"ಟ್ಯಾಲೆಂಟ್‌ನಿಂದಲೇ ಉತ್ತರ ಕೊಡುತ್ತೇನೆ"; ಕಾಮಿಡಿ ಕಿಲಾಡಿಗಳು ನಟ ಮಡೆನೂರು ಮನು
ಜೀ ಕನ್ನಡದ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಮಡೆನೂರ್ ಮನು ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಅದುವೇ 'ಕುಲದಲ್ಲಿ ಕೀಳ್ಯಾವುದೋ'. ಈ ಸಿನಿಮಾದಲ್ಲಿ ಯೋಗರಾಜ್ ಭಟ್ ಕೂಡ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಕಾಮಿಡಿ ಶೋಗಳಲ್ಲಿ ವೀಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತಿದ್ದ ಮಡೆನೂರ್ ಮನು, ಈಗ ನಾಯಕನಾಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.
'ಕುಲದಲ್ಲಿ ಕೀಳ್ಯಾವುದೋ' ಸಿನಿಮಾದ ಟ್ರೈಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಈ ಸಿನಿಮಾದ ಟ್ರೈಲರ್ ರಿಲೀಸ್ ಆದ ಒಂದೇ ದಿನಕ್ಕೆ ಒಂದು ಮಿಲಿಯನ್ ವೀಕ್ಷಣೆಯನ್ನು ಪಡೆದುಕೊಂಡಿದೆ. ಟ್ರೈಲರ್ ನೋಡಿ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಮಡೆನೂರ್ ಮನುಗೆ ನಾಯಕಿಯಾಗಿ 'ರಾಮಚಾರಿ' ಧಾರಾವಾಹಿಯ ನಟಿ ಮೌನ ಗುಡ್ಡೆಮನೆ ನಟಿಸಿದ್ದಾರೆ. ಕೆ.ರಾಮ್‌ನಾರಾಯಣ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಇನ್ನೇನು ಸಿನಿಮಾ ಇದೇ ಮೇ 23ರಂದು ರಿಲೀಸ್ ಆಗುತ್ತಿದೆ. ಈ ವೇಳೆ ಮಡೆನೂರ್ ಮನು ಫಿಲ್ಮಿಬೀಟ್ ಕನ್ನಡದ ಜೊತೆ ಸಿನಿಮಾ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ. ಅದರ ಝಲಕ್ ಇಲ್ಲಿದೆ.

ಮನೆ ಮನೆಗೆ ತೆರಳಿ ಪ್ರಚಾರ
"ಜೀ ಕನ್ನಡದ ಕಾಮಿಡಿ ಕಿಲಾಡಿಗಳಲ್ಲಿ ನೋಡಿರುತ್ತಾರೆ. ಸಿಕ್ಕಿದಾಗ ಮಾತಾಡಿಸಬೇಕು ಅನ್ನೋದು ಎಲ್ಲೋ ಒಂದು ಕಡೆ ಇರುತ್ತೆ. ನಾವು ಡೈರೆಕ್ಟ್ ಆಗಿ ಹೋಗಿ ಮಾತಾಡಿಸಿದಾಗ ಸಿನಿಮಾ ನೋಡಬೇಕು ಅಂತ ಅನಿಸುತ್ತೆ. ಪೋನ್‌ನಲ್ಲಿ ಮದುವೆ ಬನ್ನಿ ಅಂದರೆ ಆಯ್ತು ಬರುತ್ತೇನೆ ಎನ್ನುತ್ತಾರೆ. ನಾಲ್ಕು ಜನ ಬರೋ ಕಡೆಗೆ ಒಬ್ಬರು ಬರುತ್ತಾರೆ. ಮನೆಗೆ ಹೋಗಿ ಹೇಳಿದಾಗ, ಫ್ಯಾಮಿಲಿ ಸಮೇತ ಬರುತ್ತಾರೆ. ಈ ಕಾನ್ಸೆಪ್ಟ್ ಇಟ್ಕೊಂಡು ಡೈರೆಕ್ಟ್ ಆಗಿ ಅವರನ್ನು ಭೇಟಿ ಮಾಡಿ ಕರೆದಿದ್ದೇನೆ. ಬಸ್‌ನಲ್ಲೂ ಅಷ್ಟೇ ಸುಮಾರಷ್ಟು ಜನ ಮಾತಾಡೋರು ಸೆಲ್ಫಿ ತೆಗೆದುಕೊಳ್ಳೋರು. ಆಗ ಖುಷಿ ಆಗೋದು ಸಿನಿಮಾ ರೀಚ್ ಆಗಿದೆ ಅಂತ. ಕೆಲವರು ಸಿನಿಮಾ ನೋಡುತ್ತೇನೆ ಅಂತ ಮನೆ ದೇವರು ಮೇಲೆ ಆಣೆ ಮಾಡಿದ್ದಾರೆ." ಎಂದು ಹೇಳುತ್ತಾರೆ.
ಟ್ಯಾಲೆಂಟ್ ಇದ್ದವರು ಬೆಳೆಯಬೇಕು
ಮಡೆನೂರ್ ಮನು ಪ್ರತಿಭಾವಂತ ಅನ್ನೋದರಲ್ಲಿ ಎರಡು ಮಾತಿಲ್ಲ. ಅದನ್ನು ಈಗಾಗಲೇ ಕಾಮಿಡಿ ಕಿಲಾಡಿಗಳು ಮೂಲಕ ಸಾಬೀತು ಮಾಡಿದ್ದಾರೆ. ಇತ್ತೀಚೆಗೆ 'ಕುಲದಲ್ಲಿ ಕೀಳ್ಯಾವುದೋ' ಸಿನಿಮಾದ ಪ್ರಚಾರದ ವೇಳೆ ಜನರೇ ಈ ಮಾತನ್ನು ಹೇಳಿದ್ದನ್ನು ನೆನಪಿಸಿಕೊಂಡಿದ್ದಾರೆ. "ಎಲ್ಲರೂ ಅದೇ ಹೇಳುತ್ತಿದ್ದರು. ಚಿಕ್ಕ ಟಿವಿಯಲ್ಲಿ ಬರುತ್ತಿದ್ದೆ. ಈಗ ಬೆಳ್ಳಿ ಪರದೆ ಮೇಲೆ ಬರುತ್ತಿದ್ದೀಯ ನೀನು ಬೆಳೆಯಬೇಕು ಅಂತಿದ್ದರು. ಬಡವರ ಮಕ್ಕಳು ಬೆಳೆಯಬೇಕು ಎನ್ನುವುದಕ್ಕಿಂತ ಟ್ಯಾಲೆಂಟ್ ಇದ್ದವರು ಬೆಳೆಯಬೇಕು ಅಂತ ಯಾರೋ ಒಬ್ಬರು ಹೇಳುತ್ತಿದ್ದರು. ಚೆನ್ನಾಗಿ ಇತ್ತು ಟ್ಯಾಲೆಂಟ್ ಇದ್ದವರೇ ಬೆಳೆಯಬೇಕು." ಎನ್ನುತ್ತಾರೆ.
ವಿಶೇಷ ಪಾತ್ರದ ಯೋಗರಾಜ್ ಭಟ್
"ಯೋಗ್‌ರಾಜ್ ಭಟ್ ಅವರು ಜಡ್ಜ್ ಆಗಿದ್ದಾಗ ನನಗೆ ಹೇಳುತ್ತಲೇ ಇದ್ದರು. ಲೇ ಏನು ಏನೋ ಆಗುತ್ತೀಯ ಕಣೋ. ನಿಮ್ಮ ಮುಖ ಟಿವಿಗಿಂತ ಸಿನಿಮಾಗೆ ಹೋಲುತ್ತೆ ಅಂತ ಹೇಳುತ್ತಲೇ ಇದ್ದರು. ಭಗವಂತನ ಆಶೀರ್ವಾದದಿಂದ ಬ್ಯಾನರ್ ಕೊಟ್ಟರು, ಕಥೆನೂ ಕೊಟ್ಟರು, ಸಾಹಿತ್ಯ ಕೊಟ್ಟರು, ಆಕ್ಟ್ ಕೂಡ ಮಾಡಿದರು. ಇದಕ್ಕಿಂತ ಪುಣ್ಯ ಇನ್ನೇನು ಬೇಕಾಗಿಲ್ಲ. ಏನೇ ಇದ್ದರೂ, ಕರ್ನಾಟಕದ ಜನತೆ ಮೇಲೆ ನಂಬಿಕೆ ಇಟ್ಟು, ಎರಡು ವರ್ಷ ಸಾಕಿ ಸಲಹಿ ಈ ಮಗುನ ಅವರ ಮಡಿಲಿಗೆ ಹಾಕುತ್ತಿದ್ದೇನೆ. ಅವರು ನೀಟಾಗಿ ಸಾಕಿ, ಒಳ್ಳೆಯ ಸ್ಕೂಲ್‌ಗೆ ಸೇರಿಸಿದರೆ ಸಾಕು." ಎಂದು ಸಿನಿಮಾ ಬಗ್ಗೆ ಹೇಳಿಕೊಂಡಿದ್ದಾರೆ.
ಟ್ಯಾಲೆಂಟ್‌ನಿಂದ ಉತ್ತರ ಕೊಡುತ್ತೇನೆ
"ನಾನು ಒಂದು ಸಿನಿಮಾ ಕನಸು ಕಟ್ಟಿಕೊಂಡು ಬಂದವನಲ್ಲ. ನಾನು ಸುಮಾರು ಸಿನಿಮಾಗೆ ಪ್ಲಾನ್ ಹಾಕಿದ್ದೀನಿ. ಹಾಗಂತ ಸಿನಿಮಾ ಮುಗಿದ ಮೇಲೆ ಅನೌನ್ಸ್ ಮಾಡಿಲ್ವಲ್ಲಪ್ಪ ಯಾಕೆ ಅಂತ ಜಾಗಟೆ ಹಿಡ್ಕೊಂಡು ನಿಂತುಕೊಳ್ಳಲ್ಲ. ವರ್ಷಕ್ಕೆ ಒಂದೇ ಸಿನಿಮಾ ಆದರೂ, ನಾನು ಮಾಡುತ್ತೇನೆ. ಇಲ್ಲ ಎರಡು ವರ್ಷಕ್ಕೆ ಒಂದು ಸಿನಿಮಾ ಆದರೂ ಮಾಡುತ್ತೇನೆ. ನಾನು ಅಭಿನಯದಲ್ಲಿ ಏನು ಮಾಡಬೇಕೋ ಅದನ್ನು ತೋರಿಸುತ್ತೇನೆ. ಟ್ಯಾಲೆಂಟ್‌ನಲ್ಲಿ ಉತ್ತರ ಕೊಡುತ್ತೇನೆ ಅಷ್ಟೇ." ಎನ್ನುತ್ತಾರೆ.
ಕಾಮಿಡಿ, ಫೈಟ್ ಇರುತ್ತೆ
"ಟಿವಿಯಲ್ಲಿ ಬೇರೆ ತರ ಕಾಮಿಡಿಯಿತ್ತು. ಸಿನಿಮಾದಲ್ಲೇ ಬೇರೆ ತರ ಇರುತ್ತೆ. ತಬಲನಾಣಿ ಸರ್ ಹಾಗೂ ನನ್ನದು ಒಂಥರ ಕಾಮಿಡಿ ಇದೆ. ನಗು ಚಿಕ್ಕ ಚಿಕ್ಕದಾಗಿ ಮಜವಾಗಿ ಇರುತ್ತೆ. ಈ ಸಿನಿಮಾದಲ್ಲಿ ನನ್ನ ಹಾಗೂ ಮೌನ ಅವರ ಕಾಮಿಡಿ ಚೆನ್ನಾಗಿ ವರ್ಕ್ ಆಗಿದೆ. ಮಾಸ್ ಅಂತ ಬಂದಾಗ, ನಾನು ಇಷ್ಟೆಲ್ಲ ಮಾಡಿದ್ದೀನಾ ಅಂತ ಅನಿಸುತ್ತೆ. ಮಾಸ್ ಮಾದ ಸರ್, ವಿನೋದ್ ಸರ್, ನರಸಿಂಹ ಸರ್ ಅವರು ನನಗೆ ಮೂರು ತಿಂಗಳು ಫೈಟಿಂಗ್ ಕಲಿಸಿದ್ದಾರೆ. ಕೈ ಕಾಲು ಎಲ್ಲಾ ಬೆಂಡ್ ಮಾಡಿ ಹೊಡೆದಾಕಿದ್ದಾರೆ." ಎಂದು ತಮ್ಮ ಸಿನಿಮಾದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
"ಸೋನು ನಿಗಂ ಅವರ ಸಾಂಗ್ ಅನ್ನು ತೆಗೆದಿದ್ದೇವೆ. ನಮ್ಮ ಇಡೀ ಟೀಮ್ ಮಾತಾಡಿಕೊಂಡು ತೆಗೆದಿದ್ದೇವೆ. ಸಿನಿಮಾದಲ್ಲಿ ಸೋನು ನಿಗಂ ಹಾಡಿದ ಸಾಂಗ್ ಇಲ್ಲ. ಅದೇ ಹಾಡನ್ನು ಚೇತನ್ ಸರ್ ಕೈಯಲ್ಲಿ ಹಾಡಿಸಿದ್ದೇವೆ. ಸೋನು ನಿಗಂ ಅವರ ಧ್ವನಿಯನ್ನು ತೆಗೆದು ಹಾಕಿ ಅವರಿಂದ ಹಾಡನ್ನು ಹಾಡಿಸಿದ್ದೇವೆ."
"ಮೈಲೇಜ್ ಅನ್ನೋದಕ್ಕಿಂತ ಕನ್ನಡಕ್ಕೆ ಧಕ್ಕೆ ಬಂದಾಗ ಯಾರೂ ಸಹಿಸುವುದಿಲ್ಲ. ಯಾರೇ ಏನೇ ಮಾತಾಡಬಹುದು. ಸುಮ್ಮನೆ ಯಾರೋ ಏಕ ವಚನದಲ್ಲಿ ಮಾತಾಡಿದರೇ ನಾವು ತಡೆದುಕೊಳ್ಳುವುದಿಲ್ಲ. ಅಂತಹದ್ದರಲ್ಲಿ ಕನ್ನಡದ ಬಗ್ಗೆ ಏನೋ ಅಂದಾಗ, ನಾವು ಸುಮ್ಮನಿರೋದಿಲ್ಲ. ಆ ಕಾರಣಕ್ಕಾಗಿ ಹಾಡನ್ನು ತೆಗೆದಿದ್ದೇವೆ ಅಷ್ಟೇ. ಬೇರೆ ಯಾವುದೇ ಉದ್ದೇಶವಿಲ್ಲ."
"ಕೆಲವರು ಓದದೆ ಪರೀಕ್ಷೆಗೆ ಕೂತು ಅಯ್ಯಯ್ಯೋ ಫೇಲ್ ಆಗಿಬಿಟ್ಟೆ ಅಂತಾರೆ. ಆದರೆ, ನಾನು 24/7 ಈ ಪರೀಕ್ಷೆಗೆ ಓದಿದ್ದೀನಿ. ಹಾಗಾಗಿ ನಾನು ಪಾಸಾಗುತ್ತೇನೆ ಅನ್ನೋ ಒಂದು ಕಾನ್ಫಿಡೆನ್ಸ್ ಇದೆ. ಜನರನ್ನು ನಾನು ನಂಬಿದ್ದೇನೆ. ಭಗವಂತ ಏನು ಮಾಡುತ್ತಾನೆ ಅನ್ನೋದನ್ನು ನೋಡೋಣ. ಮಾಡುವ ಪ್ರಯತ್ನವನ್ನೆಲ್ಲವನ್ನೂ ಮಾಡಿದ್ದೇವೆ. ಕೊಡೋದು ಬಿಡೋದು ಆ ಭಗವಂತನಿಗೆ ಬಿಟ್ಟಿದ್ದು, ನಾವು ಮಾಡುವ ಕೆಲಸವನ್ನು ಮಾಡಿದ್ದೇವೆ. ಸಿನಿಮಾ ಹಿಂಗಿದೆ ಹಂಗಿದೆ ಅಂತೇನು ಹೇಳುವುದಿಲ್ಲ. ನೋಡಿದವರು ಖುಷಿಯಿಂದ ಆಚೆ ಬರುತ್ತಾರೆ. ನಾನು ಇಷ್ಟೇ ಹೇಳೋದು.
ಕುಲದಲ್ಲಿ ಕೀಳ್ಯಾವುದೋ ಸಿನಿಮಾ ತಂಡ ಸೋನು ನಿಗಂ ಹಾಡನ್ನು ಸಿನಿಮಾದಿಂದ ತೆಗೆದು ಹಾಕಿ ಮೆಚ್ಚುಗೆಯನ್ನು ಪಡೆದುಕೊಂಡಿತ್ತು. ಆದ್ರೀಗ ಮತ್ತೊಂದು ನಿರ್ಧಾರವನ್ನು ತೆಗೆದುಕೊಂಡಿದ್ದು ಜನರ ಮೆಚ್ಚುಗೆಗೆ ಕಾರಣವಾಗಿದೆ. ಸಿನಿಮಾ ಟ್ರೈಲರ್ ಅನ್ನು ನಿವೃತ್ತ ಯೋಧರಿಂದ ರಿವೀಲ್ ಮಾಡಿದ್ದರು. ಅದಂತೆ ಈ ಸಿನಿಮಾದಲ್ಲಿ ಬಂದ ಶೇ. 30ರಷ್ಟು ಹಣವನ್ನು ಯೋಧರಿಗೆ ನೀಡುತ್ತೇವೆ ಎಂದು ಚಿತ್ರತಂಡ ಹೇಳಿದೆ. ಈ ಮೂಲಕ ದೇಶ ಸೇವೆ ಮಾಡಿದ ಯೋಧರ ಸಹಾಯಕ್ಕೆ ನಿಂತಿದೆ. ಈ ನಿರ್ಧಾರಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕುಲದಲ್ಲಿ ಕೀಳ್ಯಾವುದೋ ಸಿನಿಮಾ ಇದೇ ಮೇ 23ಕ್ಕೆ ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ಮಡೆನೂರ್ ಮನುಗೆ ಸ್ಯಾಂಡಲ್‌ವುಡ್‌ನ ಸ್ಟಾರ್ ಡೈರೆಕ್ಟರ್ ಯೋಗರಾಜ್ ಭಟ್ ಬೆಂಬಲವಾಗಿ ನಿಂತಿದ್ದಾರೆ. ಹೀಗಾಗಿ ಈ ಸಿನಿಮಾ ಥಿಯೇಟರ್‌ಗೆ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಾ? ಅನ್ನೋದು ನೋಡಬೇಕಿದೆ.


Click it and Unblock the Notifications











