20 ವರ್ಷಗಳ ಬಳಿಕ ಸೈನೈಡ್ ರಿ-ರಿಲೀಸ್; 10 ನಿಮಿಷದ ಹೆಚ್ಚುವರಿ ದೃಶ್ಯದಲ್ಲಿ ಏನಿರುತ್ತೆ?
ಕನ್ನಡ ಚಿತ್ರರಂಗದಲ್ಲಿ ಹೊಸ ಟ್ರೆಂಡ್ ಅನ್ನು ಹುಟ್ಟಾಕಿದ್ದ ಸಿನಿಮಾ 'ಸೈನೈಡ್'. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯ ನಂತರದ ನೈಜ ಘಟನೆಗಳನ್ನು ಆಧರಿಸಿದ ಸಿನಿಮಾವಿದು. ಎಎಂಆರ್ ರಮೇಶ್ ಈ ಸಿನಿಮಾವನ್ನು ನಿರ್ದೇಶಿಸಿದ್ದರು. ಇದು 2006ರಲ್ಲಿ ರಿಲೀಸ್ ಆಗಿತ್ತು. ಇಂತಹ ರಿಯಲಿಸ್ಟಿಕ್ ಹಾಗೂ ಸೂಕ್ಷ್ಮ ಸಿನಿಮಾ ಕನ್ನಡಕ್ಕೆ ಹೊಸದಾಗಿತ್ತು.
ಸೈಜ ಘಟನೆಗಳನ್ನು ಆಧರಿಸಿ ನಿರ್ಮಿಸಿದ್ದ 'ಸೈನೈಡ್' ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಜನಪ್ರಿಯತೆಯನ್ನು ಕಂಡಿತ್ತು. ಪ್ರೇಕ್ಷಕರು ಈ ರಿಯಲಿಸ್ಟಿಕ್ ಸಿನಿಮಾವನ್ನು ಇಷ್ಟ ಪಟ್ಟಿದ್ದರು. ತಾರಾ, ರಂಗಾಯಣ ರಘು, ರವಿಕಾಳೆ, ಮಾಳವಿಕ, ಅವಿನಾಶ್, ಉಷಾ ಭಂಡಾರಿ ಅಂತಹ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದರು. ಈಗ ಇದೇ ಸಿನಿಮಾವನ್ನು ಎಎಂಆರ್ ರಮೇಶ್ ಮತ್ತೆ ಮರು ಬಿಡುಗಡೆ ಮಾಡುವುದಕ್ಕೆ ನಿರ್ಧರಿಸಿದ್ದಾರೆ.

'ಸೈನೈಡ್' ಕನ್ನಡ ಚಿತ್ರರಂಗದ ಪ್ರಯೋಗಾತ್ಮಕ ಪ್ರಯತ್ನದಲ್ಲಿ ಯಶಸ್ಸು ಕಂಡ ಸಿನಿಮಾ. ಮಾಜಿ ಪ್ರಧಾನಿ ರಾಜೀವ್ ಗಾಂಧಿಯನ್ನು ಹತ್ಯೆ ಮಾಡಿದವರು 20 ದಿನಗಳ ಕಾಲ ಬೆಂಗಳೂರಿನಲ್ಲಿ ಅಡಗಿ ಕೂತಿದ್ದರು. ಅದನ್ನು ಬೆಂಗಳೂರಿನ ಪೊಲೀಸರು ಬೇಧಿಸಿದ ಕಥೆಯನ್ನು ಎಎಂಆರ್ ರಮೇಶ್ ರೋಚಕ ನಿರೂಪಣೆಯ ಮೂಲಕ ತೆರೆಮೇಲೆ ತಂದಿದ್ದರು. ಈಗ 20 ವರ್ಷಗಳ ಬಳಿಕ ರಿಲೀಸ್ ಮಾಡುತ್ತಿದ್ದು, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
"ಸೈನೈಡ್", ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯ ಬಳಿಕ ನಡೆದ ಘಟನೆಯನ್ನು ಆಧರಿಸಿದ ಸಿನಿಮಾ. 2006ರಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುವಾಗ ಏನಾಗುತ್ತೋ ಏನೋ? ಎಂಬ ಆತಂಕವಿತ್ತು. ಆದರೆ ಬಿಡುಗಡೆಯಾದ ಮೇಲೆ ಜನ ಈ ಚಿತ್ರ ಸ್ವೀಕರಿಸಿದ ರೀತಿ ಕಂಡು ಆ ರಿಲೀಫ್ ಆಯ್ತು. ಕನ್ನಡದ ಖ್ಯಾತ ಸಾಹಿತಿಗಳು, ನಟರು ಹಾಗೂ ನಿರ್ದೇಶಕರು ಸಹ ಈ ಚಿತ್ರದ ಕುರಿತು ತಮ್ಮ ಅಭಿಪ್ರಾಯ ತಿಳಿಸಿದ್ದರು. ತಾರಾ ಅವರ ಪಾತ್ರಕ್ಕೆ ರಾಜ್ಯ ಪ್ರಶಸ್ತಿ ತಂದುಕೊಟ್ಟಿತ್ತು. ಈಗ ಈ ಸಿನಿಮಾವನ್ನು ಈಗಿನ ಕೆಲವು ತಂತ್ರಜ್ಞಾನಗಳನ್ನು ಅಳವಡಿಸಿ, ಜೊತೆಗೆ ಹತ್ತು ನಿಮಿಷಗಳ ದೃಶ್ಯವನ್ನು ಸೇರಿಸಿ ಮೇ 23 ರಂದು ಮರು ಬಿಡುಗಡೆ ಮಾಡುತ್ತಿದ್ದೇವೆ." ಎಂದು ಎಎಂಆರ್ ರಮೇಶ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

10 ನಿಮಿಷ ಹೆಚ್ಚುವರಿಯಾಗಿ ಸೇರಿಸಿರುವ ದೃಶ್ಯಗಳ ಬಗ್ಗೆ ನಿರ್ದೇಶಕ ಎಎಂಆರ್ ರಮೇಶ್ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಆದರೆ, 'ಸೈನೈಡ್' ಪ್ರೀಕ್ವೆಲ್ ಅನ್ನು ಬರುತ್ತೆ ಎಂದು ಸುಳಿವು ನೀಡಿದ್ದಾರೆ. ಈಗಾಗಲೇ ಪ್ರೀಕ್ವೆಲ್ ಪ್ರೀ ಪ್ರೊಡಕ್ಷನ್ ಹಂತದಲ್ಲಿದೆ ಎಂದು ಇದೇ ವೇದಿಕೆ ಮೇಲೆ ಹೇಳಿಕೊಂಡಿದ್ದಾರೆ. "ಸೈನೈಡ್ ಚಿತ್ರದ ಪ್ರೀಕ್ವೆಲ್ ಸಹ ಬರಲಿದ್ದು, ಅದರ ಕೆಲಸ ಕೂಡ ನಡೆಯುತ್ತಿದೆ" ಎಂದು ನಿರ್ದೇಶಕ ರಮೇಶ್ ಹೇಳಿಕೊಂಡಿದ್ದಾರೆ.
ಇನ್ನು ಇದೇ ವೇಳೆ 'ಸೈನೈಡ್' ಸಿನಿಮಾದಲ್ಲಿ ನಟಿಸಿದ ಅನುಭವಗಳನ್ನು ನಟಿ ತಾರಾ ಹಂಚಿಕೊಂಡಿದ್ದಾರೆ. "ನಾನು ಸೈನೈಡ್' ಸಿನಿಮಾದಲ್ಲಿ ಮೃದುಲಾ ಎಂಬ ಮುಗ್ಧ ಹೆಣ್ಣು ಮಗಳ ಪಾತ್ರ ಮಾಡಿದ್ದೇನೆ. ಇಪ್ಪತ್ತು ವರ್ಷಗಳ ಹಿಂದೆ ಈ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದಾಗ ನಾನು ಮೃದುಲಾ ಅವರನ್ನು ಭೇಟಿ ಮಾಡುವುದಕ್ಕೆ ಪ್ರಯತ್ನ ಪಟ್ಟೆ. ಆದರೆ ಅದು ಸಾಧ್ಯವಾಗಲಿಲ್ಲ. ಅವರ ಪತಿ ರಂಗನಾಥ್ ಶೂಟಿಂಗ್ ಸ್ಥಳಕ್ಕೆ ಬರುತ್ತಿದ್ದರು. ಅವರಿಂದ ಮೃದುಲಾ ಅವರ ಸ್ವಭಾವ ತಿಳಿದುಕೊಂಡು ನಟಿಸಿದ್ದೆ. ನನ್ನ ಪಾತ್ರಕ್ಕೆ ರಾಜ್ಯ ಪ್ರಶಸ್ತಿ ಕೂಡ ಬಂತು. ಈಗ ರಮೇಶ್ ಈ ಚಿತ್ರವನ್ನು ಮರು ಬಿಡುಗಡೆ ಮಾಡುತ್ತಿದ್ದಾರೆ." ಎಂದು ನಟಿ ತಾರಾ ಹೇಳಿದ್ದಾರೆ. ಅಂದ್ಹಾಗೆ ಈ ಸಿನಿಮಾವನ್ನು ಕೆಂಚಪ್ಪ ಗೌಡ ನಿರ್ಮಾಣವನ್ನು ಮಾಡಿದ್ದರು.


Click it and Unblock the Notifications











