ಡಾ.ರಾಜ್ ಸಮಾಧಿ ವಿವಾದ; ಸರ್ಕಾರ ಮೇಲೆ ಚೇತನ್ ಆರೋಪ.. ಅವನು ಹುಚ್ಚ ಆಸ್ಪತ್ರೆ ಸೇರಿಸಿ ಎಂದ ಸಾರಾ ಗೋವಿಂದ್
ಡಾ.ರಾಜ್‌ಕುಮಾರ್ ಅಪಾರ ಅಭಿಮಾನಿಗಳನ್ನು ಹಾಗೂ ಕನ್ನಡಿಗರನ್ನು ಅಗಲಿ 20 ವರ್ಷಗಳಲಾಗಿವೆ. ಅಂದಿನ ಸರ್ಕಾರ ಅಣ್ಣಾವ್ರ ಸ್ಮಾರಕಕ್ಕಾಗಿ ಕಂಠೀರವ ಸ್ಟುಡಿಯೋದಲ್ಲಿ ಎರಡೂವರೆ ಎಕರೆ ಜಾಗವನ್ನು ನೀಡಿತ್ತು. ಆ ವಿಚಾರವಾಗಿ ನಟ ಚೇತನ್ ತಗಾದೆ ತೆಗೆದಿದ್ದರು. ಸರ್ಕಾರಗಳು ತಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕೆ ಜಾಗವನ್ನು ಮಂಜೂರು ಮಾಡಿತ್ತು ಎಂದು ಆರೋಪಿಸಿದ್ದರು.
ನಟ ಹಾಗೂ ಹೋರಾಟಗಾರ ಚೇತನ್ ಅಹಿಂಸಾ ನೀಡಿದ ಈ ಹೇಳಿಕೆಗೆ ದೊಡ್ಮನೆಯ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಜೊತೆ ಚಿತ್ರರಂಗದ ಗಣ್ಯರು ಕೂಡ ಆಕ್ರೋಶ ಹೊರ ಹಾಕುತ್ತಿದ್ದಾರೆ. ಡಾ.ರಾಜ್‌ಕುಮಾರ್ ಅವರ ಸಾವನ್ನು ಅಂದಿನ ಸರ್ಕಾರಗಳು ತಮ್ಮ ಲಾಭಕ್ಕಾಗಿ ಬಳಸಿಕೊಂಡಿವೆ ಎಂದು ದೂರಿದ್ದಾರೆ. ಡಾ.ರಾಜ್‌ಕುಮಾರ್ ಅವರಂತೆ ಸಾಧನೆ ಮಾಡಿದವರು ಸಾಕಷ್ಟು ಮಂದಿ ಇದ್ದಾರೆ. ಅವರಿಗೆ ಲ್ಯಾಂಡ್ ಅನ್ನು ಯಾಕೆ ಮಂಜೂರು ಮಾಡಿಲ್ಲ? ಎಂದು ಪ್ರಶ್ನೆ ಮಾಡಿದ್ದಾರೆ.

ಚೇತನ್ ವಾದವನ್ನು ಅಣ್ಣಾವ್ರ ಅಭಿಮಾನಿಗಳು ಒಪ್ಪಿಕೊಳ್ಲುತ್ತಿಲ್ಲ. ಆಕ್ರೋಶಗೊಂಡ ಅಭಿಮಾನಿಗಳು ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ನಿರ್ಮಾಪಕ ಹಾಗೂ ಕನ್ನಡಪರ ಹೋರಾಟಗಾರ ಸಾರಾ ಗೋವಿಂದು ಅಂತೂ ಚೇತನ್ ಅವರನ್ನು ಹುಚ್ಚ ಎಂದು ಕರೆದಿದ್ದಾರೆ.
ಮೊದಲಿಗೆ ಚೇತನ್ ಟಿವಿ9 ಕನ್ನಡಕ್ಕೆ ತಮ್ಮ ಹೇಳಿಕೆ ಬಗ್ಗೆ ಹೀಗೆ ಸಮಜಾಯಿಷಿ ನೀಡಿದ್ದಾರೆ. "ನಾನು ಅಮೆರಿಕದಲ್ಲಿ ಹುಟ್ಟಿ ಬೆಳೆದಿದ್ದರೂ, ರಾಜ್‌ಕುಮಾರ್ ಅವರ ಸಿನಿಮಾಗಳನ್ನು ನೋಡಿದ್ದೀನಿ. ಇಷ್ಟ ಪಟ್ಟಿದ್ದೀನಿ. ನಾನು ಕೂಡ ಏಕಪಾತ್ರಾಭಿನಯ ಮಾಡಿದ್ದೇನೆ. ನಾಲ್ಕೈದು ವರ್ಷ ಹುಡುಗ ಆದಾಗಿನಿಂದ ಬಬ್ರುವಾಹನ, ಭಕ್ತ ಪ್ರಹ್ಲಾದ ಹೀಗೆ ಬೇರೆ ಬೇರೆ ಮಾಡಿಕೊಂಡು ಬಂದಿದ್ದೇನೆ. ನಾನು ಕೂಡ ರಾಜ್‌ಕುಮಾರ್ ಅವರ ಕಲಾ ಸೇವೆ ಹಾಗೂ ಕೊಡುಗೆಗೆ ಅಭಿಮಾನಿ. ಅಭಿಮಾನಿ ಸಂಘ ಕಟ್ಟಿರೋರು ಮಾತ್ರ ಅಭಿಮಾನಿಗಳಲ್ಲ." ಎಂದು ಚೇತನ್ ಹೇಳಿದ್ದಾರೆ.
ಇನ್ನು ಚೇತನ್ ಬೇರೆಯವರ ಸ್ಮಾರಕ್ಕೆ ಯಾಕೆ ಲ್ಯಾಂಡ್ ಅನ್ನು ಕೊಟ್ಟಿಲ್ಲವೆಂದು ಪ್ರಶ್ನೆ ಮಾಡಿದ್ದಾರೆ. "ಇಲ್ಲಿ ರಾಜ್‌ಕುಮಾರ್ ಅವರ ಪ್ರಶ್ನೆ ಬರೋದಿಲ್ಲ. ಇದು ಸರ್ಕಾರಗಳು ಹೇಗೆ ರಾಜ್‌ಕುಮಾರ್ ಅವರ ಸಾವನ್ನು ಅವರು ಲಾಭ ಪಡೆಯುವುದಕ್ಕೆ, ಮುಂದಾಲೋಚನೆ ಇಲ್ಲದೆ, ಅವರು ತೆಗೆದುಕೊಂಡಿರುವ ರೀತಿ ನೀತಿಗಳ ಪ್ರಶ್ನೆ ಬರುತ್ತೆ. ರಾಜ್‌ಕುಮಾರ್ ಅವರ ಕೊಡುಗೆ ಅಪಾರ. ಆದರೆ, ರಾಜ್‌ಕುಮಾರ್ ಅವರು ಒಬ್ಬರೇ ಕೊಡುಗೆ ಕೊಟ್ಟಿದ್ದಾರೆಂದು ಹೇಳುವುದಕ್ಕೆ ಆಗುವುದಿಲ್ಲ. ನಿರ್ಮಾಪಕರು, ನಿರ್ದೇಶಕರು ಎಲ್ಲರೂ ಕೊಟ್ಟಿದ್ದಾರೆ. ಸಿದ್ಧಲಿಂಗಯ್ಯ ಅವರನ್ನು ಕಂಡರೆ ನನಗೆ ಬಹಳ ಇಷ್ಟ. ಎಂಪಿ ಶಂಕರ್, ಪುಟ್ಟಣ್ಣ ಕಣಗಾಲ್ ಅವರಾಗಿರಬಹುದು, ಸರೋಜಾ ದೇವಿ, ಜಯಂತಿಯವರ ಕೊಡುಗೆ ಇದೆ. ಅವರಿಗ್ಯಾಕೆ ಲ್ಯಾಂಡ್ ಅನ್ನು ಕೊಟ್ಟಿಲ್ಲ. ಅವರನ್ನು ಬಿಟ್ಟರೆ, ಶತಮಾನದ ಕವಿ ಕುವೆಂಪು ಅವರು, ಹೋರಾಟದಲ್ಲಿ ನಂಜುಂಡಸ್ವಾಮಿ, ಪ್ರೋ ಬಿ ಕೃಷ್ಣಪ್ಪ ಅವರು, ಶಾಂತವೀರ ಗೋಪಾಲ ಗೌಡರು, ತೇಜಸ್ವಿ, ಲಂಕೇಶ್ ಇವರೆಲ್ಲರ ಕೊಡುಗೆ ಇದೆ. ಇವರು ಯಾರಿಗೂ ಲ್ಯಾಂಡ್ ಗ್ರ್ಯಾಂಡ್ ಕೊಟ್ಟಿಲ್ಲ. ಕುವೆಂಪು ಅವರಿಗೆ ಅವರ ಮನೆಯ ಸುತ್ತಮುತ್ತ ಹೇಗೆ ಕೊಟ್ಟಿದ್ದಾರೋ, ಹಾಗೇ ಗಾಜನೂರಿನಲ್ಲಿ ಕೊಡಬಹುದಿತ್ತು. ಅದಕ್ಕೊಂದು ಅರ್ಥ ಇರುತ್ತಿತ್ತು. ಸರ್ಕಾರಗಳು ತಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕೆ ಹೀಗೆ ಲ್ಯಾಂಡ್ ಅನ್ನು ಕೊಡುತ್ತಾರೆ" ಅನ್ನೋದು ನಟ- ಹೋರಾಟಗಾರ ಚೇತನ್ ಅಹಿಂಸಾ ಅವರ ವಾದ.

ಇತ್ತ ಅಭಿಮಾನಿಗಳು ಈ ವಾದವನ್ನು ಒಪ್ಪುತ್ತಿಲ್ಲ. ಚಿತ್ರರಂಗದ ಮುಖಂಡರು ಕೂಡ ಚೇತನ್ ಹೇಳಿಕೆಗಳನ್ನು ಖಂಡಿಸುತ್ತಿದ್ದಾರೆ. "ಅಣ್ಣಾವ್ರು ಅಗಲಿ 20 ವರ್ಷಗಳಾಗಿವೆ. ಕನ್ನಡ, ನಾಡು, ನುಡಿ, ಜಲ, ಸಂಸ್ಕೃತಿ ಅಂತ ಬಂದಾಗ ಅಣ್ಣಾವ್ರು ಮುಂದಿರುತ್ತಿದ್ದರು. ಅವರು ಕರ್ನಾಟಕದ ಸಾಂಸ್ಕೃತಿಕ ರಾಯಬಾರಿ. ಇವಿಷ್ಟು ವಿಚಾರ ಆ ಒಬ್ಬ ನಟನಿಗೆ ಗೊತ್ತಿಲ್ಲ ಅನ್ನೋದೇ ದುರಂತ. ಕೆಲವರು ಪ್ರಚಾರದಲ್ಲಿ ಇರಬೇಕು ಅಂತ ಆಗದೇ ಇರೋ ವಿಚಾರವನ್ನು ಕೆದಕುವುದಕ್ಕೆ ಪ್ರಯತ್ನ ಪಡುತ್ತಾರೆ. ಇದನ್ನು ನಾವು ಬಿಟ್ಟು ಬಿಡಬಹುದಿತ್ತು. ಆದರೆ, ರಾಜ್ಯದ ಮೂಲೆಯಲ್ಲಿ ಇನ್ಯಾರೋ ಮಾತಾಡುತ್ತಾರೆ. ಹಾಗೆ ಆಗದೇ ಇರಲಿ ಅನ್ನೋ ಕಾರಣಕ್ಕೆ ಹಾಗೂ ಸೂಕ್ತವಾದ ಕ್ರಮವನ್ನು ತೆಗೆದುಕೊಳ್ಳಲಿ ಎಂದು ದೂರನ್ನು ನೀಡುತ್ತಿದ್ದೇವೆ" ಎಂದು ಡಾ.ರಾಜ್‌ಕುಮಾರ್ ಸೇನೆಯ ಅಧ್ಯಕ್ಷ ತ್ಯಾಗರಾಜ್ ಹೇಳಿದ್ದಾರೆ.
"ಅವನಿಗೆ ಚಿತ್ರರಂಗದಲ್ಲಿ ಯಾವುದೇ ಉದ್ಯೋಗವಿಲ್ಲ. ಅವನೊಬ್ಬ ನಿರುದ್ಯೋಗಿ. ಅವರ ಮಾತುಗಳಿಗೆ ನಾವು ಇಷ್ಟೊಂದು ತಲೆ ಕೆಡಿಸಿಕೊಳ್ಳಬೇಕಿಲ್ಲ. ಗೌರಿ ಲಂಕೇಶ್ ತೀರಿಕೊಂಡಾಗ ರವೀಂದ್ರ ಕಲಾಕ್ಷೇತ್ರದಲ್ಲಿ ವಾಟಾಳ್ ನಾಗರಾಜ್ ಅವರನ್ನು ರೀ ವಾಟಾಳ್ ಎಂದು ಕರೆದಿದ್ದ. ಅವತ್ತು ಪೊಲೀಸರು ಮಧ್ಯ ಪ್ರವೇಶಿಸಿದರು. ಇವತ್ತು ಯಾವ ಪೊಲೀಸರು ಕೂಡ ಮಧ್ಯ ಪ್ರವೇಶ ಮಾಡುವುದಿಲ್ಲ. ಸಿಕ್ಕಿದ ಕಡೆ ಹೊಡೀತಾರೆ. ರಾಜ್‌ಕುಮಾರ್ ಬಗ್ಗೆ ಧ್ವನಿ ಎತ್ತುವುದಕ್ಕೆ ಅವನು ಯಾರು? ಅವನು ರಾಜ್‌ಕುಮಾರ್ ಧೂಳಿಗೆ ಸಮಾನ. ಈ ಹುಚ್ಚನನ್ನು ಈ ಕೂಡಲೇ ಮೆಂಟಲ್ ಆಸ್ಪತ್ರೆಗೆ ಸೇರಿಸಬೇಕು" ಎಂದು ಸಾರಾ ಗೋವಿಂದು ಕೆಂಡ ಕಾರಿದ್ದಾಎ ಹೇಳಿದ್ದಾರೆ.


Click it and Unblock the Notifications