Dhananjay Wedding:ಡಾಲಿ ಮದುವೆ ಫುಡ್ ಮೆನ್ಯೂ ಏನು? ಸೆಲೆಬ್ರೆಟಿಗಳಿಗೆ ಅಭಿಮಾನಿಗಳಿಗೆ ತಾರತಮ್ಯ ಇಲ್ಲ
ಡಾಲಿ ಧನಂಜಯ್ ಅದ್ಧೂರಿ ಮದುವೆಗೆ ವೇದಿಕೆ ಸಜ್ಜಾಗಿದೆ. ಮೈಸೂರಿನ ವಸ್ತು ಪ್ರದರ್ಶನ ಮೈದಾನದಲ್ಲಿ ಮದುವೆ ಸಮಾರಂಭ ಜೋರಾಗಿ ನಡೆಯುತ್ತಿದೆ. ಇಂದು (ಫೆಬ್ರವರಿ 15) ಧನಂಜಯ್ ಮದುವೆಯ ಆರತಕ್ಷತೆ ನಡೆಯಲಿದೆ. ನಾಳೆ (ಫೆಬ್ರವರಿ 15) ಮದುವೆ ನಡೆಯಲಿದೆ. ಈಗಾಗಲೇ ಆರತಕ್ಷತೆಗೆ ದೇಶ ವಿದೇಶದಿಂದ ಧನಂಜಯ್ ಸ್ನೇಹಿತರು ಆತ್ಮೀಯರು ಆಗಮಿಸುತ್ತಿದ್ದಾರೆ.
ಡಾಲಿ ಧನಂಜಯ್ ಮದುವೆ ಸಮಾರಂಭಕ್ಕೆ ಸುಮಾರು 25 ಸಾವಿರ ಮಂದಿ ಆಗಮಿಸುವ ಸಾಧ್ಯತೆಯಿದೆ. ವೀಕೆಂಡ್‌ನಲ್ಲಿ ಮದುವೆ ನಡೆಯುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಭಾಗವಹಿಸುವ ಸಾಧ್ಯತೆಯಿದೆ. ಹಾಗೇ ಸೆಲೆಬ್ರಿಟಿಗಳು, ಚಿತ್ರರಂಗದ ಗಣ್ಯರು, ರಾಜಕೀಯ ಮುಖಂಡರು, ಮಠಾಧೀಶರು ಡಾಲಿ ಮದುವೆ ಆಗಮಿಸಲಿದ್ದಾರೆ.

ಇನ್ನು ಡಾಲಿ ಧನಂಜಯ್ ಸೆಲೆಬ್ರಿಟಿಗಳಿಗೆ ಹಾಗೂ ತಮ್ಮ ಅಭಿಮಾನಿಗಳಿಗೆ ಹೋಳಿಗೆ ಊಟ ಹಾಕಿಸುತ್ತೇನೆ ಎಂದಿದ್ಧಾರೆ. ಅದರಂತೆ ಭರ್ಜರಿ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ. ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳಿಗೆ ಯಾವುದೇ ತೊಂದರೆ ಆಗದಂತೆ ಊಟದ ವ್ಯವಸ್ಥೆ ಮಾಡಲಾಗಿದೆ. ಹಾಗಿದ್ದರೆ, ಡಾಲಿ ಮದುವೆಯ ಊಟದ ಮೆನ್ಯೂ ಏನು? ಹೋಳಿಗೆ ಜೊತೆ ಇನ್ನು ಏನೇನು ಸವಿಯಬಹುದು? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಡಾಲಿ ಧನಂಜಯ್ ಮದುವೆ ಕ್ಯಾಟರಿಂಗ್ ಅನ್ನು ಮೈಸೂರಿನಲ್ಲಿರುವ ಜಗದೀಶ್ ಎಂಬುವವರಿಗೆ ವಹಿಸಲಾಗಿದೆ. ಇಂದು ಆರತಕ್ಷತೆ ಕಾರ್ಯಕ್ರಮವಿರುವುದರಿಂದ ಸುಮಾರು 25 ಸಾವಿರ ಮಂದಿಗೆ ಊಟದ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಎಲ್ಲರಿಗೂ ಹೋಳಿಗೆ ಊಟ ಇರುತ್ತೆ. ಅಭಿಮಾನಿಗಳು ನಮ್ಮ ಕುಟುಂಬವಿದ್ದಂತೆ. ನಮ್ಮ ಕುಟುಂಬದವರಿಗೆ ಒಳ್ಳೆಯ ಮದುವೆ ಊಟ ಹಾಕಿಸಬೇಕು ಅಂತ ಭರ್ಜರಿ ಭೋಜನದ ವ್ಯವಸ್ಥೆಯನ್ನು ಮಾಡಿದ್ದಾರೆ.

ಹೋಳಿಗೆ ತುಪ್ಪ, ಮಸಾಲ ದೋಸೆ, ತೆಂಗಿನಕಾಯಿ ಚಟ್ನಿ, ರೋಟಿ, ಗ್ರೇವಿ, ಬೇಬಿಕಾರ್ನ್ ಮಂಚೂರಿ, ಮೆಣಸಿಕಾಯಿ ಬಜ್ಜಿ, ಬೆಂಡೆಕಾಯಿ ಫ್ರೈ, ರೂಮಾಲಿ ರೋಟಿ, ವೆಜ್ ಬಿರಿಯಾನಿ, ರಾಯಿತಾ, ಅನ್ನ, ಸಾಂಬರ್, ರಸಂ, ಮೊಸರು ಇವಿಷ್ಟನ್ನು ಆರತಕ್ಷತೆಯಲ್ಲಿ ಅಭಿಮಾನಿಗಳು ಸವಿಯಬಹುದಾಗಿದೆ. ಒಂದು ಬ್ಯಾಚ್‌ಗೆ ಸುಮಾರು ಮೂರು ಸಾವಿರ ಮಂದಿ ಬಂದು ಊಟವನ್ನು ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ. ವೃದ್ಧರಿಗೆ ಕೂತು ಊಟ ಮಾಡುವುದಕ್ಕೆ ಬಾಳೆ ಎಲೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಹಾಗೆ ಮಹಿಳೆಯರಿಗೆ ಒಂದು ಪ್ರತ್ಯೇಕ ಕೌಂಟರ್ ಇದೆ.
ಡಾಲಿ ಮದುವೆಗಾಗಿ ಸುಮಾರು 150ಕ್ಕೂ ಅಧಿಕ ಮಂದಿ ಅಡುಗೆ ಮಾಡುತ್ತಿದ್ದಾರೆ. 250 ಮಂದಿ ಅಡುಗೆ ಬಡಿಸುವುದಕ್ಕೆ, ಸರ್ವಿಸ್ ಕೊಡುವುದಕ್ಕೆ ಇದ್ದಾರೆ. ಮಹಿಳೆಯರಿಗೆ ಹೆಣ್ಣು ಮಕ್ಕಳಿಗೆ ಅಡುಗೆಯನ್ನು ಬಡಿಸಲಾಗುತ್ತೆ. ಹಾಗೇ ನಾಳೆ (ಫೆಬ್ರವರಿ 16) ಮದುವೆ ದಿನ ಐದು ಸಾವಿರ ಮಂದಿಗೆ ತಿಂಡಿಯ ವ್ಯವಸ್ಥೆಯಿದೆ. ಟಿಫನ್‌ಗೆ ಪೈನಾಪಲ್ ಕೇಸರಿ ಬಾತ್, ಇಡ್ಲಿ, ಸಾಂಬರ್, ಉದ್ದಿನ ಒಡೆ, ಖಾರಾ ಪೊಂಗಲ್, ಖಾರಾ ಬಾತ್, ಚಟ್ನಿ, ಕಾಫಿ ಮತ್ತು ಟಿಯನ್ನು ವ್ಯವಸ್ಥೆ ಮಾಡಲಾಗಿದೆ.
ಇನ್ನು ನಾಳೆ ಮಧ್ಯಾಹ್ನಕ್ಕೆ ಕೊಸಂಬರಿ, ಎರಡು ರೀತಿ ಪಲ್ಯ, ಚಿರೋಟಿ ಊಟ, ಲಾಡು, ಅಕ್ಕಿ ರೊಟ್ಟಿ ಎಣ್ಣೆಗಾಯಿ, ವೆಜ್ ಬೋಂಡಾ, ವೆಜ್ ಪಕೋಡಾ, ಪಲಾವ್, ಅನ್ನ ಸಾಂಬಾರ್, ತಿಳಿಸಾರು, ಮೊಸರು ಎಲ್ಲವೂ ಇರುತ್ತೆ. ಈ ಎರಡು ದಿನಗಳಲ್ಲಿ ಸುಮಾರು 30 ಸಾವಿರಕ್ಕೂ ಅಧಿಕ ಮಂದಿ ಬರಲಿದ್ದಾರೆ. ಒಂದು ವೇಳೆ ಜಾಸ್ತಿ ಜನ ಬಂದರೂ ಪಲಾವ್ ಹಾಗೂ ಮೈಸೂರು ಪಾಕ್ ನೀಡುವುದಕ್ಕೆ ವ್ಯವಸ್ಥೆ ಮಾಡಲಾಗಿದೆ.
ಇನ್ನು ಅಭಿಮಾನಿಗಳಿಗೆ ಪ್ರತ್ಯೇಕ ಊಟದ ವ್ಯವಸ್ಥೆ, ಸೆಲೆಬ್ರೆಟಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಪ್ರತ್ಯೇಕವಾಗಿ ಅಡುಗೆ ಮಾಡುವವರು ಇದ್ದರೂ, ಊಟದ ಮೆನ್ಯುನಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಎಲ್ಲರೂ ಒಂದೇ ಮೆನ್ಯೂ ಇದೆ. ಆದರೆ, ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳ ಮಧ್ಯೆ ನೂಕು ನುಗ್ಗಲು ಆಗದೆ ಅವ್ಯವಸ್ಥೆ ಆಗದೇ ಇರಲಿ ಎಂದು ಪ್ರತ್ಯೇಕ ಕೌಂಟರ್‌ಗಳನ್ನು ಮಾಡಿ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.


Click it and Unblock the Notifications











