ಜೈಲಿನಲ್ಲಿ ದರ್ಶನ್ ಫೋಟೋ ಲೀಕ್.. ಬೇರೆ ಕಾರಾಗೃಹಕ್ಕೆ ದಾಸ ಶಿಫ್ಟ್; ಸಿಎಂ ಸಿದ್ಧರಾಮಯ್ಯ ಹೇಳಿದ್ದೇನು?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲಿನ ಒಳಗೆ ಇದ್ದರೂ ಆಗಾಗ ಸುದ್ದಿಯಾಗುತ್ತಲೇ ಇದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಯಾಗಿ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿ ಎರಡು ತಿಂಗಳು ಆಗಿದೆ. ಈ ಬೆನ್ನಲೇ ದರ್ಶನ್‌ರನ್ನು ಅವರ ಆಪ್ತರು ಭೇಟಿ ಮಾಡಿ ಬರುತ್ತಿದ್ದಾರೆ. ಅವರ ಯೋಗ ಕ್ಷೇಮವನ್ನು ವಿಚಾರಿಸುತ್ತಿದ್ದರು. ಈ ಹಿಂದೆನೇ ದರ್ಶನ್ ಜೈಲಿನ ಒಳಗೆ ಇರುವ ದರ್ಶನ್ ಫೋಟೋ ಹಾಗೂ ವಿಡಿಯೋ ಲೀಕ್ ಆಗಿ ಮತ್ತಷ್ಟು ಸುದ್ದಿಯಲ್ಲಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಹೇಗಿದ್ದಾರೋ ಅನ್ನೋ ಅಭಿಮಾನಿಗಳ ಆತಂಕಕ್ಕೆ ಈ ಫೋಟೋ ಹಾಗೂ ವಿಡಿಯೋ ಉತ್ತರ ಕೊಟ್ಟಿದೆ. ಜೈಲಿನೊಳಗೆ ದರ್ಶನ್ ಕಾಫಿ ಹಾಗೂ ಸಿಗರೇಟು ಸೇದುತ್ತಿರುವ ಫೋಟೊ ವೈರಲ್ ಆಗಿದೆ. ಜೊತೆ ಯಾರೊಂದಿಗೋ ಮಾತಾಡುತ್ತಿರುವ 25 ಸೆಕೆಂಡುಗಳ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಂಚಲ ಸೃಷ್ಟಿಸಿದೆ.

ದರ್ಶನ್ ಜೈಲಿನ ಒಳಗಿರುವ ಫೋಟೋ ಹಾಗೂ ವಿಡಿಯೋ ವೈರಲ್ ಆಗುತ್ತಿದ್ದಂತೆ ಜನರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಗಂಭೀರವಾಗಿ ಚರ್ಚೆಯಾಗುತ್ತಿದೆ. ಕೆಲವರು ದರ್ಶನ್‌ಗೆ ಜೈಲಿನೊಳಗೆ ರಾಜಾತಿಥ್ಯ ನೀಡಲಾಗಿದೆ ಎಂದು ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ಧರಾಮಯ್ಯ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತಮ್ಮ ಎಕ್ಸ್ ಖಾತೆಯಲ್ಲಿ ಮುಂದಿನ ಕ್ರಮಗಳನ್ನು ತಿಳಿಸಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೇಲೆ ಎಲ್ಲರ ಕಣ್ಣಿದೆ. ಏನು ಮಾಡುತ್ತಾರೆ? ಒಳಗೆ ಹೇಗಿದ್ದಾರೆ? ಯಾರೊಂದಿಗೆ ಆತ್ಮೀಯರಾಗಿದ್ದಾರೆ? ಅನ್ನೋ ಪ್ರಶ್ನೆ ಹುಟ್ಟಿತ್ತು. ಸೆರೆಮನೆಯಲ್ಲಿ ದರ್ಶನ್‌ಗೆ ಅರಮನೆ ಟ್ರೀಟ್ಮೆಂಟ್ ಕೊಡುತ್ತಿದ್ದಾರೆ ಅನ್ನೋ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಸಿಎಂ ತಮ್ಮ ಎಕ್ಸ್ ಖಾತೆಯಲ್ಲಿ ದರ್ಶನ್‌ರನ್ನು ಸೇರಿ ಬೇರೆ ಕಾರಾಗೃಹಕ್ಕೆ ಶಿಫ್ಟ್ ಮಾಡುವಂತೆ ಸೂಚನೆ ನೀಡಿದ್ದಾರೆ.
"ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಮತ್ತಿತರರಿಗೆ ರಾಜಾತಿಥ್ಯ ಒದಗಿಸುತ್ತಿರುವ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡುವಂತೆ ಸೂಚಿಸಿದ್ದೇನೆ." ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.
ಹಾಗೇ ಸಿಎಂ, "ದರ್ಶನ್ ಮತ್ತು ಇತರರನ್ನು ಕೂಡಲೇ ಬೇರೆ ಬೇರೆ ಕಾರಾಗೃಹಗಳಿಗೆ ಸ್ಥಳಾಂತರ ಮಾಡುವಂತೆ ಹಾಗೂ ಕಾರಾಗೃಹಕ್ಕೆ ಭೇಟಿ ನೀಡಿ ಪ್ರಕರಣದ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚನೆ ನೀಡಿದ್ದೇನೆ." ಎಂದು ತಮ್ಮ ಎಕ್ಸ್ ಫೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.
ದರ್ಶನ್ ಜೈಲಿನಲ್ಲಿ ಸಿಗರೇಟ್ ಸೇದುತ್ತಿರುವ ಫೋಟೊ, ವೀಡಿಯೋ ವೈರಲ್ ಆಗುತ್ತಿದ್ದಂತೆ ಹಲವು ಅನುಮಾನಗಳಂತೂ ಮೂಡಿದೆ. ಜೈಲಿನೊಳಗೆಗೆ ಕೈದಿಗಳಿ ಮೊಬೈಲ್ ಫೋನ್, ಸಿಗರೇಟ್ ಸೇರಿದಂತೆ ರಾಜಮರ್ಯಾದೆ ಸಿಗುತ್ತಿದೆ ಅನ್ನೋದು ಸಾಬೀತಾಗಿದೆ. ಈ ಸಂಬಂಧ ಈಗಾಗಲೇ 7 ಜನ ಜೈಲು ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ ಎಂದೂ ಹೇಳಲಾಗುತ್ತಿದೆ.


Click it and Unblock the Notifications











