'ಬ್ರಹ್ಮಾಚಾರಿ' ನಿರ್ದೇಶಕನ ಜೊತೆ 'ಫಾರೆಸ್ಟ್' ಸೇರಿದ ಚಿಕ್ಕಣ್ಣ, ಅನೀಶ್, ಗುರುನಂದನ್, ರಂಗಾಯಣ ರಘು
ಇತ್ತೀಚೆಗೆಷ್ಟೇ ಕಾಮಿಡಿ ಕಿಂಗ್ ಚಿಕ್ಕಣ್ಣ ಹೀರೊ ಆಗಿ ಭಡ್ತಿ ಪಡೆದಿದ್ದಾರೆ. ಚಿಕ್ಕಣ್ಣ ನಾಯಕನಾಗಿ ನಟಿಸಿದ ಮೊದಲ ಸಿನಿಮಾ 'ಉಪಾಧ್ಯಕ್ಷ' ಬಾಕ್ಸಾಫೀಸ್‌ನಲ್ಲಿ ಗೆದ್ದು, ಜನರ ಮೆಚ್ಚುಗೆಯನ್ನು ಗಳಿಸಿತ್ತು. ಈ ಸಿನಿಮಾ ಬಳಿಕ ಮುಂದೇನು ಮಾಡ್ತಾರೆ? ಯಾವ ಸಿನಿಮಾದಲ್ಲಿ ನಟಿಸುತ್ತಾರೆ? ಅನ್ನೋ ಕುತೂಹಲ ಅವರ ಅಭಿಮಾನಿಗಳಿಗೆ ಇತ್ತು. ಅದಕ್ಕೀಗ ಸರ್ಪ್ರೈಸ್ ಸಿಕ್ಕಿದೆ.
ಚಿಕ್ಕಣ್ಣ ನಾಯಕನಾಗಿ ನಟಿಸಿದ ಬಳಿಕ ಹೊಸ ಸಿನಿಮಾ ಅನೌನ್ಸ್ ಆಗಿದೆ. ಆ ಸಿನಿಮಾ ಹೆಸರು 'ಫಾರೆಸ್ಟ್'. ಚಿಕ್ಕಣ್ಣ ಹೀರೊ ಆದ್ಮೇಲೆ ಜಾಗರೂಕರಾಗಿ ಹೆಜ್ಜೆ ಇಡುತ್ತಿದ್ದಾರೆ. ಎರಡನೇ ಸಿನಿಮಾದಲ್ಲೇ ಮಲ್ಟಿಸ್ಟಾರ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. 'ಫಾರೆಸ್ಟ್' ಸಿನಿಮಾದಲ್ಲಿ ಕನ್ನಡದ ಇನ್ನೂ ಮೂವರು ನಟರು ಕಾಣಿಸಿಕೊಳ್ಳುತ್ತಿದ್ದಾರೆ.

'ಫಸ್ಟ್ ರ್‍ಯಾಂಕ್ ರಾಜು' ಖ್ಯಾತಿಯ ಗುರುನಂದನ್, ಅನೀಶ್ ತೇಜೇಶ್ವರ್ ಜೊತೆ ರಂಗಾಯಣ ರಘು ಈ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ನಾಲ್ಕು ಮಂದಿ ನಟರು 'ಫಾರೆಸ್ಟ್' ಸಿನಿಮಾದಲ್ಲಿ ನಟಿಸುತ್ತಿದ್ದು, ಸಿನಿಪ್ರಿಯರಿಗೆ ಸಖತ್ ಮನರಂಜನೆ ಸಿಗೋದು ಗ್ಯಾರಂಟಿ.
ಈ ಸಿನಿಮಾಗೆ 'ಬ್ರಹ್ಮಾಚಾರಿ', 'ಡಬಲ್ ಇಂಜಿನ್'ನಂತಹ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿರುವ ಚಂದ್ರ ಮೋಹನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕಾಮಿಡಿ ಸಿನಿಮಾಗಳನ್ನೇ ಹೆಚ್ಚಾಗಿ ನಿರ್ದೇಶನ ಮಾಡಿರುವ ಚಂದ್ರ ಮೋಹನ್ ಮತ್ತೊಂದು ಕಾಮಿಡಿ ಕಮ್ ಅಡ್ವೆಂಚರ್ ಸಿನಿಮಾವನ್ನು ತೆರೆಮೇಲೆ ತರುವುದಕ್ಕೆ ಹೊರಟಿದ್ದಾರೆ.
ಟೈಟಲ್ ಹೇಳುವುಂತೆ 'ಫಾರೆಸ್ಟ್' ಸಿನಿಮಾದ ಶೇ. 80ರಷ್ಟು ಭಾಗ ಕಾಡಿನಲ್ಲಿಯೇ ಚಿತ್ರೀಕರಣ ನಡೆಯಲಿದೆ. ತಂಡದ ಪ್ರಕಾರ ಈ ಸಿನಿಮಾ ಫನ್ ಜೊತೆ ಥ್ರಿಲ್ಲಿಂಗ್ ರೈಡ್ ಅನುಭವನ್ನು ನೀಡಲಿದೆಯಂತೆ. ಈ ಸಿನಿಮಾಗೆ ಕಾಂತರಾಜು ಅನ್ನುವವರು ಎನ್‌ಎಂಕೆ ಬ್ಯಾನರ್ ಮೂಲಕ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.

'ಫಾರೆಸ್ಟ್' ಸಿನಿಮಾಗೆ ವಿ. ರವಿಶಂಕರ್ ಕ್ಯಾಮರಾ ವರ್ಕ್ ಮಾಡುತ್ತಿದ್ದಾರೆ. ಅದೇ ಅರ್ಜುನ್ ಕಿಟ್ಟು ಎಡಿಟಿಂಗ್, ಧರ್ಮವೀರ್-ವೀರ್ ಸಮರ್ಥ್ ಸಂಗೀತ ನಿರ್ದೇಶನವಿದೆ. ಸದ್ಯ ಚಿತ್ರತಂಡ ಟೈಟಲ್ ರಿವೀಲ್ ಮಾಡಿದೆಯಷ್ಟೇ. ಉಳಿದ ಮಾಹಿತಿ ಮುಂದಿನ ದಿನಗಳಲ್ಲಿ ಹೊರಬೀಳುವ ಸಾಧ್ಯತೆಯಿದೆ. ಆದರೆ, ಈ ಸಿನಿಮಾ ಮೂಲಕ ಚಿಕ್ಕಣ್ಣ ನಾಯಕನಾಗಿ ನಟಿಸುತ್ತಿರುವ ಎರಡನೇ ಸಿನಿಮಾ ಬಗ್ಗೆ ಸ್ಪಷ್ಟನೆ ಸಿಕ್ಕಂತಾಗಿದೆ.


Click it and Unblock the Notifications











