ಶಬಾನಾ ಆಜ್ಮಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದ ಸಿಎಂ ಸಿದ್ಧರಾಮಯ್ಯ; ಪ್ರಶಸ್ತಿ ಜೊತೆಗೆ ಸಿಕ್ಕಿದ ಹಣವೆಷ್ಟು?
16ನೇ ಬೆಂಗಳೂರು ಅಂತರಾಷ್ಟ್ರೀಯ ಚಲನ ಚಿತ್ರೋತ್ಸವ ಮಾರ್ಚ್ 8ರಂದು ಮುಕ್ತಾಯಗೊಂಡಿದೆ. ವಿವಾದಗಳ ಮಧ್ಯೆ ಫಿಲ್ಮ್ ಫೆಸ್ಟಿವಲ್ ಅನ್ನು ಯಶಸ್ವಿಯಾಗಿ ಮುಗಿಸಿದೆ. ಪ್ರತಿವರ್ಷದಂತೆ ಈ ಚಲನಚಿತ್ರೋತ್ಸವದಲ್ಲಿ ಚಿತ್ರರಂಗದ ಹಿರಿಯರಿಗೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಈ ಬಾರಿ ಹಿಂದಿ ಹಾಗೂ ಹಲವು ಭಾಷೆಯ ಸಿನಿಮಾಗಳಲ್ಲಿ ನಟಿಸಿರುವ ಹಿರಿಯ ನಟಿ ಶಬಾನಾ ಆಜ್ಮಿ ಆಯ್ಕೆಯಾಗಿದ್ದರು. ಆ ಪ್ರಶಸ್ತಿಯನ್ನು ಸಿಎಂ ಸಿದ್ಧರಾಮಯ್ಯ ನೀಡಿ ಗೌರವಿಸಿದ್ದಾರೆ.
ಭಾರತೀಯ ಚಿತ್ರರಂಗದಲ್ಲಿ ಹಲವು ದಶಕಗಳಿಂದ ಹಲವು ಭಾಷೆಗಳಲ್ಲಿ ನಟಿಸಿ ಸಾಧನೆ ಮಾಡಿರುವ ಹಿರಿಯ ನಟಿ ಶಬಾನಾ ಆಜ್ಮಿ. ಇವರನ್ನು ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆ ಮಾಡಿರುವ ವಿಷಯವನ್ನು ಸ್ವತ: ಸಿಎಂ ಸಿದ್ಧರಾಮಯ್ಯ ಅವರೇ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಅದರಂತೆ ತಮ್ಮ ನಿವಾಸ ಕಾವೇರಿಯಲ್ಲಿ ಶಬಾನಾ ಆಜ್ಮಿ ಗೆ ಶಾಲು ಹೊದಿಸಿ, ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಹಿರಿಯ ನಟಿ ಶಬಾನಾ ಆಜ್ಮಿ ಜೊತೆ ಪತಿ ಜಾವೇದ್ ಅಖ್ತರ್ ಕೂಡ ಕಾಣಿಸಿಕೊಂಡಿದ್ದು ಇವರಿಗೂ ಸನ್ಮಾನ ಮಾಡಿ ಗೌರವಿಸಲಾಗಿದೆ. ಜಾವೇದ್ ಅಖ್ತರ್ ಹಿಂದಿ ಸಿನಿಮಾರಂಗದಲ್ಲಿ ಬರಹಗಾರರನಾಗಿ, ಗೀತ ರಚನೆಗಾರರಾಗಿ ಗುರುತಿಸಿಕೊಂಡಿದ್ದಾರೆ. ಅಂದ್ಹಾಗೆ ಪ್ರತಿಷ್ಠಿತ ಪ್ರಶಸ್ತಿಯ ಜೊತೆ ಬಾಲಿವುಡ್ ನಟಿಗೆ ಸಿಕ್ಕಿದ ಹಣವೆಷ್ಟು? ಕನ್ನಡದ ಯಾವ ಸಿನಿಮಾದಲ್ಲಿ ನಟಿಸಿದ್ದಾರೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಶಬಾನಾ ಆಜ್ಮಿ ಭಾರತೀಯ ಚಿತ್ರರಂಗದ ಮೇರು ನಟಿ. ಹಲವು ಭಾಷೆಯ ಸಿನಿಮಾಗಳಲ್ಲಿ ಶಬಾನಾ ಆಜ್ಮಿ ನಟಿಸಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಇವರ ಸೇವೆಯನ್ನು ಪರಿಗಣಿಸಿ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನೀಡಲಾಗುವ ಜೀವಮಾನ ಸಾಧನೆಯ ಪ್ರಶಸ್ತಿಯನ್ನು ನೀಡಲಾಗಿದೆ. ಈ ವೇಳೆ ಪ್ರಶಸ್ತಿಯ ಜೊತೆಗೆ 10 ಲಕ್ಷ ರೂಪಾಯಿಯ ಚೆಕ್ ಅನ್ನು ನೀಡಿಲಾಗಿದೆ.
ಶಬಾನಾ ಆಜ್ಮಿಗೆ ಸನ್ಮಾನ ಮಾಡುವ ವೇಳೆ ಸಿಎಂ ಸಿದ್ಧರಾಮಯ್ಯ ಅವರ ಸಿನಿಮಾಗಳನ್ನು ನೆನೆಪಿಸಿಕೊಂಡಿದ್ದಾರೆ. ಅವರ ನಟನೆಯನ್ನು ಹೊಗಳಿದ್ದಾರೆ. "ಮಿಲೇಸುರ್ ಮೇರಾ ತುಮಾರಾ ದೃಶ್ಯಕಾವ್ಯ ನಮಗೆ ತುಂಬಾ ಇಷ್ಟ. ಇದರಲ್ಲಿ ನಿಮ್ಮನ್ನು ನೋಡಿದ್ದೇನೆ" ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನಟಿ ಶಬಾನಾ ಅವರ ಗುಣಗಾನ ಮಾಡಿದ್ದಾರೆ. ಅದಕ್ಕೆ ಶಬಾನಾ ಆಜ್ಮಿ ಹಾಗೂ ಪತಿ ಜಾವೇದ್ ಅಖ್ತರ್ ಕರ್ನಾಟಕ ರಾಜ್ಯ ಸಾಂಸ್ಕೃತಿಕವಾಗಿ ಹಾಗೂ ಸಂಗೀತ ಕ್ಷೇತ್ರದಲ್ಲಿ ಅತ್ಯಂತ ಜನಪ್ರಿಯತೆಯನ್ನು ಪಡೆದುಕೊಂಡಿದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

ಶಬಾನಾ ಆಜ್ಮಿ ಹಾಗೂ ಜಾವೇದ್ ಅಖ್ತರ್ ಮೆಚ್ಚುಗೆ ಸಿ ಎಂ ಪ್ರತಿಕ್ರಿಯಿಸಿದ್ದು, "ಭೀಮ್ ಸೇನ್ ಜೋಶಿ, ಕುಮಾರ ಗಂಧರ್ವ, ಗಂಗೂಬಾಯಿ ಹಾನಗಲ್ ಇವರೆಲ್ಲಾ ಹಿಂದೂಸ್ತಾನಿ ಸಂಗೀತದ ದಿಗ್ಗಜರು ನಮ್ಮ ರಾಜ್ಯದ ಹೆಮ್ಮೆ. ಇವರೆಲ್ಲಾ ಧಾರವಾಡದವರು ಎನ್ನುವುದು ಮತ್ತೊಂದು ವಿಶೇಷ" ಎಂದು ಹೆಮ್ಮೆ ಪಟ್ಟಿದ್ದಾರೆ. ಈ ವೇಳೆ ಸರ್ಕಾರದ ಕಾರ್ಯದರ್ಶಿ ಕಾವೇರಿ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ , ವಾರ್ತಾ ಮತ್ತು ಪ್ರಚಾರ ಇಲಾಖೆ ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರು ಶಬಾನಾ ಆಜ್ಮಿ ಮತ್ತು ಜಾವೇದ್ ಅಖ್ತರ್ ಅವರನ್ನು ಸ್ವಾಗತಿಸಿದರು.
ಇದೇ ಸಂದರ್ಭದಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ , ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಸಾಧು ಕೋಕಿಲ, 16 ನೇ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದ ಕಲಾ ನಿರ್ದೇಶಕ ವಿದ್ಯಾಶಂಕರ್ ಉಪಸ್ಥಿತಿ ಇತ್ತು. ಶಬಾನಾ ಆಜ್ಮಿಗೆ ಜೀವನಮಾನ ಸಾಧನೆ ಪ್ರಶಸ್ತಿ ಕೊಟ್ಟಿದ್ದಕ್ಕೆ ತಕರಾರು ಇಲ್ಲದೆ ಇದ್ದರೂ, ಕನ್ನಡದ ಕಲಾವಿದರನ್ನು ಆಯ್ಕೆ ಮಾಡಬಹುದಿತ್ತು ಎನ್ನುವ ಅಭಿಪ್ರಾಯವೂ ಈ ವೇಳೆ ವ್ಯಕ್ತವಾಗುತ್ತಿದೆ.


Click it and Unblock the Notifications











