₹80 ಕೋಟಿ ಬಜೆಟ್‌ನ ಐತಿಹಾಸಿಕ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ; ಆ ಸಿನಿಮಾ ಹೆಸರೇನು?
ಡಾರ್ಲಿಂಗ್ ಕೃಷ್ಣ ಹೆಸರು ಬರುತ್ತಿದ್ದಂತೆ 'ಲವ್ ಮಾಕ್ಟೇಲ್' ಸಿನಿಮಾ ನೆನಪಿಗೆ ಬರುತ್ತೆ. ಎರಡೂ ಭಾಗಗಳೂ ಬಾಕ್ಸಾಫೀಸ್‌ನಲ್ಲಿ ಗೆದ್ದು ಬೀಗಿದ್ದು ಗೊತ್ತೇ ಇದೆ. ಈ ಸೆಲ್ಫ್ ಮೇಡ್ ಸ್ಟಾರ್ ತನ್ನ ವೃತ್ತಿ ಬದುಕಿನಲ್ಲಿ ಮತ್ತೊಂದು ಮೈಲಿಗಲ್ಲಿ ಇಡುತ್ತಿದ್ದಾರೆ. ಇದೂವರೆಗೂ ಅವರ ವೃತ್ತಿ ಬದುಕಿನಲ್ಲೇ ಅತೀ ದೊಡ್ಡ ಬಜೆಟ್ ಸಿನಿಮಾದಲ್ಲಿ ನಟಿಸುವುದಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
ಇದೂವರೆಗೂ ಲವರ್‌ಬಾಯ್ ಜನ ಮನ್ನಣೆಗಿಟ್ಟಿಸಿಕೊಂಡಿದ್ದ ಡಾರ್ಲಿಂಗ್ ಕೃಷ್ಣ ಈಗ ತೆರೆ ಮೇಲೆ ಯೋಧನಾಗಿ ಕಾಣಿಸಿಕೊಳ್ಳಲಿದ್ದಾರೆ. ಇದೇ ಮೊದಲ ಬಾರಿಗೆ ಐತಿಹಾಸಿಕ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದ್ಹಾಗೆ ಈ ಸಿನಿಮಾದ ಬಜೆಟ್ ಬರೋಬ್ಬರಿ 80 ಕೋಟಿ ರೂಪಾಯಿ.

ಡಾರ್ಲಿಂಗ್ ಕೃಷ್ಣ ಕೈಗೆ ಬಿಲ್ಲು, ಬಾಣ, ಮದ್ದು- ಗುಂಡುಗಳನ್ನು ಹಿಡಿದು ಯುದ್ಧದ ಅಖಾಡಕ್ಕೆ ಇಳಿಯಲಿದ್ದಾರೆ. ಕನ್ನಡ ನಾಡಿನ ಇತಿಹಾಸ ಪುಟಗಳಲ್ಲಿ ಸೇರಿಕೊಂಡಿರುವ ಯೋಧನ ಕಥೆಯನ್ನು ತೆರೆಮೇಲೆ ತರುವುದಕ್ಕೆ ಚಿತ್ರತಂಡವೊಂದು ಸಜ್ಜಾಗಿದೆ. ಆ ಚಿತ್ರದ ಹೆಸರೇ 'ಹಲಗಲಿ'. ನಮ್ಮ ರಾಜ್ಯದ ಹಲಗಲಿ ಎಂಬ ಊರಿನ ಬೇಡರು ಬ್ರಿಟಿಷರ ವಿರುದ್ಧ ಮೊದಲ ಗೆರಿಲ್ಲಾ ವಾರ್ ಮಾಡಿದ್ದರು. ಈ ಯುದ್ಧ ಇತಿಹಾಸ ಪುಟಗಳಲ್ಲಿ ಸೇರಿಕೊಂಡಿದೆ. ಆ ಸಂಗತಿಗಳು ಓದುವುದಕ್ಕೆ ರೋಚಕ. ಇನ್ನು ಇದೇ ಕಥೆ ಬೆಳ್ಳಿ ತೆರೆಮೇಲೆ ಮೂಡಿದರೆ ಹೇಗಿರುತ್ತೆ?
ಕನ್ನಡ ನಾಡಿನ ಹೆಮ್ಮೆಯ ಈ ವೀರರ ಹೋರಾಟದ ಹೆಜ್ಜೆಗಳನ್ನು ನಿರ್ದೇಶಕ ಸುಕೇಶ್ ಡಿ ಕೆ. ತೆರೆಮೇಲೆ ತರುವುದಕ್ಕೆ ಹೊರಟಿದ್ದಾರೆ. ಸುಮಾರು 80 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣಗೊಳ್ಳುತ್ತಿರುವ 'ಹಲಗಲಿ' ಸಿನಿಮಾಗೆ ಯುವ ಉದ್ಯಮಿ ಬಳ್ಳಾರಿಯ ಕಲ್ಯಾಣ್ ಚಕ್ರವರ್ತಿ ಧೂಳಿಪಾಳ್ಳ ಹಣ ಹಾಕುತ್ತಿದ್ದಾರೆ. ಅವರದ್ದೇ ದುಹರ ಮೂವೀಸ್ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣಗೊಳ್ಳುತ್ತಿದೆ.
'ಹಲಗಲಿ' ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿರುವ ಸುಕೇಶ್ ಡಿಕೆ ಈ ಹಿಂದೆ 'ಕೃಷ್ಣ ತುಳಸಿ' ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಡಾರ್ಲಿಂಗ್ ಕೃಷ್ಣ ಈ ಸಿನಿಮಾಗಾಗಿ ದೇಹವನ್ನು ದಂಡಿಸುತ್ತಿದ್ದಾರಂತೆ. ಇದೊಂದು ಕಥೆಗಾಗಿ ಬೇರೆ ಯಾವುದೇ ಕತೆಯನ್ನೂ ಒಪ್ಪಿಕೊಳ್ಳುತ್ತಿಲ್ಲ ಅನ್ನೋ ಸುದ್ದಿ ಕೂಡ ಓಡಾಡುತ್ತಿದೆ. ಅಂದ್ಹಾಗೆ ಈ ಐತಿಹಾಸಿಕ ಸಿನಿಮಾ ಇತ್ತೀಚೆಗಷ್ಟೇ ಮುಹೂರ್ತ ಆಗಿದೆ.

ಮೊದಲ ದಿನವೇ ಶೂಟಿಂಗ್ ಆರಂಭಿಸಿದ್ದು, ಸುಮಾರು 200ಕ್ಕೂ ಅಧಿಕ ಮಂದಿ ಅಮೆರಿಕಾ ಹಾಗೂ ರಷ್ಯನ್ ಕಲಾವಿದರು ಭಾಗವಹಿಸಿದ್ದಾರೆ. ಇವರೊಂದಿಗೆ ಸ್ಥಳೀಯ ಕಲಾವಿದರನ್ನು ಸೇರಿಸಿಕೊಳ್ಳಲಾಗಿದೆ. ಒಟ್ಟು 500ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದು, ನಿರ್ದೇಶಕ ಸುಕೇಶ್ ಡಿ ಕೆ ಹಾಗೂ ಧನು ನೃತ್ಯ ನಿರ್ದೇಶನದಲ್ಲಿ ಚಿತ್ರೀಕರಣ ಮಾಡಲಾಗಿದೆ. ಈ ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಮೂಡಿ ಬರಲಿದೆ. ಇತ್ತೀಚೆಗಷ್ಟೆ ತೆರೆಕಂಡು ಸೂಪರ್ ಹಿಟ್ ಆದ 'ಹನುಮಾನ್', 'ಕಲ್ಕಿ', 'ನಾ ಸಾಮಿರಂಗ', 'ಮಂಗಳವಾರಂ' ಖ್ಯಾತಿಯ ಕ್ಯಾಮರಾಮ್ಯಾನ್ ದಶರಥಿ ಶಿವೇಂದ್ರ ಹಾಗೂ ನಂದಿ ಪ್ರಶಸ್ತಿ ಪುರಸ್ಕೃತ ಸಾಯಿ ಶ್ರೀರಾಮ್ 'ಹಲಗಲಿ' ಗಾಗಿ ಕೆಲಸ ಮಾಡುತ್ತಿದ್ದಾರೆ.
ಇನ್ನೂ ವಾಸುಕಿ ವೈಭವ್ ಸಂಗೀತ, ಕೆಜಿಎಫ್ ಸಿನಿಮಾ ಸಾಹಸ ಸಂಯೋಜನೆ ಮಾಡಿದ್ದ ವಿಕ್ರಮ್ ಮೋರ್ ಕೆಲಸ ಮಾಡುತ್ತಿದ್ದಾರೆ. ಈ ಸಿನಿಮಾಗಾಗಿ ತಿಪಟೂರಿನಲ್ಲಿ ಹಲಗಲಿ ಊರಿನ ನಾಲ್ಕೈದು ಬೃಹತ್ ಹಳ್ಳಿಯ ಸೆಟ್‌ಗಳನ್ನು ಹಾಕಲಾಗಿದೆ. ಡಾರ್ಲಿಂಗ್ ಕೃಷ್ಣ ಜೊತೆಗೆ ಯಾರೆಲ್ಲ ನಟಿಸುತ್ತಾರೆ ಅನ್ನೋದು ಅಧಿಕೃತವಾಗಿ ಹೊರಬೀಳಬೇಕಿದೆ.


Click it and Unblock the Notifications











