30 ವರ್ಷಗಳಿಂದ ಸಿನಿಮಾನೇ ನೋಡಿಲ್ಲ: ವೈರಲ್ ಆಗುತ್ತಿದೆ ಬಿಪಿನ್ ರಾವತ್ ಹೇಳಿಕೆ
ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಸಂಚರಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರಿನಲ್ಲಿ ಪತನಗೊಂಡಿದೆ. ಈ ಸೇನಾ ಹೆಲಿಕಾಪ್ಟರ್‌ನಲ್ಲಿ ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಸೇರಿ 14 ಮಂದಿ ಸಂಚರಿಸುತ್ತಿದ್ದರು. ಈ ದುರ್ಘಟನೆಯಲ್ಲಿ ಸೇನೆಯ ಐವರು ಹಿರಿಯ ಅಧಿಕಾರಿಗಳ ಸಹಿತ 13 ಮಂದಿ ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಜನರಲ್ ಬಿಪಿನ್ ರಾವತ್ ಕೂಡ ಕೊನೆಯುಸಿರೆಳೆದಿದ್ದಾರೆ.
ಈ ದುರ್ಘಟನೆ ಹೇಗೆ ಸಂಭವಿಸಿರಬಹುದು ಎನ್ನುವ ಬಗ್ಗೆ ತನಿಖೆ ಆರಂಭ ಆಗಿದೆ. ಇದೇ ವೇಳೆ ಈ ಘಟನೆ ಬಗ್ಗೆ ರಾಜಕೀಯ ಮುಖಂಡರು ಹಾಗೂ ಗಣ್ಯರು ವಿಷಾದ ವ್ಯಕ್ತಪಡಿಸುತ್ತಿದ್ದಾರೆ. ಅದೇ ಇನ್ನೊಂದು ಕಡೆ ಬಿಪಿನ್ ರಾವತ್ ಮೂರು ವರ್ಷಗಳ ಹಿಂದೆ ಕೊಟ್ಟ ಹೇಳಿಕೆಯೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಮೂರು ದಶಕಗಳಿಂದ ತಾನು ಸಿನಿಮಾವನ್ನೇ ನೋಡಿಲ್ಲವೆಂದು 3 ವರ್ಷಗಳ ಹಿಂದೆ ಜನರಲ್ ಬಿಪಿನ್ ರಾವತ್ ಹೇಳಿದ್ದರು.
'30 ದಶಕಗಳಿಂದ ಸಿನಿಮಾ ನೋಡಲು ಸಮಯ ಸಿಕ್ಕಿಲ್ಲ'
2018ರಲ್ಲಿ ಭಾರತೀಯ ಸೇನೆಯ ಮುಖ್ಯಸ್ಥರಾಗಿದ್ದ (Indian Army chief) ಬಿಪಿನ್ ರಾವತ್ ಛತ್ತಿಸ್‌ಗಢಕ್ಕೆ ಭೇಟಿ ನೀಡಿದ್ದರು. ಈ ವೇಳೆ ರಾಯ್‌ಪುರದ ದೆಲ್ಲಿ ಪಬ್ಲಿಕ್ ಶಾಲೆಯ ಮಕ್ಕಳೊಂದಿಗೆ ಸಂವಾದದಲ್ಲಿ ಬಾಗಿಯಾಗಿದ್ದರು. ಈ ವೇಳೆ ಶಾಲಾ ಮಕ್ಕಳು ಅಂದಿನ ಭಾರತೀಯ ಸೇನೆಯ ಮುಖ್ಯಸ್ಥ ಬಿಪಿನ್ ರಾವತ್ ಅವರಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿದ್ದರು. ಈ ವೇಳೆ ಶ್ರಿಯೊಮ್ ಕಶ್ಯಪ್ ಎಂಬ ಬಾಲಕ ಸಿನಿಮಾ ಬಗ್ಗೆ ಪ್ರಶ್ನೆ ಮಾಡಿದ್ದರು.

8ನೇ ತರಗತಿ ಓದುತ್ತಿದ್ದ ಶ್ರಿಯೊಮ್ ಕಶ್ಯಪ್ ದೇಶಭಕ್ತಿ ಸಿನಿಮಾಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಪ್ರಶ್ನೆ ಮಾಡಿದ್ದರು. ಈ ವೇಳೆ ಬಿಪಿನ್ ರಾವತ್ " ನನಗೆ ಕಳೆದ 30 ವರ್ಷಗಳಿಂದ ಮೂರು ಗಂಟೆ ಒಂದೇ ಕಡೆ ಕೂತು ಸಿನಿಮಾ ನೋಡಲು ಸಮಯವೇ ಸಿಕ್ಕಿಲ್ಲವೆಂದು ಹೇಳಿದ್ದರು." ಮೂರು ವರ್ಷಗಳ ಹಿಂದೆ ಜನರಲ್ ಬಿಪಿನ್ ರಾವತ್ ಹೇಳಿದ ಇದೇ ಹೇಳಿಕೆ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ನಂಬಿಕೆಯನ್ನು ಕಳೆದುಕೊಳ್ಳಬೇಡಿ ಎಂದಿದ್ದ ಜನರಲ್ ಬಿಪಿನ್ ರಾವತ್
ಮಕ್ಕಳೊಂದಿಗೆ ನಡೆದಿದ್ದ ಸಂವಾದದಲ್ಲಿ ಜನರಲ್ ಬಿಪಿನ್ ರಾವತ್ ಕೂಡ ಮಕ್ಕಳಿಗೆ ಹುರುಪು ತುಂಬಿದ್ದರು. " ಶಾಲೆಯ ಕೋಣೆಯೊಳಗಾಗಲಿ ಅಥವಾ ಜೀವನದಲ್ಲಿ ಆಗಲಿ ಸೋಲನ್ನು ಕಂಡರೆ ನಂಬಿಕೆ ಕಳೆದುಕೊಳ್ಳಬೇಡಿ. ಕಠಿಣ ಪರಿಶ್ರಮ ಮಾಡಿ ನಂಬಿಕೆಯನ್ನು ಕಳೆದುಕೊಳ್ಳಬೇಡಿ. ನೀವು ಈ ದೇಶದ ಭವಿಷ್ಯ. ಪ್ರತಿಬಾರಿ ಸೋತಾಗಲೂ ಮತ್ತಷ್ಟು ಹಾರ್ಡ್ ವರ್ಕ್ ಮಾಡಿ. ಯಶಸ್ಸು ಸಿಗುವುದು ಕೇವಲ ಹಾರ್ಡ್ ಮಾತ್ರ ಸಾಧ್ಯವೆಂದು" ಜನರಲ್ ಬಿಪಿನ್ ರಾವತ್ ಹೇಳಿದ್ದರು.

ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಹಿನ್ನೆಲೆ ಏನು?
ಜನರಲ್ ಬಿಪಿನ್ ರಾವತ್ ಶಿಮ್ಲಾದ ಸೈಂಟ್ ಎಡ್ವರ್ಡ್ ಸ್ಕೂಲ್ ಹಾಗೂ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ವಿದ್ಯಾರ್ಥಿಯಾಗಿದ್ದರು. ಡಿಸೆಂಬರ್ 16, 1978ರಲ್ಲಿ ಐದನೇ ಬೆಟಾಲಿಯನ್‌ನ 11ನೇ ಗೂರ್ಕಾ ರೈಫಲ್ ತಂಡಕ್ಕೆ ಸೇರ್ಪಡೆಯಾಗಿದ್ದರು. ವಿಶೇಷ ಅಂದರೆ, ಈ ಬೆಟಾಲಿಯನ್‌ನ ಬಿಪಿನ್ ರಾವತ್ ತಂದೆಯೇ ಮುನ್ನೆಡೆಸುತ್ತಿದ್ದರು. ಡೆಹರಾದೂನ್‌ನ ಭಾರತೀಯ ಸೇನಾ ಅಕಾಡೆಮಿಯ ಪದವಿ ಪಡೆದಿದ್ದು, ಸಾಕಷ್ಟು ಅತ್ಯುನ್ನತ ಪ್ರಶಸ್ತಿಯನ್ನು ಪಡೆದಿದ್ದಾರೆ. ಸುಮಾರು 42 ವರ್ಷಗಳ ಕಾಲ ಭಾರತೀಯ ಸೇನೆಯ ವಿವಿಧ ಹಂತದಲ್ಲಿ ಜನರಲ್ ಬಿಪಿನ್ ರಾವತ್ ಕೆಲಸ ಮಾಡಿದ್ದಾರೆ.


Click it and Unblock the Notifications











