ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ ಕ್ರೇಜಿ ಸ್ಟಾರ್ ರವಿಚಂದ್ರನ್
ಇಂದು ಕ್ರೇಜಿ ಸ್ಟಾರ್ ವಿ. ರವಿಚಂದ್ರನ್ ಜನ್ಮದಿನ. ಕನ್ನಡ ಚಿತ್ರರಂಗಕ್ಕೆ ವಿಭಿನ್ನ ಕಮರ್ಷಿಯಲ್ ಪ್ರಯೋಗದ ಮೂಲಕ ಹೊಸ ದಿಕ್ಕು ನೀಡಿದ ಕನಸುಗಾರನ ಚಿತ್ರಗಳಿಗೆ ಅವರದೇ ದೊಡ್ಡ ಅಭಿಮಾನಿ ವರ್ಗವಿದೆ. ಪ್ರತಿ ವರ್ಷ ರವಿಮಾಮನ ಹುಟ್ಟುಹಬ್ಬದಂದು ಶುಭ ಕೋರಲು ಅಭಿಮಾನಿಗಳು ಅವರ ಮನೆ ಎದುರು ಜಮಾಯಿಸುತ್ತಿದ್ದರು. ಆದರೆ ಈ ಬಾರಿ ರವಿಚಂದ್ರನ್, ಲಾಕ್ ಡೌನ್ ಕಾರಣದಿಂದ ಅತ್ಯಂತ ಸರಳವಾಗಿ ಜನ್ಮದಿನ ಆಚರಿಸಲು ನಿರ್ಧರಿಸಿದ್ದಾರೆ.
ಬೇರೆ ಕಲಾವಿದರಂತೆ ರವಿಚಂದ್ರನ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿಲ್ಲ. ಹಾಗಾಗಿ ಅವರ ಚಟುವಟಿಕೆಗಳು, ಬದುಕಿನ ಬಗ್ಗೆ ಹೊರ ಜಗತ್ತಿಗೆ ಅಷ್ಟಾಗಿ ತಿಳಿಯುವುದಿಲ್ಲ. ಮಿಗಿಲಾಗಿ ರವಿಚಂದ್ರನ್ ತಮ್ಮನ್ನು ಒಂದಿಲ್ಲೊಂದು ಕೆಲಸಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಮುಂದೆ ಓದಿ...

ರವಿಚಂದ್ರನ್ ಸ್ವಂತ ಆಪ್
ಈ ನಡುವೆ ಅವರು ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಲು ನಿರ್ಧರಿಸಿದ್ದಾರೆ. ಆದರೆ ಇನ್‌ಸ್ಟಾಗ್ರಾಂ, ಫೇಸ್ ಬುಕ್ ಅಥವಾ ಟ್ವಿಟ್ಟರ್‌ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ಅಲ್ಲ. ತಮ್ಮದೇ ಆಪ್ ಮೂಲಕ.

ಆಪ್ ಮೂಲಕ ಮಾಹಿತಿ
ನಿಜ. ರವಿಚಂದ್ರನ್ ಅವರಿಗಾಗಿಯೇ ಆಪ್ ಒಂದನ್ನು ಅಭಿವೃದ್ಧಿಪಡಿಸುವ ಕಾರ್ಯ ನಡೆಯುತ್ತಿದೆ. ಇನ್ನು ಒಂದೆರಡು ತಿಂಗಳಲ್ಲಿ ಈ ಕಾರ್ಯ ಪೂರ್ಣಗೊಳ್ಳಲಿದೆ. ಇದರಲ್ಲಿ ರವಿಚಂದ್ರನ್ ಅವರ ಸಿನಿಮಾ ಮತ್ತು ವೈಯಕ್ತಿಕ ಬದುಕಿನ ಪ್ರತಿ ಮಾಹಿತಿಯೂ ಇರಲಿದೆ. ಈಶ್ವರಿ ಸಂಸ್ಥೆಯ ಹುಟ್ಟು-ಬೆಳವಣಿಗೆ, ತಮ್ಮ ಸಿನಿಮಾಗಳು ರೂಪುಗೊಂಡ ಬಗೆ ಮುಂತಾದವುಗಳ ಮಾಹಿತಿಯನ್ನು ರವಿಚಂದ್ರನ್, ವಿಡಿಯೋ ಮೂಲಕ ನೀಡಲಿದ್ದಾರೆ.

ತಮಗಾಗಿ ಬರುವವರಿಗೆ ಆಪ್
ಅನೇಕರು ಯೂಟ್ಯೂಬ್ ಚಾನೆಲ್ ಮೂಲಕವೂ ತಮ್ಮ ಬದುಕಿನ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಾರೆ. ಆದರೆ ರವಿಚಂದ್ರನ್, ಯೂಟ್ಯೂಬ್ ಬದಲು ಆಪ್‌ಗೆ ಆದ್ಯತೆ ನೀಡಿದ್ದಾರೆ. ಏಕೆಂದರೆ ಯೂಟ್ಯೂಬ್ ಮೂಲಕ ಪೈರಸಿಗಳು ನಡೆಯಬಹುದು. ತಮ್ಮ ಸಿನಿಮಾಗಳ ಬಗ್ಗೆ, ತಮ್ಮ ಬಗ್ಗೆ ತಿಳಿಯಲು ಬಯಸಿದವರಿಗೆಂದೇ ಇಲ್ಲಿ ಮಾಹಿತಿ ಸಿಗುತ್ತದೆ. ಜತೆಗೆ ಎಲ್ಲ ಸಾಮಾಜಿಕ ಜಾಲತಾಣಗಳಿಗೂ ಲಿಂಕ್ ಆಗಿರುತ್ತದೆ ಎಂದಿದ್ದಾರೆ ರವಿಚಂದ್ರನ್.

ಒಟಿಟಿ ಸ್ಥಾಪನೆ
ಕನಸುಗಾರ ಮತ್ತೊಂದು ಕನಸನ್ನು ಕೂಡ ಕಂಡಿದ್ದಾರೆ. ಅದು ತಮ್ಮದೇ ಆದ ಒಟಿಟಿ ಪ್ಲಾಟ್ ಫಾರ್ಮ್ ಮಾಡುವುದು. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಅವರು ಡಿಜಿಟಲ್ ಮಾಧ್ಯಮದ ಶಕ್ತಿಯನ್ನು ಕಂಡಿದ್ದಾರೆ. ಕಂಟೆಂಟ್ ಚೆನ್ನಾಗಿದ್ದರೆ ಜನರು ಯಾವ ರೀತಿಯಲ್ಲಾದರೂ ನೋಡುತ್ತಾರೆ ಎನ್ನುವುದು ಅವರ ಅನಿಸಿಕೆ. ಅಮೆಜಾನ್ ಮತ್ತು ನೆಟ್‌ಫ್ಲಿಕ್ಸ್‌ನಂತಹ ಡಿಜಿಟಲ್ ಮಾರ್ಗಗಳು ಜನರಿಗೆ ಹತ್ತಿರವಾಗಿರುವಾಗ ಸ್ವಂತ ಒಟಿಟಿ ಶುರುಮಾಡಿದರೆ ಅನುಕೂಲವಾಗುತ್ತದೆ ಎನ್ನುವುದು ಅವರ ಅಭಿಪ್ರಾಯ.


Click it and Unblock the Notifications











