ಸ್ಯಾಂಡಲ್‌ವುಡ್‌ನಲ್ಲಿ ಲೈಂಗಿಕ ಕಿರುಕುಳ ಅಧ್ಯಯನಕ್ಕೆ ಪಟ್ಟು ಹಿಡಿದ ಫೈರ್; 153 ವ್ಯಕ್ತಿಗಳು ಅರ್ಜಿಗೆ ಸಹಿ
ಮಲಯಾಳಂ ಚಿತ್ರರಂಗದಲ್ಲಿರುವ ಕಾಮಕಾಂಡದ ಬಗ್ಗೆ ನ್ಯಾಯಮೂರ್ತಿ ಹೇಮಾ ಕಮಿಟಿ ವರದಿ ಮಾಡಿತ್ತು. ಅಲ್ಲಿಂದ ಮಲಯಾಳಂ ಚಿತ್ರರಂಗದಲ್ಲಿ ದಿಗ್ಗಜರ ಹೆಸರುಗಳು ಕೂಡ ಆಚೆ ಬಂದಿದ್ದವು. ಕೆಲವು ನಟಿಯರು ಮಾಲಿವುಡ್‌ನ ನಟರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಇದೇ ರೀತಿ ಕಮಿಟಿ ರಚನೆಯಾಗಬೇಕು ಅಂತ ಬೇರೆ ಬೇರೆ ಚಿತ್ರರಂಗಗಳು ಕೂಡ ಪಟ್ಟು ಹಿಡಿದಿವೆ.
ಕೆಲವು ದಿನಗಳ ಹಿಂದಷ್ಟೇ ತೆಲುಗು ಚಿತ್ರರಂಗದಲ್ಲೂ ಮಹಿಳೆಯ ಮೇಲಿನ ಲೈಂಗಿಕ ಕಿರುಕುಳ ಹಾಗೂ ಇತರೆ ಸಮಸ್ಯೆಗಳನ್ನು ಅಧ್ಯಯನ ಆಗಬೇಕು ಎಂದು ಸಮಂತಾ ಹಾಗೂ ಟಾಲಿವುಡ್‌ನ ಹಲವು ಸೆಲಬ್ರಿಟಿಗಳು ತೆಲಂಗಾಣ ಸರ್ಕಾರಕ್ಕೆ ಒತ್ತಡ ಹಾಕಿದ್ದರು. ಈಗ ಕನ್ನಡ ಚಿತ್ರರಂಗದಲ್ಲೂ ಅದೇ ಕೂಗು ಕೇಳಿ ಬರುತ್ತಿದೆ. ಕನ್ನಡದ ನಟಿ ಶ್ರುತಿ ಹರಿಹರನ್ ಕೂಡ ಇಂತಹದ್ದೊಂದು ಕಮಿಟಿ ರಚನೆಯಾಗಬೇಕು ಎಂದಿದ್ದರು.

ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವ ಮಹಿಳೆಯರ ಸಮಸ್ಯೆಗಳಿಗಾಗಿ ಈ ಹಿಂದೆ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ (FIRE) ರಚನೆ ಮಾಡಲಾಗಿತ್ತು. ಇದರಲ್ಲಿ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ, ನಿರ್ದೇಶಕ ಕವಿತಾ ಲಂಕೇಶ್ ಅಂತಹ ದಿಗ್ಗಜರು ಇದ್ದರು. ಅದೇ ಫೈರ್ ಈಗ ನಿವೃತ್ತ ನ್ಯಾಯಾಮೂರ್ತಿಗಳ ನೇತೃತ್ವದಲ್ಲಿ ಸಮಿತಿಯನ್ನು ರಚಿಸುವಂತೆ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ (ಫೈರ್) ಕರ್ನಾಟಕ ಸರ್ಕಾರಕ್ಕೆ ಕರೆ ನೀಡಿದೆ.
ಫೈರ್ ಒತ್ತಾಯವೇನು?
"ಕನ್ನಡ ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ಕಿರುಕುಳ ಸೇರಿದಂತೆ ಸಮಸ್ಯೆಗಳನ್ನು ಅಧ್ಯಯನ ಮಾಡಿ ವರದಿ ಮಾಡಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯನ್ನು ರಚಿಸುವಂತೆ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ (ಫೈರ್) ಕರ್ನಾಟಕ ಸರ್ಕಾರಕ್ಕೆ ಕರೆ ನೀಡಿದೆ. ಲಿಂಗ ನ್ಯಾಯವನ್ನು ಪ್ರತಿಪಾದಿಸುವ ಕನ್ನಡ ಚಲನಚಿತ್ರೋದ್ಯಮದ ಮತ್ತು ವಿವಿಧ ಕ್ಷೇತ್ರಗಳ 153 ವ್ಯಕ್ತಿಗಳು ಈ ಅರ್ಜಿಗೆ ಸಹಿ ಹಾಕಿದ್ದಾರೆ. ನಾವು ಈ ಸಂದೇಶದೊಂದಿಗೆ ಕನ್ನಡ ಮತ್ತು ಇಂಗ್ಲಿಷ್ ಎರಡೂ ಅರ್ಜಿಗಳನ್ನು ಒದಗಿಸಿದ್ದೇವೆ ಮತ್ತು ಈ ಉದ್ದೇಶಕ್ಕಾಗಿ ಮಾಧ್ಯಮದ ಸದಸ್ಯರು ನಮ್ಮನ್ನು ಬೆಂಬಲಿಸಬೇಕೆಂದು ಕೇಳಿಕೊಳ್ಳುತ್ತೇವೆ. " ಎಂದು ಫೈರ್ ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿದೆ.
ಬೇಡಿಕೆ ಏನು?
'ಫೈರ್' ಮೂಲಕ ಕರ್ನಾಟಕ ಸರ್ಕಾರಕ್ಕೆ ಎರಡು ಬೇಡಿಕೆಗಳನ್ನು ಇಡಲಾಗಿದೆ. ಮೊದಲನೆಯದ್ದು ಕನ್ನಡ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ನಿವೃತ್ತ ನ್ಯಾಯಾಧೀಶರ ಕಮಿಟಿ ರಚಿಸಿ, ವ್ಯವಸ್ಥಿತವಾಗಿ ತನಿಖೆ ಆಗಬೇಕು ಎಂದು ಆಗ್ರಹಿಸಿದೆ. ಇನ್ನೊಂದು ಕಡೆ ಮಹಿಳೆಯರು ಕನ್ನಡ ಚಿತ್ರರಂಗದಲ್ಲಿ ಆರೋಗ್ಯಕರವಾಗಿ ಹಾಗೂ ಸಮಾನವಾಗಿ ಕೆಲಸ ಮಾಡುವಂತೆ ನಿಯಮಗಳನ್ನು ತರುವಂತೆ ಕೇಳಿಕೊಂಡಿದೆ.

153 ಮಂದಿ ಅರ್ಜಿಗೆ ಸಹಿ
ಕನ್ನಡ ಚಿತ್ರರಂಗದ ಪ್ರಮುಖರು ಈ ಅರ್ಜಿಗೆ ಸಹಿ ಹಾಕಿದ್ದಾರೆ. ಫೈರ್‌ನ ಅಧ್ಯಕ್ಷೆ ಕವಿತಾ ಲಂಕೇಶ್, ಕಾರ್ಯದರ್ಶಿ ಚೇತನ್ ಅಹಿಂಸಾರಿಂದ ಹಿಡಿದು ರಮ್ಯಾ, ಶ್ರುತಿ ಹರಿಹರನ್, ಆಶಿಕಾ ರಂಗನಾಥ್, ಐಂದ್ರಿತಾ ರೇ, ಅಮೃತಾ ಅಯ್ಯಂಗಾರ್, ಪೂಜಾ ಗಾಂಧಿ, ಚೈತ್ರಾ ಜೆ ಆಚಾರ್, ಧನ್ಯಾ ರಾಮ್‌ಕುಮಾರ್, ಸಂಯುಕ್ತ ಹೆಗಡೆ, ಶ್ರದ್ಧ ಶ್ರೀನಾಥ್, ಕಿಶೋರ್, ನಿಶ್ವಿಕಾ ನಾಯ್ಡು, ವಿನಯ್ ರಾಜ್‌ಕುಮಾರ್, ಸೇರಿದಂತೆ 153 ಮಂದಿ ಅರ್ಜಿಗೆ ಸಹಿ ಹಾಕಿದ್ದಾರೆ.
ಏನಿದು ಫೈರ್?
2017ರಲ್ಲಿ ಸ್ಥಾಪನೆಯಾದ ಆಂತರಿಕ ದೂರು ಸಮಿತಿ. ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಲೈಂಗಿಕ ಕಿರುಕುಳ ಹಾಗೂ ಇತರ ಸಮಸ್ಯೆಗಳು ಎದುರಾದರೆ, ಅದನ್ನು ವಿರುದ್ಧ ಹೋರಾಡುವ ಒಂದು ಕಮಿಟಿ. ಕೆಲವು ವರ್ಷಗಳು ಈ ಸಮಿತಿ ಸೈಲೆಂಟ್ ಆಗಿತ್ತು. ಈಗ ಮಲಯಾಳಂ ಚಿತ್ರರಂಗದಲ್ಲಿ ಹೇಮಾ ಕಮಿಟಿ ವರದಿ ಸಂಚಲನ ಸೃಷ್ಟಿಸಿದ ಬಳಿಕ ಮತ್ತೆ ಕಾರ್ಯೋನ್ಮುಖವಾಗಿದೆ.


Click it and Unblock the Notifications











