'ಕುಲದಲ್ಲಿ ಕೀಳ್ಯಾವುದೋ' ಅನ್ನಲು ಹೊರಟ 'ಕಾಮಿಡಿ ಕಿಲಾಡಿ' ಮನು; ಯೋಗರಾಜ್ ಭಟ್ರದ್ದೇ ಬಂಡವಾಳ
ಸ್ಯಾಂಡಲ್‌ವುಡ್‌ನಲ್ಲಿ ಮಕರ ಸಂಕ್ರಾಂತಿಗೆ ಹೊಸ ಸಿನಿಮಾ ರಿಲೀಸ್ ಆಗದೇ ಹೋದರೆ ಏನಂತೆ? ಹೊಸ ಹೊಸ ಸಿನಿಮಾಗಳು ಲಾಂಚ್ ಆಗುತ್ತಿವೆ. ಯೋಗರಾಜ್ ಸಿನಿಮಾಸ್ ಹಾಗೂ ಪರ್ಲ್ ಸಿನಿ ಕ್ರಿಯೇಷನ್ಸ್ ಜಂಟಿಯಾಗಿ ಹೊಸ ಸಿನಿಮಾ ನಿರ್ಮಾಣ ಮಾಡುವುದಕ್ಕೆ ಮುಂದಾಗಿದೆ. ಅದುವೇ 'ಕುಲದಲ್ಲಿ ಕೀಳ್ಯಾವುದೋ'.
ಯೋಗರಾಜ್ ಭಟ್, ವಿದ್ಯಾ ಹಾಗೂ ಸಂತೋಷ್ ಕುಮಾರ 'ಕುಲದಲ್ಲಿ ಕೀಳ್ಯಾವುದೋ' ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದ ಮುಹೂರ್ತ ಸಮಾರಂಭ ನೆರವೇರಿದೆ. ಯೋಗರಾಜ್ ಭಟ್ ಜೊತೆ ಕೆಲಸ ಮಾಡಿ ಅನುಭವವಿರುವ ಶ್ರೇಯಸ್ ರಾಜ್ ಶೆಟ್ಟಿ 'ಕುಲದಲ್ಲಿ ಕೀಳ್ಯಾವುದೋ' ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

'ಕಾಮಿಡಿ ಕಿಲಾಡಿಗಳು' ಸೀಸನ್ 2 ವಿನ್ನರ್ ಮನು ಮಡೆನೂರ್ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ನವರಸ ನಾಯಕ ಜಗ್ಗೇಶ್ ಈ ಸಿನಿಮಾದ ಶೀರ್ಷಿಕೆ ಹಾಗೂ ಪೋಸ್ಟರ್ ಅನಾವರಣ ಮಾಡಿ ಶುಭ ಹಾರೈಸಿದ್ದಾರೆ. ಈ ಸಂದರ್ಭದಲ್ಲಿ ಸಿನಿಮಾ ತಂಡ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದೆ.
ಕನ್ನಡದ ಎವರ್‌ಗ್ರೀನ್ ಹಾಡು ಸತ್ಯಹರಿಶ್ಚಂದ್ರ ಸಿನಿಮಾದ 'ಕುಲದಲ್ಲಿ ಕೀಳ್ಯಾವುದೋ' ಹಾಡಿನ ಸಾಲನ್ನೇ ಟೈಟಲ್ ಆಗಿಟ್ಟುಕೊಂಡಿದ್ದಾರೆ. "ಈಗಲೂ ಎಲ್ಲಾ ಆರ್ಕೆಸ್ಟ್ರಾಗಳಲ್ಲಿ ಹೇಳುವ ಕೊನೆಯ ಮಂಗಳಗೀತೆಯೂ ಹೌದು. ಈ ಶೀರ್ಷಿಕೆ ನಾಲ್ಕು ವರ್ಷಗಳಿಂದ ನನ್ನ ಹತ್ತಿರವಿತ್ತು. ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆಯುತ್ತಿರುವ ಯೋಗಿ ಗೌಡ ಮತ್ತು ನಿರ್ದೇಶನ ಮಾಡುತ್ತಿರುವ ಶ್ರೇಯಸ್ ಈ ಚಿತ್ರದ ಕಥೆ ಬಗ್ಗೆ ಹೇಳಿದಾಗ ಈ ಶೀರ್ಷಿಕೆ ಇಡಲು ಹೇಳಿದೆ. ಅವರು ಒಪ್ಪಿದರು. ನಾನು, ಸಂತೋಷ್ ಕುಮಾರ್ ಹಾಗೂ ವಿದ್ಯಾ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದೇವೆ. ಮನು ಮಡೆನೂರ್ ನಾಯಕನಾಗಿ, ಸೋನಾಲ್ ಮೊಂತೆರೊ ನಾಯಕಿಯಾಗಿ, ದಿಗಂತ್, ರಂಗಾಯಣ ರಘು, ಶರತ್ ಲೋಹಿತಾಶ್ವ, ಮೌನ ಗುಡ್ಡೆಮನೆ ಪ್ರಮುಖ ಪಾತ್ರಧಾರಿಗಳಾಗಿ ನಟಿಸುತ್ತಿದ್ದಾರೆ. ಮನೋಮೂರ್ತಿ ಅವರ ಸಂಗೀತ ನಿರ್ದೇಶನ ಹಾಗೂ ನಿರಂಜನ್ ಬಾಬು ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ" ಎಂದು ಯೋಗರಾಜ್ ಭಟ್ ಮಾಹಿತಿ ನೀಡಿದ್ದಾರೆ.

"ಇದು 1970ರ ಕಾಲಘಟ್ಟದಲ್ಲಿ ನಡೆಯುವ ಕಥೆ. ಮೊದಲು ಮನು ಮಡೆನೂರ್ ಅವರಿಗೆ ಕಾಮಿಡಿ ಜಾನರ್ ನ ಕಥೆ ಮಾಡುವುದು ಅಂದುಕೊಂಡಿದ್ದೆ. ಮನು ಅವರನ್ನು ಈಗಾಗಲೇ ಕಾಮಿಡಿ ಮೂಲಕವೇ ಜನರು ಗುರುತಿಸಿದ್ದಾರೆ. ಹಾಗಾಗಿ ಆ ಜಾನರ್ ಬೇಡ. ಬೇರೆ ಜಾನರ್ ನ ಕಥೆ ಮಾಡೋಣ ಅಂದುಕೊಂಡು ಈ ಕಥೆ ಸಿದ್ದ ಮಾಡಿಕೊಂಡಿದ್ದೇನೆ" ಎಂದು ಸಿನಿಮಾಗೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಯೋಗಿ ಗೌಡ ಹೇಳಿದ್ದಾರೆ.
ಹಾಗೇ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿರುವ ಶ್ರೇಯಸ್ ರಾಜ್ ಶೆಟ್ಟಿ ಕೂಡ ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ. "ನನಗೆ ಮಧ್ಯರಾತ್ರಿ ಸಮಯದಲ್ಲಿ ಯೋಗರಾಜ್ ಸಿನಿಮಾಸ್‌ನಿಂದ ಕರೆಮಾಡಿ ನೀವೇ ಈ ಸಿನಿಮಾವನ್ನು ನಿರ್ದೇಶನ ಮಾಡಬೇಕೆಂದು" ಹೇಳಿದ್ದನ್ನು ಶ್ರೇಯಸ್ ನೆನಪಿಸಿಕೊಂಡಿದ್ದಾರೆ.
ನಾಯಕನಾಗಿ ನಟಿಸುತ್ತಿರುವ ಕಾಮಿಡಿ ಕಿಲಾಡಿ ಖ್ಯಾತಿ ಮನು ಮಡೆನೂರು ಕೂಡ ಈ ಸಿನಿಮಾ ಬಗ್ಗೆ ಥ್ರಿಲ್ ಆಗಿದ್ದಾರೆ. "ನಾನು ಈ ಮಟ್ಟಕ್ಕೆ ಏರಲು ಕಾರಣ 'ಕಾಮಿಡಿ ಕಿಲಾಡಿಗಳು'. ಈ ಸಂದರ್ಭದಲ್ಲಿ ನಾನು ಜಗ್ಗೇಶ್, ರಕ್ಷಿತ ಹಾಗೂ ಯೋಗರಾಜ್ ಭಟ್ ಅವರನ್ನು ನೆನಪಿಸಿಕೊಳ್ಳುತ್ತೇನೆ. ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇನೆ" ಎಂದು ನಾಯಕ ಮನು ಮಡೆನೂರ್ ಹೇಳಿದ್ದಾರೆ.
'ಕುಲದಲ್ಲಿ ಕೀಳ್ಯಾವುದೋ' ಸಿನಿಮಾದಲ್ಲಿ ನಾಯಕಿ ಸೋನಾಲ್ ಮೊಂತೆರೊ, ದಿಗಂತ್, ರಂಗಾಯಣ ರಘು, ಶರತ್ ಲೋಹಿತಾಶ್ವ, ಮೌನ ಗುಡ್ಡೆಮನೆ, ಸಂಗೀತ ನಿರ್ದೇಶಕ ಮನೋಮೂರ್ತಿ, ನಿರ್ಮಾಣ ಸಾರಥ್ಯ ಹೊತ್ತಿರುವ ರೇಣುಕಾ ಯೋಗರಾಜ್ ಭಟ್ ಕೆಲಸ ಮಾಡುತ್ತಿದ್ದಾರೆ.


Click it and Unblock the Notifications











