ಡಾಲಿ ಧನಂಜಯ್ ಕಣಕ್ಕಿಳಿಸಲು ಪ್ಲ್ಯಾನ್ ಮಾಡ್ತಿದೆಯಾ ಕ್ರಾಂಗೆಸ್? ರಾಜಕೀಯ ವಲಯದಲ್ಲಿ ಏನಿದು ಲೆಕ್ಕಾಚಾರ?
ಬೆಂಗಳೂರು, ಫೆಬ್ರವರಿ 17: 2024ರ ಲೋಕಸಭಾ ಚುನಾವಣೆ ಸಮೀಸುತ್ತಿದೆ. ಈ ಬೆನ್ನಲ್ಲೇ ರಾಜಕೀಯ ಪಕ್ಷಗಳು ಒಳಗಿಂದೊಳಗೆ ರಣತಂತ್ರಗಳನ್ನು ರೂಪಿಸುತ್ತಿವೆ. ರಾಜ್ಯದಲ್ಲೂ ಕಾಂಗ್ರೆಸ್,ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ತೆರೆ ಮೆರೆಯಲ್ಲಿ ಚುನಾವಣೆ ಗೆಲ್ಲುವುದಕ್ಕೆ ಲೆಕ್ಕ ಹಾಕುತ್ತಿದೆ. ಯಾವ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿಯನ್ನು ನಿಲ್ಲಿಸಬೇಕು? ಹೊಸದಾಗಿ ಯಾರನ್ನು ಕಣಕ್ಕೆ ಇಳಿಸಿದರೆ ಗೆಲ್ಲಬಹುದು? ಇಂತಹದ್ದೇ ಪ್ರಾಥಮಿಕ ಸಮೀಕ್ಷೆಯನ್ನಿಟ್ಟುಕೊಂಡು ರಣತಂತ್ರ ರೂಪಿಸಲು ಸಜ್ಜಾಗುತ್ತಿವೆ.
ಇತ್ತ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆದು ಅಧಿಕಾರದ ಗದ್ದುಗೆ ಏರಿದ್ದ ಕಾಂಗ್ರೆಸ್ ಲೋಕಸಭಾ ಚುನಾವಣೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಲ್ಲಿ ಅಖಾಡಕ್ಕೆ ಇಳಿಯುತ್ತಿರುವುದಿಂದ ಕಾಂಗ್ರೆಸ್ ಪ್ರತಿತಂತ್ರ ಹೆಣೆಯುತ್ತಿದೆ. ಅಲ್ಲದೆ ಲೋಕಸಭಾ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿದೆ.

ಸದ್ಯಕ್ಕೀಗ ರಾಜಕೀಯ ವಲಯದಲ್ಲಿ ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಹೆಸರು ಓಡಾಡುತ್ತಿದೆ. ಧನಂಜಯ್ ಚಿತ್ರರಂಗದಲ್ಲಿ ಯಶಸ್ಸು ಕಂಡಿರುವ ನಟ. ರಾಜ್ಯದಲ್ಲಿ ಜನಪ್ರಿಯ ವ್ಯಕ್ತಿ. ಈ ಕಾರಣಕ್ಕೆ ಡಾಲಿ ಧನಂಜಯ್ ಅನ್ನು ಚುನಾವಣಾ ಅಖಾಡಕ್ಕೆ ಇಳಿಸಿದರೆ, ಅವರನ್ನು ಗೆಲ್ಲಿಸಬಹುದೆಂಬ ಚರ್ಚೆ ಕ್ರಾಂಗೆಸ್ ಪಾಳಯದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ತವರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಒತ್ತಡವಿದೆ. ಹೀಗಾಗಿ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಅತೀ ಹೆಚ್ಚು ಸೀಟ್‌ಗಳನ್ನು ಗೆಲ್ಲಬೇಕು ಅಂತ ಸಿ ಎಂ ಹಠಕ್ಕೆ ಬಿದ್ದಿದ್ದಾರೆ ಅನ್ನೋದು ರಾಜಕೀಯ ವಲಯದಲ್ಲಿ ಆಗುತ್ತಿರುವ ಚರ್ಚೆ. ಹೀಗಾಗಿ ಕಾಂಗ್ರೆಸ್ ಮಾಸ್ಟರ್ ಪ್ಲ್ಯಾನ್ ಮಾಡಿದ್ದು, ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದೆ ಎನ್ನಲಾಗಿದೆ.

ಸಿದ್ಧರಾಮಯ್ಯ ಹಾಗೂ ಪುತ್ರ ಯತೀಂದ್ರೆಗೆ ಬಿಜೆಪಿಯ ಹಾಲಿ ಸಂಸದ ಪ್ರತಾಪ್ ಸಿಂಹ ಆಗಾಗ ಠಕ್ಕರ್ ಕೊಡುತ್ತಲೇ ಇರುತ್ತಾರೆ. ಹೀಗಾಗಿ ಈ ಕ್ಷೇತ್ರವನ್ನು ಕಾಂಗ್ರೆಸ್ ಗೆಲ್ಲಲೇ ಬೇಕು ಅನ್ನೋ ಹಠಕ್ಕೆ ಸಿದ್ಧರಾಮಯ್ಯ ಬಿದ್ದಿದ್ದಾರೆ. ಆದರೆ, ಯತೀಂದ್ರರನ್ನು ಈ ಕ್ಷೇತ್ರದಿಂದ ಕಣಕ್ಕೆ ಇಳಿಸುವುದಕ್ಕೆ ಆ ಭಾಗದ ಕಾಂಗ್ರೆಸ್ ಮುಖಂಡರಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತವಾಗಿಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ಡಾಲಿ ಧನಂಜಯ್‌ರನ್ನು ಕಣಕ್ಕೆ ಇಳಿಸುವ ಬಗ್ಗೆ ಕಾಂಗ್ರೆಸ್ ಪಾಳೆಯದಲ್ಲಿ ಚರ್ಚೆ ನಡೆಯುತ್ತಿದೆ ಅನ್ನೋ ಸುದ್ದಿ ಓಡಾಡುತ್ತಿದೆ.
ಬಡವರ ಮಕ್ಕಳು ಬೇಳಿಬೇಕು ಅನ್ನುವ ಚಿಂತನೆ ಹೊಂದಿರೋ ಡಾಲಿಯ ಸಿದ್ಧಾಂತಗಳು ಸಿದ್ಧರಾಮಯ್ಯ ಅವರ ಸಿದ್ಧಾಂತಗಳಿಗೆ ಹೊಂದಿಕೊಳ್ಳುವುದರಿಂದ ಇಂತಹದ್ದೊಂದು ನಿರ್ಣಯದ ಬಗ್ಗೆ ಅಲ್ಲಗೆಳೆಯುವಂತಿಲ್ಲ ಎನ್ನುತ್ತಿವೆ ಮೂಲಗಳು. ಅದರೆ, ಇನ್ನು ಕೆಲವು ಮೂಲಗಳ ಪ್ರಕಾರ ಡಾಲಿ ಧನಂಜಯ್‌ರನ್ನು ಮೈಸೂರು-ಕೊಡಗು ಕ್ಷೇತ್ರದಿಂದ ಕಣಕ್ಕಿಳಿಸುವುದು ಅನುಮಾನ ಎನ್ನುತ್ತಿವೆ.
ಮೈಸೂರು-ಕೊಡಗು ಕ್ಷೇತ್ರದಲ್ಲಿ ಕುರುಬರು ಹಾಗೂ ಒಕ್ಕಲಿಗರ ಪ್ರಾಬಲ್ಯ ಹೆಚ್ಚಿದೆ. ಹೀಗಾಗಿ ಈ ಎರಡು ಸಮುದಾಯಕ್ಕೆ ಸೇರಿದ ಅಭ್ಯರ್ಥಿಗಳನ್ನೇ ಕಣಕ್ಕೆ ಇಳಿಸಬೇಕು. ಡಾಲಿ ಧನಂಜಯ್ ಲಿಂಗಾಯತ ಸಮುದಾಯಕ್ಕೆ ಸೇರಿದ್ದರಿಂದ ಇಲ್ಲಿ ಹಿನ್ನೆಲೆಯಾಗಬಹುದು. ಹೀಗಾಗಿ ಕಾಂಗ್ರೆಸ್ ಡಾಲಿ ಧನಂಜಯ್‌ರನ್ನು ಕಣಕ್ಕೆ ಇಳಿಸುವ ನಿರ್ಧಾರಕ್ಕೆ ಬಂದರೂ, ಮೈಸೂರು ಕ್ಷೇತ್ರದಲ್ಲಿ ನಿಲ್ಲಿಸುವುದು ಅನುಮಾನ ಎನ್ನುತ್ತಿದೆ. ಅತ್ತ ಡಾಲಿ ಧನಂಜಯ್ ಮನ:ಸ್ಥಿತಿ ಏನಿದೆ? ಈಗಲೇ ಚುನಾವಣಾ ಅಖಾಡಕ್ಕೆ ಇಳಿಯುತ್ತಾರಾ? ಇಂತಹ ಪ್ರಶ್ನೆಗಳಿಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಬಹುದು.


Click it and Unblock the Notifications











