ಬೆಂಗಳೂರಿನಲ್ಲಿ ತಮಿಳು ನಟ ಸಿದ್ದಾರ್ಥ್ '3 BHK'ಗೆ ಜೊತೆಯಾದ ಡಾಲಿ ಧನಂಜಯ್
ಚಿತ್ರರಂಗದಲ್ಲಿ ಕೆಲವೊಮ್ಮೆ ಒಳ್ಳೊಳ್ಳೆ ಬೆಳವಣಿಗೆಗಳು ಆಗುತ್ತಿರುತ್ತವೆ. ಈಗ ಬೇರೆ ಬೇರೆ ಭಾಷೆಯ ಸಿನಿಮಾಗಳ ನಟರು ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಇನ್ನೊಂದು ಕಡೆ ಸಿನಿಮಾಗಳ ಪ್ರಚಾರದಲ್ಲಿ ಭಾಗವಹಿಸಿ ಆ ಸಿನಿಮಾ ತಂಡಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ. ಇಂತಹ ಸಹಕಾರ ಮನೋಭಾವ ಆಗಾಗ ಭಾರತೀಯ ಚಿತ್ರರಂಗದಲ್ಲಿ ನೋಡುವುದಕ್ಕೆ ಸಿಗುತ್ತಿದೆ. ಈಗ ತಮಿಳು ನಟ ಸಿದ್ಧಾರ್ಥ್ ಸಿನಿಮಾಗೂ ಕನ್ನಡದ ನಟ ಹಾಗೂ ನಿರ್ದೇಶಕರಿಂದ ಬೆಂಬಲ ಸಿಕ್ಕಿದೆ.
ತಮಿಳು ಚಿತ್ರರಂಗದ ಜನಪ್ರಿಯ ನಟ ಸಿದ್ದಾರ್ಥ್ ಸಿನಿಮಾ '3 BHK'ಇದೇ ವಾರ ಬಿಡುಗಡೆಯಾಗುತ್ತಿದೆ. ಈಗಾಗಲೇ ಸಿನಿಮಾ ಟ್ರೈಲರ್ ಸಿನಿ ಪ್ರಿಯರ ಗಮನ ಸೆಳೆದಿದೆ. ಇನ್ನೇನು ಜುಲೈ 4 ರಂದು ಬಿಡುಗಡೆ ಆಗುತ್ತಿರುವುದರಿಂದ ಇಡೀ ಚಿತ್ರತಂಡ ಬೆಂಗಳೂರಿಗೆ ಬಂದಿತ್ತು. ಪ್ರೀ ರಿಲೀಸ್ ಇವೆಂಟ್ ಅನ್ನು ಇಲ್ಲೂ ಹಮ್ಮಿಕೊಂಡಿತ್ತು. ಸಿನಿಮಾದ ಹೀರೋ ಸಿದ್ಧಾರ್ಥ್, ಹಿರಿಯ ನಟ ಶರತ್ ಕುಮಾರ್ ಸೇರಿದಂತೆ ದಿಗ್ಗಜರು ಈ ಪ್ರೀ ರಿಲೀಸ್ ಇವೆಂಟ್‌ನಲ್ಲಿ ಭಾಗವಹಿಸಿದ್ದರು.

ಈ ಕಾರ್ಯಕ್ರಮಕ್ಕೆ ಕನ್ನಡದ ನಟ ಡಾಲಿ ಧನಂಜಯ ಹಾಗೂ ನಿರ್ದೇಶಕ ಹೇಮಂತ್ ರಾವ್ ವಿಶೇಷ ಅತಿಥಿಯಾಗಿ ಭಾಗಿಯಾಗಿದ್ದರು. ಪರಭಾಷೆಯ ನಟರ ಸಿನಿಮಾಗಳಿಗೆ ಕರ್ನಾಟಕದಲ್ಲಿ ಬೆಂಬಲ ನೀಡಿದ್ದರು. ಈ ವೇಳೆ ತಮಿಳು ನಟ ಸಿದ್ಧಾರ್ಥ್ ಜೊತೆ ಡಾಲಿ ಧನಂಜಯ್ ಹಾಗೂ ನಿರ್ದೇಶಕ ಹೇಮಂತ್ ರಾವ್ ಕಾಣಿಸಿಕೊಂಡಿದ್ದಾರೆ. ಈ ವೇಳೆ ಸಿದ್ಧಾರ್ಥ್ ಬಗ್ಗೆ ಡಾಲಿ ಧನಂಜಯ್ ಏನು ಹೇಳಿದರು ಎಂಬುವುದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಇನ್ನು ತಮ್ಮ ಸಿನಿಮಾ ಬಗ್ಗೆ ಸಿದ್ಧಾರ್ಥ್ ಕನ್ನಡಿಗರಿಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. '3 BHK'ಸಿನಿಮಾ ಪ್ರತಿಯೊಬ್ಬರ ಮನೆಯಲ್ಲಿ ನಡೆಯುವ ಕಥೆ. ಇದು ನಿಮ್ಮದೇ ಕಥೆ. ನಿಮ್ಮ ಮನೆಯಲ್ಲಿ ನಡೆದಿರುವ ಕಥೆ. ಪದೇ ಪದೆ ಪ್ರಯತ್ನ ಮಾಡುವುದೇ ಜೀವನ. ಈ ಸಿನಿಮಾ ನೋಡಿದ ಮೇಲೆ ನಿಮ್ಮ ತಂದೆಯನ್ನು ಬಿಗಿದಪ್ಪಿಕೊಳ್ಳುತ್ತೀರ. ಈ ಸಿನಿಮಾ ತೆಲುಗು ಹಾಗೂ ಕನ್ನಡ ಎರಡೂ ಭಾಷೆಯಲ್ಲಿಯೂ ಬಿಡುಗಡೆಯಾಗುತ್ತಿದೆ" ಎಂದು ಹೇಳಿದರು.
ಈ ಸಿನಿಮಾದ ಇನ್ನೊಂದು ಹೈಲೈಟ್ ಅಂದರೆ ಚೈತ್ರಾ ಆಚಾರ್. '3 BHK' ಸಿನಿಮಾದಲ್ಲಿ ಚೈತ್ರಾ ಆಚಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದು ಚೈತ್ರಾ ಅವರ ಮೊದಲ ತಮಿಳು ಸಿನಿಮಾ. ಹೀಗಾಗಿ ಈ ಸಿನಿಮಾ ನೋಡುವುದಕ್ಕೆ ಕಾತುರಳಾಗಿದ್ದೇನೆ ಎಂದು ವೇದಿಕೆ ಮೇಲೆ ಹೇಳಿದ್ದಾರೆ. ಎಲ್ಲರೂ ಈ ಸಿನಿಮಾವನ್ನು ನೋಡಬಹುದು. ಸಿನಿಮಾ ನೋಡಿದ ಮೇಲೆ ನಿಮಗೆ ಇದು ಹ್ಯಾಪಿ ಮೂವ್ಮೆಂಟ್ ಕೊಡುತ್ತೆ" ಎಂದು ಚೈತ್ರಾ ಆಚಾರ್ ತಮ್ಮ ತಮಿಳು ಸಿನಿಮಾದ ಬಗ್ಗೆ ಮಾತಾಡಿದ್ದಾರೆ.
ಹಾಗೇ ವಿಶೇಷ ಅತಿಥಿಯಾಗಿ ಬಂದಿದ್ದ ಡಾಲಿ ಧನಂಜಯ್ ಕೂಡ ಸಿನಿಮಾ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. " ಸಿನಿಮಾ ಟ್ರೈಲರ್ ನೋಡಿದ್ದಾಗ ಸಿಕ್ಕಾಪಟ್ಟೆ ಇಷ್ಟ ಆಯ್ತು. ಫಸ್ಟ್ ಶಾಟ್ ನಮ್ಮನ್ನು ಬಾಲ್ಯದಜೀವನಕ್ಕೆ ಕರೆದುಕೊಂಡು ಹೋಯ್ತು. ಪ್ರತಿಯೊಬ್ಬರಿಗೂ ಮನೆ ತೆಗೆದುಕೊಳ್ಳಬೇಕು ಎಂಬ ಕನಸು ಇರುತ್ತದೆ. ಬದುಕಿಗೆ ಹತ್ತಿರವಿರುವ ಸಿನಿಮಾ ಇದು. ಈ ಸಿನಿಮಾ ಸೂಪರ್ ಹಿಟ್ ಆಗುತ್ತದೆ ಎಂಬ ನಂಬಿಕೆ ಇದೆ. ಸಹೋದರ ಸಿದ್ದಾರ್ಥ್ ನನಗೆ ಇಷ್ಟ. ಈ ಮನುಷ್ಯನಿಗೆ ವಯಸ್ಸೇ ಆಗಲ್ವಾ ಅನಿಸುತ್ತದೆ. ಹೀಗೆ ಅವರು ಮೆಂಟೈನ್ ಮಾಡಿದ್ದಾರೆ. ಹೃದಯಕ್ಕೆ ತುಂಬಾ ಹತ್ತಿರವಾದ ಮನುಷ್ಯ" ಎಂದು ಸಿದ್ಧಾರ್ಥ್‌ಗೆ ಡಾಲಿ ಧನಂಜಯ್ ಶುಭ ಕೋರಿದ್ದಾರೆ.
'3 BHK'ಸಿನಿಮಾದಲ್ಲಿ ತಮಿಳು ನಟ ಸಿದ್ದಾರ್ಥ್ ಜೊತೆ ಶರತ್ ಕುಮಾರ್, ದೇವಯಾನಿ, ಯೋಗಿ ಬಾಬು, ಮೀತಾ ರಘುನಾಥ್ ಹಾಗೂ ಕನ್ನಡ ನಟಿ ಚೈತ್ರಾ ಆಚಾರ್ ನಟಿಸಿದ್ದಾರೆ. ಶ್ರೀ ಗಣೇಶ್ ಕಥೆಯ ಜೊತೆಗೆ ನಿರ್ದೇಶನ ಮಾಡಿದ್ದಾರೆ. ತಮಿಳು ಭಾಷೆಯಲ್ಲಿ ನಿರ್ಮಾಣಗೊಂಡಿರುವ ಈ ಸಿನಿಮಾ ತೆಲುಗು ಹಾಗೂ ಕನ್ನಡಕ್ಕೆ ಡಬ್ ಆಗಿ ಬಿಡುಗಡೆಯಾಗುತ್ತಿದೆ.


Click it and Unblock the Notifications











