'ಲ್ಯಾಂಡ್‌ಲಾರ್ಡ್'ಗೆ ತೆರಿಗೆ ವಿನಾಯ್ತಿ.."ಸಂಪರ್ಕ ಇರೋರಿಗೆ ಲಾಭ ಇದ್ಯಾವ ನ್ಯಾಯ?" ಸಿಎಂಗೆ ಚೇತನ್ ಪ್ರಶ್ನೆ
ಸ್ಯಾಂಡಲ್‌ವುಡ್ ಸಲಗ ದುನಿಯಾ ವಿಜಯ್ ಸಿನಿಮಾ 'ಲ್ಯಾಂಡ್‌ಲಾರ್ಡ್' ಇತ್ತೀಚೆಗೆ ರಿಲೀಸ್ ಆಗಿದೆ. ದುನಿಯಾ ವಿಜಯ್, ರಚಿತಾ ರಾಮ್ ಹಾಗೂ ದುನಿಯಾ ವಿಜಯ್ ಪುತ್ರಿ ರಿತಾನ್ಯಾ ನಟನೆಯ 'ಲ್ಯಾಂಡ್‌ಲಾರ್ಡ್' ಉತ್ತಮ ಸಾಮಾಜಿಕ ಸಂದೇಶವನ್ನು ಸಾರುವ ಈ ಸಿನಿಮಾ ಎಂಬ ಮೆಚ್ಚುಗೆ ಪಡೆದುಕೊಂಡಿದೆ. ದುನಿಯಾ ವಿಜಯ್ ಹಾಗೂ ರಚಿತಾ ರಾಮ್ ನಟನೆಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಸಾಮಾಜಿಕ ಅಸಮಾನತೆ, ಜಾತಿ ಶೋಷಣೆಯನ್ನು ಹೊತ್ತು 'ಲ್ಯಾಂಡ್‌ಲಾರ್ಡ್' ತೆರೆಗೆ ಬಂದಿತ್ತು. ಜನವರಿ 23ರಂದು ಅದ್ಧೂರಿಯಾಗಿ ರಿಲೀಸ್ ಆಗಿದ್ದ ಈ ಸಿನಿಮಾಗೆ ಸಿಎಂ ಸಿದ್ಧರಾಮಯ್ಯ ತೆರಿಗೆ ವಿನಾಯ್ತಿಯನ್ನು ಘೋಷಣೆ ಮಾಡಿದ್ದಾರೆ. ಇದಕ್ಕೂ ಮುನ್ನ ದುನಿಯಾ ವಿಜಯ್ ಹಾಗೂ ತಂಡ ಸಿದ್ಧರಾಮಯ್ಯ ಅವರನ್ನು ಖುದ್ದಾಗಿ ಭೇಟಿ ಮಾಡಿ, ಸಿನಿಮಾದ ಆಶಯಗಳನ್ನು ಚರ್ಚೆ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ತೆರಿಗೆ ಇಲಾಖೆಗೆ ಸಿಎಂ ಸಿದ್ಧರಾಮಯ್ಯ ಸೂಚನೆಯನ್ನು ನೀಡಿದ್ದರು. ಈ ಮೂಲಕ 'ಲ್ಯಾಂಡ್‌ಲಾರ್ಡ್' ಸಿನಿಮಾತಂಡಕ್ಕೆ ರಾಜ್ಯ ಸರ್ಕಾರದ ಕಡೆಯಿಂದ ಸಿಹಿ ಸುದ್ದಿ ಸಿಕ್ಕಿತ್ತು. ದುನಿಯಾ ವಿಜಯ್ ನಟನೆಯ 'ಲ್ಯಾಂಡ್‌ಲಾರ್ಡ್' ಸಿನಿಮಾಗೆ ಸಿಎಂ ತೆರಿಗೆ ವಿನಾಯ್ತಿ ನೀಡಿದ್ದನ್ನು ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಪ್ರಶ್ನೆ ಮಾಡಿದ್ದಾರೆ. "ಸಂಪರ್ಕ ಹೊಂದಿರುವವರಿಗೆ ಲಾಭ ನೀಡುವುದು ಪ್ರಜಾಸತ್ತಾತ್ಮಕ ನ್ಯಾಯ ತತ್ವಕ್ಕೆ ಧಕ್ಕೆ ತರುತ್ತದೆ" ಎಂದು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಆದಿನಗಳು ಖ್ಯಾತಿಯ ಚೇತನ್ ತಮಗೆ ಅನ್ಯಾಯ ಅನಿಸಿದ್ದರ ವಿರುದ್ಧ ಧ್ವನಿ ಎತ್ತುತ್ತಾರೆ. ಈಗ ದುನಿಯಾ ವಿಜಯ್ ನಟನೆಯ 'ಲ್ಯಾಂಡ್‌ಲಾರ್ಡ್' ಸಿನಿಮಾಗೆ ತೆರಿಗೆ ವಿನಾಯ್ತಿ ನೀಡಿದ್ದಕ್ಕೂ ತಮ್ಮ ಅಸಮಧಾನವನ್ನು ಹೊರ ಹಾಕಿದ್ದಾರೆ. ತಮ್ಮ ಫೇಮಸ್ ಬುಕ್ ಖಾತೆಯಲ್ಲಿ ಸಿಎಂ ಸಿದ್ಧರಾಮಯ್ಯ ತೆರಿಗೆ ವಿನಾಯ್ತಿ ಆದೇಶವನ್ನು ಪ್ರಶ್ನಿಸಿ ಪೋಸ್ಟ್ ಮಾಡಿದ್ದಾರೆ. ನೇರವಾಗಿ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.
"ಲ್ಯಾಂಡ್‌ಲಾರ್ಡ್ ಸಿನಿಮಾಗೆ ಕರ್ನಾಟಕ ಸರ್ಕಾರ 100% ತೆರಿಗೆ ವಿನಾಯಿತಿ ನೀಡಿರುವುದು ಪಕ್ಷಪಾತದ ಕ್ರಮವಾಗಿದ್ದು, ಆಯ್ಕೆ ಮಾಡಿದವರಿಗೆ ಅನುಕೂಲ ನೀಡುವಂತಿದೆ. ಅಧಿಕಾರವನ್ನು ಬಳಸಿಕೊಂಡು 'ಸಂಪರ್ಕ ಹೊಂದಿರುವವರಿಗೆ' ಲಾಭ ನೀಡುವುದು ಪ್ರಜಾಸತ್ತಾತ್ಮಕ ನ್ಯಾಯ ತತ್ವಕ್ಕೆ ಧಕ್ಕೆ ತರುತ್ತದೆ.
ಬೇರೆ ಚಿತ್ರಗಳು ಅರ್ಹವಲ್ಲವೇ? ಕಂಟೆಂಟ್ ಯಾವುದೇ ಆಗಿರಲಿ-ಎಲ್ಲಾ ಸಿನಿಮಾಗಳಿಗೆ ತೆರಿಗೆ ವಿನಾಯಿತಿ ನೀಡಬೇಕು, ಇಲ್ಲವೇ ಯಾವುದಕ್ಕೂ ನೀಡಬಾರದು." ಎಂದು ಚೇತನ್ ಅಹಿಂಸಾ ಅಸಮಧಾನವನ್ನು ಹೊರ ಹಾಕಿದ್ದಾರೆ.
ದುನಿಯಾ ವಿಜಯ್ ಭೇಟಿ ಬಳಿಕ ಸಿಎಂ ಸಿದ್ಧರಾಮಯ್ಯ ಎಕ್ಸ್ ಖಾತೆಯಲ್ಲಿ 'ಲ್ಯಾಂಡ್‌ಲಾರ್ಡ್' ತೆರಿಗೆ ವಿನಾಯ್ತಿ ಬಗ್ಗೆ ಟ್ವೀಟ್ ಮಾಡಿದ್ದರು. "ಸಾಮಾಜಿಕ ಅಸಮಾನತೆ ಮತ್ತು ಜಾತಿಯಾಧಾರಿತ ಶೋಷಣೆ ವಿಷಯಾಧಾರಿತ ದುನಿಯಾ ವಿಜಯ್ ನಾಯಕತ್ವದ "ಲ್ಯಾಂಡ್ ಲಾರ್ಡ್" ಚಲನಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.
ಮೌಲ್ಯಯುತ ಸಂದೇಶವನ್ನು ಜನರಿಗೆ ತಲುಪಿಸಿ, ಸಾರ್ವತ್ರಿಕ ಅಭಿಪ್ರಾಯ ರೂಪಿಸಲು ಹಾಗೂ ಸಾಮಾಜಿಕ ಪರಿವರ್ತನೆಯನ್ನು ಸಾಧಿಸಲು ಸಿನೆಮಾಗಳು ಅತ್ಯಂತ ಪರಿಣಾಮಕಾರಿ ಮಾಧ್ಯಮ ಎನ್ನುವುದು ನನ್ನ ಭಾವನೆ. ಸಾಮಾಜಿಕ ಕಳಕಳಿಯ ಸಿನೆಮಾವನ್ನು ಮಾಡಿದಾಗ ಅಂಥವರ ಜೊತೆ ನಿಂತು ಬೆನ್ನು ತಟ್ಟಬೇಕಿರುವುದು ಕೂಡ ಸರ್ಕಾರವಾಗಿ ನಮ್ಮ ನೈತಿಕ ಹೊಣೆ. ಮುಂದಿನ ದಿನಗಳಲ್ಲಿ ಸಾಮಾಜಿಕ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುವ ಲ್ಯಾಂಡ್ ಲಾರ್ಡ್ ನಂತಹ ಇನ್ನಷ್ಟು ಚಿತ್ರಗಳು ಮೂಡಿಬರಲು ನಮ್ಮ ಈ ನಿರ್ಧಾರ ಸ್ಪೂರ್ತಿಯಾಗಲಿದೆ ಎಂದು ನಂಬಿದ್ದೇನೆ." ಎಂದು ಸಿಎಂ ಹೇಳಿದ್ದರು.


Click it and Unblock the Notifications











