ಕಿಚ್ಚ ಸುದೀಪ್–ಡಿಕೆ ಶಿವಕುಮಾರ್ ಭೇಟಿ ಗುಟ್ಟೇನು? ಸ್ಪರ್ಧೆಗೋ.. ಪ್ರಚಾರಕ್ಕೋ?
ಕರ್ನಾಟಕದಲ್ಲಿ ವಿಧಾನ ಸಭೆ ಚುನಾವಣೆಗೆ ಈಗಿನಿಂದಲೇ ಪ್ರಚಾರ ಕಾರ್ಯಗಳು ಆರಂಭ ಆಗಿವೆ. ನಿಧಾನವಾಗಿಯೇ ಪ್ರಮುಖ ಪಕ್ಷಗಳ ಮುಖಂಡರು ಅಖಾಡಕ್ಕೆ ಇಳಿದಿದ್ದಾರೆ. ತಮ್ಮ ತಮ್ಮ ಕ್ಷೇತ್ರದಲ್ಲಿ ಗೆಲ್ಲಲು ಪ್ರಚಾರ ತಂತ್ರಗಳನ್ನು ರೂಪಿಸುತ್ತಿದ್ದಾರೆ.
ಚುನಾವಣೆ ಬಂತು ಅಂದ್ರೆ, ರಾಜಕೀಯ ಮುಖಂಡರು ಹೇಗೆ ಬ್ಯುಸಿಯಾಗುತ್ತಾರೋ ಹಾಗೇ ಸಿನಿಮಾ ನಟರು ಕೂಡ ಪ್ರಚಾರದಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಬಾರಿ ಚುನಾವಣೆಯಲ್ಲೂ ಪ್ರಮುಖ ಪಕ್ಷಗಳು ಸಿನಿಮಾ ನಟರನ್ನು ಪ್ರಚಾರಕ್ಕೆ ಕರೆತರಲು ಮುಂದಾಗಿದೆ. ಈ ಬೆನ್ನಲ್ಲೇ ಕಿಚ್ಚ ಸುದೀಪ್-ಡಿಕೆ ಶಿವಕುಮಾರ್ ಭೇಟಿಯಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿನ್ನೆ (ಫೆಬ್ರವರಿ 02) ಕನ್ನಡದ ಸೂಪರ್‌ಸ್ಟಾರ್ ಕಿಚ್ಚ ಸುದೀಪ್ ಭೇಟಿ ಮಾಡಿದ್ದಾರೆ. ಗುರುವಾರ ರಾತ್ರಿ ಜೆ.ಪಿ. ನಗರದಲ್ಲಿರುವ ಕಿಚ್ಚ ಸುದೀಪ್ ನಿವಾಸ ಭೇಟಿ ಮಾಡಿ ಕೆಲ ಕಾಲ ಚರ್ಚೆ ಮಾಡಿದ್ದಾರೆ. ಅಲ್ಲದೆ ಸುದೀಪ್ ಮನೆಯಲ್ಲಿ ಊಟ ಮಾಡಿ ನಿರ್ಗಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರು ಭೇಟಿ ಚರ್ಚೆಗೆ ಗ್ರಾಸವಾಗಿತ್ತು.

ಸ್ಪರ್ಧೆಗೋ.. ಪ್ರಚಾರಕ್ಕೋ?
ಕೆಲವು ದಿನಗಳ ಹಿಂದಷ್ಟೇ ಕಿಚ್ಚ ಸುದೀಪ್ ಕಾಂಗ್ರೆಸ್ ಸೇರುತ್ತಾರೆ ಅನ್ನೋ ಮಾತು ಕೇಳಿ ಬಂದಿತ್ತು. ರಮ್ಯಾ ಮೂಲಕ ಕಾಂಗ್ರೆಸ್ ಪಕ್ಷ ಸುದೀಪ್ ಅವರನ್ನು ಸಂಪರ್ಕಿಸಿದ್ದು, ಶೀಘ್ರದಲ್ಲಿಯೇ ಚುನಾವಣಾ ಕಣಕ್ಕೆ ಇಳಿಯುತ್ತಾರೆ ಅಂತ ಗುಲ್ಲೆದ್ದಿತ್ತು. ಹೀಗಾಗಿ ಕಿಚ್ಚ ಹಾಗೂ ಡಿಕೆಶಿ ಭೇಟಿ ಕುತೂಹಲ ಕೆರಳಿಸಿತ್ತು. ಆದ್ರೀಗ ಡಿಕೆಶಿ ಕನ್ನಡದ ಸೂಪರ್‌ಸ್ಟಾರ್ ಕಿಚ್ಚ ಸುದೀಪ್ ಅನ್ನು ಚುನಾವಣಾ ಪ್ರಚಾರಕ್ಕೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ಪರ ಕಿಚ್ಚ ಪ್ರಚಾರ?
ಮುಂದಿನ ದಿನಗಳಲ್ಲಿ ಚುನಾವಣೆಗೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಎಲೆಕ್ಷನ್ ಸಮೀಪಿಸುತ್ತಿದ್ದಂತೆ ರಾಜಕೀಯ ಮುಖಂಡರು ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಿನಿಮಾ ನಟರು ಜೊತೆಯಲ್ಲಿದ್ದರೆ, ಮತ್ತಷ್ಟು ಬಲ ಬರುತ್ತೆ. ಹೀಗಾಗಿ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗಿಯಾಗುವಂತೆ ಸುದೀಪ್ ಬಳಿ ಮನವಿ ಮಾಡಿಕೊಂಡಿದ್ದಾರೆ ಅಂತ ರಾಜಕೀಯ ವಲಯದಲ್ಲಿ ಓಡಾಡುತ್ತಿದೆ.

ವಾಲ್ಮೀಕಿ ಸಮುದಾಯದ ಮೇಲೆ ಕಣ್ಣು
ಕಿಚ್ಚ ಸುದೀಪ್ ವಾಲ್ಮೀಕಿ ಸಮುದಾಯಕ್ಕೆ ಸೇರಿದ್ದಾರೆ. ಕರ್ನಾಟಕದಾದ್ಯಂತ ಈ ಸಮುದಾಯಕ್ಕೆ ಸೇರಿದ ಜನಸಂಖ್ಯೆ ದೊಡ್ಡದಿದೆ. ಹೀಗಾಗಿ ಅವರ ಮತಗಳ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದ್ದು, ಈ ಕಾರಣಕ್ಕಾಗಿಯೇ ಕಿಚ್ಚ ಸುದೀಪ್‌ರನ್ನು ಸಂಪೂರ್ಣವಾಗಿ ಪ್ರಚಾರಕ್ಕೆ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ ಅನ್ನೋದು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿರೋ ಸುದ್ದಿ.

ಬಿಜೆಪಿ ಜೊತೆನೂ ಬಾಂಧವ್ಯ
ಕಿಚ್ಚ ಸುದೀಪ್ ಕೇವಲ ಕಾಂಗ್ರೆಸ್ ಮುಖಂಡರೊಂದಿಗಷ್ಟೇ ಅಲ್ಲ. ಬಿಜೆಪಿ ಮುಖಂಡರ ಜೊತೆನೂ ಆತ್ಮೀಯರಾಗಿದ್ದಾರೆ. ಅದರಲ್ಲೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕಿಚ್ಚ ಸುದೀಪ್ ಆತ್ಮೀಯರು. ಆಗಾಗ ವಿಶೇಷ ಕಾರ್ಯಕ್ರಮಗಳಲ್ಲಿ ಇಬ್ಬರೂ ಮುಖಾಮುಖಿ ಭೇಟಿಯಾಗುತ್ತಾರೆ. ಅಷ್ಟೇ ಅಲ್ಲದೆ ಬೇರೆ ಬೇರೆ ಪಕ್ಷಗಳಲ್ಲಿ ಕಿಚ್ಚ ಸುದೀಪ್‌ಗೆ ಸ್ನೇಹಿತರಿದ್ದಾರೆ. ಸದ್ಯ ಡಿಕೆಶಿ ಭೇಟಿ ರಾಜಕೀಯ ಭೇಟಿ ಕುತೂಹಲವನ್ನಂತೂ ಮೂಡಿಸಿದೆ.


Click it and Unblock the Notifications










