Daali Dhananjaya: ಮೆಕ್ಸಿಕೋದಿಂದ ಬಂದ ಡಾಲಿ.. 'ಅಣ್ಣ From Mexico' ಅಷ್ಟೇ.. ಹೃದಯ ಕರ್ನಾಟಕದ್ದೇ!
ಸ್ಯಾಂಡಲ್‌ವುಡ್‌ನ ನಟ ರಾಕ್ಷಸ ಡಾಲಿ ಧನಂಜಯ್‌ಗೆ ಇಂದು (ಆಗಸ್ಟ್ 23) ಹುಟ್ಟುಹಬ್ಬದ ಸಂಭ್ರಮ. ಅದಕ್ಕೆ ನಿನ್ನೆ (ಆಗಸ್ಟ್ 22) ರಾತ್ರಿಯಿಂದಲೇ ಬರ್ತ್‌ಡೇ ಸೆಲೆಬ್ರೆಷನ್ ನಡೆಯುತ್ತಲೇ ಇದೆ. ದೂರದೂರಿನಿಂದ ಧನಂಜಯ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಶುಭ ಕೋರಲು ಬರುತ್ತಿದ್ದಾರೆ.
ಒಂದ್ಕಡೆ ಡಾಲಿ ಧನಂಜಯ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಮುಳುಗೇಳುತ್ತಿದ್ದರೆ, ಇನ್ನೊಂದು ಕಡೆ ಸ್ಯಾಂಡಲ್‌ವುಡ್ ಮಂದಿ ನಟರಾಕ್ಷಸನ ಜೊತೆ ಹೊಸ ಹೊಸ ಪ್ರಾಜೆಕ್ಟ್‌ಗಳನ್ನು ಅನೌನ್ಸ್ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ.

ಡಾಲಿ ಧನಂಜಯ್ ಸಕ್ಸಸ್ ಕೊಟ್ಟ 'ಬಡವ ರಾಸ್ಕಲ್' ಸಿನಿಮಾ ತಂಡ ಡಾಲಿ ಜೊತೆ ಹೊಸ ಪ್ರಾಜೆಕ್ಟ್ ಅನ್ನು ಅನೌನ್ಸ್ ಮಾಡಿದೆ. ಸಿನಿಮಾದ ಟೈಟಲ್ ಹಾಗೂ ಪೋಸ್ಟರ್‌ನಿಂದಲೇ ಅಭಿಮಾನಿಗಳಿಗೆ ಕಿಕ್ ಕೊಟ್ಟಿದೆ. ಅಷ್ಟಕ್ಕೂ ಈ ಸಿನಿಮಾ ಗಮನ ಸೆಳೆಯುತ್ತಿರೋದೇಕೆ? ಅಂತಹ ವಿಶೇಷತೆ ಏನಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
'ಬಡವ ರಾಸ್ಕಲ್' ತಂಡದ ಜೊತೆ ಡಾಲಿ
ನಟ ರಾಕ್ಷಸ ಡಾಲಿ ಧನಂಜಯ್ ನಿರ್ಮಾಣ ಮಾಡಿದ್ದ ಸಿನಿಮಾ 'ಬಡವ ರಾಸ್ಕಲ್'. ಡಾಲಿ ಪಿಕ್ಚರ್ಸ್ ಸಂಸ್ಥೆಯಿಂದ ಸೆಟ್ಟೇರಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲೂ ಗೆದ್ದಿತ್ತು. ಈಗ ಇದೇ ತಂಡದೊಂದಿಗೆ ಮತ್ತೊಂದು ಸಿನಿಮಾ ಅನೌನ್ಸ್ ಆಗಿದೆ. ಅದುವೇ 'ಅಣ್ಣ From Mexico'. 'ಬಡವ ರಾಸ್ಕಲ್' ನಿರ್ದೇಶಕ ಶಂಕರ್ ಗುರು ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಾಸುಕಿ ವೈಭವ್ ಟ್ಯೂನ್ ಹಾಕುತ್ತಿದ್ದಾರೆ.

ಡಾಲಿ ಬರ್ತ್‌ಡೇಗೆ ಸ್ಪೆಷಲ್ ಗಿಫ್ಟ್
ನಟರಾಕ್ಷಸನ ಬರ್ತ್‌ಡೇಗೆ ಚಿತ್ರತಂಡ ಫಸ್ಟ್ ಲುಕ್ ಹಾಗೂ ಪೋಸ್ಟರ್ ಅನ್ನು ರಿಲೀಸ್ ಮಾಡಿದೆ. ಡಾಲಿ ಕತ್ತಲ್ಲಿ ಗೋಲ್ಡ್ ಚೈನ್.. ಕರ್ನಾಟಕದ ಮ್ಯಾಪ್ ಪ್ರಮುಖ ಆಕರ್ಷಣೆಯಂತಿದೆ. ಡಾಲಿ ಧನಂಜಯ್ ಮುಖ ತೋರಿಸದೇ ಹೋದರೂ, ಲುಕ್ ಹೇಗಿರಬಹುದು ಅನ್ನೋ ಅಂದಾಜು ಅಭಿಮಾನಿಗಳಿಗೆ ಸಿಕ್ಕಿದೆ. ಈ ಮೋಷನ್ ಪೋಸ್ಟರ್ ಸಿನಿಪ್ರಿಯರಿಗಂತೂ ಕಿಕ್ ಕೊಟ್ಟಿದೆ. ಇದರ ಜೊತೆ ಟೀಸರ್ ಬಿಟ್ಟಿದ್ದರೆ, ಮತ್ತಷ್ಟು ಕಿಕ್ ಸಿಗುತ್ತಿತ್ತೋ ಏನೋ..
ಕಥೆಯ ಎಳೆ ಏನು?
'ಅಣ್ಣ From Mexico' ಪಕ್ಕಾ ಮಾಸ್ ಎಂಟರ್‌ಟೈನರ್ ಸಿನಿಮಾ. ಧನಂಜಯ್ ಸೂಟು ತೊಟ್ಟಿದ್ದು ನೋಡಿ ಕ್ಲಾಸ್ ಸಿನಿಮಾ ಅಂತ ಗೆಸ್ ಮಾಡುವ ಹಾಗೇನೂ ಇಲ್ಲ. ಇದು ಮಾಸ್ ಎಂಟರ್‌ಟೈನರ್ ಸಿನಿಮಾ ಅನ್ನೋದನ್ನು ಚಿತ್ರತಂಡವೇ ಹೇಳಿದೆ. ಇದರೊಂದಿಗೆ ಅಜ್ಜಿ ಹಾಗೂ ಮೊಮ್ಮಗನ ಬಾಂಧವ್ಯನೂ ಇದೆ. ಅಂದ್ಹಾಗೆ ಇದು ಶಂಕರ್ ಗುರು ನಿರ್ದೇಶನದ ಎರಡನೇ ಸಿನಿಮಾ. ಹೀಗಾಗಿ 'ಬಡವ ರಾಸ್ಕಲ್' ತಂಡದಿಂದ ಮತ್ತೊಂದು ಕ್ಲಾಸ್ ಕಮ್ ಮಾಸ್ ಸಿನಿಮಾವನ್ನು ಎದುರು ನೋಡಬಹುದು.
ಡಾಲಿ ನಿರ್ಮಾಪಕ ಅಲ್ಲ
ಅಂದ್ಹಾಗೆ 'ಅಣ್ಣ From Mexico' ಸಿನಿಮಾವನ್ನು ಡಾಲಿ ಧನಂಜಯ್ ನಿರ್ಮಾಣ ಮಾಡುತ್ತಿಲ್ಲ. ಈ ಸಿನಿಮಾಗೆ ಹಣ ಹೂಡುತ್ತಿರುವವರು ಸತ್ಯ ರಾಯಲ್. ಮುಂಬರುವ ನವೆಂಬರ್ ತಿಂಗಳಿನಿಂದ ಈ ಸಿನಿಮಾ ಶೂಟಿಂಗ್ ಆರಂಭ ಆಗುತ್ತಿದೆ. ಸಿನಿಮಾ ಟೈಟಲ್‌ಗೆ ತಕ್ಕಂತೆ ಮೆಕ್ಸಿಕೋದಲ್ಲೂ ಚಿತ್ರೀಕರಣ ಮಾಡಲಾಗುತ್ತಿದೆ. ಒಟ್ನಲ್ಲಿ ಡಾಲಿ ಧನಂಜಯ್ ಸಿನಿಮಾ ಟೈಟಲ್ 'ಮುನ್ನಾ ಭಾಯ್ ಎಂಬಿಬಿಎಸ್' ಫೀಲ್ ಕೊಡುತ್ತಿದೆ.


Click it and Unblock the Notifications











