"ನಾನು ಕಾಮನ್ ಮ್ಯಾನ್.. ಹಾಗೇ ಇರುವುದಕ್ಕೇ ಇಷ್ಟ"; ಚುನಾವಣಾ ಸ್ಪರ್ಧೆ ಬಗ್ಗೆ ಧನಂಜಯ್ ಪ್ರತಿಕ್ರಿಯೆ!
ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ಲೆಕ್ಕಾಚಾರಗಳು ಶುರುವಾಗಿದೆ. ಅದರಲ್ಲೂ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಿಂದ ಡಾಲಿ ಧನಂಜಯ್ ಸ್ಪರ್ಧೆ ಮಾಡುತ್ತಾರೆ ಅನ್ನೋ ಸುದ್ದಿ ಕೆಲವು ದಿನಗಳಿಂದ ಓಡಾಡಿತ್ತು. ಕನ್ನಡ ಚಿತ್ರರಂಗಕ್ಕೆ ಧನಂಜಯ್ ಹೆಸರು ಚಿರಪರಿಚಿತ. ಅಲ್ಲದೆ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಹೀಗಾಗಿ ಕಾಂಗ್ರೆಸ್ ಪ್ರತಾಪ್ ಸಿಂಹ ವಿರುದ್ಧ ಧನಂಜಯ್ ನಿಲ್ಲಿಸುವುದಕ್ಕೆ ಚಿಂತಿಸುತ್ತಿದೆ ಅನ್ನುವ ಸುದ್ದಿ ಹರಿದಾಡಿತ್ತು.
ಕಾಂಗ್ರೆಸ್ ಮಾಸ್ಟರ್ ಪ್ಲ್ಯಾನ್ ಮಾಡಿದ್ದು, ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದು, ಈ ಬಾರಿ ಪ್ರತಾಪ್ ಸಿಂಹರನ್ನು ಸೋಲಿಸಲೇಬೇಕು ಅಂತ ತೀರ್ಮಾನಿಸಿದೆ ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕೆ ಡಾಲಿ ಧನಂಜಯ್‌ರನ್ನು ಪ್ರತಾಪ್ ಸಿಂಹ ಎದುರಾಳಿಯಾಗಿ ಚುನಾವಣೆಗೆ ನಿಲ್ಲುವ ಪ್ರಯತ್ನ ಆಗಿದೆ ಎನ್ನಲಾಗಿತ್ತು. ಅಲ್ಲದೇ ಸಿದ್ಧರಾಮಯ್ಯ ಪುತ್ರ ಯತೀಂದ್ರರನ್ನು ಈ ಕ್ಷೇತ್ರದಿಂದ ಕಣಕ್ಕೆ ಇಳಿಸುವುದಕ್ಕೆ ಆ ಭಾಗದ ಕಾಂಗ್ರೆಸ್ ಮುಖಂಡರಲ್ಲಿ ಒಮ್ಮತದ ಅಭಿಪ್ರಾಯವಿಲ್ಲ ಎನ್ನಲಾಗಿತ್ತು.

ಕಾಂಗ್ರೆಸ್ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಡಾಲಿ ಧನಂಜಯ್ ಪ್ರತಿಕ್ರಿಯೆ ನೀಡಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವ ಆಲೋಚನೆ ಇಲ್ಲ. ನಾನೊಬ್ಬ ಕಾಮನ್ ಮ್ಯಾನ್. ಕಾಮನ್ ಮ್ಯಾನ್ ಆಗಿಯೇ ಇರುತ್ತೇನೆ ಎಂದು ಡಾಲಿ ಧನಂಜಯ್ ಪ್ರತಿಕ್ರಿಯೆ ನೀಡಿದ್ದಾರೆ. ರಾಜಕೀಯ ಪ್ರವೇಶದ ಬಗ್ಗೆ ಡಾಲಿ ಧನಂಜಯ್ ಪ್ರತಿಕ್ರಿಯೆಯ ಝಲಕ್ ಇಲ್ಲಿದೆ.
"ನನ್ನನ್ನು ಎಲೆಕ್ಷನ್‌ಗೆ ನಿಲ್ಲಿಸಿ, ಟಿಕೆಟ್ ಕೊಡಿಸಿದ್ದಾರೆ"
"ನಾನು ಹೈದರಾಬಾದ್‌ನಲ್ಲಿದ್ದೆ ಕೆಲಸದಲ್ಲಿ.. ನಾನು ಹೋಗಿ ಅಲ್ಲಿಂದ ಬರುವಷ್ಟರಲ್ಲಿ ನನ್ನನ್ನು ಎಲೆಕ್ಷನ್‌ಗೆ ನಿಲ್ಲಿಸಿ, ನನಗೆ ಟಿಕೆಟ್ ಕೊಡಿಸಿ, ಇದೆಲ್ಲದನ್ನೂ ನೀವೆ ಮಾಡಿರೋದು. ನೀವೆ ಹೇಳಬೇಕು ನನಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಯಾರಾದ್ರೂ ಹೇಳಿದ್ದಾರಾ? ಇವನನ್ನು ಸಿನಿಮಾದಿಂದ ಆಚೆ ಕಳಿಸಿ ಅಂತ. ಇಲ್ಲ ನಾನು ಸಿನಿಮಾ ಮಾಡ್ತೀನಿ.. ನಾನು ಸಿನಿಮಾ ಮಾಡಬೇಕು. ನಟನಾಗಿ ತುಂಬಾ ಕನಸು ಕಟ್ಟಿಕೊಂಡು ಬಂದಿದ್ದೇನೆ. " ಎಂದು ಧನಂಜಯ್ ಹೇಳಿದ್ದಾರೆ.
"ಯಾವುದೇ ರಾಜಕೀಯ ಉದ್ದೇಶವಿಲ್ಲ"
"ನಟನಾಗಿ, ನಿರ್ಮಾಪಕನಾಗಿ, ನನ್ನ ಚಿತ್ರರಂಗ.. ಸಿನಿಮಾದಲ್ಲಿ ಇದ್ದುಕೊಂಡೇ ಕೆಲಸ ಮಾಡಬಹುದಲ್ವಾ? ಲಿಡ್ಕರ್ ಅನ್ನೋ ಸಂಸ್ಥೆಯಲ್ಲಿ ಸಾವಿರಾರು ಬಡ ಕುಟುಂಬಗಳಿವೆ. ಅದಕ್ಕೆ ಬ್ರ್ಯಾಂಡ್ ಅಂಬಾಸಿಡರ್ ಆಗಿ ಅಂತ ಕೇಳಿದಾಗ, ತುಂಬಾ ಖುಷಿಯಾಗಿ ಒಪ್ಪಿಕೊಂಡೆ. ಯಾಕಂದ್ರೆ, ಇದು ತುಂಬಾ ಮುಖ್ಯ ಕೂಡ ಹೌದು. ಅದೊಂದೇ ಉದ್ದೇಶ ಬಿಟ್ಟರೆ, ಅದರ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ." ಎಂದು ಹೇಳಿದ್ದಾರೆ.
"ನಾನು ಖಂಡಿತಾ ರೆಡಿಯಿಲ್ಲ"
"ರಾಜಕೀಯಕ್ಕೆ ಬೇಕಿರೋದು ಬೇರೆ ಮೈಂಡ್ ಸೆಟ್ಟು. ನಾನು ಹೇಳ್ತಿರೋದು ರಾಜಕಾರಣ ಬೇರೆ. ನಾಯಕನಾಗಿರೋದೂ ಬೇರೆ. ಅದಕ್ಕೆ ಅದರದ್ದೇ ಆದ ಕ್ವಾಲಿಟೀಸ್ ಇರುತ್ತೆ. ಅದನ್ನು ನಿಭಾಯಿಸೋ ಶಕ್ತಿ ಇರಬೇಕು. ಅದಕ್ಕೆಲ್ಲ ಸದ್ಯಕ್ಕೆ ನಾನು ಖಂಡಿತಾ ರೆಡಿಯಿಲ್ಲ. ನೀವು ಗಮನಿಸಿದ್ರೆ, ನಾನು ಚುನಾವಣಾ ಪ್ರಚಾರಕ್ಕೆನೇ ಹೋಗಿಲ್ಲ. ನನ್ನನ್ನೇನು ಕರೆದಿಲ್ಲ ಅಂತಲ್ಲ. ಎಲ್ಲಾ ಪಕ್ಷದಿಂದಲೂ ಗೆಳೆಯರಿದ್ದಾರೆ. ಎಲ್ಲಾ ಪಕ್ಷದಿಂದಲೂ ಫ್ರೆಂಡ್ಸ್ ಇದ್ದಾರೆ. ಎಲ್ಲರೂ ಕರೆದಿದ್ದೂ ಹೌದು. ಆದರೆ ನಾನು ಹೋಗಿಲ್ಲ. ಯಾಕಂದ್ರೆ, ನನಗೆ ಅದರಲ್ಲಿ ಗುರುತಿಸಿಕೊಳ್ಳುವುದಕ್ಕೆ ಇಷ್ಟವಿಲ್ಲ." ಎಂದು ಧನಂಜಯ್ ಪ್ರತಿಕ್ರಿಯೆ ನೀಡಿದ್ದಾರೆ.
"ಕಾಮನ್ ಮ್ಯಾನ್ ಆಗಿರೋದಕ್ಕೇ ಇಷ್ಟ ಪಡುತ್ತೇನೆ"
"ನಾನು ಕಾಮನ್ ಮ್ಯಾನ್. ಕಾಮನ್ ಮ್ಯಾನ್ ಆಗಿ ಇರುವುದಕ್ಕೇ ಇಷ್ಟ ಪಡುತ್ತೇನೆ. ನಾನು ಕೋಟಿ ಅಂತ ಒಂದು ಸಿನಿಮಾ ಮಾಡಿದ್ದೀನಿ. ಅದು ಕಾಮನ್‌ಮ್ಯಾನ್ ಪಾತ್ರ. ಕಾಮನ್‌ಮ್ಯಾನ್ ಆಗಿ ಮಾಡಿರೋದು ತುಂಬಾ ಇಷ್ಟ ಆಗುತ್ತೆ. ಸಿನಿಮಾ ನೋಡಿ ಅಂತ ಹೇಳುವುದಕ್ಕೆ ಇಷ್ಟ ಪಡುತ್ತೇನೆ." ಎಂದು ಡಾಲಿ ಧನಂಜಯ್ ಹೇಳಿದ್ದಾರೆ.


Click it and Unblock the Notifications











