ಜೇಮ್ಸ್ ಪ್ರೀ-ರಿಲೀಸ್ ಕಾರ್ಯಕ್ರಮಕ್ಕೆ ಮೆಗಾಸ್ಟಾರ್ ಚಿರಂಜೀವಿ- ಜೂ.ಎನ್‌ಟಿಆರ್ ಗೆಸ್ಟ್
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆ ಸಿನಿಮಾ 'ಜೇಮ್ಸ್' ಬಿಡುಗಡೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಅಪ್ಪು ಹುಟ್ಟುಹಬ್ಬಕ್ಕೆ ಜೇಮ್ಸ್ ರಿಲೀಸ್ ಪಕ್ಕಾ ಆಗಿದೆ. ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಉಳಿದಿರುವುದರಿಂದ ಚಿತ್ರತಂಡ ಬಿಡುವಿಲ್ಲದೆ ಕೆಲಸ ಮಾಡುತ್ತಿದೆ. ಪುನೀತ್ ಅಭಿನಯದ ಕೊನೆಯ ಸಿನಿಮಾವನ್ನು ಅದ್ದೂರಿಯಾಗಿ ಬಿಡುಗಡೆ ಮಾಡಬೇಕು ಅಂತ ಚಿತ್ರತಂಡ ಪಣ ತೊಟ್ಟು ನಿಂತಿದೆ. ಶೀಘ್ರದಲ್ಲಿಯೇ 'ಜೇಮ್ಸ್' ಚಿತ್ರಕ್ಕೆ ಪ್ರಿ-ರಿಲೀಸ್ ಕಾರ್ಯಕ್ರಮ ಹಮ್ಮಿಕೊಳ್ಳಲು ಮುಂದಾಗಿದೆ ಚಿತ್ರತಂಡ.
ಪುನೀತ್ ರಾಜ್‌ಕುಮಾರ್ ಕೊನೆ ಸಿನಿಮಾ 'ಜೇಮ್ಸ್' ಮೇಲೆ ನಿರೀಕ್ಷೆಗಳು ನೂರೆಂಟಿವೆ. ಇಷ್ಟು ವರ್ಷ ಅಪ್ಪು ಚಿತ್ರರಂಗಕ್ಕೆ ಮಾಡಿದೆ ಸೇವೆಗೆ ಸರಿಯಾದ ನ್ಯಾಯ ಈ ಸಿನಿಮಾ ಮೂಲಕ ಸಿಗಲೇ ಬೇಕು ಅಂತ ಅಭಿಮಾನಿಗಳು ನಿರ್ಧರಿಸಿದ್ದಾರೆ. ಅದೂ ಅಲ್ಲದೆ ಪುನೀತ್ ಹುಟ್ಟುಹಬ್ಬದಂತೆ 'ಜೇಮ್ಸ್' ಬಿಡುಗಡೆಯಾಗುತ್ತಿರುವುದರಿಂದ ಅಪ್ಪು ಫ್ಯಾನ್ಸ್‌ಗೆ ಡಬಲ್ ಧಮಾಕಾ. ಸದ್ಯಕ್ಕೀಗ 'ಜೇಮ್ಸ್' ಪ್ರೀ ರಿಲೀಸ್ ಇವೆಂಟ್‌ಗೆ ತೆಲುಗು ಚಿತ್ರರಂಗ ಇಬ್ಬರು ಘಟಾನುಘಟಿ ನಟರು ಅತಿಥಿಗಳಾಗಿ ಬರುತ್ತಾರೆ ಎನ್ನಲಾಗಿದೆ.

ಹೊಸಪೇಟೆಯಲ್ಲಿ ಪ್ರಿ-ರಿಲೀಸ್ ಇವೆಂಟ್
'ಜೇಮ್ಸ್' ಟೀಸರ್ ರಿಲೀಸ್‌ಗೂ ಮುನ್ನವೇ ನಿರ್ದೇಶಕ ಬಹದ್ಧೂರು ಚೇತನ್ ಮೆಗಾ ಪ್ರಿ-ರಿಲೀಸ್ ಕಾರ್ಯಕ್ರಮ ಮಾಡುವುದಾಗಿ ಹೇಳಿದ್ದರು. ಅದರಂತೆ ಚಿತ್ರತಂಡ ಸಿನಿಮಾ ಬಿಡುಗಡೆಗೂ ಮುನ್ನವೇ ಅದ್ಧೂರಿ ಕಾರ್ಯಕ್ರಮ ಹಮ್ಮಿಕೊಳ್ಳಲು ಮುಂದಾಗಿದೆ. 'ಜೇಮ್ಸ್' ಫಸ್ಟ್ ಲುಕ್ ಹಾಗೂ ಟೀಸರ್‌ನಿಂದಲೇ ಥ್ರಿಲ್ ಆಗಿರುವ ಪುನೀತ್ ಫ್ಯಾನ್ಸ್ ಸಿನಿಮಾ ನೋಡಲು ಕಾದುಕೂತಿದ್ದಾರೆ. ಆದರೆ, ಅದಕ್ಕೂ ಮುನ್ನ ಅಭಿಮಾನಿಗಳಿಗಾಗಿ ಹೊಸಪೇಟೆಯಲ್ಲಿ ಪ್ರಿ-ರಿಲೀಸ್ ಇವೆಂಟ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಇವೆಂಟ್‌ಗೆ ಟಾಲಿವುಡ್ ದಿಗ್ಗಜರು ಬರುತ್ತಾರೆ ಎನ್ನಲಾಗಿದೆ.

ಜಿರಂಜೀವಿ- ಜೂ.ಎನ್‌ಟಿಆರ್ ಗೆಸ್ಟ್?
'ಜೇಮ್ಸ್' ಅಪ್ಪು ಅಭಿನಯದ ಕೊನೆಯ ಸಿನಿಮಾ ಆಗಿರುವುದರಿಂದ ಸಕಲ ಗೌರವಗಳು ಸಿಗಲೇಬೇಕು. ಈ ಕಾರಣಕ್ಕೆ ಚಿತ್ರತಂಡ ಸಾಕಷ್ಟು ಪ್ಲ್ಯಾನ್‌ಗಳನ್ನು ಮಾಡಿಟ್ಟುಕೊಂಡಿದೆ. ಅಪ್ಪು ಅಭಿಮಾನಿಗಳ ವಲಯದಲ್ಲಿ ಪ್ರಿ-ರಿಲೀಸ್ ಇವೆಂಟ್ ಬಗ್ಗೆ ಸುದ್ದಿಯೊಂದು ಓಡಾಡುತ್ತಿದೆ. ಮಾರ್ಚ್ 06ರಂದು ಹೊಸಪೇಟೆಯಲ್ಲಿ ಪ್ರಿ-ರಿಲೀಸ್ ಇವೆಂಟ್ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಮೆಗಾಸ್ಟಾರ್ ಚಿರಂಜೀವಿ ಹಾಗೂ ಜೂ.ಎನ್‌ಟಿಆರ್ ವಿಶೇಷ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಹೇಳುತ್ತಿದ್ದಾರೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾ-ಪಟ್ಟೆ ಸದ್ದು ಮಾಡುತ್ತಿದೆ. ಮೂಲಗಳ ಪ್ರಕಾರ, ಇಂತಹದ್ದೊಂದು ಪ್ಲ್ಯಾನ್ ನಡೆಯುತ್ತಿದೆ. ಹೊಸಪೇಟೆಯಲ್ಲಿ ಪ್ರಿ-ರಿಲೀಸ್ ಇವೆಂಟ್ ಮಾಡುವುದೂ ಕೂಡ ನಿಜ. ಆದರೆ, ಚಿರಂಜೀವಿ ಹಾಗೂಸ ಜೂ.ಎನ್‌ಟಿಆರ್ ಅತಿಥಿಗಳಾಗಿ ಬರುತ್ತಾರಾ, ಇಲ್ಲವಾ ಅನ್ನುವುದು ನಾಳೆ ಸಂಜೆಯೊಳಗೆ ಗೊತ್ತಾಗಲಿದೆ.

5 ಭಾಷೆಯಲ್ಲಿ ಪುನೀತ್ 'ಜೇಮ್ಸ್' ಬಿಡುಗಡೆ
'ಜೇಮ್ಸ್' ಐದು ಭಾಷೆಗೆ ಡಬ್ ಆಗಿದೆ. ಕನ್ನಡ ಪ್ರಮುಖ ಭಾಷೆಯಾಗಿದ್ದರೂ, ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗೆ ಡಬ್ ಆಗಿದೆ. ಆದರೆ, ಮಾರ್ಚ್ 17ಕ್ಕೆ ಏಕಕಾಲಕ್ಕೆ ಎಲ್ಲಾ ಭಾಷೆಯಲ್ಲೂ ಪುನೀತ್ ರಾಜ್‌ಕುಮಾರ್ ಸಿನಿಮಾ ಬಿಡುಗಡೆಯಾಗುತ್ತೆ. 'ಜೇಮ್ಸ್' ರಿಲೀಸ್‌ಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಚಿತ್ರತಂಡ ಐದು ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ. ಈ ಹಿಂದೆ ಪುನೀತ್ ಅಭಿನಯದ 'ಯುವರತ್ನ' ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ರಿಲೀಸ್ ಆಗಿತ್ತು.

'ಜೇಮ್ಸ್' ರಿಲೀಸ್‌ಗೆ ಅಭಿಮಾನಿಗಳು ಸಜ್ಜು
'ಜೇಮ್ಸ್' ರಿಲೀಸ್ ಅಭಿಮಾನಿಗಳು ಕೂಡ ಭರ್ಜರಿ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಹೆಲಿಕಾಪ್ಟರ್ ಮೂಲಕ ವಿರೇಶ್ ಚಿತ್ರಮಂದಿರ ಹಾಗೂ ಅಪ್ಪು ಸಮಾಧಿ ಮೇಲೆ ಪುಷ್ಪಾಂಜಲಿ. ಥಿಯೇಟರ್ ಮುಂದೆ 30 ಸಿನಿಮಾದ ಅಪ್ಪು ಕಟ್‌ಔಟ್ ಸೇರಿದಂತೆ ರಾಜ್ಯಾದ್ಯಂತ ಹತ್ತು ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. 'ಜೇಮ್ಸ್' ಬಿಡುಗಡೆ ದಿನ ಅಭಿಮಾನಿಗಳ ಸಂಭ್ರಮ ಜೋರಾಗಿರುತ್ತೆ ಅನ್ನುವುದು ಮಾತ್ರ ಕನ್ಫರ್ಮ್.


Click it and Unblock the Notifications











