ಮತ್ತೊಬ್ಬ ರಾಜಕೀಯ ಮುಖಂಡನ ಪುತ್ರ ಸಿನಿಮಾಗೆ ಎಂಟ್ರಿ; ಸಿಪಿ ಯೋಗೇಶ್ವರ್ ಪುತ್ರನ 'ಸೈನಿಕ 2' ಯಾವಾಗ?
ರಾಜಕೀಯ ಮುಖಂಡ ಪುತ್ರರು ಚಿತ್ರರಂಗಕ್ಕೆ ಎಂಟ್ರಿ ಕೊಡುವುದು ಹೊಸದೇನು ಅಲ್ಲ. ರಾಜಕೀಯಕ್ಕೆ ಅಧಿಕೃತವಾಗಿ ಎಂಟ್ರಿ ಕೊಡುವುದಕ್ಕೂ ಮುನ್ನ ಸಿನಿಮಾದಲ್ಲಿ ಮಿಂಚಬೇಕು ಅನ್ನೋದು ಲೆಕ್ಕಾಚಾರ. ಹಾಗಂತ ಇದು ಒಂದೆರಡು ಸಿನಿಮಾಗಳಿಗೆ ಮೀಸಲು ಅಂದುಕೊಳ್ಳುವ ಹಾಗಿಲ್ಲ. ಒಂದಿಷ್ಟು ವರ್ಷ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿ, ಹೆಸರು ಗಳಿಸಿ ಬಳಿಕ ರಾಜಕೀಯ ಎಂಟ್ರಿ ಕೊಡುವುದು ವಾಡಿಕೆ.
ಈ ಸಾಲಿಗೆ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಪುತ್ರ ನಿಖಿಲ್, ರೆಬೆಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್, ಗುಬ್ಬಿ ಶಾಸಕ ಎಸ್‌ಆರ್ ಶ್ರೀನಿವಾಸ್ ಪುತ್ರ ದುಷ್ಯಂತ್, ಜಮೀರ್ ಪುತ್ರ ಝೈದ್ ಖಾನ್ ಸೇರಿದಂತೆ ಹಲವು ರಾಜಕಾರಣಿಗಳ ಪುತ್ರರು ಚಿತ್ರರಂಗದಲ್ಲಿ ನೆಲೆಯೂರುವುದಕ್ಕೆ ಪ್ರಯತ್ನ ಪಡುತ್ತಿದ್ದಾರೆ. ಈ ಮೂಲಕ ಜನಪ್ರಿಯತೆಯನ್ನು ಗಿಟ್ಟಿಸಿಕೊಳ್ಳುವುದಕ್ಕೆ ಮುಂದಾಗಿದ್ದಾರೆ.

ಈಗ ಮತ್ತೊಬ್ಬ ರಾಜಕೀಯ ಮುಖಂಡನ ಪುತ್ರನ ಎಂಟ್ರಿಗೆ ವೇದಿಕೆ ಸಜ್ಜಾಗಿದೆ. ಚನ್ನಪಟ್ಟಣದ ಶಾಸಕ ಸಿಪಿ ಯೋಗೇಶ್ವರ್ ಹಾಗೂ ಪತ್ನಿ ಶಾಲಿನಿ ಅವರ ಪುತ್ರ ಧ್ಯಾನ್ ಯೋಗೇಶ್ವರ್ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ವಿಷಯ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದೆ. ಅದುವೇ 'ಸೈನಿಕ 2'. ಈ ಸಿನಿಮಾ ಬಗ್ಗೆ ಈಗ ಮತ್ತೊಂದು ಅಪ್‌ಡೇಟ್ ಸಿಕ್ಕಿದೆ. ಸಿನಿಮಾ ಯಾವಾಗ ಶುರು? ಇನ್ನಿತರ ಮಾಹಿತಿಯನ್ನು ತಿಳಿದುಕೊಳ್ಳುವುದಕ್ಕೆ ಮುಂದೆ ಓದಿ.
ಸಿಪಿ ಯೋಗೇಶ್ವರ್ ಪುತ್ರ ಧ್ಯಾನ್
ಸಿ ಪಿ ಯೋಗೇಶ್ವರ್ ಸಿನಿಮಾದಲ್ಲಿ ಹೀರೋ ಆಗಿ ಗುರುತಿಸಿಕೊಂಡಿದ್ದರು. ಅವರು ನಟಿಸಿದ ಸೂಪರ್ ಹಿಟ್ ಸಿನಿಮಾ 'ಸೈನಿಕ'. ಈ ಸಿನಿಮಾ ಸಿಪಿ ಯೋಗೇಶ್ವರ್ ಅವರ ಸಿನಿಮಾ ಬದುಕನ್ನೇ ಬದಲಿಸಿತ್ತು. ಇಲ್ಲಿಂದ ಅವರ ವೃತ್ತಿ ಬದುಕು ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಾ ಮುಂದಕ್ಕೆ ಹೋಗಿತ್ತು. ಈಗ ತಮ್ಮ ಪುತ್ರ ಧ್ಯಾನ್ ಯೋಗೇಶ್ವರ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸುವುದಕ್ಕೆ ಮುಂದಾಗಿದ್ದಾರೆ. ಅದಕ್ಕೆ ಈಗಾಗಲೇ ವೇದಿಕೆನೂ ರೆಡಿಯಾಗಿದೆ.
'ಸೈನಿಕ 2'ನಿಂದಲೇ ಎಂಟ್ರಿ
ಚನ್ನಪಟ್ಟಣದ ಶಾಸಕ ಸಿಪಿ ಯೋಗೇಶ್ವರ್‌ಗೆ ಸಕ್ಸಸ್ ಕೊಟ್ಟ ಸಿನಿಮಾ 'ಸೈನಿಕ'. ಈ ಸಿನಿಮಾದ ಸೀಕ್ವೆಲ್‌ನಿಂದಲೇ ಪುತ್ರ ಧ್ಯಾನ್ ಅನ್ನು ಚಿತ್ರರಂಗಕ್ಕೆ ಪರಿಚಯಿಸುವುದು ಯೋಗೇಶ್ವರ್ ಅವರ ಆಸೆ. ಹೀಗಾಗಿ ಸಿನಿಮಾಗೆ 'ಸೈನಿಕ 2' ಅಂತ ಟೈಟಲ್ ಇಡಲಾಗಿದ್ದು, ಇದೇ ಟೈಟಲ್ ಮೂಲಕವೇ ಮಗನ ಇಂಟ್ರುಡಕ್ಷನ್‌ಗೆ ವೇದಿಕೆ ಸಿದ್ಧವಾಗಿದೆ ಎನ್ನಲಾಗುತ್ತಿದೆ.
ಸಿಪಿ ಯೋಗೇಶ್ವರ್ ಕೂಡ ನಟನೆ
'ಸೈನಿಕ 2' ಸಿನಿಮಾದಲ್ಲಿ ಪುತ್ರ ಧ್ಯಾನ್ ಜೊತೆ ಸಿಪಿ ಯೋಗೇಶ್ವರ್ ಕೂಡ ನಟಿಸುತ್ತಿದ್ದಾರೆ ಅನ್ನೋ ಸುದ್ದಿನೂ ಹರಿದಾಡುತ್ತಿದೆ. ಈ ಸಿನಿಮಾವನ್ನು ನಿರ್ಮಾಪಕ ಕೆಪಿ ಶ್ರೀಕಾಂತ್ ಬ್ಯಾನರ್‌ನಲ್ಲಿ ಸೆಟ್ಟೇರಲಿದ್ದು, ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ನಾಗಣ್ಣ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹೀಗಾಗಿ ಬಹಳ ದಿನಗಳ ಬಳಿಕ ಸಿಪಿ ಯೋಗೇಶ್ವರ್ ಮತ್ತೆ ಬಣ್ಣ ಹಚ್ಚಲಿದ್ದು, ಮಗನೊಂದಿಗೆ ನಟಿಸಲಿದ್ದಾರೆ ಎಂದು ವರದಿಯಾಗಿವೆ. ಹೀಗಾಗಿ ಚನ್ನಪಟ್ಟಣದ ಜನತೆಗೆ ಒಂಥರಾ ಡಬಲ್ ಧಮಾಕಾ ಎಂದೇ ಹೇಳಬಹುದು.
ಲೋಕೇಶನ್ ಹಂಟಿಂಗ್ ಶುರು
ಸ್ಯಾಂಡಲ್‌ವುಡ್ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ನಾಗಣ್ಣ ಮತ್ತು ಅವರ ತಂಡ ಲೋಕೇಶನ್ ಹಂಟ್ ಮಾಡುತ್ತಿದೆ. ಬೀದರ್, ಗುಲ್ಬರ್ಗ ಭಾಗಗಳಲ್ಲಿ ಸಿನಿಮಾದ ಶೂಟಿಂಗ್ ನಡೆಯಲಿದ್ದು, ಅಲ್ಲಿ ಲೊಕೇಶನ್‌ಗಳನ್ನು ಹುಡುಕುತ್ತಿದ್ದಾರೆ. ಇದೇ ಜುಲೈ 5 ರಂದು 'ಸೈನಿಕ 2' ಅದ್ಧೂರಿಯಾಗಿ ಸೆಟ್ಟೇರಲಿದೆ ಅನ್ನೋ ಸುದ್ದಿ ಓಡಾಡುತ್ತಿದೆ. ಆದರೆ, ಈ ಬಗ್ಗೆ ಇನ್ನೂ ಸಿಪಿ ಯೋಗೇಶ್ವರ್ ಹಾಗೂ ಅವರ ಕುಟುಂಬ ಅಧಿಕೃತವಾಗಿ ಎಲ್ಲೂ ಹೇಳಿಕೆ ಕೊಟ್ಟಿಲ್ಲ.


Click it and Unblock the Notifications