪೇಂದ್ರ ಹೀರೊ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಡಬೇಕು ಅಂತ ನಿರ್ಧರಿಸಿದ್ದ ಆಯ್ಕೆ ಮಾಡಿಕೊಂಡ ಸಿನಿಮಾ ಕೂಡ ಅಷ್ಟೇ ಡಿಫ್ರೆಂಟ್ ಆಗಿತ್ತು.
'ಎ' ಸಿನಿಮಾ ಮೊದಲು ರಿಲೀಸ್ ಆಗಿ 26 ವರ್ಷಗಳು ಕಳೆದಿವೆ. ಈ ಸಿನಿಮಾ ಇಂದಿಗೂ ಕನ್ನಡ ಚಿತ್ರರಂಗದ ಎವರ್‌ಗ್ರೀನ್ ಸಿನಿಮಾಗಳಲ್ಲೊಂದು. ಮತ್ತೆ 'ಎ' ರೀ ರಿಲೀಸ್ ಆದಾಗಲೂ ಅಷ್ಟೇ ರೆಸ್ಪಾನ್ಸ್ ಸಿಕ್ಕಿದೆ. ಇದೇ ಖುಷಿಯಲ್ಲಿ ಇಡೀ ಟೀಮ್ ಒಟ್ಟಿಗೆ ಸೇರಿ ಸಂತಸವನ್ನು ಹಂಚಿಕೊಂಡಿದೆ. ಈ ವೇಳೆ ನಾಯಕಿ ಚಾಂದಿನಿ ಕೂಡ ತಮ್ಮ ಅನುಭವಗಳನ್ನು ಶೇರ್ ಮಾಡಿದ್ದಾರೆ.

ಚಾಂದಿನಿಗೆ 'ಎ' ಮೊದಲ ಸಿನಿಮಾ. ಚಾಂದಿನಿ ಫೋಟೊ ನೋಡಿ ಉಪ್ಪಿ ಇವರೇ ನಾಯಕಿ ಅಂತ ಡಿಸೈಡ್ ಮಾಡಿದ್ದರು. ಇತ್ತ ಸಿನಿಮಾ ಬಗ್ಗೆ ಗಂಧ ಗಾಳಿನೇ ಗೊತ್ತಿರದ ಚಾಂದಿನಿ 'ಎ'ನಲ್ಲಿ ನಟಿಸುವುದಕ್ಕೆ ಶುರು ಮಾಡಿದಾಗ ಅವರಿಗಾದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಉಪ್ಪಿ ಮೇಕಿಂಗ್ ಶೈಲಿಗೆ ಈ ಸಿನಿಮಾ ಅಟ್ಟರ್ ಪ್ಲಾಪ್ ಆಗುತ್ತೆ ಅಂತ ಅಂದುಕೊಂಡಿದ್ದನ್ನು ನೆನೆಪಿಸಿಕೊಂಡಿದ್ದಾರೆ.
'ಎ' ಸಿನಿಮಾಗೆ ಆಯ್ಕೆ ಆಗುವಾಗ ಚಾಂದಿನಿ ನ್ಯೂಯಾರ್ಕ್‌ನಲ್ಲಿ ಇದ್ದರು. ಉಪ್ಪಿ ಕಣ್ಣಿಗೆ ಚಾಂದಿನಿ ಬೀಳುತ್ತಿದ್ದಂತೆ ಇವರೇ ನಾಯಕಿ ಡಿಸೈಡ್ ಮಾಡಿದ್ದರು. ಆ ಮೇಲೆ ಏನಾಯ್ತು ಅನ್ನೋದನ್ನು ಚಾಂದಿನಿನೇ ಹೇಳ್ತಾರೆ ಕೇಳಿ. "ನಾನು ನ್ಯೂಯಾರ್ಕ್‌ನಲ್ಲಿ ಇದ್ದೆ. ಉಪೇಂದ್ರ ನ್ಯೂಯಾರ್ಕ್‌ನಿಂದ ಕರೆಸಿ ಅಂತ ಹೇಳಿದ್ದರು. ಮಂಜು ಸರ್ ನ್ಯೂಯಾರ್ಕ್ ಎಲ್ಲ ಬೇಡ. ಈ ಸಿನಿಮಾ ಚಿಕ್ಕ ಬಜೆಟ್‌ನದ್ದು ಅಂತ ಹೇಳಿದ್ದರು. ಬೇರೆ ಫೋಟೊ ತೋರಿಸೋಣ ಅಂತ ಹೇಳಿದ್ದರಂತೆ. ಆದರೆ, ಉಪೇಂದ್ರ ಇವರೇ ಬೇಕು ಅಂದಿದ್ದರಂತೆ. ನಾನು ಸ್ಕೂಲ್‌ನಲ್ಲಿಇದ್ದೆ. ನನಗೆ ನಟನೆ ಬಗ್ಗೆ ಗೊತ್ತಿರಲಿಲ್ಲ. ನಟಿಯಾಗಬೇಕು ಅಂತ ಆಸೆ ಇರಲಿಲ್ಲ." ಎಂದು ಚಾಂದಿನಿ ಹೇಳಿಕೊಂಡಿದ್ದಾರೆ.
'ಎ' ಸಿನಿಮಾ ಶೂಟಿಂಗ್ ವೇಳೆ ಇಡೀ ಟೀಂ ಕನ್ಫ್ಯೂಷನ್‌ನಲ್ಲಿತ್ತು. ಯಾರಿಗೂ ಉಪ್ಪಿ ಏನು ಶೂಟ್ ಮಾಡುತ್ತಿದ್ದಾರೆ ಅನ್ನೋದು ಗೊತ್ತಾಗುತ್ತಿರಲಿಲ್ವಂತೆ. "ಈ ಸಿನಿಮಾ ಉಪೇಂದ್ರ ಅವರಿಗೆ ತುಂಬಾನೇ ಮುಖ್ಯವಿತ್ತು. 7- 8 ವರ್ಷದಿಂದ ಈ ಸ್ಕ್ರಿಪ್ಟ್ ಮಾಡಿಕೊಂಡು ಕಾಯುತ್ತಿದ್ದರು. ಸಿನಿಮಾದಲ್ಲಿ ಏನು ನಡೀತಿದೆ ಅಂತ ಯಾರಿಗೂ ಗೊತ್ತಿಲ್ಲ. ಅವರ ಸಹಾಯಕರಿಗೂ ಗೊತ್ತಿಲ್ಲ. ಆದರೆ, ಅವರ ತಲೆಯಲ್ಲಿ ಇಡೀ ಸಿನಿಮಾ ಇತ್ತು. " ಎಂದು ಹೇಳಿಕೊಂಡಿದ್ದಾರೆ.

ಉಪ್ಪಿ ಶೂಟಿಂಗ್ ಮಾಡುವ ಸ್ಟೈಲ್ ನೋಡಿ ಈ ಸಿನಿಮಾ ಫ್ಲಾಪ್ ಆಗುತ್ತೆ ಅಂದ್ಕೊಂಡಿದ್ದನ್ನು ರಿವೀಲ್ ಮಾಡಿದ್ದಾರೆ. "ಈ ಸಿನಿಮಾದಲ್ಲಿ ಏನು ನಡೀತಾದೆ ಅಂತ ನನಗೆ ಅನಿಸಿತ್ತು. ಅದನ್ನೆಲ್ಲ ನೋಡಿ ನಾನು ಪ್ರಡ್ಯೂಸರ್‌ಗೆ ಈ ಸಿನಿಮಾ ಅಟ್ಟರ್ ಫ್ಲಾಪ್ ಆಗುತ್ತೆ ಆಂತ ಹೇಳಿಲ್ಲ ಅಷ್ಟೇ. ನಾನು ಮೊದಲ ದಿನ ಮೇಕಪ್ ಮಾಡಿಕೊಳ್ಳುತ್ತಿದ್ದೆ. ಆ ವೇಳೆ ಉಪೇಂದ್ರ ಲಾಂಗ್ ಹೇರ್ ಬಿಟ್ಟಿದ್ದರು. ಆಗ 24 ಗಂಟೆ ಕೆಲಸ ಮಾಡುತ್ತಿದ್ದರು. ಆ ವೇಳೆ ಅವರನ್ನು ನೋಡಿ ಇವರೇನಾ ಹೀರೊ ಅಂತ ಅನಿಸಿತ್ತು." ಅಂತಾನೂ ಹೇಳಿದ್ದಾರೆ.
ಇನ್ನು ಸಕ್ಸಸ್ ಸಿನಿಮಾಗಳನ್ನು ಕೊಟ್ಟ ಬಳಿಕ ಚಾಂದಿನಿ ನಿಧಾನವಾಗಿ ಕಣ್ಮರೆಯಾಗುತ್ತಾ ಬಂದರು. ಸಿನಿಮಾಗಳಿಂದ ದೂರ ಉಳಿದುಬಿಟ್ಟರು. "ಆ ಸಮಯದಲ್ಲಿ ನಾನು ತುಂಬಾ ಚಿಕ್ಕವಳಿದ್ದೆ. ನನಗೆ ಸಕ್ಸಸ್ ಅಂದರೆ ಏನು ಅಂತ ಗೊತ್ತಿರಲಿಲ್ಲ. AK 47 100 ಡೇಸ್ ಆದಗಲೂ ಅಷ್ಟೇ. ಆದರೆ, ನಮ್ಮ ಅಪ್ಪ ಅಮ್ಮ ಮತ್ತೆ ಹೋಗಿ ಓದಬೇಕು ಅಂತ ಕ್ಲಿಯರ್ ಆಗಿ ಹೇಳಿದ್ದರು. ಮತ್ತೆ ನಾನು ಹೋಗಿ ಪಿಎಚ್‌ಡಿ ಮಾಡಿದೆ. ಅದರ ಮಧ್ಯೆ ದೇವರು ಏನೋ ಒಂದು ಹೊಸ ಸಿನಿಮಾ ಕೊಡುತ್ತಿದ್ದ" ಎಂದು ಎ ಸಿನಿಮಾದ ನಟಿ ಚಾಂದಿನಿ ಹೇಳಿದ್ದಾರೆ.


Click it and Unblock the Notifications











