ಮಡೆನೂರು ಮನು ವಿರುದ್ಧ ಅತ್ಯಾ*ಚಾರ ಕೇಸ್.. ಒಪ್ಪಂದ ಮೇರೆಗೆ ದೂರು ಹಿಂಪಡೆದ ಸಂತ್ರಸ್ತೆ
ಕನ್ನಡದ ರಿಯಾಲಿಟಿ ಶೋ ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ವಿರುದ್ಧ ಅತ್ಯಾ*ಚಾರ ಪ್ರಕರಣ ದಾಖಲಾಗಿತ್ತು. ಅದೇ ಶೋನಲ್ಲಿ ಸಹ ನಟಿಯಾಗಿದ್ದ ಸಂತ್ರಸ್ತೆ ಮಡೆನೂರು ಮನು ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಈ ಸಂಬಂಧ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಮನು ಜಾಮೀನಿನ ಮೇಲೆ ಹೊರಬಂದಿದ್ದರು. ಆದರೆ, ಕೇಸ್ ಹೈಕೋರ್ಟ್ ಅಂಗಳಕ್ಕೆ ತಲುಪಿತ್ತು.
ಆದ್ರೀಗ ಮಡೆನೂರು ಮನು ಹಾಗೂ ಸಂತ್ರಸ್ತೆ ಇಬ್ಬರೂ ಪರಸ್ಪರ ಒಪ್ಪಂದದ ಮೇರೆಗೆ ಕೇಸ್ ಅನ್ನು ಹಿಂಪಡೆದಿದ್ದಾರೆ. ಅಂಗಳದಲ್ಲಿ ಎರಡೂ ಕಡೆಯ ವಕೀಲರ ಸಮ್ಮುಖದಲ್ಲಿ ಇಬ್ಬರೂ ಒಪ್ಪಂದದ ಮೇರೆಗೆ ಒಡಂಬಡಿಕೆ ಮಾಡಿಕೊಂಡಿದ್ದು, ಕೇಸ್ ಕ್ಲೋಸ್ ಆಗಿದೆ ಎಂದು ವಕೀಲರ ಸಮ್ಮುಖದಲ್ಲಿ ಇಬ್ಬರೂ ಒಂದು ವಿಡಿಯೋ ಮಾಡಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಸಹ ನಟಿ ಮಾಡಿದ ಗಂಭೀರ ಆರೋಪ ಹಿನ್ನೆಲೆಯಲ್ಲಿ ಮಡೆನೂರು ಮನು ಸಂಕಷ್ಟಕ್ಕೆ ಸಿಲುಕಿದ್ದರು. ಮನು ವಿರುದ್ಧ ಜನರು ತೀವ್ರ ಆಕ್ರೋಶವನ್ನು ಹೊರ ಹಾಕಿದ್ದರು. ಸಂತ್ರಸ್ತೆ ಅತ್ಯಾ*ಚಾರ ಆರೋಪ ಅಷ್ಟೇ ಅಲ್ಲ. ಒಂದು ಆಡಿಯೋವನ್ನು ಲೀಕ್ ಮಾಡಿದ್ದರು. ಕನ್ನಡದ ಮೂವರು ಸ್ಟಾರ್ ನಟರ ವಿರುದ್ಧ ಮಡೆನೂರು ಮನು ಆಡಿದ ಮಾತುಗಳ ವಿರುದ್ಧ ಚಿತ್ರರಂಗ ಆಕ್ರೋಶವನ್ನು ಹೊರ ಹಾಕಿತ್ತು. ಸದ್ಯಕ್ಕೀಗ ಅತ್ಯಾಚಾರ ಕೇಸ್‌ನಿಂದ ಮಡೆನೂರು ಮನು ಹೊರಬಂದಂತೆ ಆಗಿದೆ.
ಅಷ್ಟಕ್ಕೂ ವಕೀಲರ ಸಮ್ಮುಖದಲ್ಲಿ ಮಾಡಿರುವ ವಿಡಿಯೋದಲ್ಲಿ ಸಂತ್ರಸ್ತೆ ಕೇಸ್ ಅನ್ನು ಹಿಂಪಡೆದಿರುವುದಾಗಿ ಒಪ್ಪಿಕೊಂಡಿದ್ದಾರೆ. ಹಾಗೇ ವಕೀಲರು ಕೂಡ ಕೇಸ್ ಕ್ಲೋಸ್ ಆಗಿದ್ದರ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇನ್ನೊಂದು ಕಡೆ ಮಡೆನೂರು ಮನು ಕೂಡ ಸಂತ್ರಸ್ತೆಗೆ ಮನಸ್ಪೂರ್ತಿಯಾಗಿ ಮಾಡಿಕೊಟ್ಟಿದ್ದಿಯ ಅಲ್ವಾ? ಎಂದು ಕೇಳುವುದು ದಾಖಲಾಗಿದೆ. ಅಷ್ಟಕ್ಕೂ ವಿಡಿಯೋದಲ್ಲಿ ವಕೀಲರು, ಮಡೆನೂರು ಮನು ಹಾಗೂ ಸಂತ್ರಸ್ತೆ ಏನು ಹೇಳಿದ್ದಾರೆ ಅನ್ನೋದನ್ನು ನೋಡುವುದಾರೇ..
"ಮಡೆನೂರು ಮನು ಹಾಗೂ ಸಂತ್ರಸ್ತೆಯ ಕೇಸ್ ಹೈಕೋರ್ಟ್ ಆವರಣದಲ್ಲಿ ಬಂದಿತ್ತು. ಇಲ್ಲಿ ಅವರು ಕಾಂಪ್ರಮೈಸ್ ಮಾಡಿಕೊಂಡಿದ್ದು, ಪರಸ್ಪರ ಒಪ್ಪಂದದಿಂದ ಕೇಸ್ ಕ್ಲೋಸ್ ಆಗುತ್ತಿದೆ." ಎಂದು ವಕೀಲರು ಮಾಹಿತಿಯನ್ನು ನೀಡಿದ್ದಾರೆ. ಇದೇ ವೇಳೆ ಸಂತ್ರಸ್ತೆ ಕೂಡ ಕಾಂಪ್ರಮೈಸ್ ಮಾಡಿಕೊಂಡಿದ್ದೇನೆ ಎಂದು ಹೇಳಿದ್ದಾರೆ. ಆ ಕೂಡಲೇ ಮನು "ಮನಸ್ಪೂರ್ತಿಯಾಗಿ ಮಾಡಿಕೊಟ್ಟಿದ್ದೀಯ ಅಲ್ವಾ? ಖುಷಿಯಿಂದ ಅಲ್ವಾ?" ಎಂದು ಕೇಳಿ ಕನ್ಫರ್ಮ್ ಮಾಡಿಕೊಂಡಿದ್ದಾರೆ. ಈ ಕೇಸ್ ಕ್ವಾಶ್ ಆಗುವುದಕ್ಕೆ ಸಪೋರ್ಟ್ ಮಾಡಿದಂತಹ ವಕೀಲರಿಗೆ ಮಡೆನೂರು ಮನು ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಮಡೆನೂರು ಮನು ನಟಿಸಿದ ಚೊಚ್ಚಲ ಸಿನಿಮಾ 'ಕುಲದಲ್ಲಿ ಕೀಳ್ಯಾವುದೋ' ಬಿಡುಗಡೆ ಒಂದು ದಿನ ಇರುವಾಗಲೇ ಸಂತ್ರಸ್ತೆ ಅತ್ಯಾ*ಚಾರ ಆರೋಪ ಮಾಡಿ ದೂರು ದಾಖಲಿಸಿದ್ದರು. ಹೀಗಾಗಿ ಮಡೆನೂರು ಮನು ಅವರನ್ನು ಪೊಲೀಸರು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದರು. ನ್ಯಾಯಾಧೀಶರು ಮಡೆನೂರು ಮನುಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದ್ದರು. ಈ ಸಂಬಂಧ ಮಡೆನೂರು ಮನು ಪರಪ್ಪನ ಅಗ್ರಹಾರ ಜೈಲು ಸೇರಿದ್ದರು.
ಈ ಕೇಸ್‌ನಿಂದಾಗಿ ಮಡೆನೂರು ಮನು ಚೊಚ್ಚಲ ಸಿನಿಮಾ ಬಿಡುಗಡೆಯನ್ನು ಕಣ್ತುಂಬಿಕೊಳ್ಳುವುದನ್ನು ಮಿಸ್ ಮಾಡಿಕೊಂಡಿದ್ದರು. ಜೊತೆಗೆ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರು. ಈಗ ಸಂತ್ರಸ್ತೆ ಕೇಸ್ ಹಿಂಪಡೆದಿದ್ದರಿಂದ ಅತ್ಯಾ*ಚಾರ ಪ್ರಕರಣದಿಂದ ಪಾರಾಗಿದ್ದಾರೆ. ಆದರೆ, ಚಿತ್ರರಂಗದಲ್ಲಿ ಶಿವಣ್ಣ, ದರ್ಶನ್, ಧ್ರುವ ಸರ್ಜಾ ಬಗ್ಗೆ ಅವಹೇಳನಕಾರಿ ಮಾತುಗಳಾಡಿದ್ದ ಮನು ವಿರುದ್ಧ ಇನ್ನೂ ತಾರೆಯರ ಅಸಮಧಾನ ಕಡಿಮೆ ಆದಂತೆ ಕಾಣುತ್ತಿಲ್ಲ. ಇದನ್ನು ಹೇಗೆ ಬಗೆ ಹರಿಸಿಕೊಳ್ಳುತ್ತಾರೋ ನೋಡಬೇಕಿದೆ.


Click it and Unblock the Notifications











