"ಯಾವ್ ಬಾಸೂ ಇಲ್ಲ, ಸುಮ್ನಿರಯ್ಯ"; ದರ್ಶನ್ ಫ್ಯಾನ್ಸ್‌ಗೆ ಗದರಿದ ಸಿಎಂ ಡಿಕೆ ಶಿವಕುಮಾರ್
ಸ್ಯಾಂಡಲ್‌ವುಡ್‌ನ ಸ್ಟಾರ್ ಹೀರೋ ದರ್ಶನ್ ಜೈಲಿನಿಂದ ಹೊರ ಬರುವುದಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ. ಇನ್ನೊಂದು ಕಡೆ ಸಿನಿಮಾ ಮಂದಿ ಆಸೆ ಕೂಡ ಇದೆ. ಆದರೆ, ರೇಣುಕಾಸ್ವಾಮಿ ಹತ್ಯೆ ಆರೋಪದಲ್ಲಿ ಜೈಲು ಸೇರಿರುವ ದರ್ಶನ್‌ಗೆ ಸದ್ಯಕ್ಕೆ ಬಿಡುಗಡೆ ಭಾಗ್ಯವಿಲ್ಲ. ಹೀಗಾಗಿ ಅವರ ಅಭಿಮಾನಿಗಳು ಜೈಲಿನಿಂದ ರಿಲೀಸ್ ಮಾಡಿ ಅಂತ ಬೇಡಿಕೆ ಇಡುತ್ತಿದ್ದಾರೆ. ಇತ್ತೀಚೆಗೆ ಸಿಎಂ ಡಿಕೆ ಶಿವಕುಮಾರ್ ಅವರ ಬಳಿನೂ ಇದೇ ಬೇಡಿಕೆ ಇಟ್ಟಿದ್ದಾರೆ. ಆದರೆ, ಅದಕ್ಕೆ ಸಿಎಂ ಕೊಟ್ಟ ಪ್ರತಿಕ್ರಿಯೆ ಭಾರೀ ಚರ್ಚೆಯಾಗುತ್ತಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಜೈಲಿನಲ್ಲಿ ಇರೋದಕ್ಕೆ ಅಭಿಮಾನಿಗಳು ಮರುಕ ಪಡುತ್ತಿದ್ದಾರೆ. ಇದೂವರೆಗೂ ಬಿಡುಗಡೆಗೆ ಮಾಡಿದ ಪ್ರಯತ್ನಗಳೆಲ್ಲವೂ ಪ್ಲಾಪ್ ಆಗಿವೆ. ಪ್ರತಿ ಬಾರೀ ಪ್ರಯತ್ನ ಪಟ್ಟಾಗಲೂ ಅವರಿಗೆ ನಿರಾಸೆ ಆಗಿದೆ. ಹೀಗಾಗಿ ಯಾವುದೇ ರಾಜಕೀಯ ಮುಖಂಡರು ಎದುರಾದರೂ ಅವರಲ್ಲಿ ದರ್ಶನ್ ಬಿಡುಗಡೆ ಮಾಡಿಸುವಂತೆ ಮನವಿ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ.

ಇತ್ತೀಚೆಗೆ ಸಿಎಂ ಡಿಕೆ ಶಿವಕುಮಾರ್ ತಮ್ಮ ಸ್ವಕ್ಷೇತ್ರ ಕನಕಪುರಕ್ಕೆ ಭೇಟಿ ನೀಡಿದ್ದರು. ಆ ವೇಳೆ ದರ್ಶನ್ ಅಭಿಮಾನಿಗಳು ನಟನ ಬಿಡುಗಡೆಗೆ ಡಿಕೆ ಶಿವಕುಮಾರ್ ಅವರಿಗೆ ಮನವಿ ಮಾಡಿಕೊಂಡಿದ್ದರು. ಅವರ ಪ್ರತಿಕ್ರಿಯೆಗೆ ಸಿಎಂ ಡಿ.ಕೆ.ಶಿವಕುಮಾರ್ ನೀಡಿರುವ ಖಡಕ್ ಪ್ರತ್ರಿಕ್ರಿಯೆ ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅಷ್ಟಕ್ಕೂ ದರ್ಶನ್ ಫ್ಯಾನ್ಸ್‌ಗೆ "ಯಾವ್ ಬಾಸೂ ಇಲ್ಲ, ಸುಮ್ನಿರಯ್ಯ" ಎಂದು ಹೇಳಿದ್ದೇಕೆ? ಅಸಲಿಗೆ ಏನಿದು ಘಟನೆ? ತಿಳಿಯುವುದಕ್ಕೆ ಮುಂದೆ ಓದಿ.
ಸ್ವಕ್ಷೇತ್ರಕ್ಕೆ ಡಿಕೆಶಿ ಭೇಟಿ
ಕರ್ನಾಟಕದ ನೂತನ ಮುಖ್ಯಮಂತ್ರಿಯಾದ ಬಳಿಕ ಸಿಎಂ ಡಿಕೆ ಶಿವಕುಮಾರ್ ತಮ್ಮ ನಿರ್ಧಾರಗಳಿಂದ ಸುದ್ದಿಯಲ್ಲಿ ಇದ್ದಾರೆ. ತಮ್ಮ ಸ್ವಕ್ಷೇತ್ರಕ್ಕೆ ಕನಕಪುರದ ಕುರುಬರಹಳ್ಳಿಗೆ ಭೇಟಿ ನೀಡಿದ್ದರು. ಈ ವೇಳೆ ಜೀರೋ ಟ್ರಾಫಿಕ್ ಸೌಲಭ್ಯವನ್ನು ಬದಿಗೊತ್ತಿ, ಮೆಟ್ರೋ ರೈಲಿನಲ್ಲಿ ಒಂದಿಷ್ಟು ದೂರ ಪ್ರಯಾಣ ಬೆಳೆಸಿ ಕುರುಬರಹಳ್ಳಿ ತಲುಪಿದ್ದರು. ಅಲ್ಲಿ ಡಿಕೆ ಶಿವಕುಮಾರ್ ಅವರಿಗೆ ಸ್ಥಳೀಯರು ಮೆಣಸು, ಬೆಳ್ಳುಳ್ಳಿ ಹಾಗೂ ಸೇಬು ಹಣ್ಣಿನ ಬೃಹತ್ ಹಾರಗಳನ್ನು ಹಾಕಿ ಅದ್ಧೂರಿಯಾಗಿ ಸ್ವಾಗತ ಕೋರಿದರು.
'ಡಿ ಬಾಸ್' ಘೋಷಣೆ; ಡಿಕೆಶಿ ಭಾಷಣಕ್ಕೆ ಅಡ್ಡಿ
ದರ್ಶನ್ ತಮ್ಮ ಸ್ವಕ್ಷೇತ್ರ ಕನಕಪುರದಲ್ಲಿ ಅಲ್ಲಿನ ಜನರನ್ನು ಉದ್ದೇಶಿ ಮಾತಾಡುತ್ತಿದ್ದರು. ತಮ್ಮ ನೇತೃತ್ವದ ಅಭಿವೃದ್ದಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ್ದರು. ಇದೇ ವೇಳೆ ಡಿಕೆ ಶಿವಕುಮಾರ್ ಅವರಿದ್ದ ವೇದಿಕೆಯತ್ತ ದರ್ಶನ್ ಅಭಿಮಾನಿಗಳು "ಜೈ ಡಿ ಬಾಸ್.. ಜೈ ಡಿ ಬಾಸ್" ಎಂದು ಘೋಷಣೆ ಕೂಗುತ್ತಿದ್ದರು. ಇಷ್ಟೇ ಅಲ್ಲದೇ ಹೇಗಾದರೂ ಮಾಡಿ ದರ್ಶನ್ ಅವರನ್ನು ಜೈಲಿನಿಂದ ಬಿಡಿಸಿಕೊಡಿ ಎಂದು ಕೂಗು ಹಾಕಿದ್ದರು. ಭಾಷಣದ ಮಧ್ಯೆ ಘೋಷಣೆ ಕೂಗಿದ್ದಕ್ಕೆ ಸಿಎಂ ಗರಂ ಆಗಿದ್ದರು.

"ಯಾವ್ ಬಾಸೂ ಇಲ್ಲ, ಸುಮ್ನಿರಯ್ಯ!"
ದರ್ಶನ್ ಬಿಡುಗಡೆಗೆ ಫ್ಯಾನ್ಸ್ ಒತ್ತಾಯ ಮಾಡಿದ್ದರು. ಇದನ್ನು ಗಮನಿಸಿದ ಡಿಕೆ ಶಿವಕುಮಾರ್ ಭಾಷಣದ ಮಧ್ಯೆನೇ ತಿರುಗೇಟು ಕೊಟ್ಟಿದ್ದರು. "ಯಾವ್ ಬಾಸೂ ಇಲ್ಲ, ಸುಮ್ನಿರಯ್ಯ" ಎಂದು ಖಡಕ್ ಆಗಿ ತಿರುಗೇಟು ಕೊಟ್ಟಿದ್ದರು. ಸಿಎಂ ನೀಡಿದ ಈ ನೇರ ಪ್ರತಿಕ್ರಿಯೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ಸದ್ಯಕ್ಕಿಲ್ಲ ದರ್ಶನ್‌ಗೆ ಜಾಮೀನು
ದರ್ಶನ್ ಜಾಮೀನು ಪಡೆದು ಹೊರ ಬರುವುದಕ್ಕೆ ಶತಪ್ರಯತ್ನ ನಡೆಸುತ್ತಲೇ ಇದ್ದಾರೆ. ಇತ್ತೀಚೆಗೆ ಟ್ರಯಲ್ ವಿಳಂಬ ಆಗುತ್ತಿದ್ದು, ಜಾಮೀನು ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ, ಸುಪ್ರೀಂ ಕೋರ್ಟ್ ಅರ್ಜಿಯನ್ನು ತಿರಸ್ಕರಿಸಿದ್ದು, ಒಂದು ವರ್ಷದ ಒಳಗೆ ಟ್ರಯಲ್ ಮುಗಿಸುವಂತೆ ಸೂಚನೆಯನ್ನು ನೀಡಿದೆ. ಹೀಗಾಗಿ ಇನ್ನು ಒಂದು ವರ್ಷದವರೆಗೆ ಜೈಲಿನಲ್ಲಿಯೇ ಇರಬೇಕಾದ ಪರಿಸ್ಥಿತಿಯಿದೆ.


Click it and Unblock the Notifications
