ರಾಜ್‌ಕುಮಾರ್ ಸ್ಮಾರಕ ವಿವಾದ; ದೂರು ನೀಡಿದ ಚೇತನ್.. ಸಾರಾ ಗೋವಿಂದು ವಿರುದ್ಧ FIR
ಚೇತನ್ ಅಹಿಂಸಾ ಇತ್ತೀಚೆಗೆ ಡಾ. ರಾಜ್‌ಕುಮಾರ್ ಸ್ಮಾರಕ ವಿರುದ್ಧ ತಗಾದೆ ತೆಗೆದಿದ್ದರು. ಇದನ್ನು ಕನ್ನಡಪರ ಸಂಘಟನೆಗಳು, ಅಣ್ಣಾವ್ರ ಅಭಿಮಾನಿಗಳು ವಿರೋಧಿಸಿದ್ದರು. ಚೇತನ್ ಮನೆಯ ಮುಂದು ನಿರ್ಮಾಪಕ ಹಾಗೂ ಹೋರಾಟಗಾರ ಸಾರಾ ಗೋವಿಂದು ಹೋಗಿ ಪ್ರತಿಭಟನೆ ಮಾಡಿದ್ದರು. ಅಲ್ಲದೇ ಚೇತನ್‌ರನ್ನು ಏಕವಚನದಲ್ಲಿ ಕರೆದು ಗದರಿದ್ದರು. ಈ ವಿಚಾರವಾಗಿ ಸಾರಾ ಗೋವಿಂದು ವಿರುದ್ಧ ಚೇತನ್ ದೂರ ದಾಖಲಿಸಿದ್ದಾರೆ.
ಅಣ್ಣಾವ್ರ ಹುಟ್ಟುಹಬ್ಬದಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಸೋಶಿಯಲ್ ಮೀಡಿಯಾ ಸ್ಮಾರಕದ ಬಗ್ಗೆ ಪೋಸ್ಟ್ ಮಾಡಿದ್ದರು. ಸರ್ಕಾರ ಲಾಭ ಪಡೆದುಕೊಳ್ಳುವುದಕ್ಕೆ ಡಾ.ರಾಜ್‌ಕುಮಾರ್ ಅವರಿಗೆ ಕಂಠೀರವ ಸ್ಟುಡಿಯೋದಲ್ಲಿ ಸ್ಮಾರಕ ಮಾಡುವುದಕ್ಕೆ 2.5 ಎಕರೆ ಜಾಗ ಕೊಟ್ಟಿದೆ. ರಾಜ್‌ಕುಮಾರ್ ಅವರಂತೆ ಸಾಧಕರು ಇದ್ದಾರೆ. ಸರ್ಕಾರ ಸ್ವತ್ತನ್ನು ಸ್ಮಾರಕಕ್ಕೆ ಕೊಡುವುದು ಎಷ್ಟು ಸರಿ? ಅನ್ನೋ ಅರ್ಥದಲ್ಲಿ ಚೇತನ್ ಅಹಿಂಸಾ ಹೇಳಿಕೆಯನ್ನು ಕೊಟ್ಟಿದ್ದರು.

ಅಣ್ಣಾವ್ರ ಹುಟ್ಟುಹಬ್ಬದಂದೇ ಸ್ಮಾರಕದ ಬಗ್ಗೆ ಟೀಕೆ ಮಾಡಿದ್ದಕ್ಕೆ ಅಭಿಮಾನಿಗಳು ರೊಚ್ಚಿಗೆದ್ದಿದ್ದರು. ಇನ್ನೊಂದು ಕಡೆ ಕನ್ನಡಪರ ಹೋರಾಟಗಾರರು ಒಟ್ಟಿಗೆ ಸೇರಿ ಚೇತನ್ ಅಹಿಂಸಾ ಮನೆ ಮುಂದೆ ಪ್ರತಿಭಟನೆ ಮಾಡಿದ್ದರು. ಚೇತನ್‌ರನ್ನು ಹೊರಗೆ ಕರೆಸಿ ಕ್ಷಮೆ ಕೇಳುವಂತೆ ಘೋಷಣೆಗಳನ್ನು ಕೂಗಿದ್ದರು. ಈ ವೇಳೆ ಸಾರಾ ಗೋವಿಂದು ಗರಂ ಆಗಿ ಚೇತನ್ ವಿರುದ್ಧ ಏಕವಚನದಲ್ಲಿ ಮಾತಾಡಿದ್ದರು. ಚೇತನ್ ಒಬ್ಬ ಹುಚ್ಚ ಎಂದು ಹೇಳಿಕೆ ನೀಡಿದ್ದರು. ಅವಾಚ್ಯ ಪದಗಳಿಂದ ನಿಂದನೆ, ಮನೆ ಮುಂದೆ ಗಲಾಟೆ ವಿಚಾರವಾಗಿ ಸಾರಾ ಗೋವಿಂದು ವಿರುದ್ಧ ಪೊಲೀಸ್ ಠಾಣೆಯಲ್ಲಿ ಚೇತನ್ ದೂರನ್ನು ದಾಖಲಿಸಿದ್ದಾರೆ.
ತನ್ನ ಮನೆ ಮುಂದೆ ಬಂದು ಗಲಾಟೆ ಮಾಡಿದ್ದ ನಿರ್ಮಾಪಕ ಸಾರಾ ಗೋವಿಂದು ಹಾಗೂ ಅವರ ಜೊತೆ ಬಂದಿದ್ದ ಕನ್ನಡ ಪರ ಹೋರಾಟಗಾರ ವಿರುದ್ಧ ದೂರನ್ನು ನೀಡಿದ್ದರು. ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಚೇತನ್ ಇವರ ವಿರುದ್ಧ ದಾಖಲಿಸಿದ್ದ ದೂರನ್ನು ಆಧರಿಸಿ, ಪೊಲೀಸರು FIR ದಾಖಲಿಸಿದ್ದಾರೆ. ಇದಕ್ಕೆ ಸಾರಾ ಗೋವಿಂದು ಹೇಗೆ ಪ್ರತಿಕ್ರಿಯಿಸುತ್ತಾರೆಂದು ನೋಡಬೇಕಿದೆ.
ಚೇತನ್ ದಾಖಲಿಸಿದ ದೂರಿನಲ್ಲಿ ಸಾರಾ ಗೋವಿಂದು ಹಾಗೂ ಅವರ ಸಂಗಡಿಗರನ್ನು ಸೇರಿಸಿ ದೂರು ದಾಖಲಿಸಿದ್ದರು. ಹೀಗಾಗಿ ಭಾರತೀಯ ನೀತಿ ಸಂಹಿತೆ ಸೆಕ್ಷನ್ 189(2), 190, 329(4), 351(2), 352) ಅಡಿಯಲ್ಲಿ FIR ದಾಖಲಾಗಿದೆ. ಅತ್ರಿಕ್ರಮ ಪ್ರವೇಶ, ಅಶ್ಲೀಲ ಪದ ಬಳಕೆ, ಜೀವ ಬೆದರಿಕೆ ಮಾಡಿದ್ದಾರೆಂದು ಚೇತನ್ ಅಹಿಂಸಾ ವಿರುದ್ಧ ಆರೋಪಗಳನ್ನು ಮಾಡಲಾಗಿದೆ. ಹೀಗಾಗಿ ಈ ಸೆಕ್ಷನ್‌ಗಳ ಅಡಿಯಲ್ಲಿ ನಿರ್ಮಾಪಕ ಸಾರಾ ಗೋವಿಂದು ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಸಾರಾ ಗೋವಿಂದು ಮನೆ ಬಳಿ ಬಂದು ಬೆದರಿಕೆ ಹಾಕಿದ್ದರು, ಅವ್ಯಾಚ ಶಬ್ಧಗಳಿಂದ ನಿಂದಿಸಿದ್ದರು. ಈ ವೇಳೆ ಪೊಲೀಸರು, ಮಾಧ್ಯಮದವರು ಇದ್ದರು. ಸಾ ರಾ ಗೋವಿಂದು ಅವರ ಹಿನ್ನೆಲೆ ಬೇರೆನೇ ಇದೆ. ಡಾ.ರಾಜ್‌ಕುಮಾರ್ ಅಭಿಮಾನಿಗಳು ಎಂದು ಹೇಳಿಕೊಂಡು ಅವರ ಹೆಸರುಗಳನ್ನು ಕೆಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇವರಿಗೆ ರಾಜ್‌ಕುಮಾರ್ ಅವರ ಅಭಿಮಾನಿಗಳು ಅಂತ ಹೇಳಿಕೊಳ್ಳುವುದಕ್ಕೂ ಯೋಗ್ಯತೆಯಿಲ್ಲ. ಸಿನಿಮಾರಂಗದಲ್ಲಿ ಇವರು ಒಳಿತಿಗಾಗಿ ನಿಂತವರಿಗೆ ಹೆದರಿಸೋದು, ದಾದಾಗಿರಿ ಮಾಡೋದು, ದಬ್ಬಾಳಿಕೆ ಮಾಡಿ ಭಯ ಹುಟ್ಟಿಸೋ ಕೆಲಸ ಮಾಡ್ತಾರೆ ಎಂದು ಚೇತನ್ ಹೇಳಿದ್ದಾರೆ.
ಇನ್ನೊಂದು ಕಡೆ ಚೇತನ್ ವಿರುದ್ಧವೂ ಅಣ್ಣಾವ್ರ ಅಭಿಮಾನಿ ಸಂಘಟನೆಗಳು ದೂರನ್ನು ನೀಡಿವೆ. ಅಭಿಮಾನಿಗಳು, ಚಿತ್ರರಂಗದ ಗಣ್ಯರು ಸೇರಿದಂತೆ ಹಲವು ಮಂದಿ ಚೇತನ್ ಅವರ ಹೇಳಿಕೆಯನ್ನು ವಿರೋಧಿಸಿದ್ದಾರೆ. ಇನ್ನೊಂದು ಕಡೆ ಡಾ.ರಾಜ್‌ಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟದ ಗೌರವಾಧ್ಯಕ್ಷರಾಗಿರುವ ಎನ್ ಆರ್ ರಮೇಶ್ ಕೂಡ ರಾಜ್ಯದ ಮೂಲೆ ಮೂಲೆಯಲ್ಲಿ ದೂರನ್ನು ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಚೇತನ್‌ಗೆ ಹಲವು ಸವಾಲುಗಳನ್ನು ಎಸೆದಿದ್ದಾರೆ.


Click it and Unblock the Notifications