'ಲ್ಯಾಂಡ್ ಲಾರ್ಡ್' ವಿಜಯ್ ಜೊತೆ ಕಾಣಿಸಿಕೊಂಡ 'ಡೇರ್ ಡೆವಿಲ್ ಮುಸ್ತಫಾ' ಹೀರೊ; 3 ಸಿನಿಮಾಗಳಲ್ಲಿ ಬ್ಯುಸಿ ಶಿಶಿರ್ ಬೈಕಾಡಿ
ಸ್ಯಾಂಡಲ್‌ವುಡ್‌ಗೆ ಹೊಸ ಪ್ರತಿಭೆಗಳು ಬರಬೇಕು ಅನ್ನೋ ಕೂಗು ಹಲವು ವರ್ಷಗಳಿಂದ ಕೇಳಿ ಬರುತ್ತಿದೆ. ಆದರೆ, ಅದ್ಯಾಕೋ ಹೊಸ ಪ್ರತಿಭೆಗಳು ಸ್ಟಾರ್‌ಗಳಾಗಿ ಮುಂದುವರೆಯಲೇ ಇಲ್ಲ. ಆದ್ರೀಗ ಕನ್ನಡ ಚಿತ್ರರಂಗದಲ್ಲಿ ಹೊಸ ಹೀರೊಗಳ ಪರ್ವ ಶುರುವಾಗಿದೆ. ಹೊಸ ಹೀರೋಗಳು ಚಿತ್ರರಂಗದಕ್ಕೆ ಎಂಟ್ರಿ ಕೊಡುವುದಿಲ್ಲ. ಹೊಸ ಪ್ರಯತ್ನಗಳ ಮೂಲಕ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರುವ ಪ್ರಯತ್ನಕ್ಕೆ ಕೈ ಹಾಕುತ್ತಲೇ ಇದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಈಗ ಗಮನ ಸೆಳೆಯುತ್ತಿರುವ ಯುವ ಪ್ರತಿಭೆಯೇ ಶಿಶಿರ್ ಬೈಕಾಡಿ. ಹೀಗೆ ಒರಿಜಿನಲ್ ಹೆಸರು ಹೇಳಿದರೆ, ಗೊತ್ತಾಗದೇ ಹೋಗಬಹುದು. 'ಡೇರ್ ಡೆವಿಲ್ ಮುಸ್ತಾಫ' ಸಿನಿಮಾದ ಹೆಸರು ಹೇಳಿದರು ಈ ಪ್ರತಿಭೆ ನೆನಪಾಗಬಹುದು. ಶಿಶಿರ್ ಬೈಕಾಡಿ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಚೊಚ್ಚಲ ಸಿನಿಮಾದಲ್ಲಿಯೇ ಪ್ರೇಕ್ಷಕರ ಗಮನ ಸೆಳೆದಿದ್ದ ನಟನೀತ. ಈಗ ಬ್ಯಾಕ್ ಟು ಬ್ಯಾಕ್ ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದಾರೆ.

'ಡೇರ್ ಡೆವಿಲ್ ಮುಸ್ತಫ' ಕನ್ನಡದ ಚಿತ್ರರಂಗದ ವಿಶಿಷ್ಟ ಪ್ರಯತ್ನಗಳಲ್ಲಿ ಒಂದು. ಈ ಸಿನಿಮಾ ಸಾಕಷ್ಟು ಮಂದಿಗೆ ಇಷ್ಟ ಆಗಿತ್ತು. ಪೂರ್ಣಚಂದ್ರ ತೇಜಸ್ವಿಯವರ ಕಥೆಯನ್ನು ಆಧರಿಸಿದ ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಇದೇ ಸಿನಿಮಾವೀಗ ಮತ್ತೊಂದು ಕನ್ನಡ ಸಿನಿಮಾದಲ್ಲಿ ನಟಿಸುವುದಕ್ಕೆ ಅವಕಾಶ ಮಾಡಿಕೊಟ್ಟಿದೆ. ಅದುವೇ ದುನಿಯಾ ವಿಜಯ್ ನಟಿಸುತ್ತಿರುವ 'ಲ್ಯಾಂಡ್ ಲಾರ್ಡ್'.
ದುನಿಯಾ ವಿಜಯ್ ನಟಿಸುತ್ತಿರುವ ಮಾಸ್ ಸಿನಿಮಾ 'ಲ್ಯಾಂಡ್ ಲಾರ್ಡ್'ನಲ್ಲಿ ಶಿಶಿರ್ ಬೈಕಾಡಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಶಿಶಿರ್‌ಗೆ ಹೊಸ ಇಮೇಜ್ ಸಿಗುವ ಸಾಧ್ಯತೆಯಿದೆ. ಶಿಶಿರ್ ಕೇವಲ ಕ್ಲಾಸ್ ಪಾತ್ರಗಳನ್ನಷ್ಟೇ ಅಲ್ಲದೆ, ಮಾಸ್ ಅಂಡ್ ಕಮರ್ಷಿಯಲ್ ಸಿನಿಮಾಗಳಿಗೂ ಸೂಟ್ ಆಗಬಲ್ಲರು ಅನ್ನೋದನ್ನು ಪ್ರೂವ್ ಮಾಡುತ್ತಿದ್ದಾರೆ. ಅದಕ್ಕೆ 'ಲ್ಯಾಂಡ್ ಲಾರ್ಡ್' ಸಿನಿಮಾ ಪ್ರಥಮ ಹೆಜ್ಜೆಯಾಗಿದೆ.
ಸದ್ಯ 'ಲ್ಯಾಂಡ್ ಲಾರ್ಡ್' ಸಿನಿಮಾದಲ್ಲಿ ಶಿಶಿರ್ ಬೈಕಾಡಿ ಪಾತ್ರದ ಫಸ್ಟ್ ಲುಕ್ ಅನ್ನು ರಿವೀಲ್ ಮಾಡಲಾಗಿದೆ. ಇದು ಕೂಡ ಮಾಸ್ ಅವತಾರದಲ್ಲಿದ್ದು, ಡೇರ್ ಡೆವಿಲ್ ಪಾತ್ರವನ್ನೇ ಮರೆಸುವಂತೆ ಇದೆ. ಫಸ್ಟ್ ಲುಕ್ ಪೋಸ್ಟರ್ ಸಖತ್ ಮಾಸ್ ಹಾಗೂ ಇಂಪ್ರೆಸಿವ್ ಆಗಿದೆ. ಹೀಗಾಗಿ ಕನ್ನಡ ಚಿತ್ರರಂಗಕ್ಕೆ ಈ ಯುವ ನಟ ಸ್ಟಾರ್ ಆಗಿ ಗಟ್ಟಿಯಾಗಿ ನೆಲೆಯೂರುವ ಲಕ್ಷಣಗಳು ಎದ್ದು ಕಾಣುತ್ತಿವೆ.
'ಲ್ಯಾಂಡ್ ಲಾರ್ಡ್' ಉತ್ತಮ ಸ್ಟಾರ್ ಕಾಸ್ಟ್ ಇರುವ ಸಿನಿಮಾ. 'ಕಾಟೇರ' 'ಸಿನಿಮಾಗೆ ಕಥೆ ಹೆಣೆದಿದ್ದ ಜಡೇಶ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ದರ್ಶನ್ ಅವರ 'ಸಾರಥಿ' ಸಿನಿಮಾ ನಿರ್ಮಾಣ ಮಾಡಿದ್ದ ಕೆವಿ ಸತ್ಯಪ್ರಕಾಶ್ ಬಹಳ ವರ್ಷಗಳ ಬಳಿಕ 'ಲ್ಯಾಂಡ್ ಲಾರ್ಡ್' ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದಾರೆ. ಇಂತಹ ಬಿಗ್ ಬಜೆಟ್ ಸಿನಿಮಾದಲ್ಲಿ ಶಿಶಿರ್ ಬೈಕಾಡಿ ಒಂದೊಳ್ಳೆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಹಾಗಂತ 'ಲ್ಯಾಂಡ್ ಲಾರ್ಡ್' ಒಂದೇ ಸಿನಿಮಾ ಅಲ್ಲ. ಪ್ಯಾನ್ ಇಂಡಿಯಾ ಮಟ್ಟದ ಸಿನಿಮಾದಲ್ಲಿ ಗುರುತಿಸಿಕೊಂಡಿರೋ ಸ್ಟಾರ್ ನಟ, ನಿರ್ದೇಶಕ, ನಿರ್ಮಾಪಕರ ಸಿನಿಮಾದಲ್ಲೂ ಶಿಶಿರ್ ಬೈಕಾಡಿ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಅತೀ ಶೀಘ್ರದಲ್ಲೇ ಆ ಸಿನಿಮಾ ಕೂಡ ಅನೌನ್ಸ್ ಮಾಡಲಿದೆ ಸಿನಿಮಾ ತಂಡ.
ಸ್ಯಾಂಡಲ್‌ವುಡ್‌ನಲ್ಲಿ ಶಿಶಿರ್ ಬೈಕಾಡಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಇದರ ಜೊತೆಗೆ ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ತಮಿಳು ಸಿನಿಮಾ ಒಂದರ ಮಾತುಕತೆ ಈಗತಾನೇ ಮುಗಿಸಿದ್ದು, ಅದು ಈಗ ಪ್ರಿಪ್ರೊಡಕ್ಷನ್ ಹಂತದಲ್ಲಿದೆ. ಸಿನಿಮಾ ಟೀಂ ಕಥೆ ಹೆಣೆಯುವುದರಲ್ಲಿ ಬ್ಯುಸಿ ಆಗಿದೆ. 'ಡೇರ್ ಡೆವಿಲ್ ಮುಸ್ತಫ'ದಂತಹ ಒಂದು ಸಿನಿಮಾದ ಉತ್ತಮ ಅಭಿನಯದಿಂದ ಶಿಶಿರ್ ಸಾಲು ಸಾಲು ಸಿನಿಮಾಗಳ ಜೊತೆಗೆ ಒಂದಿಷ್ಟು ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಇಡದ್ದರು. ಈಗ ಶಿಶಿರ್ ಬೈಕಾಡಿ ಚಿತ್ರರಂಗದಲ್ಲಿ ಒಳ್ಳೆಯ ಸ್ಟಾರ್ ಆಗಿ ಮೆರೆಯುವ ಎಲ್ಲಾ ಲಕ್ಷಣಗಳು ಕೂಡ ಇವೆ.


Click it and Unblock the Notifications











